ಬುಧವಾರ, ಜೂನ್ 3, 2020
27 °C

ನಯನ ಮನೋಹರ ನೈನಿತಾಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿಮಾಲಯದ - ಉತ್ತರಾಖಂಡದ - ಕುಮಾಓ ತಪ್ಪಲಿನ ಅತಿ ಸುಂದರ ಗಿರಿಧಾಮ - ನೈನಿತಾಲ್. ಸಮುದ್ರ ಮಟ್ಟದಿಂದ ಸುಮಾರು 6,358 ಅಡಿಗಳಷ್ಟು ಎತ್ತರದಲ್ಲಿರುವ ನೈನಿತಾಲ್ ಪ್ರಾಕೃತಿಕ ಸೊಬಗು ಮತ್ತು ಹಿತವಾದ ಹವಾಮಾನದಿಂದ ಜನರನ್ನು ತನ್ನೆಡೆಗೆ ಸೆಳೆಯುತ್ತದೆ. ಹೆಸರೇ ಸೂಚಿಸುವಂತೆ ‘ನೈನೀ’ ಎಂಬ ಸರೋವರದಿಂದ ಇದು ಪ್ರಸಿದ್ಧ.ದೆಹಲಿಯಿಂದ ಸುಮಾರು 350 ಕಿ.ಮೀ. ದೂರದಲ್ಲಿರುವ ನೈನಿತಾಲ್‌ಗೆ ಅತಿ ಹತ್ತಿರದ ವಿಮಾನ ನಿಲ್ದಾಣವೆಂದರೆ ಪಂತನಗರ. ದೆಹಲಿಯಿಂದ ಹಲ್ದವಾನಿ - ಖಾತ್‌ಗೋದಾಮವರೆಗೂ ರೈಲಿನಲ್ಲಿ ಸಂಚರಿಸಿ ಉಳಿದ 30 ಕಿ.ಮೀ.ನ ತಿರುವುಗಳ ಹಾದಿಯನ್ನು ರಸ್ತೆಯಲ್ಲಿ ಕ್ರಮಿಸಿಯೂ ಈ ಗಿರಿಧಾಮ ತಲುಪಬಹುದು. ಡಿಸೆಂಬರ್ ತಿಂಗಳಲ್ಲಿ ಹಿಮಪಾತವಾಗುವುದರಿಂದ ಆಗ ಪ್ರವಾಸ ಯೋಗ್ಯವಲ್ಲ.1841ರಲ್ಲಿ ಬ್ರಿಟಿಷರು ಈ ಗಿರಿಧಾಮವನ್ನು ಅಭಿವೃದ್ಧಿಪಡಿಸಿದರೂ ಕುಮಾಓಗಳೆಂಬ ಗುಡ್ಡಗಾಡು ಜನಾಂಗ ಹಲವು ಶತಮಾನಗಳಿಂದ ಇಲ್ಲಿ ನೆಲೆಸಿದ್ದಾರೆ. ಪುರಾಣಗಳಲ್ಲಿ ನೈನಿತಾಲ್ ಕುರಿತ ಉಲ್ಲೇಖಗಳಿವೆ. ಹಿಂದೆ ಇದು ‘ತ್ರಿ-ಋಷಿ-ಸರೋವರ’ ಎಂದು ಕರೆಯಲ್ಪಡುತ್ತಿತ್ತು. ನೀರಿನ ಅಭಾವ ಮನಗಂಡ ಅತ್ತಿ- ಪುಲ್ಯಸ್ತ್ಯ - ಪುಲಾಹ ಋಷಿಗಳು ‘ಮಾನಸ - ಸರೋವರ’ದ ನೀರನ್ನು ತುಂಬಿಸಿದರಂತೆ. ಶಿವನು ಸತಿ ಹೋದ ಪಾರ್ವತಿಯ ದೇಹವನ್ನು ತೆಗೆದುಕೊಂಡು ಹೋಗುವಾಗ ಅವಳ ಕಣ್ಣುಗಳ ಭಾಗವು ಇಲ್ಲಿ ಬಿದ್ದ ಪರಿಣಾಮ ಸರೋವರ ಉಂಟಾಯಿತೆಂದೂ ಅದರ ಉತ್ತರದಲ್ಲಿ ನೈನಾದೇವಿಯ ದೇಗುಲ ನಿರ್ಮಾಣಗೊಂಡಿತೆಂದೂ ಪ್ರತೀತಿ. 1880ರಲ್ಲಿ ಭೂ ಕುಸಿತದಿಂದ ಈ ನೈನಾದೇವಿ ಮಂದಿರ, ಜೊತೆಗೆ ಬ್ರಿಟಿಷರ ಹಲವು ಆಡಳಿತ ಕಚೇರಿಗಳು ಭೂಮಿಯಡಿಗಾದವು. ಆಗ ಆ ಜಾಗವನ್ನು ಸಮತಟ್ಟಾಗಿ ಮಾಡಿ ಕ್ರೀಡಾಂಗಣವನ್ನಾಗಿ ಮಾಡಿದರು. ಆ ಸ್ಥಳವೇ ಈಗ ‘ದ ಫ್ಲಾಟ್ಸ’ ಎಂದು ಕರೆಸಿಕೊಳ್ಳುತ್ತದೆ.ನೈನಿತಾಲ್‌ನ್ನು ಎರಡು ಭಾಗವಾಗಿ ವಿಂಗಡಿಸಲಾಗಿದೆ. ಉತ್ತರವನ್ನು ಮಲ್ಲಿತಾಲ್ ಎಂದೂ, ದಕ್ಷಿಣವನ್ನು ತಲ್ಲಿತಾಲ್ ಎಂದೂ ಕರೆಯುತ್ತಾರೆ. ತಲ್ಲಿತಾಲ್ - ಮಲ್ಲಿತಾಲ್‌ಗಳನ್ನು ಜೋಡಿಸುವ ರಸ್ತೆಯೇ ‘ಮಾಲ್ - ರೋಡ್’ ಸರೋವರದ ತೀರದುದ್ದಕ್ಕೂ ಅಂಗಡಿ ಮುಂಗಟ್ಟುಗಳಿವೆ. ನೈನಿತಾಲ್ ಪ್ರಸಿದ್ಧ ಮೇಣದ ಬತ್ತಿಗಳು ಪ್ರತಿ ಅಂಗಡಿಯಲ್ಲೂ ಕಾಣಸಿಗುತ್ತವೆ.ಎರಡು ಮೈಲುಗಳಷ್ಟು ಪಸರಿಸಿಕೊಂಡಿರುವ ನೈನೀ ಸರೋವರದಲ್ಲಿ ದೋಣಿ ವಿಹಾರ ಅತಿ ಮುದ ನೀಡುತ್ತದೆ. ಇದರ ಉತ್ತರ ತೀರದಲ್ಲಿ ನೈನಿತಾಲ್‌ನ ಪ್ರಮುಖ ಆಕರ್ಷಣೆಯಾದ ದೇವಿಯ ಮಂದಿರವಿದೆ. ಗಣಪತಿ, ಕಾಳಿಮಾತೆಯರೂ ಇಲ್ಲಿ ಪೂಜಿಸಲ್ಪಡುತ್ತಾರೆ.ನೈನೀ ಸರೋವರದ ಉತ್ತರಕ್ಕೆ ನೈನಾ, ದಕ್ಷಿಣಕ್ಕೆ ಅಯಾರ್‌ಪತ್ ಮತ್ತು ಪಶ್ಚಿಮಕ್ಕೆ ದಿಯೋಪತ್‌ಗಳೆಂಬ ಶಿಖರಗಳಿವೆ. ನೈನಾ ಶಿಖರವು ಹಿಂದೆ ‘ಚೈನಾ ಶಿಖರ’ ಎಂದು ಗುರುತಿಸಿಕೊಳ್ಳುತ್ತಿತ್ತು. ಕೇವಲ ಕಾಲ್ನಡಿಗೆ ಅಥವಾ ಕುದುರೆಗಳ ಸಹಾಯದಿಂದ ಇಲ್ಲಿ ತಲುಪಬಹುದು.ಮಂದಿರದಿಂದ ಕೊಂಚ ದೂರದಲ್ಲಿ ಬ್ರಿಟಿಷರ ಸೇಂಟ್‌ಜಾನ್ ಚರ್ಚ್ ಇದೆ. ಪಕ್ಕದಲ್ಲೇ ಮಸೀದಿ, ಗುರುದ್ವಾರಗಳಿದ್ದು ಭಾವೈಕ್ಯ ಮೆರೆಯುತ್ತಿವೆ.1899ರಲ್ಲಿ ಗೋಥಿಕ್ ವಿನ್ಯಾಸದಲ್ಲಿ ಕಟ್ಟಿದ ‘ಗವರ್ನರ್ಸ್‌’ ಹೌಸ್ ಅಥವಾ ರಾಜಭವನ, ಸರೋವರದಿಂದ 6 ಕಿ.ಮೀ. ದೂರದ ಬೆಟ್ಟದ ಮೇಲಿದೆ. ಬ್ರಿಟಿಷ್ ರಾಜ್ಯಪಾಲರ ಬೇಸಿಗೆ ಮನೆಯಂತಿದ್ದ ಇದು ಈಗ ಉತ್ತರಾಖಂಡ ರಾಜ್ಯಪಾಲರ ವಿಶ್ರಾಂತಿ ಧಾಮವಾಗಿದೆ.ಹಿಮಾಲಯದ ದರ್ಶನ ಮಾಡಬೇಕೆಂದರೆ ‘ಕೇಬಲ್ ಕಾರ್’ ಮೂಲಕ, 7448 ಅಡಿಯ ‘ಶೇರ್-ಕಾ-ಡಂಡಾ’ ಎಂಬ ಬೆಟ್ಟ ಏರಬೇಕು. 150 ರೂ. ಟಿಕೆಟ್ ಪಡೆದು ಕೇಬಲ್ ಟ್ರಾಲಿಯಿಂದ ನೈನಿತಾಲ್‌ನ ವಿಹಂಗಮ ನೋಟ ನೋಡುವುದೇ ಚೆನ್ನ. ಅಕ್ಟೋಬರ್ - ನವೆಂಬರ್‌ಗಳಲ್ಲಿ ಹಿಮಾಲಯದ ದರ್ಶನ ಅತಿಸೂಕ್ತ. ನಂದಾದೇವಿ, ತ್ರಿಶೂಲ್ ಮತ್ತು ನಂದಾಕೋಟ್ ಪರ್ವತಗಳು ಕಣ್ಣಿಗೆ ಹಬ್ಬ ನೀಡುತ್ತವೆ. ಬೆಟ್ಟದ ಮೇಲೆ ಒಂದು ಗಂಟೆಗಳ ಓಡಾಟಕ್ಕೆ ಅವಕಾಶವಷ್ಟೇ. ಪುನಃ ‘ರೋಪ್ ವೇ’ ಮುಖಾಂತರ ನೈನಿತಾಲ್‌ಗೆ ವಾಪಸಾಗಬೇಕು.7520 ಅಡಿಯಷ್ಟು ಎತ್ತರದಲ್ಲಿ ಟಿಫಿನ್ ಟಾಪ್ ಅಥವಾ ಡೊರೊಥಿ ಸೀಟ್ - ಅಯಾರ್‌ಪತ್ ಇದೆ. ನೈನಿತಾಲ್‌ನಿಂದ 4 ಕಿ.ಮೀ. ಹಾದಿ. ಬ್ರಿಟಿಷ್ ಕಲಾಕಾರನೊಬ್ಬ, ವಿಮಾನ ಅಪಘಾತದಲ್ಲಿ ತೀರಿ ಹೋದ ತನ್ನ ಹೆಂಡತಿ ಡೊರೊಥಿಯ ಸವಿನೆನಪಿಗೆ ಆಸನ ವಿನ್ಯಾಸಗೊಳಿಸಿದ್ದಾನೆ. ಅಲ್ಲೇ ಹತ್ತಿರದ ‘ಬಾರಾ ಪತ್ತರ್’ ಎಂಬಲ್ಲಿಂದ ಕುದುರೆಗಳ ಮೇಲೆ ಕುಳಿತು ಕಡಿದಾದ ಬೆಟ್ಟ ಏರಿ, ಹಿಮಾಲಯ ದರ್ಶನವನ್ನೂ ಮಾಡಬಹುದು.ಬ್ರಿಟಿಷರು ಸ್ಥಾಪಿಸಿದ ಹಲವು ಶಾಲಾ - ಕಾಲೇಜುಗಳು ಇಂದಿಗೂ ನೈನಿತಾಲ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ. ಕುಮಾಓ ವಿಶ್ವವಿದ್ಯಾಲಯ ಕೂಡ ಇಲ್ಲಿದೆ. ಆರ್ಯಭಟ ರಿಸರ್ಚ್ ಇನ್‌ಸ್ಟಿಟ್ಯೂಟ್ ಫಾರ್ ಅಬ್‌ಸರ್‌ವೇಷನಲ್ ಸೈನ್ಸಸ್ - ನೈನಿತಾಲ್‌ನ ‘ಮನೋರಾ’ ಬೆಟ್ಟದ ಮೇಲಿದೆ.ಒಟ್ಟಿನಲ್ಲಿ ಉತ್ತರಖಂಡದ ಅತಿ ಸೊಬಗಿನ ಸ್ಥಳ ನೈನಿತಾಲ್ ಪ್ರವಾಸಿಗರ ಮನದಲ್ಲಿ ಅಳಿಸಲಾರದ ನೆನಪನ್ನು ಕಟ್ಟಿಕೊಡುವುದು ಖಂಡಿತ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.