ಸೋಮವಾರ, ಜನವರಿ 20, 2020
19 °C

ನರಭಕ್ಷಕ ವ್ಯಾಘ್ರನಿಗೆ ಇನ್ನು ‘ಸೆರೆ’ ವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನರಭಕ್ಷಕ ವ್ಯಾಘ್ರನಿಗೆ ಇನ್ನು ‘ಸೆರೆ’ ವಾಸ

ಮೈಸೂರು (ಚಿಕ್ಕಬರಗಿ): ಎಚ್.ಡಿ.ಕೋಟೆ ತಾಲ್ಲೂಕಿನ ಕಾಡಂಚಿನ ಗ್ರಾಮ ಚಿಕ್ಕಬರಗಿ ಹಾಗೂ ಸುತ್ತಮುತ್ತಲಿನ ಪ್ರದೇಶದ ಜನರ ನಿದ್ದೆಗೆಡಿಸಿದ್ದ ನರಭಕ್ಷಕ ಹುಲಿಗೆ ಗುರುವಾರ ಬೆಳಿಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಅರವಳಿಕೆ ಮದ್ದು ನೀಡಿ ಸೆರೆಹಿಡಿದ್ದಿದ್ದಾರೆ. ಆದರೆ,  ಹುಲಿಯನ್ನು ಸ್ಥಳದಲ್ಲಿಯೇ ಕೊಲ್ಲುವಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಅರಣ್ಯ ಸಿಬ್ಬಂದಿ ಜನರ ಮನವೊಲಿಸಿ ಹುಲಿಯನ್ನು ಬನ್ನೇರುಘಟ್ಟದಲ್ಲಿರುವ ಪ್ರಾಣಿ ಸಂಗ್ರಹಾಲಯಕ್ಕೆ ಸಾಗಿಸುವ ಪ್ರಯತ್ನ ನಡೆಸಿದ್ದಾರೆ.ಅರಣ್ಯ ಇಲಾಖೆ ಸಿಬ್ಬಂದಿ ಆನೆ ’ಕಾಂತಿ’ಯನ್ನು ಬಳಸಿ ಅರವಳಿಕೆ ನೀಡುವ ಮೂಲಕ ಹುಲಿಯನ್ನು ಸೆರೆಹಿಡಿದಿದ್ದಾರೆ. ಹುಲಿಗೆ ನಾಲ್ಕನೇ ಬಲಿಯಾದ ಬಸಪ್ಪನ ಶವ ಬಿದ್ದಿದ್ದ ಸ್ಥಳದಿಂದ 15 ಮೀಟರ್ ದೂರದಲ್ಲಿ ಅರಣ್ಯ ಇಲಾಖೆಯ ನಿರೀಕ್ಷಣಾ ಮಂದಿರದ ಹಿಂಭಾಗ ಪೊದೆಯೊಂದಲ್ಲಿ ಅಡಗಿ ಕುಳಿತಿದ್ದ ಹುಲಿಗೆ ಅರಣ್ಯ ಇಲಾಖೆಯ ಅರವಳಿಕೆ ತಜ್ಞರು ಮದ್ದು ನೀಡಿ ಸೆರೆ ಹಿಡಿದರು ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.

ಬೆಳಿಗ್ಗೆ 9ರಿಂದ ಕಾರ್ಯಾಚರಣೆ ಆರಂಭಿಸಿದ್ದ ಸಿಬ್ಬಂದಿ, ಆನೆ, ಹುಲಿ ಇರುವ ಸ್ಥಳಕ್ಕೆ ಹೋದಾಗ ಹುಲಿಯ ಇರುವಿಕೆಯನ್ನು ಕಂಡು ಆ ಕ್ಷಣಕ್ಕೆ ಹಿಂದೆ ಸರಿದಿದೆ. ಹುಲಿ ಇರುವುದನ್ನು ದೃಢಪಡಿಸಿಕೊಂಡ ತಜ್ಞರು ತಕ್ಷಣ ಹುಲಿಗೆ ಅರವಳಿಕೆ ನೀಡಿದ್ದಾರೆ. ಈ ಮೂಲಕ ಹುಲಿಯನ್ನು ಸೆರೆ ಹಿಡಿಯಲಾಗಿದೆ ಎಂದು ಸಿಬ್ಬಂದಿ ಹೇಳಿದ್ದಾರೆ.ಸೆರೆಯಾದ ಹುಲಿಯನ್ನು ಅಲ್ಲಿಯೇ ಕೊಲ್ಲಬೇಕು ಎಂದು ಸ್ಥಳೀಯರು ಪಟ್ಟುಹಿಡಿದಾಗ, ಹುಲಿಗೆ ರೋಗವೊಂದು ಇದ್ದು, ಅದನ್ನು ಪತ್ತೆ ಮಾಡಲು ಪರೀಕ್ಷೆಗೆ ಜೀವಂತವಾಗಿ ತೆಗೆದುಕೊಂಡುಹೋಗಬೇಕು. ಕೊಲ್ಲುವುದು ಬೇಡ. ಸಹಕರಿಸಿ ಎಂದು ಜನರ ಮನವೊಲಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ ಹುಲಿಯನ್ನು ಮೈಸೂರಿಗೆ ಟ್ರ್ಯಾಕ್ಟರ್‌ನಲ್ಲಿ ತರುತ್ತಿದ್ದಾರೆ. ಮೈಸೂರಿನಿಂದ ಹುಲಿಯನ್ನು ಬನ್ನೇರುಘಟ್ಟದ ಪ್ರಾಣಿಧಾಮಕ್ಕೆ ಕಳುಹಿಸಲಾಗುವುದಾಗಿ ಹೇಳಿದ್ದಾರೆ.

ಚಿಕ್ಕಬರಗಿ ಮತ್ತು ಸುತ್ತಮುತ್ತಲ ಗ್ರಾಮಸ್ಥರ ಆಕ್ರೋಶಕ್ಕೆ ಎಚ್ಚೆತ್ತುಕೊಂಡಿದ್ದ ಅರಣ್ಯ ಇಲಾಖೆಯು ಜಿಲ್ಲೆಯಲ್ಲಿ ಒಂಬತ್ತು ದಿನಗಳಲ್ಲಿ ನಾಲ್ವರನ್ನು ಬಲಿ ತೆಗೆದುಕೊಂಡಿರುವ ನರಭಕ್ಷಕ ಹುಲಿಯ ಸೆರೆಗೆ ಡಿ. 5ರಿಂದ ಆನೆಗಳಿಂದ ವಿಶೇಷ ಕಾರ್ಯಾಚರಣೆ ನಡೆಸಲು ಮುಂದಾಗಿತ್ತು.

ಹುಲಿಯ ಅಟ್ಟಹಾಸಕ್ಕೆ ಮಂಗಳ­ವಾರ ಬಲಿ­ಯಾದ ಚಿಕ್ಕಬರಗಿ ಗ್ರಾಮದ ಬಸಪ್ಪ (65) ಅವರ ರಕ್ತಸಿಕ್ತ ರುಂಡ–ಮುಂಡಗಳು ಬುಧ­ವಾರ ಅರಣ್ಯದಲ್ಲಿ ಪತ್ತೆಯಾಗಿವೆ. ಅರಣ್ಯ ಸಿಬ್ಬಂದಿ ಮತ್ತು ಪೊಲೀಸರು ಬುಧವಾರ ಬೆಳಿಗ್ಗೆ 6 ಗಂಟೆ ವೇಳೆಗೆ ‘ಕೂಂಬಿಂಗ್‌’ ಆರಂಭಿಸಿದ್ದರು.

ಬುಧವಾರ ಬೆಳಿಗ್ಗೆ 7.30ರ ವೇಳೆಗೆ ಸನಿಹ­ದಲ್ಲಿ ಹುಲಿಯು ಗರ್ಜಿಸಿದ ಶಬ್ದ ಕೇಳಿದ ತಕ್ಷಣವೇ ಕಾರ್ಯಾಚರಣೆ ಸಿಬ್ಬಂದಿ 29 ಸುತ್ತು ಗುಂಡುಗಳನ್ನು ಹಾರಿಸಿತು. ಆದರೂ ಹುಲಿ ತಪ್ಪಿಸಿಕೊಂಡಿತ್ತು. ಹೀಗಾಗಿ ಕಾರ್ಯಾಚರಣೆಯನ್ನು ಗುರುವಾರವು ಮುಂದುವರಿಸಲಾಗಿತ್ತು.

ನ. 26ರಂದು ಎಚ್‌.ಡಿ. ಕೋಟೆ ತಾಲ್ಲೂಕಿನ ಬಂಡೀಪುರ ಕಾಡಿನಂಚಿನ ನಡಹಾಡಿಯಲ್ಲಿ ಬಸವ­ರಾಜು, 29­ರಂದು ಸೀಗೆವಾಡಿ ಹಾಡಿಯಲ್ಲಿ ಚೆಲುವ, 30ರಂದು ನಾಗರಹೊಳೆಯ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಅರಣ್ಯ ರಕ್ಷಕ ಸುರೇಶ್‌ ಅವರು ಹುಲಿಗೆ ಆಹಾರವಾಗಿದ್ದರು.

ನರಭಕ್ಷಕ ಹುಲಿ ಸೆರೆ ಹಿಡಿಯಲು ಅರಣ್ಯ ಸಿಬ್ಬಂದಿ ಮೀನ–ಮೇಷ ಎಣಿಸುತ್ತಿದೆ ಎಂದು ಆಕ್ರೋಶಗೊಂಡಿದ್ದ ಗ್ರಾಮಸ್ಥರು ಮಂಗಳವಾರ ಸಂಜೆಯೇ ಗ್ರಾಮದಲ್ಲಿನ ಅರಣ್ಯ ಇಲಾಖೆಯ ವಾಹನಗಳು, ನಿರೀಕ್ಷಣಾ ಗೃಹಗಳನ್ನು ಧ್ವಂಸಗೊಳಿಸಿದ್ದರು. 

ಪ್ರತಿಕ್ರಿಯಿಸಿ (+)