ನಮ್ಮ ಮೆಟ್ರೊ: ಈಗ ದಿನಗಣನೆ

7

ನಮ್ಮ ಮೆಟ್ರೊ: ಈಗ ದಿನಗಣನೆ

Published:
Updated:

ಬೆಂಗಳೂರು: `ನಮ್ಮ ಮೆಟ್ರೊ~ ರೈಲು ಸಂಚಾರಕ್ಕೆ ಚಾಲನೆ ನೀಡುವ ದಿನ ಸಮೀಪಿಸುತ್ತಿದ್ದಂತೆ ಉದ್ಘಾಟನಾ ಸಮಾರಂಭಕ್ಕೆ ಸಿದ್ಧತಾ ಕಾರ್ಯ ಬಿರುಸುಗೊಂಡಿದೆ. ಈ ಭಾಗದ ರಸ್ತೆಗಳ ಪಾದಚಾರಿ ಮಾರ್ಗವನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ಬಿಬಿಎಂಪಿ ನಿರತವಾಗಿದ್ದರೆ, ನಿಲ್ದಾಣಗಳಿಗೆ ಅಗತ್ಯ ಭದ್ರತೆ ಕಲ್ಪಿಸಲು ಪೊಲೀಸ್ ಇಲಾಖೆ ಸಜ್ಜಾಗಿದೆ.ಬೈಯಪ್ಪನಹಳ್ಳಿಯಿಂದ ಎಂ.ಜಿ. ರಸ್ತೆವರೆಗಿನ ಮೊದಲ ಹಂತದ ಮಾರ್ಗದಲ್ಲಿನ ರೈಲು ಸಂಚಾರಕ್ಕೆ ಇದೇ 20ರಂದು ಚಾಲನೆ ಸಿಗಲಿದೆ. ಆ ಹಿನ್ನೆಲೆಯಲ್ಲಿ ಎಂ.ಜಿ.ರಸ್ತೆಯ ಮಾಣೆಕ್ ಷಾ ಪೆರೇಡ್ ಮೈದಾನದಲ್ಲಿ ವೇದಿಕೆ ನಿರ್ಮಾಣ ಕಾರ್ಯಕ್ಕೆ ಪಾಲಿಕೆ ಸಹಕಾರ ನೀಡುತ್ತಿದೆ.`ಉದ್ಘಾಟನಾ ಸಮಾರಂಭದ ದಿನ ಸಾರ್ವಜನಿಕರ ಅನುಕೂಲಕ್ಕಾಗಿ ಅಗತ್ಯ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗುವುದು. ಹಾಗೆಯೇ ಮೈದಾನದ ಒಳಗೆ ಹಾಗೂ ಹೊರಗೆ ನೈರ್ಮಲ್ಯ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ~ ಎಂದು ಪಾಲಿಕೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.`ಬೈಯಪ್ಪನಹಳ್ಳಿಯಿಂದ ಎಂ.ಜಿ. ರಸ್ತೆವರೆಗಿನ ಪಾದಚಾರಿ ಮಾರ್ಗವನ್ನು ಅಭಿವೃದ್ಧಿಪಡಿಸುವ ಹಾಗೂ ಸುಂದರಗೊಳಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಹಾಗೆಯೇ ರಸ್ತೆಗಳ ಮೇಲೆ ಪ್ರತಿಫಲನ ಪಟ್ಟಿಯನ್ನು ಬಳಿಯಲಾಗುತ್ತಿದೆ~ ಎಂದು ಹೇಳಿದರು.ಇನ್ನೊಂದೆಡೆ `ಮೆಟ್ರೊ~ ರೈಲು ನಿಲ್ದಾಣಗಳಿಗೆ ಹೆಚ್ಚಿನ ಭದ್ರತೆ ಕಲ್ಪಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಅವರು ಇತರೆ ಹಿರಿಯ ಅಧಿಕಾರಿಗಳೊಂದಿಗೆ ಗುರುವಾರ ಸಂಜೆ ಮೆಟ್ರೊ ರೈಲು ನಿಲ್ದಾಣಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಎಂ.ಜಿ. ರಸ್ತೆಯ ನಿಲ್ದಾಣಕ್ಕೆ ಭೇಟಿ ನೀಡಿದ ಅವರು ಬೈಯಪ್ಪನಹಳ್ಳಿವರೆಗಿನ ನಿಲ್ದಾಣಗಳನ್ನು ಪರಿಶೀಲಿಸಿದರು. ನಿಲ್ದಾಣಗಳ ಒಳಗೆ ಹಾಗೂ ಹೊರಗೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸುವ ಕುರಿತು ಅಧಿಕಾರಿಗಳೊಂದಿಗೆ ಅವರು ಚರ್ಚಿಸಿದರು. ಈ ಸಂದರ್ಭದಲ್ಲಿ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎನ್. ಶಿವಶೈಲಂ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry