ನರಗುಂದ ತಾಲ್ಲೂಕಿಗೆ ಮಾಯಾಜಿಂಕೆಯಾದ ಮಲಪ್ರಭೆ:ಕಾಲುವೆ ಕಿರಿದು; ಬೇಡಿಕೆ ಹಿರಿದು!

7

ನರಗುಂದ ತಾಲ್ಲೂಕಿಗೆ ಮಾಯಾಜಿಂಕೆಯಾದ ಮಲಪ್ರಭೆ:ಕಾಲುವೆ ಕಿರಿದು; ಬೇಡಿಕೆ ಹಿರಿದು!

Published:
Updated:
ನರಗುಂದ ತಾಲ್ಲೂಕಿಗೆ ಮಾಯಾಜಿಂಕೆಯಾದ ಮಲಪ್ರಭೆ:ಕಾಲುವೆ ಕಿರಿದು; ಬೇಡಿಕೆ ಹಿರಿದು!

ಹುಬ್ಬಳ್ಳಿ: ಮಲಪ್ರಭಾ ಬಲದಂಡೆ ಕಾಲುವೆ ನರಗುಂದ ತಾಲ್ಲೂಕಿಗೆ ಕಾಲಿಟ್ಟು ಆಗಲೇ 38 ವರ್ಷಗಳೇ ಗತಿಸಿದ್ದರೂ ಕಾಲುವೆ ಬಾಲಂಗೋಚಿ (ಟೇಲ್ ಎಂಡ್) ಗ್ರಾಮಗಳಿಗೆ ಇದುವರೆಗೆ ನೀರು ಸಿಕ್ಕಿಲ್ಲ. ಕರ್ನಾಟಕ ನೀರಾವರಿ ನಿಗಮದ ದಸ್ತಾವೇಜಿನ ನೀರಾವರಿ ಗ್ರಾಮಗಳ ಯಾದಿಯಲ್ಲಿ ಇರುವ ಹದಲಿ, ಸುರಕೋಡ, ಅರಿಷಿಣಗೋಡಿ ಮೊದಲಾದ ಹಳ್ಳಿಗಳು ಕಾಲುವೆಯಲ್ಲಿ ನೀರು ಹರಿದಿದ್ದನ್ನು ಇದುವರೆಗೂ ಕಂಡಿಲ್ಲ.`ಕಾಲುವೆಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಿದ್ದಲ್ಲದೆ, ಇದ್ದ ಕಾಲುವೆಗಳಲ್ಲಿ ಹೂಳು ತೆಗೆಯದೆ ಬಿಟ್ಟಿರುವುದರಿಂದ ಈ ಸಮಸ್ಯೆ ಉದ್ಭವಿಸಿದೆ. ಎಲ್ಲಿಯವರೆಗೆ ಕಾಲುವೆಗಳ ಪಾತ್ರವನ್ನು ಅಗಲಗೊಳಿಸಿ, ಹೂಳನ್ನು ಸಂಪೂರ್ಣವಾಗಿ ತೆಗೆಯುವುದಲ್ಲವೋ ಅಲ್ಲಿಯವರೆಗೆ ಈ ಸಮಸ್ಯೆ ಇದ್ದದ್ದೇ~ ಎನ್ನುತ್ತಾರೆ ನರಗುಂದದ ರೈತ ಜಾಗೃತಿ ಸಮಿತಿ ಅಧ್ಯಕ್ಷ ಆರ್.ಎಂ.ಕೋರಿ.`ಮುಂಗಾರು ಹಂಗಾಮಿಗೆ ಬೇಕಾದಷ್ಟು ನೀರು ಹರಿಸಲು ಅಣೆಕಟ್ಟಿನಲ್ಲಿ ನೀರು ಇರುವುದಿಲ್ಲ. ಹಿಂಗಾರು ಹಂಗಾಮಿನಲ್ಲಿ ಮಳೆಯಾಗಿ ನೀರು ಬಂದರೂ ಕಿರಿದಾದ ಕಾಲುವೆಗಳು ಹೊಲಗಳಿಗೆ ಬೇಕಾದಷ್ಟು ನೀರು ತರುವುದಿಲ್ಲ. ಹೀಗಾಗಿ, ಗುದ್ದಾಟಗಳು ಸಾಮಾನ್ಯವಾಗಿ ರೈತರು ಪೊಲೀಸ್ ಠಾಣೆಗೆ ಎಡತಾಕುವಂತಾಗಿದೆ. ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಬೇರೆ ಯಾವ ರೈತರೂ ಅನುಭವಿಸದ ನೀರಿನ ಅಭಾವಕ್ಕೆ ಈ ಬಂಡಾಯದ ಭೂಮಿ ತುತ್ತಾಗಿದೆ~ ಎಂದು ಅವರು ವಿಷಾದದಿಂದ ನುಡಿಯುತ್ತಾರೆ.ವಿಭಜನಾಪೂರ್ವ ಧಾರವಾಡ ಜಿಲ್ಲೆಯಲ್ಲಿ ಕಾಲುವೆಗಳಿಂದ ಹೆಚ್ಚಿನ ಪ್ರಮಾಣದ ನೀರಾವರಿ ಸೌಲಭ್ಯವನ್ನು ಪಡೆಯುತ್ತಿರುವ ತಾಲ್ಲೂಕು ನರಗುಂದವಾಗಿದ್ದು, ಒಟ್ಟಾರೆ 33,708 ಹೆಕ್ಟೇರ್ ಭೂಮಿ ಕಾಲುವೆಗಳಿಂದಲೇ ನೀರು ಪಡೆಯುತ್ತದೆ ಎನ್ನುವ ಮಾಹಿತಿ ದಾಖಲೆಗಳಲ್ಲಿದೆ. ಆದರೆ, ವಾಸ್ತವ ಸಂಗತಿ ಬೇರೆಯೇ ಇದೆ. ಕಾಲುವೆ ನೀರು  ಅಕ್ಕ-ಪಕ್ಕದ ಹೊಲಗಳ ರೈತರನ್ನೂ ವೈರಿಗಳನ್ನಾಗಿಸಿದೆ. ರಾತ್ರಿ ವೇಳೆ ಕಾಲುವೆ ಬಂದ್ ಮಾಡುವುದು, ಪಂಪ್‌ಸೆಟ್‌ಎತ್ತಿ ಒಗೆಯುವುದೆಲ್ಲ ನಿರಂತರವಾಗಿ ನಡೆದೇ ಇದೆ.ನರಗುಂದ ತಾಲ್ಲೂಕಿಗೆ 2,000 ಕ್ಯೂಸೆಕ್ ನೀರು ಹರಿಸುವುದಾಗಿ ನೀರಾವರಿ ನಿಗಮ ಹೇಳುತ್ತದಾದರೂ 400 ಕ್ಯೂಸೆಕ್‌ನಷ್ಟು ನೀರೂ ಸಿಗುತ್ತಿಲ್ಲ ಎನ್ನುವುದು ರೈತರ ಅಳಲಾಗಿದೆ. ದೊಡ್ಡ ಸುರಂಗವನ್ನು ದಾಟಿಕೊಂಡು ಉಗರಗೋಳದಲ್ಲಿ ತಲೆ ಎತ್ತಿ, ನರಗುಂದ ಕಡೆಗೆ ಉತ್ತರದಿಂದ ಪೂರ್ವಾಭಿಮುಖವಾಗಿ ಹರಿಯುವ 42 ಕಿ.ಮೀ. ಉದ್ದದ ಈ ಕಾಲುವೆಯಲ್ಲಿ ಹರಡಿಕೊಂಡ ಹಂಚಿಕೆ ಜಂಕ್ಷನ್‌ಗಳೆಲ್ಲ ಉದ್ವಿಗ್ನ ವಾತಾವರಣದ ಕೇಂದ್ರಗಳಾಗಿ ಮಾರ್ಪಟ್ಟಿವೆ. 30 ಹಳ್ಳಿಗಳಿಗೆ ನೀರುಣಿಸಬೇಕಾದ ಕಾಲುವೆ ನೆಟ್ಟಗೆ 20 ಊರುಗಳ ಭೂಮಿ ದಾಹವನ್ನೂ ತಣಿಸುತ್ತಿಲ್ಲ.ವಾರ್ಷಿಕ ಸರಾಸರಿ 44 ಮಳೆ ದಿನಗಳನ್ನೂ 545.0 ಮಿಲಿಮೀಟರ್ ಮಳೆಯನ್ನೂ ಹೊಂದಿರುವ ನರಗುಂದಕ್ಕೆ ಕಾಲುವೆಯಿಂದ ನೀರು ಬಾರದಿದ್ದರೆ ರೈತರು ಕೃಷಿ ಚಟುವಟಿಕೆ ಕೈಗೊಳ್ಳುವುದೇ ಕಷ್ಟವಾಗಿದೆ. `ಕಾಲುವೆ ದುರಸ್ತಿಗೆ ಸಿಕ್ಕಾಪಟ್ಟೆ ದುಡ್ಡು ಬಂದರೂ ಪ್ರಯೋಜನಕ್ಕೆ ಬಾರದಂತೆ ಪೋಲಾಗುತ್ತಿದೆ. ಕಾಲುವೆ ಪಾತ್ರವನ್ನು ಅಗಲ ಮಾಡುವುದು ಬಿಟ್ಟು, ಅದರ ಮೇಲೆ ಗೋಡೆ ಕಟ್ಟಲಾಗುತ್ತಿದೆ. ಇದರಿಂದ ಏನು ಪ್ರಯೋಜನ~ ಎಂದು ಪ್ರಶ್ನಿಸುವ ಕೋರಿ, `ಪಗಾರಕ್ಕೆ ಬಂದ ಎಂಜಿನಿಯರ್‌ಗಳಿಂದ ಏನು ನಿರೀಕ್ಷಿಸಲು ಸಾಧ್ಯ~ ಎಂದು ತಲೆ ಆಡಿಸುತ್ತಾರೆ.`ಕಾಲುವೆಯಲ್ಲಿ ಏನೆಲ್ಲ ತಪ್ಪಾಗಿದೆ ಎನ್ನುವುದನ್ನು ನಾವು ತೋರಿಸುತ್ತೇವೆ. ದುರಸ್ತಿ ಕಾರ್ಯಕ್ಕೆ ಬೇಕಾದ ಸಲಹೆಯನ್ನು ನೀಡಲೂ ಸಿದ್ಧರಿದ್ದೇವೆ. ಇಂತಹ ಅವೈಜ್ಞಾನಿಕ ಕಾಲುವೆಗಳಿಂದ ಏನು ಪ್ರಯೋಜನ. ರೈತರು ಇನ್ನೆಷ್ಟು ದಿನ ಇದೇ ಕೊರಗಿನಲ್ಲಿ ಜೀವನ ನೂಕಬೇಕು~ ಎಂದು ಕೇಳುತ್ತಾರೆ ನಿವೃತ್ತ ಎಂಜಿನಿಯರ್ ಶೇಷಣ್ಣ ಗುಡಿಸಾಗರ.ಮೊದಲು ಜೋಳ, ಗೋಧಿ, ಗೋವಿನಜೋಳ, ಶೇಂಗಾ, ಸೂರ್ಯಕಾಂತಿಯನ್ನು ಹೆಚ್ಚಾಗಿ ಬೆಳೆಯುತ್ತಿದ್ದ ತಾಲ್ಲೂಕಿನಲ್ಲಿ, ಈಗ ಗೋವಿನಜೋಳ ಮತ್ತು ಬಿ.ಟಿ ಹತ್ತಿ ಮುಂಚೂಣಿಗೆ ಬಂದಿದ್ದು, ಉಳಿದ ಬೆಳೆಗಳೆಲ್ಲ ಅಲಕ್ಷ್ಯಕ್ಕೆ ಒಳಗಾಗಿವೆ. ನೀರಿಲ್ಲದೆ ಪರಿತಪಿಸುವ ರೈತರು, ನೀರಾವರಿ ನಿಗಮದ ಮೇಲೆಯೇ ಸಂಪೂರ್ಣವಾಗಿ ಅವಲಂಬಿಸಿದ್ದಾರೆ. ಹೀಗಾಗಿ, ರೈತರ ಹಿಡಿತಕ್ಕೆ ಸಿಗದ ಇಲ್ಲಿಯ ಕೃಷಿ ಬದುಕೇ ಮೂರಾಬಟ್ಟೆಯಾಗಿದೆ.`ಮನಸ್ಸಿಗೆ ತೋಚಿದಂತೆ ನೀರು ಬಿಟ್ಟರೆ ಹೀಗೇ ಆಗುವುದು. ನೀರಿನ ಲಭ್ಯತೆ ಎಷ್ಟಿದೆ, ಅಷ್ಟರಲ್ಲಿ ಎಂತಹ ಬೆಳೆ ಬೆಳೆಯಬಹುದು ಎನ್ನುವ ತಿಳಿವಳಿಕೆಯನ್ನೂ ರೈತರಿಗೆ ನೀಡಲಾಗಿಲ್ಲ. ಬಾಲಂಗೋಚಿ ಗ್ರಾಮಗಳಿಗೆ ನೀರೇ ಸಿಕ್ಕಿಲ್ಲ~ ಎನ್ನುತ್ತಾರೆ ಶೇಷಣ್ಣ ಗುಡಿಸಾಗರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry