ಗುರುವಾರ , ಮೇ 19, 2022
21 °C

ನರಸಲಗಿಯಲ್ಲಿ ನೀರಿಗಾಗಿ ಇಲ್ಲಿ ನಿತ್ಯ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನರಸಲಗಿ (ತಾ.ಬಸವನ ಬಾಗೇವಾಡಿ): ಇಲ್ಲಿಯ ಜನ ನೀರಿಗಾಗಿ ನಿತ್ಯ ಪರಿತಪಿಸುತ್ತಿದ್ದಾರೆ.

200 ಮನೆಗಳಿರುವ ಈ ತಾಂಡಾದಲ್ಲಿ ಅಂದಾಜು 2000 ಜನಸಂಖ್ಯೆ ಇದೆ. ಕುಡಿಯವ ನೀರಿನ ಯೋಜನೆಗಾಗಿ ಇರುವ ಒಂದು ಕೊಳವೆ ಬಾಯಿಗೆ ಮೋಟರ್ ಅಳವಡಿಸಿ ಅದರ ಮೂಲಕ ಗ್ರಾಮದಲ್ಲಿದ್ದ ಟ್ಯಾಂಕ್‌ಗಳಿಗೆ ನೀರು ಸರಬರಾಜು ಮಾಡಲಾಗುತ್ತಿತ್ತು. ತಿಂಗಳ ಹಿಂದೆ  ಕೊಳವೆ ಬಾವಿಯಲ್ಲಿ ನೀರು ಕಡಿಮೆಯಾಗಿ ರುವುದರಿಂದ ತಾಂಡಾದ ಜನರು ನೀರಿನ ತೊಂದರೆ ಅನುಭವಿಸುತ್ತಿದ್ದಾರೆ.ಗ್ರಾಮದಲ್ಲಿ ಇರುವ ಎರಡು ಕೈಪಂಪ್‌ಗಳಲ್ಲಿ ಒಂದು ಕೈಪಂಪ್‌ನಲ್ಲಿ ನೀರಿಲ್ಲ. ಇರುವ ಇನ್ನೊಂದು ಕೈಪಂಪ್‌ನಿಂದ ಒಂದು ಕೊಡ ನೀರು ಪಡೆಯಬೇಕೆಂದರೆ ಗಂಟೆಗಟ್ಟಲೆ ಕೈಪಂಪು ಹೊಡಿಯಬೇಕು (ಅದು ಏರ್ ಹಿಡಿಯುತ್ತದೆ).ಗ್ರಾಮದ ನೀರಿನ ತೊಂದರೆಯನ್ನು ತಾತ್ಕಾಲಿಕವಾಗಿ ಪರಿಹರಿಸುವ ನಿಟ್ಟಿನಲ್ಲಿ ದಿನಕ್ಕೆ ಎರಡು ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ. ಆದರೆ, ಇಷ್ಟು ನೀರು ಸಾಕಾಗುತ್ತಿಲ್ಲ ಎಂಬುದು ತಾಂಡಾದ ನಿವಾಸಿಗಳ ಅಳಲು.`ನಮ್ಮ ಮನಿತುಂಬಾ ಜನಾ ಅದೀವಿ. ದಿವಸಕ್ಕ ಒಂದ್ ಬ್ಯಾರಲ್ ನೀರ ಬೇಕು. ಟ್ಯಾಂಕರ್ ಬಂದಾಗ ನೀರ ತಗೋಬೇಕಂದ್ರ ನಮ್ಮ-ನಮ್ಮಲ್ಲೇ ಜಗಳ. ಜಗಳ ಮಾಡಿದ್ರೂ ನಮಗ ಸಾಕಾಗ್ವಷ್ಟು ನೀರ ಸಿಗ್ವಲ್ವು...~ ಟ್ಯಾಂಕ್ ಮೂಲಕ ಪೂರೈಸಿದ ನೀರನ್ನು ತುಂಬಿಕೊಂಡು ಮನೆಕಡೆ ಹೊರಟಿದ್ದ ಶಾನುಬಾಯಿ ಚವ್ಹಾಣ, ರೇಣುಕಾ ರಾಠೋಡ, ಕಸ್ತೂರಿಬಾಯಿ ಚವ್ಹಾಣ ಹೇಳಿದರು. ಇತರ ಮಹಿಳೆಯರೂ ಅವರ ಮಾತಿಗೆ ದನಿಗೂಡಿಸಿದರು.`ಟ್ಯಾಂಕರ್‌ನಿಂದ ನೀರ ತರಬೇಕಂದ್ರ ಅಲ್ಲಿಯ ಗದ್ದಲ ನೋಡಿ ಹೆದರಿಕಿ ಬರತದ. ಆ ಗದ್ದಲಲ್ಲಿ ಒಂದ ಕೊಡ ನೀರ ಒಯ್ಯುಕ್ಕಿಂತ, ಗಂಟೆಗಟ್ಟಲೆ ಕೈಪಂಪ್ ಹೊಡ್ದು ನೀರು ತಗೊಂಡು ಹೋಗುದ ಛಲೋ ಅಂತ ತಿಳ್ಕಂಡ ಇದ್ದ ಒಂದು ಕೈಪಂಪಿಗಿ ಪಾಳಿ ಹಚ್ಚೀವಿ. ಟ್ಯಾಂಕರ್ ಬಂದಾಗ ಪಾಳಿ ಮ್ಯಾಲ ನೀರ ಒಯ್ದರ ಚಲೋ ಆಗ್ತದ. ಆದ್ರ ಎಲ್ರದ್ದು ಗಡಿಬಿಡಿ. ಹೀಗಾಗಿ ನಾ ಮುಂದ ತಾ ಮುಂದು ಎಂದು ಸ್ಪರ್ಧೆಮಾಡ್ತಾರ~ ಎಂದು ವಿಮಲಾಬಾಯಿ ಚವ್ಹಾಣ, ಮುತ್ತವ್ವ ಚವ್ಹಾಣ ತಮ್ಮ ತಾಂಡಾದ ನೀರಿನ ಬವಣೆ ತೋಡಿಕೊಂಡರು.ತಾಂಡಾದ ಸಮೀಪದಲ್ಲಿಯೇ ಕೊಳವೆ ಬಾವಿಯನ್ನು ಹಾಕಿಸಲಾಗಿದೆ. ಅದೇ ಕೊಳವೆ ಬಾವಿಯಿಂದ ತಾಂಡಾಗೆ ನೀರು ಸರಬರಾಜು ಮಾಡಬೇಕು ಎಂಬ ಉದ್ದೇಶದಿಂದ ಮೋಟರ್ ಅಳವಡಿಸಲಾಗಿತ್ತು. ಆದರೆ, ಅದರಿಂದ ನೀರಿನ ಜೊತೆ ಮಣ್ಣು ಬರುವ ಕಾರಣದಿಂದ 8 ದಿನಗಳಲ್ಲಿ ಅದು ಬಂದಾಗಿದೆ. ನಮ್ಮ ತಾಂಡಾಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಬೇಕು.

 

ಈಗಾಗಲೇ ನದಿಯ ನೀರು ಪೂರೈಕೆಯ ಉದ್ದೇಶದಿಂದ ಪೈಪ್‌ಲೈನ್ ಅಳವಡಿಸಲಾಗಿದೆ. ನದಿಯಿಂದ ನೀರು ಪೂರೈಸಬೇಕು.  ಶಾಶ್ವತ ಕುಡಿಯುವ ನೀರಿನ ಯೋಜನೆ ಆಗುವವರೆಗೆ ತಾಂಡಕ್ಕೆ ಹೆಚ್ಚುವರಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಬೇಕು~ ಎಂದು ತಾಂಡಾದ ಬಾಬು ಚವ್ಹಾಣ, ಪೇಮು ರಾಠೋಡ, ಪ್ರತಾಪ ರಾಠೋಡ, ನೇಮು ಲಮಾಣಿ, ಕಾಸು ಚವ್ಹಾಣ, ಲಾಲೂ ನಾಯಕ, ಮಂಗಲಪ್ಪ ಕಾರಬಾರಿ ಆಗ್ರಹಿಸಿದರು.`ಬರದ ತೀವ್ರತೆಯಿಂದ ತಾಂಡಾಕ್ಕೆ ನೀರಿನ ತೊಂದರೆ ಆಗಿದೆ. ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಓವರ್‌ಹೆಡ್ ಟ್ಯಾಂಕ್ ನಿರ್ಮಾಣ ಕಾರ್ಯ ನಡೆಯುತ್ತಿದೆ~ ಎಂದು  ಗ್ರಾಮ ಪಂಚಾಯಿತಿ ಅಧ್ಯಕ್ಷೆ  ಕೌಶಲ್ಯ ಲಮಾಣಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.