ಗುರುವಾರ , ಮಾರ್ಚ್ 4, 2021
19 °C
ಪಾಳು ಬಿದ್ದ ಕೈಗಾರಿಕಾ ವಸಾಹತು ಪ್ರದೇಶ

ನರಸಿಂಹರಾಜಪುರ: ಈಡೇರದ ನಿರುದ್ಯೋಗಿಗಳ ಕನಸು

ಪ್ರಜಾವಾಣಿ ವಾರ್ತೆ/ಕೆ.ವಿ.ನಾಗರಾಜ್ Updated:

ಅಕ್ಷರ ಗಾತ್ರ : | |

ನರಸಿಂಹರಾಜಪುರ: ಈಡೇರದ ನಿರುದ್ಯೋಗಿಗಳ ಕನಸು

ನರಸಿಂಹರಾಜಪುರ: ತಾಲ್ಲೂಕಿನ ಲಿಂಗಾಪುರ ಹಾಗೂ ಹಿಳುವಳ್ಳಿ ಗ್ರಾಮದಲ್ಲಿ ರಾಜ್ಯ ಸಣ್ಣಕೈಗಾರಿಕೆಗಳ ನಿಗಮದಿಂದ ಸುಮಾರು ₨90ಲಕ್ಷ ವೆಚ್ಚದಲ್ಲಿ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಕೈಗಾರಿಕಾ ಸ್ಥಾಪನೆಗೆ ಉದ್ಯಮಿಗಳು ಮುಂದೆ ಬಾರದ ಕಾರಣ ಪಾಳು ಬಿದ್ದಿದ್ದು ಇದರಿಂದ ನಿರುದ್ಯೋಗಿಗಳ ಕನಸು ನನಸಾಗುವ ಕಾಲ ದೂರವಾಗಿದೆ.ಗ್ರಾಮೀಣ ಭಾಗದ ವಿದ್ಯಾವಂತ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಿ ಗ್ರಾಮೀಣ ಪ್ರದೇಶದ ಪ್ರತಿಭಾ ಪಲಾಯವನ್ನು ತಡೆಗಟ್ಟುವ ಉದ್ದೇಶ ದಿಂದ ಒಟ್ಟು 10 ಎಕರೆ ಪ್ರದೇಶದಲ್ಲಿ ಕೈಗಾರಿಕಾ ವಸಾಹತು ಪ್ರದೇಶವನ್ನು ಈಗಾಗಲೇ ನಿರ್ಮಿಸಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಪ್ರದೇಶಕ್ಕೆ ವಿದ್ಯುತ್, ನೀರು, ರಸ್ತೆ ಮುಂತಾದ ಮೂಲಸೌಲಭ್ಯಗಳನ್ನು ಒದಗಿಸಲಾಗಿತ್ತು. ಆದರೆ ಕೈಗಾರಿಕೆ ಸ್ಥಾಪಿಸಲು ಉದ್ಯಮಿಗಳು ಮೀನಮೇಷ ಮಾಡಿದ್ದರಿಂದ ಕೈಗಾರಿಕಾ ಪ್ರದೇಶದಲ್ಲಿ ಕಾಡು ಬೆಳೆಯುತ್ತಿದೆ.ಕೈಗಾರಿಕಾ ವಸಾಹತು ಪ್ರದೇಶ ನಿರ್ಮಾಣಗೊಂಡು ನಾಲ್ಕು ವರ್ಷಕ್ಕೂ ಅಧಿಕ ಅವಧಿ ಕಳೆದಿದ್ದರೂ ಇದರ ಅಧಿಕೃತ ಉದ್ಘಾಟನೆ ಇದುವರೆಗೂ ನಡೆದಿಲ್ಲ. ಇಲ್ಲಿ ಅಳವಡಿಸಿದ್ದ ವಿದ್ಯುತ್ ದೀಪಗಳೆಲ್ಲವೂ ಹಾಳಾಗಿ ಹೋಗಿದ್ದು. ಈ ಪ್ರದೇಶ ಹಾಳು ಕೊಂಪೆಯಾಗಿ ಪರಿಣಿಮಿಸಿದೆ.ಮಲೆನಾಡು ಭಾಗದಲ್ಲಿ ಕೃಷಿ ಪ್ರಮುಖ ವೃತ್ತಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ರಬ್ಬರ್, ಅಡಿಕೆ ಬೆಳೆಯುತ್ತಿರುವುದರಿಂದ ಇದಕ್ಕೆ ಸಂಬಂಧಪಟ್ಟ ಕೈಗಾರಿಕೆ, ಅಡಿಕೆ ತಯಾರಿಕೆ, ಸಿದ್ಧ ಉಡುಪು ತಯಾರಿಕ ಘಟಕ ಮುಂತಾದ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ವಿಫುಲ ಅವಕಾಶವಿದೆ. ಈ ನಿಟ್ಟಿನಲ್ಲಿ ಸರ್ಕಾರ ಉತ್ತೇಜನ ನೀಡಬೇಕಾಗಿದೆ.ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪಿಸಲು ಮುಂದೆ ಬರುವಂತೆ ಹಲವು ಬಾರಿ ಪ್ರಕಟಣೆ ಹೊರಡಿಸಿದ್ದರೂ ಮಲೆನಾಡು ಭಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಯಾರು ಸಹ ಮುಂದೆ ಬರುತ್ತಿಲ್ಲ. ಅಲ್ಲದೆ ಇತ್ತೀಚೆಗೆ ಅರಣ್ಯ ಇಲಾಖೆ ಕೈಗಾರಿಕಾ ವಸಹತು ನಿರ್ಮಾಣವಾಗಿರುವ ಪ್ರದೇಶ ಕಿರು ಅರಣ್ಯ ವ್ಯಾಪ್ತಿಗೆ ಸೇರಿದ್ದು ಎಂದು ತಡೆಯೊಡ್ಡಿದ ಪರಿಣಾಮವಾಗಿ ಕೈಗಾರಿಕಾ ಸ್ಥಾಪನೆಗೆ ಮುಂದೆ ಬಂದವರಿಗೂ ಅವಕಾಶ ಕಲ್ಪಿಸಲು ಸಾಧ್ಯವಾಗಿಲ್ಲ ಎನ್ನುತ್ತವೆ  ಮೂಲಗಳು.ಈ ಬಗ್ಗೆ ‘ಪ್ರಜಾವಾಣಿ’ ಶಾಸಕ ಡಿ.ಎನ್.ಜೀವರಾಜ್ ಅವರನ್ನು ಸಂಪರ್ಕಿಸಿದಾಗ ಅರಣ್ಯ ಇಲಾಖೆ ಕೈಗಾರಿಕಾ ವಸಾಹತು ಸ್ಥಾಪನೆಯಾಗುವವರೆಗೆ ಯಾವುದೇ ಚಕಾರ ಎತ್ತದೆ ಏಕಾಏಕಿ 1940ಕ್ಕೂ ಮುಂಚಿನ ಮಹಾರಾಜರ ಕಾಲದ ಆದೇಶವನ್ನು ಮುಂದಿಟ್ಟು ಅರಣ್ಯ ಇಲಾಖೆಗೆ ಸೇರಿದ ಜಾಗ ಎಂದು ಆಕ್ಷೇಪ ವ್ಯಕ್ತಪಡಿಸಿರುವುದರಿಂದ ಕೈಗಾರಿಕೆಗಳ ಸ್ಥಾಪನೆಗೆ ಅಡಚಣೆಯಾಗಿದೆ. ಈ ಬಗ್ಗೆ ಕೈಗಾರಿಕಾ ಹಾಗೂ ಅರಣ್ಯ ಸಚಿವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದರು.ವಸಾಹತು ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪಿಸಲು ಉದ್ಯಮಿಗಳು ಮುಂದೆ ಬಂದಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಹಣವನ್ನು ಪಾವತಿ ಮಾಡಿದ್ದರೂ ಅರಣ್ಯ ಇಲಾಖೆಯ ಆಕ್ಷೇಪದಿಂದ ಸಮಸ್ಯೆಯಾಗಿದ್ದು ಮೇಲಧಿಕಾರಿಗಳು ಸಮಸ್ಯೆ ಬಗೆಹರಿಸಲು ಕ್ರಮಕೈಗೊಂಡಿದ್ದಾರೆ ಎನ್ನುತ್ತಾರೆ ಕೈಗಾರಿಕಾ ಇಲಾಖೆ ಅಧಿಕಾರಿ ಚಂದ್ರಶೇಖರ್,ಕೇವಲ ದೊಡ್ಡ ನಗರಗಳಲ್ಲಿ ಕೃಷಿ ಭೂಮಿಯನ್ನು ವಶಪಡಿಸಿ ಕೊಂಡು ಕೈಗಾರಿಕೆಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗುವುದರ ಬದಲು ಇಂತಹ ಹಿಂದುಳಿದ ಪ್ರದೇಶಗಳಲ್ಲಿ ಕೈಗಾರಿಕೆ ಸ್ಥಾಪಿಸಲು ನಿಯಮ ರೂಪಿಸಿದರೆ ಪ್ರಾದೇಶಿಕ ಅಸಮತೋಲನವು ಸೇರಿದಂತೆ ನಿರುದ್ಯೋಗ ಸಮಸ್ಯೆಗೂ ಪರಿಹಾರ ದೊರೆಯುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.