ಮಂಗಳವಾರ, ನವೆಂಬರ್ 12, 2019
20 °C

`ನಮ್ಮ ಮನೆ' ನಾಮಕರಣ

Published:
Updated:

ಮನೆ ಕಟ್ಟಿ ಮುಗಿಸಿದಾಗ ಮನೆಗೆ ಏನೆಂದು ಹೆಸರಿಡುವುದು? ಎಂದು ತಲೆ ಕೆಡಿಸಿಕೊಳ್ಳುವವರು ಬಹಳ ಮಂದಿ.  ಮಗುವಿಗೆ ನಾಮಕರಣ ಮಾಡುವಾಗ ವಹಿಸುವಷ್ಟೇ ಕಾಳಜಿಯನ್ನು `ಸ್ವಂತ ಮನೆ'ಗೂ ವಹಿಸುವುದು ಇಂದಿನ ಮನೆ ಮಾಲೀಕರ ಉಮೇದು.ಕೆಲವರು `ಶ್ರೀನಿವಾಸ ನಿಲಯ', `ಶಿವ ಸದನ' ಎಂದೋ ದೇವರ ಹೆಸರನ್ನು ಇಟ್ಟು ನಮಸ್ಕರಿಸುವುದುಂಟು. ಆದರೆ ಈಗೀಗ ಮನೆಗಳ ನಾಮಫಲಕದಲ್ಲಿ ಮನೆಯೊಳಗೆ ಇರುವವರ `ಅಭಿರುಚಿ'ಯೂ ಗೋಚರಿಸುವಂತಿರುತ್ತದೆ. ಮನೆಗಳಿಗೂ ಈಗ ಭಿನ್ನ ನಾಮಕರಣ ನಡೆದಿದೆ.ಯಾರಾದರೂ ಗೃಹಪ್ರವೇಶಕ್ಕೆ ಆಮಂತ್ರಣವಿತ್ತರೆ, ಮನೆಗೆ ಏನು ಹೆಸರಿಟ್ಟಿದ್ದಾರೆ ಎಂದು ಕುತೂಹಲದಿಂದ ನೋಡುವ ಪರಿಪಾಠವೂ ಶುರುವಾಗಿದೆ.ದೆವರ ಮೇಲೆ ಅತಿಯಾದ ಭಕ್ತಿ ಉಳ್ಳವರು `ದೇವಿಕೃಪ', `ಗಣೇಶ ಕೃಪ', `ಭಾರ್ಗವ ಕೃಪ', `ವೀರಭದ್ರೇಶ್ವರ ನಿಲಯ', `ಹನುಮಂತ ಕೃಪ', `ಚೌಡಮ್ಮನ ಕೃಪ', `ಪಾರ್ವತಿ ನಿಲಯ' .. ಹೀಗೆ ದೇವರ ಹೆಸರು ಮನೆಯಾಚೆ ಗೋಡೆಗಳ ಮೇಲೆ ಮೈದಳೆದಿರುತ್ತವೆ. ಇನ್ನೂ ಬಹುದೇವತಾ ಆರಾಧಕರು ಒಂದು ಮನೆಗೆ ಎರಡು ಮೂರು ದೇವರ ಹೆಸರು ಸೇರಿಸಿ ಇಡುವದೂ ಉಂಟು.ವಾಸ್ತು ಪ್ರಕಾರ ಹೆಸರು

ದಶಕಗಳ ಹಿಂದಷ್ಟೇ ವಾಸ್ತು ಪ್ರಕಾರ ಮನೆ ಕಟ್ಟುವ ಪರಿಪಾಠ ಶುರುವಾಯಿತು. ಇದೀಗ ಮನೆ ಹೆಸರಿಡುವಾಗಲೂ ವಾಸ್ತು ನೋಡುವ ಮಂದಿ ಹಲವರು.`ನಾವು ನೆಲೆಸುವ ಮನೆಯನ್ನು ಪೂರ್ಣ ವಾಸ್ತು ಪ್ರಕಾರವೇ ಕಟ್ಟಲಾಗಿದೆ. ಏನೇ ಇದ್ದರೂ ಅದು ವಾಸ್ತು ಪ್ರಕಾರವೇ ನಡೀಬೇಕು. ಆದ್ದರಿಂದ ಮನೆ ಹೆಸರನ್ನೂ ವಾಸ್ತು ಪ್ರಕಾರವೇ ಇಟ್ಟಿದ್ದೇವೆ' ಎನ್ನುತ್ತಾರೆ ಕಟ್ಟಾ ಸಂಪ್ರದಾಯಿಯೊಬ್ಬರು. ಅವರ ಮನೆ ಹೆಸರು `ಶ್ರೀದೇವಿ ಕೃಪ'.ಅಭಿರುಚಿಗೆ ತಕ್ಕ ಹೆಸರು

ಕೆಲವರು ತಮ್ಮ ಅಭಿರುಚಿಗೆ ಅಥವಾ ಮನೆಯವರ ಆಸಕ್ತಿಗೆ ಅನುಗುಣವಾಗಿ ಮನೆಗೆ ನಾಮಕರಣ ಮಾಡುತ್ತಾರೆ. ನೆಮ್ಮದಿ, ಇಂಚರ, ತುಂತುರು, ಚಿಲಿಪಿಲಿ, ಅನುಗ್ರಹ, ಅಭಿರುಚಿ,  ಆನಂದ ನಿಲಯ, ಆಶೀರ್ವಾದ, ನಾದ, ನದಿ,ಹೀಗೆ ಭಾವಕ್ಕೆ ಹಿತವೆನಿಸಿದ ಹೆಸರು ಮನೆಗೆ.ಕೃಪಾಕಟಾಕ್ಷ

ಇನ್ನೂ ಕೆಲವರು ಮನೆ ಕಟ್ಟಲು ಕಾರಣವಾದ ಸಂಗತಿ, ವ್ಯಕ್ತಿ ಅಥವಾ ದೇವರ ಹೆಸರಿಡುವುದು ಸಾಮಾನ್ಯ. ಚಿತ್ರ ನಟ ದುನಿಯಾ ವಿಜಯ್ ತಮ್ಮ ಮನೆಗೆ `ದುನಿಯಾ ಋಣ' ಎಂಬ ಹೆಸರಿಟ್ಟಿದ್ದಾರೆ. `ದುನಿಯಾ' ಚಿತ್ರದಿಂದ ವೃತ್ತಿ ಬದುಕಿನಲ್ಲಿ ಖ್ಯಾತಿ, ಹಣ ಗಳಿಸಿದ್ದರಿಂದ ಮನೆಗೆ ಚಿತ್ರದ ಹೆಸರನ್ನೇ ಇಟ್ಟು ಋಣ ಸಂದಾಯ ಮಾಡಿದ ದ್ಯೂತಕವದು.ತಂದೆ-ತಾಯಿ ಮೇಲೆ ಮಮತೆ ಉಳ್ಳವರು ತಾಯಿ ಕೃಪ, ತಂದೆ ಕೃಪ, ಅಣ್ಣನ ಕೃಪ, ಅಜ್ಜಿ ಮನೆ ಹೀಗೆ ಹೆಸರುಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.ನಗು ತರಿಸುವ ಹೆಸರು

ಬಹುತೇಕರು ತಮ್ಮ ಮನೆಗಳಿಗೆ ತದ್ವಿರುದ್ಧ ಹೆಸರಿಡುವುದು ಸಾಮಾನ್ಯ. ಅರಮನೆಯಂತಹ ಮನೆ ಕಟ್ಟಿ `ಕುಟೀರ' (ಗುಡಿಸಲು) ಎಂಬ ಹೆಸರಿಡುತ್ತಾರೆ. ಆಧುನಿಕ ತಂತ್ರಜ್ಞಾನ ಬಳಸಿ ಕಟ್ಟಿದ ಮನೆಗೆ `ಹಳ್ಳಿ ಮನೆ' ಎಂದಿಡುತ್ತಾರೆ. ವಿಲ್ಲಾ  ಎಂದರೆ ಹಳ್ಳಿ ಮನೆ, ಗದ್ದೆ-ತೋಟದ ಮಧ್ಯೆ ಇರುವ ಮನೆ ಎಂದರ್ಥ. ಆದರೆ ಕಾಂಕ್ರೀಟ್ ಕಾಡಲ್ಲೂ ಕೆಲವು ವಿಲ್ಲಾಗಳು ಕಾಣಸಿಗುತ್ತವೆ. `ಸುಖವ್ಲ್ಲಿಲಾ', `ಆನಂದ ವಿಲ್ಲಾ' ಎಂಬ ಮನೆಯ ಹೆಸರುಗಳನ್ನು ನೋಡಿದರೆ ಈ ಮನೆಯವರಿಗೆ ನೆಮ್ಮದಿ ಇಲ್ಲವೇನೋ ಎಂಬ ಭಾವನೆ ಬರುವುದು ಸಹಜ. ಹೊಸ ಕಾಲದ ಮನೆಗೆ `ಬಾದರಾಯಣ ನಿಲಯ', ಆರ್‌ಸಿಸಿ ಮನೆಗೆ `ಹೆಂಚಿನ ಮನೆ'... ಇವೆಲ್ಲಾ ಹಾದಿಹೋಕರಿಗೆ ಒಮ್ಮೆ ನಗು ತರಿಸದೆ ಇರವು.ಒಂದು ಮನೆಯ ಹೆಸರು ನೋಡಿ ಬೆಚ್ಚಿ ಬಿದ್ದದ್ದೂ ಉಂಟು. ಮನೆ ಹೆಸರು `ಅಕೌಂಟ್ಸ್ ನಿಲಯ'!ಏಕೀ ಹೆಸರು? ಎಂದು ಮಾಲೀಕರನ್ನು ಪ್ರಶ್ನಿಸಿದರೆ ಬಂದ ಉತ್ತರ `ನಮ್ಮ ಮನೆಯಲ್ಲಿ ಅಕೌಂಟ್ಸ್‌ಗೆ ಟ್ಯೂಷನ್ ಹೇಳುತ್ತೇವೆ, ಅದಕ್ಕೆ'.ಪ್ರಮುಖರ ಮನೆ ಹೆಸರು

ರಾಷ್ಟ್ರಕವಿ ಕುವೆಂಪು ಮೈಸೂರಿನಲ್ಲಿರುವ ಅವರ ಮನೆಗೆ `ಉದಯರವಿ' ಎಂಬ ಹೆಸರಿಟ್ಟಿರುವುದು ಬಹಳಷ್ಟು ಮಂದಿಗೆ ತಿಳಿದಿದೆ. ಅವರ ಮಗ ಪೂರ್ಣಚಂದ್ರ ತೇಜಸ್ವಿ ಅವರದ್ದು `ನಿರುತ್ತರ'. ಚಿತ್ರ ನಟ ಶ್ರೀನಾಥ್ ಅವರ ಮನೆ ಹೆಸರು `ಹೃದಯ'. ಪ್ರಣಯರಾಜನಿಗೆ ತಕ್ಕ ಹೆಸರು! ಉಪೇಂದ್ರ ಮನೆ `ಸುಮ್ಮನೆ'. ಸಾಧು ಕೋಕಿಲ ಅವರದ್ದು `ನಗೆ ಹೊನಲು', ನಟ ಪ್ರೇಮ್ ಅವರದ್ದು `ನೆನಪಿರಲಿ', ಮಂಡ್ಯಾ ರಮೇಶ್ ಮನೆ `ನಟನಾ'. `ಹೆಸರುಗಳಲ್ಲೇನಿದೆ? ಮಲಗಲು ಒಂದು ಸೂರು ಇದ್ದರೇ ಸಾಕು. ಅದಕ್ಕೆ ಹೆಸರು ಬೇರೆ ಬೇಕೆ?' ಎನ್ನುವ ಮಂದಿ ಬೆರಳೆಣಿಕೆಯಷ್ಟು. ಆಸ್ತೆಯಿಂದ ಕಟ್ಟಿದ ಮನೆಗೆ ಆಸಕ್ತಿಯಿಂದ ಹೆಸರಿಟ್ಟರಷ್ಟೇ ಸಮಾಧಾನವಲ್ಲವೇ...ಸುಮ್ಮನೇ ಇಲ್ಲೊಂದಿಷ್ಟು ಮನೆ ಹೆಸರು-

ದೇಗುಲ, ದೇವಾಲಯ, ಮಂದಿರ, ಗುಡಿ, ಪ್ರಕೃತಿ, ಇನಿದನಿ, ಕಲರವ, ಸಂತಸ, ಚಂದಿರ, ನಗು, ಸಮೃದ್ಧಿ, ಮನಶ್ಯಾಂತಿ, ನಿಸರ್ಗ... ಹೀಗೆ ನಾನಾ ಬಗೆಯ ಹೆಸರುಗಳ ಹಂಗು ಇಂದಿನ ಮನೆಗಳಿಗೆ.ಧ್ವನಿಗೆ ತಕ್ಕ ಹೆಸರು

ತಮ್ಮ ಧ್ವನಿಯಿಂದಲೇ ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸುವ `ಮಿಮಿಕ್ರಿ' ದಯಾನಂದ ಅವರ ಮನೆ ಹೆಸರು `ಧ್ವನಿ ಧಾಮ'. ಧ್ವನಿ ನೆಲೆಸಿರುವ ಸ್ಥಳವೇ `ಧ್ವನಿ ಧಾಮ' ಎಂಬ ವಿವರಣೆ ಅವರದ್ದು. 26 ವರ್ಷಗಳ ಹಿಂದೆ ಇಟ್ಟ ಹೆಸರಿದು. ಏನೇ ಕೆಲಸ ಸಾಧಿಸಬೇಕೆಂದರೂ ಧ್ವನಿ ಮುಖ್ಯ. ಅದಿಲ್ಲದಿದ್ದರೆ ನಮ್ಮ ಕಾರ್ಯ ಸಿದ್ಧಿಸುವುದಿಲ್ಲ.ನನ್ನ ಬದುಕಿನಲ್ಲಿ ಪ್ರಾಧಾನ್ಯ ಪಡೆದಿರುವುದೂ ಅದೇ. ಹಾಗಾಗಿ `ಧ್ವನಿ ಧಾಮ' ಎಂಬ ಹೆಸರಿಟ್ಟಿದ್ದೇನೆ. ನಾನು 108 ಬಗೆಯ ಧ್ವನಿಗಳನ್ನು ಅನುಕರಿಸುತ್ತೇನೆ. ಕಾಕತಾಳಿಯವೆಂಬಂತೆ ನಮ್ಮ ಮನೆ ನಂಬರ್ ಸಹ 108. ಹಾಗಾಗಿ `108 ಧ್ವನಿ ಧಾಮ' ಎಂದಾಗಿದೆ ಎಂದು ಚಟಾಕಿ ಹಾರಿಸುತ್ತಾರೆ ಮಿಮಿಕ್ರಿ ದಯಾನಂದ್.    ಗುಹೆ ಪುರಾಣ

ಖ್ಯಾತ ಚಲನಚಿತ್ರ ನಟ ಸಿ.ಆರ್. ಸಿಂಹ ತಮ್ಮ ಮನೆಗೆ `ಗುಹೆ' ಎಂಬ ಹೆಸರಿಟ್ಟಿದ್ದಾರೆ. ಏಕೆ ಈ ಹೆಸರು? ಎಂದರೆ `ಸಿಂಹ ಮನೆಯಲ್ಲಿರಲು ಸಾಧ್ಯವೇ?' ಎಂದು ಚಟಾಕಿ ಹಾರಿಸುತ್ತಾರೆ.`ಗುಹೆ' ಹೆಸರು ಬಂದ ಕತೆಯನ್ನು `ಸಿಂಹ' ಬಿಚ್ಚಿಟ್ಟದ್ದು ಹೀಗೆ... `1990-91'ರಲ್ಲಿ  ಬೆಂಗಳೂರಿನ ಬನಶಂಕರಿಯಲ್ಲಿ ನಮ್ಮ ಮನೆ ಕಟ್ಟಿಸಿದ್ದು. ಮನೆ ನಿರ್ಮಾಣ ಅಂತಿಮ ಹಂತ ತಲುಪುವ ವೇಳೆಗೆ ಸಿನಿಮಾ ಶೂಟಿಂಗ್‌ಗೆಂದು ಮೈಸೂರಿಗೆ ತೆರಳಿದ್ದೆ. ಆಗ ಚಿತ್ರದ ಪ್ರಚಾರಕ್ಕೆ ನಿರ್ಮಾಪಕರು ಮಾಧ್ಯಮದವರನ್ನೂ ಅಲ್ಲಿಗೆ ಆಹ್ವಾನಿಸಿದ್ದರು.ಚಿತ್ರದ ಕುರಿತು ಔಪಚಾರಿಕ ಮಾತು ಕತೆ ನಡೆದ ಬಳಿಕ, ಮಾಧ್ಯಮ ಮಿತ್ರರೊಬ್ಬರು `ಬೆಂಗಳೂರಿನಲ್ಲಿ ಮನೆ ಕಟ್ಟಿದ್ದೀರಂತೆ, ಹೆಸರು ಏನು ಇಡುತ್ತಿರಾ?' ಎಂದು ಪ್ರಶ್ನಿಸಿದರು. ಆಗ ಸುಮ್ಮನೇ ಮಾತಿಗೆ `ಸಿಂಹ ಎಲ್ಲಿರುತ್ತೆ, ಗುಹೆಯಲ್ಲಿ ತಾನೆ, `ಗುಹೆ' ಎಂದೇ ಇಡ್ತೀನಿ' ಎಂದೆ. ಎಲ್ಲರೂ `ಹೋ ತುಂಬಾ ಚೆನ್ನಾಗಿದೆ' ಎಂದು ಮೆಚ್ಚುಗೆ ಸೂಚಿಸಿದರು. `ಅಯ್ಯೋ ಅದು ಸುಮ್ಮನೇ ಹೇಳಿದ್ದು, ಇನ್ನೂ ಯೋಚನೆ ಮಾಡಿಲ್ಲ ಏನು ಹೆಸರಿಡಬೇಕೆಂದು' ಎಂದಿದ್ದೆ.ಬೆಂಗಳೂರಿಗೆ ಬಂದ ನಂತರ ಈ ಘಟನೆ ಚರ್ಚೆಯಾಗಿ ಎಲ್ಲರೂ, ಅದೇ ಹೆಸರು ಇಡಿ ಎಂದು ಸೂಚಿಸಿದರು. ಹೀಗೆ ಸಿಂಹನ ಮನೆಗೆ `ಗುಹೆ' ಹೆಸರು ಬಂತು ಎಂದು ಆಸ್ತೆಯಿಂದ ಹೇಳಿದರು ಸಿಂಹ.  

ಪ್ರತಿಕ್ರಿಯಿಸಿ (+)