ನಮ್ಮ ಮೆಟ್ರೊ: 2014ರ ವರ್ಷಾಂತ್ಯಕ್ಕೆ ಎಲ್ಲೆಡೆ ಸಂಚಾರ

7

ನಮ್ಮ ಮೆಟ್ರೊ: 2014ರ ವರ್ಷಾಂತ್ಯಕ್ಕೆ ಎಲ್ಲೆಡೆ ಸಂಚಾರ

Published:
Updated:

ಬೆಂಗಳೂರು:  ವರ್ಷದ ಹಿಂದೆ `ಮೆಟ್ರೊ ರೈಲು ಹೇಗಿರುತ್ತೆ~ ಎಂಬ ಕುತೂಹಲ! ಈಗ `ಎಲ್ಲಾ ಕಡೆ ಮೆಟ್ರೊ ಓಡಾಡೋದು ಯಾವಾಗ~ ಎಂಬ ಕಾತರ!!ಬೈಯಪ್ಪನಹಳ್ಳಿಯಿಂದ ಮಹಾತ್ಮಗಾಂಧಿ ರಸ್ತೆ ನಡುವಿನ (6.7 ಕಿ.ಮೀ. ಉದ್ದ) ಮಾರ್ಗದಲ್ಲಿ ಮೆಟ್ರೊ ರೈಲುಗಳ ಸಂಚಾರ ಆರಂಭವಾಗಿ ಮುಂದಿನ ಶನಿವಾರಕ್ಕೆ (ಅ. 20) ಒಂದು ವರ್ಷ ತುಂಬಲಿದೆ. ಮೆಟ್ರೊ ರೈಲಿನಲ್ಲಿ ಓಡಾಡಿದ ಬಹುತೇಕ ಎಲ್ಲರಿಗೂ ಸುರಕ್ಷಿತ ಮತ್ತು ಸುಖಕರ ಪ್ರಯಾಣದ ಅನುಭವ ಆಗಿದೆ.ಮಹಾನಗರದಲ್ಲಿ ಬಸ್‌ನಲ್ಲಾಗಲಿ ಸ್ವಂತ ವಾಹನದಲ್ಲಾಗಲಿ ಓಡಾಡುವುದೆಂದರೆ ದಟ್ಟಣೆ, ದೂಳು, ಹೊಗೆಯ ನಡುವೆ ಸಿಲುಕಿ ಕಿರಿಕಿರಿಗೆ ಒಳಗಾಗುವುದು ಖಚಿತ. ಆದರೆ ಹವಾನಿಯಂತ್ರಿತ ಬೋಗಿಯೊಳಗಿನ ಹಿತಕರ ವಾತಾವರಣ ಮತ್ತು ನಿಗದಿತ ಸಮಯಕ್ಕೆ ತ್ವರಿತವಾಗಿ ತಲುಪುವ ವಿಶ್ವಾಸ- ಇವು ಮೆಟ್ರೊ ರೈಲಿನ ಸಂಚಾರ ಆದಷ್ಟು ಬೇಗ ಎಲ್ಲೆಡೆ ವ್ಯಾಪಿಸಲಿ ಎಂದು ನಾಗರಿಕರು ಕೋರುವಂತಾಗಿದೆ.ರಾಜಧಾನಿಯ ಉತ್ತರ, ಪಶ್ಚಿಮ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಮೆಟ್ರೊ ಕಾಮಗಾರಿಗಳು ಭರದಿಂದ ಸಾಗಿವೆ. ನಾಲ್ಕು ದಿಕ್ಕುಗಳಲ್ಲಿನ ಮಾರ್ಗಗಳಿಗೆ ಸಂಪರ್ಕ ಕಲ್ಪಿಸುವ ಸುರಂಗ ಮಾರ್ಗ ನಿರ್ಮಾಣ ಕಾರ್ಯವೂ ತೀವ್ರಗತಿಯಲ್ಲಿ ನಡೆದಿದೆ.ಇನ್ನಾರು ತಿಂಗಳಲ್ಲಿ ಅಂದರೆ 2013ರ ಏಪ್ರಿಲ್ ವೇಳೆಗೆ ಸಂಪಿಗೆ ರಸ್ತೆಯಿಂದ ಪೀಣ್ಯದವರೆಗೆ ರೈಲು ಸಂಚಾರ ಪ್ರಾರಂಭಿಸುವ ಗುರಿಯನ್ನು ಬೆಂಗಳೂರು ಮೆಟ್ರೊ ರೈಲು ನಿಗಮವು ಇರಿಸಿಕೊಂಡಿದೆ. ಅದಕ್ಕಾಗಿ ಸಮರೋಪಾದಿಯಲ್ಲಿ ಕಾಮಗಾರಿಗಳನ್ನು ಕೈಗೊಂಡಿದೆ. ಒಂದೊಮ್ಮೆ ಏಪ್ರಿಲ್‌ಗೆ ಆಗದೇ ಇದ್ದರೆ ಜೂನ್ ಹೊತ್ತಿಗೆ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗುವ ಸಾಧ್ಯತೆ ಇದೆ ಎಂದು ನಿಗಮದ ಮೂಲಗಳು ತಿಳಿಸಿವೆ.ಮಾಗಡಿ ರಸ್ತೆಯಿಂದ ಮೈಸೂರು ರಸ್ತೆಯ ನಾಯಂಡಹಳ್ಳಿವರೆಗೆ ಹಾಗೂ ನ್ಯಾಷನಲ್ ಕಾಲೇಜಿನಿಂದ ಪುಟ್ಟೇನಹಳ್ಳಿ ಕ್ರಾಸ್‌ವರೆಗಿನ ಮಾರ್ಗಗಳಲ್ಲಿ ಏಳೆಂಟು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಬಹುದು. ಆದರೂ   ಈ ಮಾರ್ಗಗಳಲ್ಲಿ ರೈಲು ಸಂಚಾರ ಆರಂಭಿಸಲು ಸಾಧ್ಯವಾಗುವುದಿಲ್ಲ. ಇದಕ್ಕೆ ಕಾರಣ ನಗರದ ಕೇಂದ್ರ ಭಾಗದಲ್ಲಿ ನಡೆದಿರುವ ಸುರಂಗ ನಿರ್ಮಾಣ ಕಾರ್ಯ.ಮೊದಲ ಹಂತದಲ್ಲಿ ಬೈಯಪ್ಪನಹಳ್ಳಿ ಮತ್ತು ಪೀಣ್ಯದಲ್ಲಿ ಮಾತ್ರ ಡಿಪೋಗಳಿವೆ. ಡಿಪೋಗಳಿಗೆ ಸಂಪರ್ಕ ಇರುವ ಮಾರ್ಗಗಳಲ್ಲಿ ಮಾತ್ರ ರೈಲು ಸಂಚಾರ ಆರಂಭಿಸಬಹುದು. ಹೀಗಾಗಿ ಸುರಂಗ ಮಾರ್ಗ ಪೂರ್ಣಗೊಂಡ ಮೇಲೆ ಎಲ್ಲೆಡೆ ರೈಲು ಸಂಚಾರ ಸಾಧ್ಯವಾಗಲಿದೆ.2014ರ ಡಿಸೆಂಬರ್ ವೇಳೆಗೆ ನೆಲದಡಿಯ ನಿಲ್ದಾಣಗಳೊಂದಿಗೆ ಸುರಂಗ ಮಾರ್ಗ ಸಿದ್ಧವಾಗಲಿದೆ. ಆಗ ಮೊದಲ ಹಂತದ ಒಟ್ಟು 42.30 ಕಿ.ಮೀ. ಉದ್ದದ ಮಾರ್ಗದಲ್ಲಿ ಮೆಟ್ರೊ ರೈಲು ಗಾಡಿಗಳು ಸಂಚರಿಸಲಿವೆ.ಭೂ ಸ್ವಾಧೀನದ ಪ್ರಕರಣಗಳು ಕೋರ್ಟ್ ಮೆಟ್ಟಿಲೇರದೇ ಇದ್ದಿದ್ದರೆ, ರೈಲ್ವೆ ಇಲಾಖೆಯಿಂದ ಮುಂಚಿತವಾಗಿ ಅನುಮತಿ ದೊರಕಿದ್ದಿದ್ದರೆ 2013ರ ವರ್ಷಾಂತ್ಯಕ್ಕೆ ಮೊದಲ ಹಂತ ಪೂರ್ಣಗೊಳ್ಳುತ್ತಿತ್ತು ಎಂದು ನಿಗಮದ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು."

ಹತ್ತು ಲಕ್ಷ ಪ್ರಯಾಣಿಕರ ನಿರೀಕ್ಷೆ

ರೀಚ್- 1ರಲ್ಲಿ ನಿತ್ಯ 15ರಿಂದ 20 ಸಾವಿರ ಪ್ರಯಾಣಿಕರು ಓಡಾಡುತ್ತಿದ್ದಾರೆ. ವಾರಾಂತ್ಯದ ದಿನಗಳಂದು ಪ್ರಯಾಣಿಕರ ಸಂಖ್ಯೆ 40 ಸಾವಿರದವರೆಗೆ ಏರಿಕೆಯಾದ ನಿದರ್ಶನವೂ ಇದೆ. ಕಳೆದ ದೀಪಾವಳಿ ಹಬ್ಬದ ದಿನದಂದು ಗರಿಷ್ಠ 80 ಸಾವಿರ ಮಂದಿ ಪ್ರಯಾಣಿಸಿದ ದಾಖಲೆಯೂ ಇದೆ.ಸದ್ಯ ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ರೈಲುಗಳು ಸಂಚರಿಸುತ್ತಿವೆ. ಬೆಳಿಗ್ಗೆ 6ರಿಂದ 8ರವರೆಗೆ ಹಾಗೂ ರಾತ್ರಿ 8ರಿಂದ 10ರವರೆಗೆ ಪ್ರತಿ 15 ನಿಮಿಷಗಳಿಗೊಂದರಂತೆ ಹಾಗೂ ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಪ್ರತಿ 10 ನಿಮಿಷಗಳಿಗೊಂದರಂತೆ ರೈಲುಗಳು ಒಡಾಡುತ್ತಿವೆ.ಮೊದಲ ಹಂತದ ಎಲ್ಲ ಮಾರ್ಗಗಳು ಸಂಚಾರಕ್ಕೆ ಮುಕ್ತವಾದ ಮೇಲೆ ಮೆಟ್ರೊ ರೈಲುಗಳು ಸಮಯ ಬೆಳಿಗ್ಗೆ 5ರಿಂದ ರಾತ್ರಿ 11ರವರೆಗೆ ಸಂಚರಿಸಲಿವೆ. ಪ್ರತಿ 5 ನಿಮಿಷಕ್ಕೊಂದರಂತೆ ರೈಲುಗಳು ಸಂಚರಿಸಿದರೆ ನಿತ್ಯ ಏಳು ಲಕ್ಷ ಪ್ರಯಾಣಿಕರು ಹಾಗೂ ಪ್ರತಿ 3 ನಿಮಿಷಕ್ಕೊಂದರಂತೆ ರೈಲುಗಳನ್ನು ಓಡಿಸಿದರೆ ನಿತ್ಯ ಹತ್ತು ಲಕ್ಷ ಪ್ರಯಾಣಿಕರು ಮೆಟ್ರೊದಲ್ಲಿ ಪ್ರಯಾಣಿಸುತ್ತಾರೆಂದು ಅಂದಾಜಿಸಲಾಗಿದೆ.72.09 ಕಿ.ಮೀ ಉದ್ದದ 2ನೇ ಹಂತ


ರೂ. 26405.14 ಕೋಟಿ ವೆಚ್ಚದ `ನಮ್ಮ ಮೆಟ್ರೊ~ದ ಎರಡನೇ ಹಂತದ ಯೋಜನೆಗೆ ರಾಜ್ಯ ಸರ್ಕಾರ ಈಗಾಗಲೇ ಅನುಮೋದನೆ ನೀಡಿದೆ. ಎರಡನೇ ಹಂತದಲ್ಲಿ 13.79 ಕಿ.ಮೀ. ಉದ್ದದ ಸುರಂಗ ಮಾರ್ಗ ಸೇರಿದಂತೆ ಒಟ್ಟು 72.09 ಕಿ.ಮೀ. ಉದ್ದದ ಮೆಟ್ರೊ ಮಾರ್ಗ ನಿರ್ಮಾಣಗೊಳ್ಳಲಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡುವುದು ಬಾಕಿ ಇದೆ.ಎರಡನೇ ಹಂತದ ಯೋಜನೆಯನ್ನು 2017ರ ವೇಳೆಗೆ ಕಾರ್ಯಗತಗೊಳಿಸಲು ಉದ್ದೇಶಿಸಲಾಗಿದೆ. ಎರಡೂ ಹಂತಗಳಿಂದ ಬೆಂಗಳೂರಿನಲ್ಲಿ ಒಟ್ಟು 114.39 ಕಿ.ಮೀ. ಉದ್ದದ ಮೆಟ್ರೊ ಮಾರ್ಗ ಸಿದ್ಧವಾಗಲಿದೆ. ಆಗ ನಗರದ ಬಹುತೇಕ ಬಡಾವಣೆಗಳು ಮೆಟ್ರೊ ರೈಲು ಸಂಚಾರದ ಪ್ರಯೋಜನ ಪಡೆದುಕೊಳ್ಳಲಿವೆ. ಅದರೊಂದಿಗೆ `ನಮ್ಮ ಮೆಟ್ರೊ~, ರಾಜಧಾನಿಯ ಜನ ಜೀವನದ ಅವಿಭಾಜ್ಯ ಅಂಗವಾಗಲಿದೆ.ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry