ನಮ್ ಊರಿಗೆ ಬಸ್ ಬರೋದಿಲ್ಲ

ಬುಧವಾರ, ಜೂಲೈ 24, 2019
28 °C

ನಮ್ ಊರಿಗೆ ಬಸ್ ಬರೋದಿಲ್ಲ

Published:
Updated:

ಬಾಗೇಪಲ್ಲಿ: ತಾಲ್ಲೂಕಿನಲ್ಲಿ ಸರ್ಕಾರಿ ಬಸ್ ಸೌಕರ್ಯ ಇರದ ಕಾರಣ ವಿದ್ಯಾರ್ಥಿಗಳು, ಜನಸಾಮಾನ್ಯರು ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಇವುಗಳ ಸಹ  ತುಂಬಿ ತುಳುಕುವುದರಿಂದ ಬಸ್ ಮೇಲೆಯೇ ಕೂತು ಪ್ರಯಾಣಿಸುತ್ತಾರೆ.

ತಾಲ್ಲೂಕಿನ ಗಡಿಪ್ರದೇಶಗಳಿಗೂ ಬಸ್‌ಗಳ ಕೊರತೆ ಇದೆ. ಬರುವ ಬಸ್‌ಗಳು ನಿಗದಿತ ಅವಧಿಗೆ ಬರುವುದಿಲ್ಲ. ಇದರಿಂದ ಸಕಾಲಕ್ಕೆ ಶಾಲೆ, ಕಾಲೇಜು ತರಗತಿಗೆ ಗೈರು ಹಾಕಬೇಕಾದ ಸ್ಥಿತಿ. ಇದು ಶೈಕ್ಷಣಿಕ ಪ್ರಗತಿ ಮೇಲೂ ಪರಿಣಾಮ ಬೀರಿದೆ.ಇದೇ ರೀತಿ ಸದ್ದಪಲ್ಲಿ ತಾಂಡ, ದೊಡ್ಡಿಪಲ್ಲಿ ಮುಂತಾದ ಗ್ರಾಮಗಳಿಗೆ ಇದುವರೆಗೂ ಬಸ್‌ಗಳ ಸೌಕರ್ಯವಿಲ್ಲ. ಕೆಲ ಬಸ್‌ಗಳು ಪ್ರಮುಖ ಗ್ರಾಮಗಳಲ್ಲಿ ಮಾತ್ರವೇ ಸುತ್ತು ಹಾಕಿ ಹೊರಟುಬಿಡುತ್ತವೆ. ಆದರೆ ಪಟ್ಟಣದ ಹೊರವಲಯದ ತಾಂಡಾ ಮತ್ತು ಕೆಲ ಕುಗ್ರಾಮಗಳು ಇರುವ ಕಡೆ ಬಸ್‌ಗಳು ಬರುವುದೇ ಇಲ್ಲ.ತುರ್ತು ಕೆಲಸ ಅಗತ್ಯವಿದ್ದಾಗ ಪಟ್ಟಣಕ್ಕೆ ಹೋಗಲೇಬೇಕಾದಾಗ ಖಾಸಗಿ ಬಸ್ ಮತ್ತು ಇತರ ವಾಹನಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ.ತಾಲ್ಲೂಕಿನ ಮಿಟ್ಟೇಮರಿ ಹೋಬಳಿಯ ವನಗಾನಪಲ್ಲಿ ಕ್ರಾಸ್ ಮೂಲಕ ಮೂಗುಚಿನ್ನೇಪಲ್ಲಿ, ಬುಟ್ಟಿವಾರಿಪಲ್ಲಿ, ವರದಯ್ಯಗಾರಿಪಲ್ಲಿ, ಅರಿಗೇಪಲ್ಲಿ, ಕಾನಗಮಾಕಲಪಲ್ಲಿ ಗ್ರಾಮಗಳಿಗೆ ಬೆಳಗೆ ಮತ್ತು ಸಂಜೆ ಹೊರತುಪಡಿಸಿದರೆ ಇತರ ಸಮಯದಲ್ಲಿ ಖಾಸಗಿ ಆಟೊ, ವಾಹನಗಳನ್ನೇ ಅವಲಂಬಿಸಬೇಕು' ಎಂದು ಮೂಗುಚಿನ್ನೇಪಲ್ಲಿ ಗ್ರಾಮದ ವಿದ್ಯಾರ್ಥಿ ನರಸಿಂಹಮೂರ್ತಿ ಹೇಳಿದರು.`ದೂರದ ಗ್ರಾಮದಿಂದ ಆಟೊ, ಇನ್ನಿತರ ವಾಹನಗಳಲ್ಲಿ ಇಲ್ಲಿಗೆ ಬಂದು, ಖಾಸಗಿ ಬಸ್ ಹಿಡಿಯುತ್ತೇವೆ. ರಿಯಾಯಿತಿ ಬಸ್‌ಪಾಸ್ ಇದ್ದರೂ ಅನಿವಾರ್ಯವಾಗಿ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸಬೇಕು. ಒಂದು ವೇಳೆ ಖಾಸಗಿ ಬಸ್‌ಗಳನ್ನು  ಬಿಟ್ಟರೆ ನಾವು ಯಾವುದೇ ಕೆಲಸ ಕಾರ್ಯಗಳಿಗೆ ಹೋಗಲು ಸಾಧ್ಯವಿಲ್ಲ  ಎನ್ನುವುದು ಸಾರ್ವಜನಿಕರ ಅಳಲು.

`ತಾಲ್ಲೂಕು ಆಡಳಿತ  ಗಡಿ ಗ್ರಾಮಗಳೆಡೆಗೆ ತಳೆದಿರುವ ದಿವ್ಯ ನಿರ್ಲಕ್ಷ್ಯಕ್ಕೆ  ಇದೊಂದು ನಿದರ್ಶನ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.ಸುತ್ತಮುತ್ತಲಿನ  ಪ್ರದೇಶಗಳಿಗೆ ಬಸ್‌ಗಳ ಅತ್ಯಲ್ಪ ಸೌಕರ್ಯವಿರುವುದರಿಂದ ಜನರು ಆಟೊ, ಟೆಂಪೊ, ಖಾಸಗಿ ಬಸ್‌ಗಳಲ್ಲಿ ಪಟ್ಟಣಕ್ಕೆ ಬರುತ್ತಾರೆ. ಇಲ್ಲಿಗೆ ಬಂದರೂ ಇನ್ನೊಂದು ಊರಿಗೆ ಹೋಗಬೇಕಿದ್ದರೂ ಬಸ್‌ಗಾಗಿ ಕಾಯಬೇಕಾಗುತ್ತದೆ. ಸರ್ಕಾರಿ ಬಸ್ ಬಾರದಿರುವಾಗ ಅನಿವಾರ್ಯವಾಗಿ ಖಾಸಗಿ ಬಸ್‌ನ ಮೊರೆ ಹೋಗಬೇಕಿದೆ ಎಂದು ತಾಲ್ಲೂಕಿನ ತಾಂಡಾವೊಂದರ ನಿವಾಸಿ ಗೋಪಿನಾಯಕ್ `ಪ್ರಜಾವಾಣಿ'ಗೆ ತಿಳಿಸಿದರು.ಬಸ್‌ಗಳ ಸೌಕರ್ಯಕ್ಕೆ ಒತ್ತಾಯಿಸಿ ತಾಲ್ಲೂಕಿನಲ್ಲಿ ಹಲವು ಸಲ ಪ್ರತಿಭಟನೆಗಳು ನಡೆದಿವೆ. ಸಮಸ್ಯೆ ಬಗ್ಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದರೂ. ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಗುಮ್ಟಮೀದಪಲ್ಲಿ ಶ್ರೀನಿವಾಸ್ ತಿಳಿಸಿದರು.ಆಂಧ್ರದಲ್ಲಿ ಉತ್ತಮ ಸೌಕರ್ಯ

`ಗ್ರಾಮೀಣ ಸಾರಿಗೆ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ ಬೆಂಗಳೂರು, ಚಿಕ್ಕಬಳ್ಳಾಪುರ ಮತ್ತು ಬಾಗೇಪಲ್ಲಿ ಘಟಕದ ಬಹುತೇಕ ಬಸ್‌ಗಳು ಚೇಳೂರು, ಬಿಳ್ಳೂರು ಮತ್ತು ಪಟ್ಟಣಕ್ಕೆ ಸಮೀಪದಲ್ಲಿರುವ ಆಂಧ್ರಪ್ರದೇಶದ  ಕಂದಕೂರು, ಮದನಪಲ್ಲಿ, ಗೋರಂಟ್ಲ, ಚಿಲಮತ್ತೂರು, ಕದಿರಿ, ಧರ್ಮಾವರಂ, ಹಿಂದೂಪೂರ ಮುಂತಾದ ಕಡೆ ಸಂಚರಿಸುತ್ತವೆ.   ವಿದ್ಯಾರ್ಥಿಗಳು, ಮಹಿಳೆಯರು ಮತ್ತು ವೃದ್ಧರು ಬಸ್ ಸೌಕರ್ಯ ಇಲ್ಲದಿರುವುದರಿಂದ ಸಂಕಷ್ಟಕ್ಕೀಡಾಗಿದ್ದಾರೆ' ಎಂದು ಪ್ರಯಾಣಿಕರು ಆರೋಪಿಸುತ್ತಾರೆ.`ಬಸ್‌ಗಳ ಸಂಖ್ಯೆ ಕಡಿಮೆ ಇರುವುದು ಮತ್ತು ಅವು ಗ್ರಾಮೀಣ ಪ್ರದೇಶಕ್ಕೆ ಸಂಚರಿಸದಿರುವುದು ಗಮನಕ್ಕೆ ಬಂದಿದೆ. ಇದನ್ನು ಸಂಸ್ಥೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಗ್ರಾಮೀಣ ಪ್ರದೇಶಕ್ಕೆ ಬಸ್‌ಗಳು ಸಂಚರಿಸುವಂತೆ ವ್ಯವಸ್ಥೆ ಮಾಡಲು ಪ್ರಯತ್ನಿಸಲಾಗುವುದು' ಎಂದು ಕೆಎಸ್‌ಆರ್‌ಟಿಸಿ ಬಾಗೇಪಲ್ಲಿ ಘಟಕದ ವ್ಯವಸ್ಥಾಪಕ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry