ನರನಾಳ: ಮಲ್ಲಿಕಾರ್ಜುನ ದೇವರ ವೈಭವದ ರಥೋತ್ಸವ

7

ನರನಾಳ: ಮಲ್ಲಿಕಾರ್ಜುನ ದೇವರ ವೈಭವದ ರಥೋತ್ಸವ

Published:
Updated:

ಚಿಂಚೋಳಿ: ದ್ವಿತೀಯ ಶ್ರೀಶೈಲ್ ಎಂದೇ ಭಕ್ತರ ಮನದಲ್ಲಿ ನೆಲೆನಿಂತ ತಾಲ್ಲೂಕಿನ ಸುಕ್ಷೇತ್ರ ನರನಾಳದಲ್ಲಿ ಮಲ್ಲಿಕಾರ್ಜುನ ದೇವರ ಜಾತ್ರೆ ನಿಮಿತ್ತ ಮಂಗಳವಾರ ಸಂಜೆ ರಥೋತ್ಸವ ಭಕ್ತಿ ಶ್ರದ್ಧೆಯಿಂದ ಅಪಾರ ಭಕ್ತರ ಜಯಕಾರದೊಂದಿಗೆ ನಡೆಯಿತು.ನೆರೆಯ ಮಹಾರಾಷ್ಟ್ರ, ಬೀದರ್, ಗುಲ್ಬರ್ಗ ಜಿಲ್ಲೆಗಳ ವಿವಿಧ ಹಳ್ಳಿಗಳಿಂದ ಸಾವಿರಾರು ಭಕ್ತರು ಆಗಮಿಸಿ ಮಲ್ಲಿಕಾರ್ಜುನ ದೇವರ ರಥಕ್ಕೆ ಉತ್ತುತ್ತಿ, ಖಾರಿಕ ಎಸೆದು ಹರಕೆ ಸಲ್ಲಿಸಿ ಕೃತಾರ್ಥರಾದರು. ಜಾತ್ರೆ ಅಂಗವಾಗಿ ಬೆಳಿಗ್ಗೆ 8 ಗಂಟೆಯಿಂದ ಗ್ರಾಮದಲ್ಲಿ ವಾದ್ಯಮೇಳದೊಂದಿಗೆ ಉತ್ಸವ ಮೂರ್ತಿಯ ಪಲ್ಲಕ್ಕಿ ಮೆರವಣಿಗೆ, ಮಹಾಪ್ರಸಾದ ಮಧ್ಯಾಹ್ನ ಹಿರೇಮಠದ ಪೂಜ್ಯರಾದ ಶಾಂತವೀರ ಶಿವಾಚಾರ್ಯರನ್ನು ಸಾರೋಟಿ ಕೂಡಿಸಿ ಅದ್ದೂರಿ ಮೆರವಣಿಗೆ ನಡೆಸಿದ ಭಕ್ತರು, ಭಜನೆ ಹಾಗೂ ವಾದ್ಯಮೇಳದ ಸೇವೆಯೊಂದಿಗೆ ಧಾರ್ಮಿಕ ಕೈಂಕರ್ಯ ಪೂರೈಸಿದರು.ಪೂಜ್ಯರ ಮೆರವಣಿಗೆಯ ಜತೆಗೆ ನಡೆದ ಮಲ್ಲಿಕಾರ್ಜುನ ನವ ಯುವಕ ಸಂಘದ ಸದಸ್ಯರಿಂದ ನಂದಿಕೋಲಿನ ಮೆರವಣಿಗೆ ಯುವಕರ ಸಹಾಸ ಪ್ರದರ್ಶನವನ್ನು ಸಾಕ್ಷೀಕರಿಸಿತು. ಐದಾರು ಮೀಟರ್ ಉದ್ದದ, ಹೆಚ್ಚು ಭಾರದ ನಂದಿಕೋಲು ಬಾಯಲ್ಲಿ, ಒಂದೇ ಕೈಯಲ್ಲಿ ಹಿಡಿದುಕೊಂಡು ಮೆರವಣಿಗೆ ನಡೆಸಿ ಆಕರ್ಷಿಸಿದರು.ನಂತರ ಸಂಪ್ರದಾಯದಂತೆ ಕುಂಭದ ಮೆರವಣಿಗೆ ನಡೆಸಿ ತೇರಿನ ಸುತ್ತ ಹಲವು ಸುತ್ತು ತಿರುಗಿ ಪುರವಂತರ ಶಸ್ತ್ರ ಪ್ರಯೋಗದೊಂದಿಗೆ ಆರಂಭವಾದ ರಥೋತ್ಸವ ಶಾಂತಿಯುತವಾಗಿ ಮರಳಿ ಸ್ಥಾನಕ್ಕೆ ಬಂದು ನಿಂತಿತು.ಜಾತ್ರಾ ಮಹೋತ್ಸವದಲ್ಲಿ ಶಾಂತವೀರ ಶಿವಾಚಾರ್ಯರು, ಸೊಂತದ ಹಿರೇಮಠದ ಶಿವಕುಮಾರ ಶಿವಾಚಾರ್ಯರು, ಐನಾಪೂರದ ಸಿದ್ದಲಿಂಗ ಶಿವಾಚಾರ್ಯರು, ಹುಡಗಿಯ ಚನ್ನಮಲ್ಲ ಶಿವಯೋಗಿಗಳು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಮರಾವ್ ಪಾಟೀಲ್, ಬಸವಕಲ್ಯಾಣದ ಜಗನ್ನಾಥ ತಾಂಬಳೆ, ಕಲಾವಿದ ರೇವಣಸಿದ್ದಯ್ಯ ನರನಾಳ್, ರಾಚಯ್ಯಸ್ವಾಮಿ ಖಾನಾಪೂರ, ತುಕಾರಾಮ ಚಿತ್ತಾಪುರ, ಶಾಂತರೆಡ್ಡಿ, ಬಸಯ್ಯ ಸ್ವಾಮಿ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು, ತಾಯಂದಿರು ಪಾಲ್ಗೊಂಡು ಮಲ್ಲಿಕಾರ್ಜುನನ ದರ್ಶನ ಪಡೆದರು. ಸಬ್ ಇನ್ಸ್‌ಪೆಕ್ಟರ್ ಮಹಾಂತೇಶ ಪಾಟೀಲ, ಬಾಳಪ್ಪ ತಳವಾರ ಮತ್ತಿತರರ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry