ನಮ್ಮ ಮೆಟ್ರೊ ದೈನಂದಿನ ಪಾಸ್: ಬಿಎಂಟಿಸಿ ಜತೆ ಒಪ್ಪಂದ

7

ನಮ್ಮ ಮೆಟ್ರೊ ದೈನಂದಿನ ಪಾಸ್: ಬಿಎಂಟಿಸಿ ಜತೆ ಒಪ್ಪಂದ

Published:
Updated:

ಬೆಂಗಳೂರು: ‘ನಮ್ಮ ಮೆಟ್ರೊ’ ಮತ್ತು ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸಲು ಏಕರೂಪದ ದೈನಂದಿನ ‘ಪಾಸ್’ ವ್ಯವಸ್ಥೆ ಜಾರಿ ಮಾಡುವ ಸಂಬಂಧ ಎರಡೂ ಸಂಸ್ಥೆಗಳ ಅಧಿಕಾರಿಗಳು ಮಂಗಳವಾರ ಒಪ್ಪಂದಕ್ಕೆ ಸಹಿ ಹಾಕಿದರು.ಸಾರಿಗೆ ಸಚಿವ ಆರ್.ಅಶೋಕ ಅವರ ಸಮ್ಮುಖದಲ್ಲಿ ವಿಧಾನಸೌಧದಲ್ಲಿ ನಡೆದ ಸಮಾರಂಭದಲ್ಲಿ ನಮ್ಮ ಮೆಟ್ರೊ ವ್ಯವಸ್ಥಾಪಕ ನಿರ್ದೇಶಕ ಎನ್.ಶಿವಶೈಲಂ ಮತ್ತು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಸೈಯದ್ ಜಮೀರ್ ಪಾಷಾ ಅವರು ಒಪ್ಪಂದಕ್ಕೆ ಸಹಿ ಹಾಕಿದರು.ಪ್ರಯಾಣಿಕರು ‘ಎಂಬಿಟಿ’ ಹೆಸರಿನ ಏಕರೂಪದ ಪಾಸ್ ಪಡೆಯುವುದರ ಮೂಲಕ ಬಸ್ ಮತ್ತು ಮೆಟ್ರೊ ರೈಲಿನಲ್ಲಿ ಪ್ರಯಾಣಿಸಬಹುದು. ಸದ್ಯಕ್ಕೆ ಎರಡು ರೀತಿಯ ಪಾಸ್‌ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅಶೋಕ ಸುದ್ದಿಗಾರರಿಗೆ ತಿಳಿಸಿದರು.‘ಸರಾಗ’ ಹೆಸರಿನ ಪಾಸ್‌ನ ಮುಖ ಬೆಲೆ ರೂ 70.  ಈ ಪಾಸ್ ಪಡೆದವರು ದಿನದಲ್ಲಿ ಎಷ್ಟು ಸಲ ಬೇಕಾದರೂ ಮೆಟ್ರೊ ಮತ್ತು ಬಿಎಂಟಿಸಿ  ಸಾಮಾನ್ಯ ಬಸ್‌ಗಳಲ್ಲಿ ಸಂಚರಿಸಬಹುದು. ಈ ಪಾಸ್ ಪಡೆದವರು ಹವಾನಿಯಂತ್ರಿತ ಬಸ್‌ಗಳಲ್ಲಿ ಸಂಚರಿಸಲು ಅವಕಾಶ ಇಲ್ಲ. ಆದರೆ, ‘ಸರಳ’ ಪಾಸ್ ಪಡೆದವರು ಮೆಟ್ರೊ ಜತೆಗೆ ವಿಮಾನ ನಿಲ್ದಾಣಕ್ಕೆ ತೆರಳುವ ‘ವಾಯು ವಜ್ರ’ ಹೊರತುಪಡಿಸಿ ಉಳಿದ ಎಲ್ಲ  ರೀತಿಯ ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸಬಹುದು. ಈ ದೈನಂದಿನ ಪಾಸ್‌ನ ಮೌಲ್ಯ ರೂ. 110 ಎಂದು ಹೇಳಿದರು.ಬಹು ಬಣ್ಣದ ಪಾಸ್‌ಗಳು ಬಾರ್ ಕೋಡಿಂಗ್ ವ್ಯವಸ್ಥೆಯನ್ನು ಹೊಂದಿವೆ. ಇದರಿಂದ ಯಂತ್ರ ಮತ್ತು ಮಾನವ ತಪಾಸಣೆಗೆ ಉಪಯುಕ್ತವಾಗಿವೆ. ಇವುಗಳ ದುರ್ಬಳಕೆ ತಡೆಯಲೂ ಇವು ಅನುಕೂಲಕರವಾಗಿವೆ. ಪಾಸ್‌ಗಳ ಮೇಲೆ ಹಾಲೋಗ್ರಾಂ ಇತ್ಯಾದಿ ಭದ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದರು.ವಿಮೆ: ಸರಾಗ ಮತ್ತು ಸರಳ ಪಾಸ್ ಪಡೆಯುವ ಪ್ರಯಾಣಿಕರಿಗೆ ವಿಮಾ ಸೌಲಭ್ಯ ಕೂಡ ಇದೆ. ಆಕಸ್ಮಿಕ ಸಂದರ್ಭಗಳಲ್ಲಿ ಪ್ರಾಣ ಕಳೆದುಕೊಂಡವರಿಗೆ ಒಂದು ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 20 ಸಾವಿರ ರೂಪಾಯಿವರೆಗೆ ವಿಮಾ ಸೌಲಭ್ಯ ಕಲ್ಪಿಸಲಾಗುವುದು ಎಂದರು.ಫೀಡರ್ ಬಸ್ ಸೇವೆ: ಮೊದಲ ಹಂತದ ಆರು ಮೆಟ್ರೊ ರೈಲು ನಿಲ್ದಾಣಗಳಿಗೆ ಜನರನ್ನು ತಂದು ಬಿಡುವ ಮತ್ತು ಅಲ್ಲಿಂದ ಇತರ ಸ್ಥಳಗಳಿಗೆ ಕರೆದೊಯ್ಯುವ ಉದ್ದೇಶದಿಂದ ಬಿಎಂಟಿಸಿ ಹೊಸದಾಗಿ ಬಸ್ ಸಂಚಾರ ಆರಂಭಿಸಲಿದೆ. ಮೆಟ್ರೊ ಬೋಗಿಗಳ ಬಣ್ಣವನ್ನೇ ಹೋಲುವ ಮಿನಿ ಬಸ್‌ಗಳನ್ನು ಸಂಚಾರಕ್ಕೆ ಬಿಡುತ್ತಿದ್ದು, ಇವು ಮೆಟ್ರೊಗೆ ಪೂರಕವಾಗಿ ಕೆಲಸ ಮಾಡಲಿವೆ ಎಂದು ಹೇಳಿದರು.ಮೊದಲ ಹಂತದಲ್ಲಿ ಆರು ಮೆಟ್ರೊ ನಿಲ್ದಾಣಗಳಿಗೆ 26 ಮಾರ್ಗಗಳಲ್ಲಿ ಪ್ರತಿ 10 ನಿಮಿಷಕ್ಕೊಮ್ಮೆ 64 ವಿಶೇಷ ಬಸ್‌ಗಳು ಸಂಚರಿಸಲಿವೆ. ಈ ಬಸ್‌ಗಳು ಮೆಟ್ರೊ ನಿಲ್ದಾಣದಿಂದ 3ರಿಂದ  5 ಕಿ.ಮೀ ವರೆಗಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚರಿಸಲಿವೆ. ಈ ಮಾರ್ಗಗಳು ವರ್ತುಲ, ನೇರ ಹಾಗೂ ಹಾದು ಹೋಗುವ ಮಾದರಿಯಲ್ಲಿರುತ್ತವೆ ಎಂದರು.

 

 ಮೆಟ್ರೊ ಪ್ರಯಾಣ ದರ ಇಳಿಕೆ?

ಬೆಂಗಳೂರು: ಎಲ್ಲ ಹಂತಗಳ ‘ನಮ್ಮ ಮೆಟ್ರೊ’ ಕಾಮಗಾರಿ ಪೂರ್ಣಗೊಂಡ ನಂತರ ಟಿಕೆಟ್ ದರ ಕಡಿಮೆ ಮಾಡುವುದರ ಬಗ್ಗೆ ನಿರ್ಧರಿಸಲಾಗುವುದು ಎಂದು ಸಾರಿಗೆ ಸಚಿವ ಆರ್.ಅಶೋಕ ಹೇಳಿದರು.ಮೊದಲ ಹಂತದ ಮೆಟ್ರೊ ರೈಲಿನ ಟಿಕೆಟ್ ದರ ಹೆಚ್ಚು ಎನ್ನುವ ಅಭಿಪ್ರಾಯ ಇದೆ. ಈ ಬಗ್ಗೆ ಎಲ್ಲ ಹಂತದ ಕಾಮಗಾರಿಗಳು ಪೂರ್ಣಗೊಂಡ ನಂತರ ಮತ್ತೊಮ್ಮೆ ದರ ಪರಿಷ್ಕರಣೆ ನಡೆಯಲಿದೆ ಎಂದರು.ನಮ್ಮ ವೆುಟ್ರೊ ವ್ಯವಸ್ಥಾಪಕ ನಿರ್ದೇಶಕ ಶಿವಶೈಲಂ ‘ಪ್ರಸ್ತುತ ನಿಗದಿಪಡಿಸಿರುವ ವೆುಟ್ರೊ ಪ್ರಯಾಣ ದರ ಸರಿ ಇದೆ. ‘ನಮ್ಮ ಮೆಟ್ರೊ’ ರೈಲಿನ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿ ಏಪ್ರಿಲ್ ತಿಂಗಳಿಂದ ಆರಂಭವಾಗಲಿದೆ ಎಂದರು.ಸುರಂಗ ಮಾರ್ಗ ಕೊರೆಯುವ ಎರಡು ಯಂತ್ರಗಳು ಜಪಾನ್‌ನಿಂದ ಬರಬೇಕಾಗಿದೆ. ಒಂದು ಯಂತ್ರ ಫೆ. 28ರಂದು ಮತ್ತು ಮತ್ತೊಂದು ಮಾ. 20ರಂದು ಜಪಾನ್‌ನಿಂದ ಹಡಗಿನ ಮೂಲಕ ರಾಜ್ಯಕ್ಕೆ ಬರಲಿದೆ ಎಂದರು.ನಂತರ ಯಂತ್ರಗಳನ್ನು ಜೋಡಣೆ ಮಾಡಿ, ಏಪ್ರಿಲ್ ಮೊದಲ ವಾರದಲ್ಲಿ ಸುರಂಗ ಕೊರೆಯುವ ಕಾಮಗಾರಿ ಆರಂಭಿಸಲಾಗುವುದು. ನಿಗದಿತ ಅವಧಿಯಲ್ಲೇ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry