ನಮ್ಮ ಮೆಟ್ರೊ ಉದ್ಘಾಟನೆಗೆ ಕ್ಷಣಗಣನೆ: ಎಂ.ಜಿ. ರಸ್ತೆ ದಾಟುವುದೇ ಸಮಸ್ಯೆ

7

ನಮ್ಮ ಮೆಟ್ರೊ ಉದ್ಘಾಟನೆಗೆ ಕ್ಷಣಗಣನೆ: ಎಂ.ಜಿ. ರಸ್ತೆ ದಾಟುವುದೇ ಸಮಸ್ಯೆ

Published:
Updated:

ಬೆಂಗಳೂರು: `ಬಹು ನಿರೀಕ್ಷಿತ `ನಮ್ಮ ಮೆಟ್ರೊ~ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಆದರೆ, ಇಲ್ಲಿ ಇನ್ನೂ ಬಗೆಹರಿಯದ ಹಲವು ಸಮಸ್ಯೆಗಳಿವೆ. ನಿಲ್ದಾಣಕ್ಕೆ ಆಗಮಿಸುವ ಹಾಗೂ ತೆರಳುವ ಪ್ರಯಾಣಿಕರಿಗೆ ಎಂ.ಜಿ. ರಸ್ತೆಯನ್ನು ದಾಟುವುದೇ ಸಮಸ್ಯೆಯಾಗಿದೆ.ಮೆಟ್ರೊ ನಿಲ್ದಾಣದ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ (ಕಿಯೋಸ್ಕ್) ಬಳಿ ಪ್ರಯಾಣಿಕರ ಅನುಕೂಲಕ್ಕಾಗಿ ಆಗಮನ ಮತ್ತು ನಿರ್ಗಮನ ಸ್ಥಳವನ್ನು ಡಿಸೆಂಬರ್ ವೇಳೆಗೆ ನಿರ್ಮಿಸುವುದಾಗಿ ಬಿಎಂಆರ್‌ಸಿಎಲ್ ಮೂಲಗಳು ಈ ಮೊದಲು ತಿಳಿಸಿದ್ದವು. ಆದರೆ ಫೆಬ್ರುವರಿ ವೇಳೆಗೆ ಈ ಕಾರ್ಯ ಮುಗಿಯಲಿದೆ ಎಂದು ಮೆಟ್ರೊ ನಿಗಮದ ವಕ್ತಾರ ಬಿ.ಎಸ್.ಎಲ್.ಚವ್ಹಾಣ್ ಶನಿವಾರ ತಿಳಿಸಿದ್ದಾರೆ.ರೈಲ್ವೆ ನಿಲ್ದಾಣದ ಎರಡು ಭಾಗಗಳಲ್ಲಿ ಆಗಮನ ಹಾಗೂ ನಿರ್ಗಮನ ದ್ವಾರಗಳಿರುವುದು ಸಹಜ. ಎಂ.ಜಿ.ರಸ್ತೆಯಲ್ಲಿ ಕೆಲ ತಿಂಗಳ ಕಾಲ ಈ ಸಮಸ್ಯೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.ಓಲ್ಡ್ ಫ್ಲಾಜಾ ಬಳಿ ನಿರ್ಮಿಸಲಾಗುತ್ತಿರುವ ಸ್ಕೈ ವಾಕ್ ಕೂಡ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಬ್ರಿಗೇಡ್ ರಸ್ತೆಯಲ್ಲಿ ಹೆಚ್ಚಿನ ಜನ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ.ಮೆಟ್ರೊ ಸೇವೆ ಆರಂಭವಾಗುವ ದಿನದಿಂದ ಬ್ರಿಗೇಡ್ ರಸ್ತೆಯಲ್ಲಿ ಕಾರ್ಯ ನಿರ್ವಹಿಸುವುದು ಕೂಡ ಪೋಲಿಸರಿಗೆ ತಲೆನೋವಾಗಿ ಪರಿಣಮಿಸಲಿದೆ. ಶನಿವಾರ ಹಾಗೂ ಭಾನುವಾರಗಳಂದು ಸಾರ್ವಜನಿಕರು ಮತ್ತು ವಾಹನಗಳ ಸಂಖ್ಯೆ ಹೆಚ್ಚಿರುತ್ತದೆ. ಇದನ್ನು ನಿಯಂತ್ರಿಸುವುದೇ ಪೋಲಿಸರಿಗೆ ಸಮಸ್ಯೆ ಎನ್ನುತ್ತಾರೆ ಬರ್ಟನ್ ಸೆಂಟರ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿ ಎಚ್.ಆರ್.ರಂಗನಾಥ್.ಇದೇ 20ರಂದು ಮೆಟ್ರೊ ಉದ್ಘಾಟನೆಗೆ ಮುಹೂರ್ತ ನಿಗದಿಯಾಗಿದ್ದು, ಸಮಾರಂಭದಲ್ಲಿ 30 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಈ ವೇಳೆ ಮೆಟ್ರೊ ನಿಲ್ದಾಣದ ಅಕ್ಕ ಪಕ್ಕದಲ್ಲಿ ಖಾಸಗಿ ವಾಹನಗಳ ನಿಲುಗಡೆಗೆ ಅವಕಾಶವಿಲ್ಲ. ಬದಲಾಗಿ ರಸ್ತೆಗೆ ಸಂಪರ್ಕ ಕಲ್ಪಿಸುವ ಬಸ್‌ಗಳ ನಿಲುಗಡೆಗೆ ಅವಕಾಶವಿದೆ ಎಂದು ಸಂಚಾರಿ ವಿಭಾಗದ ಎಸಿಪಿ ಎ.ನಾಗಪ್ಪ ತಿಳಿಸಿದ್ದಾರೆ.`ಸ್ಕೈ ವಾಕ್~ ನಿರ್ಮಾಣವಾಗುವವರೆಗೆ ಎಂ.ಜಿ.ರಸ್ತೆಯ ಮಧ್ಯ ಭಾಗದಲ್ಲಿ ಬ್ಯಾರಿಕೇಡ್ ಹಾಕಲಾಗುತ್ತದೆ. ಅಲ್ಲಿಯವರೆಗೂ ಪ್ರಯಾಣಿಕರು ಬ್ರಿಗೇಡ್ ರಸ್ತೆವರೆಗೆ ಸಂಚರಿಸಿ ರಸ್ತೆ ದಾಟಬೇಕಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry