ಸೋಮವಾರ, ಸೆಪ್ಟೆಂಬರ್ 16, 2019
26 °C

ನಮ್ಮ ಮೆಟ್ರೊ ಸಂಚಾರ ಕಾರ್ಡ್ ಬಿಡುಗಡೆ

Published:
Updated:

ಬೆಂಗಳೂರು: `ನಮ್ಮ ಮೆಟ್ರೊ~ ರೈಲಿನ ಸುರಕ್ಷತೆ ಬಗ್ಗೆ ಪರಿಶೀಲಿಸಲು ಇದೇ 6ರಂದು ರೈಲ್ವೆ ಸುರಕ್ಷತಾ ಆಯುಕ್ತರ ತಂಡ ನಗರಕ್ಕೆ ಬರಲಿದ್ದು, ಮೂರು ದಿನಗಳ ಕಾಲ ತಪಾಸಣೆ ನಡೆಸಲಿದೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಶುಕ್ರವಾರ ಇಲ್ಲಿ ತಿಳಿಸಿದರು.ವಿಧಾನಸೌಧದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ `ನಮ್ಮ ಮೆಟ್ರೊ ಸಂಚಾರ (ಟ್ರಾವೆಲ್) ಕಾರ್ಡ್~ ಬಿಡುಗಡೆ ಮಾಡಿದ ನಂತರ ಅವರು ಮಾತನಾಡಿದರು.ಪ್ರಧಾನ ಮಂತ್ರಿ ಮತ್ತು ಕೇಂದ್ರ ರೈಲ್ವೆ ಸಚಿವರನ್ನು ಇತ್ತೀಚೆಗೆ ಭೇಟಿ ಮಾಡಿ ಬಂದ ನಂತರ ರೈಲ್ವೆ ಸುರಕ್ಷತಾ ಆಯುಕ್ತರು ನಗರಕ್ಕೆ ಬರುತ್ತಿದ್ದಾರೆ. ಮೂರು ದಿನಗಳ ಕಾಲ ಮೆಟ್ರೊ ರೈಲಿನ ಸುರಕ್ಷತೆಯನ್ನು ಅವರು ಪರಿಶೀಲಿಸಲಿದ್ದಾರೆ. ಅದರ ನಂತರ ಅವರು ದೆಹಲಿಗೆ ತೆರಳಿ 3-4 ದಿನಗಳಲ್ಲಿ ಸುರಕ್ಷತಾ ಪ್ರಮಾಣ ಪತ್ರ ನೀಡುವ ಬಗ್ಗೆ ನಿರ್ಧರಿಸಲಿದ್ದಾರೆ ಎಂದು ಹೇಳಿದರು.`ಈ ಪ್ರಮಾಣ ಪತ್ರ ಬಂದ ನಂತರವೇ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರನ್ನು ಭೇಟಿ ಮಾಡಿ ಉದ್ಘಾಟನೆಗೆ ಆಹ್ವಾನಿಸಲಾಗುತ್ತದೆ. ಇದೇ 15ರಂದು ಮೆಟ್ರೊ ಉದ್ಘಾಟಿಸುವ ಆಲೋಚನೆ ಇದೆ. ಒಂದು ವೇಳೆ ಅದು ಸಾಧ್ಯವಾಗದಿದ್ದರೂ 25ರೊಳಗೆ ಉದ್ಘಾಟನೆಯಂತೂ ಖಚಿತ~ ಎಂದು ಗೌಡರು ವಿವರಿಸಿದರು.

ಏನಿದು ಟ್ರಾವೆಲ್ ಕಾರ್ಡ್?: ಪದೇ ಪದೇ ಮೆಟ್ರೊ ರೈಲಿನಲ್ಲಿ ಸಂಚರಿಸುವವರಿಗೆ ಇದು ಅನುಕೂಲಕರವಾದ ಟಿಕೆಟ್. ಕ್ರೆಡಿಟ್-ಡೆಬಿಟ್ ಕಾರ್ಡ್ ಮಾದರಿಯ ಇದರಲ್ಲಿ ಎಲೆಕ್ಟ್ರಾನಿಕ್ ಚಿಪ್ ಇದೆ.ಮೊಬೈಲ್‌ನಲ್ಲಿ ಕರೆನ್ಸಿ ರಿಚಾರ್ಚ್ ಮಾಡಿದ ಹಾಗೆಯೇ ಇದರಲ್ಲೂ ರಿಚಾರ್ಜ್ ಮಾಡಬಹುದು. ಕನಿಷ್ಠ ರೂ 50ರಿಂದ ಗರಿಷ್ಠ 1000 ರೂಪಾಯಿವರೆಗೆ ಕರೆನ್ಸಿ ಹಾಕಿಸಬಹುದು. ಅದು ಖರ್ಚಾದ ನಂತರ ಮತ್ತೆ ರಿಚಾರ್ಜ್ ಮಾಡಿಕೊಳ್ಳುವ ಅವಕಾಶ ಇದೆ.ಇದನ್ನು ಬಿಡುಗಡೆ ಮಾಡಿದ ನಂತರ ಮುಖ್ಯಮಂತ್ರಿಯೇ ಸ್ವತಃ 100 ರೂಪಾಯಿ ಕೊಟ್ಟು ಕಾರ್ಡ್ ಖರೀದಿಸಿದರು. ಅವರ ಕಾರ್ಡ್ ನಂಬರ್ 110014 23249. ಈ ಸಂಖ್ಯೆಯನ್ನು ಅವರೇ ಕೇಳಿ ಪಡೆದಿದ್ದು ಎನ್ನಲಾಗಿದೆ.ಇದೇ ಸಂದರ್ಭದಲ್ಲಿ ಸಚಿವರಾದ ಆರ್. ಅಶೋಕ, ಸುರೇಶ್‌ಕುಮಾರ್, ಸಿ.ಎಂ.ಉದಾಸಿ ಸೇರಿದಂತೆ ಇತರರೂ ತಲಾ ನೂರು ರೂಪಾಯಿ ಕೊಟ್ಟು ಟ್ರಾವೆಲ್ ಕಾರ್ಡ್ ಖರೀದಿ ಮಾಡಿದರು.ಈ ಕಾರ್ಡ್‌ಗಳನ್ನು ಎಲ್ಲ ಮೆಟ್ರೊ ನಿಲ್ದಾಣಗಳಲ್ಲಿ ಶನಿವಾರದಿಂದ ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಸಾರ್ವಜನಿಕರು ಖರೀದಿ ಮಾಡಬಹುದು. ಇದಲ್ಲದೆ, ನಮ್ಮ ಮೆಟ್ರೊ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಖರೀದಿಗೂ ಅವಕಾಶ ಇದೆ.ಟ್ರಾವೆಲ್ ಕಾರ್ಡ್‌ಗೆ ಹಣ ತುಂಬಿಸುವ ಗುತ್ತಿಗೆ ಏರ್‌ಟೆಲ್ ಸಂಸ್ಥೆಗೆ ಒಲಿದಿದೆ. ಏರ್‌ಟೆಲ್ ಅಂಗಡಿಗಳಲ್ಲಿ ಕಾರ್ಡ್‌ಗೆ ಕರೆನ್ಸಿ ತುಂಬಿಸಿಕೊಳ್ಳಬಹುದು.ಮೆಟ್ರೊ ಸಹಾಯವಾಣಿ

ಮುಖ್ಯಮಂತ್ರಿ ಸದಾನಂದ ಗೌಡ ಅವರು ನಮ್ಮ ಮೆಟ್ರೊ ಸಹಾಯವಾಣಿಗೂ ಚಾಲನೆ ನೀಡಿದರು. ಅದರ ನಂಬರ್ 1800-43512345. ಮೆಟ್ರೊ ಕುರಿತ ಮಾಹಿತಿಗೆ ಈ ನಂಬರ್ ಅನ್ನು ಉಚಿತವಾಗಿ ಸಂಪರ್ಕಿಸಬಹುದು.ಎಷ್ಟು ಜನ ಸಂಚರಿಸಬಹುದು?: ಬೈಯಪ್ಪನಹಳ್ಳಿಯಿಂದ ಎಂ.ಜಿ.ರಸ್ತೆವರೆಗಿನ ರೀಚ್- 1ರಲ್ಲಿ ದಿನಕ್ಕೆ 70ರಿಂದ 80 ಸಾವಿರ ಜನ ಪ್ರಯಾಣಿಸುವ ವಿಶ್ವಾಸ ಇದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಶಿವಶೈಲಂ ಹೇಳಿದರು.ಪೊಲೀಸ್ ಇಲಾಖೆ ವರದಿ ಪ್ರಕಾರ 60 ಸಾವಿರ ಜನ ಸಂಚರಿಸುವ ಸಾಧ್ಯತೆ ಇದೆ. 70ರಿಂದ 80 ಸಾವಿರ ಮಂದಿ ಓಡಾಡಿದರೂ ಸೇವೆ ನೀಡಲು `ನಮ್ಮ ಮೆಟ್ರೊ~ ಸಿದ್ಧ ಇದೆ ಎಂದು ವಿವರಿಸಿದರು.ಮೆಟ್ರೊ ನಿರ್ವಹಣೆಗೆ ಕನಿಷ್ಠ 35 ಸಾವಿರ ಜನ ಓಡಾಡಿದರೂ ನಷ್ಟ ಆಗದು. 2003ರಲ್ಲಿ ಮೆಟ್ರೊ ರೈಲಿನ ಕನಿಷ್ಠ ಪ್ರಯಾಣ ದರವನ್ನು ರೂ 7 ಎಂದು ನಿಗದಿ ಮಾಡಲಾಗಿತ್ತು. ಈಗ ಅದು ರೂ 10 ಆಗಿದೆ. ಗರಿಷ್ಠ ರೂ 15 ಎಂದರು.ಮಾಗಡಿ ರಸ್ತೆ ಕಡೆಯಿಂದ ಸುರಂಗ ಮಾರ್ಗ ಕಾಮಗಾರಿ ನಡೆಯುತ್ತಿದ್ದು, ಇದುವರೆಗೂ 250 ಮೀಟರ್ ಕೆಲಸ ಪೂರ್ಣಗೊಂಡಿದೆ. ಅದು ಮುಂದಿನ ವರ್ಷದ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

Post Comments (+)