ನಮ್ಮ ಸಾಮರ್ಥ್ಯವನ್ನು ತೋರಿಸಿದೆವು- ದೋನಿ

7

ನಮ್ಮ ಸಾಮರ್ಥ್ಯವನ್ನು ತೋರಿಸಿದೆವು- ದೋನಿ

Published:
Updated:

ಕೋಲ್ಕತ್ತ: `ನಾವು ಸ್ವದೇಶದಲ್ಲಿ 5-0 ಸರಣಿ ಗೆದ್ದಿರಬಹುದು. ಆದರೆ ವಿದೇಶದಲ್ಲಿ ನಮಗೆ ದೊಡ್ಡ ಸವಾಲು ಎದುರಾಗಲಿದೆ. ಕಾರಣ ಸ್ಪಿನ್ನರ್‌ಗಳು ಅಲ್ಲಿ ಯಶಸ್ವಿಯಾಗಲಾರರು. ವೇಗಿಗಳನ್ನೇ ನಂಬಿಕೊಂಡು ಕಣಕ್ಕಿಳಿಯಬೇಕು. ಇದನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು~ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ನುಡಿದರು.ದೋನಿ ಹೇಳಿದ ಪ್ರಕಾರ ತಂಡದ ಪ್ರಮುಖ ಸಮಸ್ಯೆ ಬೌಲಿಂಗ್. ಅದರಲ್ಲೂ ವೇಗಿಗಳ ವೈಫಲ್ಯ ಅವರನ್ನು ಕಾಡುತ್ತಿದೆ. ಹೆಚ್ಚು ರನ್‌ಗಳು ಸೋರಿಕೆ ಆಗುತ್ತಿರುವ ಕಾರಣ ವೇಗಿಗಳು ತಮ್ಮ ಎಲ್ಲಾ ಓವರ್‌ಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಅವರ ಮಾತಿನ ಸಾರಾಂಶ ಇಲ್ಲಿದೆ.* ಇಂಗ್ಲೆಂಡ್ ಪ್ರವಾಸದ ಬಳಿಕ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಅದರಿಂದ ನೋವಾಗಿತ್ತೇ?

ನಮ್ಮ ಜವಾಬ್ದಾರಿ ಆಟ ಆಡುವುದು ಅಷ್ಟೆ. ಆದರೆ ಆ ಟೀಕೆ ವೈಯಕ್ತಿಕವಾಗಿದ್ದಾಗ ನೋವಾಗುತ್ತದೆ. ಕ್ರಿಕೆಟ್ ಜೀವನ ಅಂತ್ಯಗೊಂಡ ಮೇಲೆ ನಾನು ಕೂಡ ಕೊಠಡಿಯೊಳಗೆ ಕುಳಿತುಕೊಂಡು ಈ ರೀತಿ ಮಾತನಾಡಬಹುದು.* ಸರಣಿ ಗೆದ್ದು ಸೇಡು ತೀರಿಸಿಕೊಂಡಿದ್ದೀರಾ?

ಮತ್ತೊಮ್ಮೆ ಹೇಳುತ್ತಿದ್ದೇನೆ ಕ್ರೀಡೆಯಲ್ಲಿ ಸೇಡು ಎಂಬ ಪದ ಇರಬಾರದು. ಅದು ಕ್ರೀಡಾ ಮನೋಭಾವಕ್ಕೆ ವಿರುದ್ಧವಾದುದು. ನಾವು ಇಲ್ಲಿ ಯಾರ ವಿರುದ್ಧವೂ ಸೇಡು ತೀರಿಸಿಕೊಳ್ಳಲು ಆಡುತ್ತಿಲ್ಲ. ಆದರೆ ನಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕಿತ್ತು. ಅದರಲ್ಲಿ ನಾವು ಯಶಸ್ವಿಯಾಗಿದ್ದೇವೆ.* ಇಂಗ್ಲೆಂಡ್‌ನಲ್ಲಿ ಸೋಲಿಗೆ ಕಾರಣವೇನು?

ವೇಗದ ಬೌಲಿಂಗ್ ಸಮಸ್ಯೆ ಪ್ರಮುಖ ಕಾರಣ. ನಮ್ಮ ವೇಗಿಗಳು ಮೊದಲ 10 ಓವರ್‌ಗಳಲ್ಲಿ ಸರಿಯಾಗಿ ಬೌಲಿಂಗ್ ಮಾಡಲಿಲ್ಲ. ಆ ಸರಣಿಯಲ್ಲಿ ನಮ್ಮ ದೌರ್ಬಲ್ಯ ಏನೆಂಬುದು ಗೊತ್ತಾಯಿತು. ಈ ಸರಣಿಯಲ್ಲೂ ವೇಗಿಗಳು ತಮ್ಮ ಓವರ್‌ಗಳನ್ನು ಪೂರ್ಣಗೊಳಿಸುತ್ತಿಲ್ಲ. ದುಬಾರಿ ಆಗುತ್ತಿದ್ದಾರೆ. ಗೆದ್ದಾಗ ದೌರ್ಬಲ್ಯಗಳು ಮುಚ್ಚಿ ಹೋಗುತ್ತವೆ. ಹಾಗಾಗಿ ಇಲ್ಲಿ ಏನು ತಪ್ಪಾಗಿದೆ ಎಂಬುದನ್ನು ಪತ್ತೆ ಹಚ್ಚಿ ಸರಿ ಮಾಡಬೇಕು.* ಹಿರಿಯ ಆಟಗಾರರ ಅನುಪಸ್ಥಿತಿ ಈ ಸರಣಿಯಲ್ಲಿ ಕಾಡಲಿಲ್ಲ?

ಸಚಿನ್, ವೀರೂ ಹಾಗೂ ಯುವಿ ಅವರ ಸ್ಥಾನ ತುಂಬಲು ಈ ಆಟಗಾರರಿಗೆ ಕಷ್ಟ. ಆದರೂ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ತೋರಲು ಕಠಿಣ ಪ್ರಯತ್ನ ಹಾಕುತ್ತಿದ್ದಾರೆ. ಫೀಲ್ಡಿಂಗ್ ಚೆನ್ನಾಗಿದೆ. ಏಕದಿನ ಕ್ರಿಕೆಟ್‌ನಲ್ಲಿ ಉತ್ತಮ ಫೀಲ್ಡಿಂಗ್ ಅಗತ್ಯ. ಅದರಲ್ಲಿ ಯುವ ಆಟಗಾರರು ಯಶಸ್ವಿಯಾಗಿದ್ದಾರೆ.* ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ; ಕಾರಣ?

ಇದಕ್ಕೆ ಹಲವು ಕಾರಣಗಳಿವೆ. ವಿಶ್ವಕಪ್, ಐಪಿಎಲ್, ಚಾಂಪಿಯನ್ಸ್ ಲೀಗ್... ಹೀಗೆ ಭಾರತದಲ್ಲಿ ವಿಪರೀತ ಕ್ರಿಕೆಟ್ ನಡೆಯುತ್ತಿದೆ. ಜೊತೆಗೆ ತೆಂಡೂಲ್ಕರ್ ಅನುಪಸ್ಥಿತಿ ಪರಿಣಾಮ ಬೀರಿದೆ. ಸಚಿನ್ ಇದ್ದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಕ್ರೀಡಾಂಗಣಕ್ಕೆ ಬರುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry