ನಮ್ಮ ಮೆಟ್ರೊದ ಸಂಪಿಗೆ ರಸ್ತೆ- ಪೀಣ್ಯ ಮಾರ್ಗ:ಅಕ್ಟೋಬರ್‌ನಲ್ಲಿ ಪ್ರಾಯೋಗಿಕ ರೈಲು ಸಂಚಾರ

7

ನಮ್ಮ ಮೆಟ್ರೊದ ಸಂಪಿಗೆ ರಸ್ತೆ- ಪೀಣ್ಯ ಮಾರ್ಗ:ಅಕ್ಟೋಬರ್‌ನಲ್ಲಿ ಪ್ರಾಯೋಗಿಕ ರೈಲು ಸಂಚಾರ

Published:
Updated:
ನಮ್ಮ ಮೆಟ್ರೊದ ಸಂಪಿಗೆ ರಸ್ತೆ- ಪೀಣ್ಯ ಮಾರ್ಗ:ಅಕ್ಟೋಬರ್‌ನಲ್ಲಿ ಪ್ರಾಯೋಗಿಕ ರೈಲು ಸಂಚಾರ

ಬೆಂಗಳೂರು: `ಪೀಣ್ಯ- ಯಶವಂತಪುರ- ರಾಜಾಜಿನಗರ- ಸಂಪಿಗೆ ರಸ್ತೆ~ವರೆಗಿನ 10 ಕಿ.ಮೀ. ಉದ್ದದ `ನಮ್ಮ ಮೆಟ್ರೊ~ ಮಾರ್ಗದಲ್ಲಿ ನವೆಂಬರ್‌ನಲ್ಲಿ ಪ್ರಾಯೋಗಿಕ ಸಂಚಾರ ಆರಂಭಿಸಲಾಗುವುದು ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ವಕ್ತಾರ ಬಿ.ಎಲ್.ವೈ.ಚವಾಣ್ ತಿಳಿಸಿದರು.ಪೀಣ್ಯ ಬಳಿಯ ಮೆಟ್ರೊ ಡಿಪೋದಲ್ಲಿ ಬುಧವಾರ ಮೆಟ್ರೊ ರೈಲು ಗಾಡಿಯ ಪರೀಕ್ಷಾರ್ಥ ಸಂಚಾರಕ್ಕೆ ಚಾಲನೆ ನೀಡುವ ಕಾರ್ಯಕ್ರಮದ ಬಳಿಕ ಅವರು ವರದಿಗಾರರೊಂದಿಗೆ ಮಾತನಾಡಿದರು.`ಈ ಮಾರ್ಗದಲ್ಲಿ ಸಿವಿಲ್ ಕಾಮಗಾರಿ ಮುಕ್ತಾಯ ಹಂತದಲ್ಲಿದೆ.ಹಳಿ ಅಳವಡಿಕೆ ಕಾರ್ಯ ಪ್ರಾರಂಭವಾಗಿದ್ದು, ಅದು ಅಕ್ಟೋಬರ್ ಅಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಪ್ರಾಯೋಗಿಕ ಸಂಚಾರ ನಡೆಸಿದ ಬಳಿಕ ರೈಲ್ವೆ ಸುರಕ್ಷತಾ ಆಯುಕ್ತರಿಂದ ಅನುಮತಿ ಪಡೆದುಕೊಳ್ಳಲಾಗುವುದು. ನಂತರ 2013ರ ಏಪ್ರಿಲ್ ವೇಳೆಗೆ ಸಾರ್ವಜನಿಕ ಸಂಚಾರ ಆರಂಭಿಸುವ ಗುರಿ ನಮ್ಮದು~ ಎಂದು ಅವರು ಹೇಳಿದರು.ನೇರಳೆ- ಹಸಿರು ಮಾರ್ಗ: `ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆಯ ನಾಯಂಡನಹಳ್ಳಿವರೆಗಿನ ಮೆಟ್ರೊ ಮಾರ್ಗವು ಪೂರ್ವ- ಪಶ್ಚಿಮ ಕಾರಿಡಾರ್ ಆಗಿದ್ದು, ಇದನ್ನು ನೇರಳೆ ಮಾರ್ಗವೆಂದು ಕರೆಯಲಾಗಿದೆ. ಈ ಮಾರ್ಗದಲ್ಲಿ ನೇರಳೆ ಬಣ್ಣದ ರೈಲು ಗಾಡಿಗಳು ಸಂಚರಿಸುತ್ತಿವೆ. ಹೆಸರಘಟ್ಟ ಕ್ರಾಸ್‌ನಿಂದ ಕನಕಪುರ ರಸ್ತೆಯ ಪುಟ್ಟೇನಹಳ್ಳಿ ಕ್ರಾಸ್‌ವರೆಗಿನ ಮಾರ್ಗವು ಉತ್ತರ- ದಕ್ಷಿಣ ಕಾರಿಡಾರ್ ಆಗಿದ್ದು, ಇದನ್ನು ಹಸಿರು ಮಾರ್ಗವೆಂದು ಕರೆಯಲಾಗಿದೆ. ಇವೆರಡೂ ಕಾರಿಡಾರ್‌ಗಳು ಮೆಟ್ರೊ ಮೊದಲ ಹಂತದಲ್ಲಿ ನಿರ್ಮಾಣವಾಗಲಿವೆ~ ಎಂದು ವಿವರಿಸಿದರು.`ಮೊದಲ ಹಂತದ ಎರಡು ಕಾರಿಡಾರ್‌ಗಳಿಗಾಗಿ ಒಟ್ಟು 50 ರೈಲು ಗಾಡಿಗಳನ್ನು ಖರೀದಿಸಲಾಗಿದೆ. ಪ್ರತಿ ರೈಲು ಗಾಡಿಯಲ್ಲಿ ಚಾಲಕ ಸಹಿತ ಎರಡು ಬೋಗಿ ಸೇರಿದಂತೆ ಒಟ್ಟು 3ಬೋಗಿಗಳಿರುತ್ತವೆ. ಇಂತಹ ಒಂದು ರೈಲು ಗಾಡಿಗೆ ಒಂದು ಸಾವಿರ ಜನರನ್ನು ಕರೆದೊಯ್ಯುವ ಸಾಮರ್ಥ್ಯ ಇದೆ. ಪೂರ್ವ- ಪಶ್ಚಿಮ ಕಾರಿಡಾರ್‌ಗಾಗಿ ಖರೀದಿಸಿದ ಎಲ್ಲ 21 ರೈಲು ಗಾಡಿಗಳು ಬೈಯಪ್ಪನಹಳ್ಳಿ ಡಿಪೋದಲ್ಲಿ ಇವೆ. ಉತ್ತರ- ದಕ್ಷಿಣ ಕಾರಿಡಾರ್‌ಗೆ ಬರಬೇಕಾದ 29 ರೈಲು ಗಾಡಿಗಳ ಪೈಕಿ 3 ಪೀಣ್ಯ ಡಿಪೋದಲ್ಲಿವೆ. ಉಳಿದ ರೈಲು ಗಾಡಿಗಳು ಸದ್ಯದಲ್ಲೇ ಡಿಪೋ ಸೇರಲಿವೆ~ ಎಂದರು.`22ನೇ ಸಂಖ್ಯೆಯ ರೈಲು ಇಲ್ಲಿನ ಟೆಸ್ಟ್ ಟ್ರಾಕ್ ಮೇಲೆ ಪರೀಕ್ಷಾರ್ಥ ಸಂಚಾರ ನಡೆಸಿತು. ಇದು ಮೊದಲ ಹಸಿರು ರೈಲು ಗಾಡಿಯಾಗಿದೆ. ಎಲ್ಲಾ ರೈಲು ಗಾಡಿಗಳನ್ನು ಈ ಹಳಿ ಮೇಲೆ ಪರೀಕ್ಷಾರ್ಥ ಸಂಚಾರ ನಡೆಸಲಾಗುವುದು. ನಂತರ ಮುಖ್ಯ ಮಾರ್ಗ ಸಿದ್ಧಗೊಂಡ ಮೇಲೆ ಪ್ರಾಯೋಗಿಕ ಸಂಚಾರ ಆರಂಭಿಸಲಾಗುವುದು~ ಎಂದರು. ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್.ಶಿವಶೈಲಂ, ಜನರಲ್ ಕನ್ಸಲ್ಟಂಟ್‌ನ ಅಧಿಕಾರಿಗಳು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry