ಶುಕ್ರವಾರ, ಮೇ 14, 2021
29 °C

ನರಸಿಂಹರಾಜಾ ಕಾಲೋನಿ ರಾಮಮಂದಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು ದಕ್ಷಿಣ ಭಾಗದ ರಾಮಮಂದಿರಗಳಲ್ಲಿ ನರಸಿಂಹರಾಜಾ ಕಾಲೋನಿ ರಾಮಮಂದಿರ ಪ್ರಮುಖವಾದುದು. ಕಳೆದ 74 ವರ್ಷಗಳು ರಾಮೋತ್ಸವ ನಡೆಸಿರುವ ಹೆಗ್ಗಳಿಕೆ ಇದರದ್ದು. ನರಸಿಂಹರಾಜಾ ಕಾಲೋನಿಯ ಪೌರರ ಬೆಳವಣಿಗೆಯಲ್ಲಿ ಎನ್.ಆರ್. ಕಾಲೋನಿ ಅಸೋಸಿಯೇಷನ್‌ನ ಪಾತ್ರ ಕೂಡ ಮುಖ್ಯವಾದದ್ದು.1939ರಿಂದ 10 ವರ್ಷ ಫ್ರೆಂಡ್ಸ್ ಯೂನಿಯನ್ ಹೆಸರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಮಂದಿರದ ಸ್ಥಾಪನೆಗೆ ಈ ಯೂನಿಯನ್ನೇ ಬುನಾದಿ. 1948ರ ಜನವರಿಯಲ್ಲಿ ನರಸಿಂಹರಾಜಾ ಕಾಲೋನಿ ಅಸೋಸಿಯೇಷನ್ ಅಸ್ತಿತ್ವಕ್ಕೆ ಬಂದು 120ಗಿ100 ಅಡಿಯ ವಿಶಾಲ ನಿವೇಶನದಲ್ಲಿ ಭವ್ಯವಾದ ರಾಮಮಂದಿರ ಕಟ್ಟಿದರು.ಅದರಲ್ಲಿ ಸಂಗೀತ, ಭಜನೆ, ಪ್ರವಚನ, ಹರಿಕಥೆಗಳನ್ನು ನಡೆಸಿದರೂ ರಾಮೋತ್ಸವವೇ ಪ್ರಧಾನ ಆಚರಣೆಯಾಯಿತು. ಜೊತೆಗೆ ಸಂಸ್ಥೆಯ ಸ್ಥಿರ ಆಸ್ತಿಗಳನ್ನು ಒಂದು ವಿಶ್ವಸ್ಥ ಸಮಿತಿ ನೋಡಿಕೊಳ್ಳತೊಡಗಿತು.ಅಸೋಸಿಯೇಷನ್ ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನೂ ನಡೆಸಿಕೊಂಡು ಬರುತ್ತಿದೆ. ಆಯ್ದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದೆ. ಪುಸ್ತಕಗಳ ಪ್ರಕಟಣೆಯಲ್ಲೂ ಮುಂಚೂಣಿಯಲ್ಲಿದೆ. ಡಾ. ಡಿ.ವಿ.ಜಿ. ಅವರ ಪ್ರೇರಣೆಯಂತೆ ವಾಲ್ಮೀಕಿ ರಾಮಾಯಣವನ್ನು ಮೂಲ ಸಹಿತ ಕನ್ನಡಕ್ಕೆ ಅನುವಾದ ಮಾಡಿಸಿ ಪ್ರಕಟಿಸುವ ಕಾರ್ಯ ಕೈಗೆತ್ತಿಕೊಳ್ಳಲಾಯಿತು.

 

ಈ ರಾಮಾಯಣದ ಸಂಪುಟಗಳು 10 ಮುದ್ರಣ ಕಂಡಿರುವುದೇ ಅವುಗಳ ಜನಪ್ರಿಯತೆಗೆ ಸಾಕ್ಷಿ. ಅಲ್ಲದೆ ಶ್ರೀಮದ್ಭಾಗವತ (ದಶಮ ಸ್ಕಂದ), ಶ್ರೀರಾಮ ಕಥಾ ವೈಭವ, ಶ್ರೀರಾಮ ಪರೀಕ್ಷಣಂ, ಭಗವನ್ನಾಮಾವಳಿ ಮುಂತಾದ ಪುಸ್ತಕಗಳನ್ನು ಪ್ರಕಟಿಸಿ, ಸುಲಭ ಬೆಲೆಯಲ್ಲಿ ಆಸಕ್ತರಿಗೆ ತಲುಪಿಸುತ್ತಿದೆ.ರಾಮೋತ್ಸವದ ರಜತಮಹೋತ್ಸವವನ್ನು 1964ರಲ್ಲಿ, ಸ್ವರ್ಣ ಮಹೋತ್ಸವವನ್ನು 1988ರಲ್ಲಿ ಹಾಗೂ ವಜ್ರ ಮಹೋತ್ಸವವನ್ನು 1998ರಲ್ಲಿ ವೈಭವದಿಂದ ಆಚರಿಸಿಕೊಂಡಿತು. ಅಲ್ಲದೆ `ರಾಮಚಂದ್ರ ಸುಪ್ರಭಾತ~ ಕ್ಯಾಸೆಟ್ ಹಾಗೂ `ವಂದೇ ವಾಲ್ಮೀಕಿ ಕೋಕಿಲಂ~ ವೀಡಿಯೋ ಕ್ಯಾಸೆಟ್‌ಗಳನ್ನೂ ಹೊರತಂದಿದ್ದಾರೆ. ಈ ವರ್ಷದ ರಾಮೋತ್ಸವದಲ್ಲಿ ಸಂಗೀತ, ಹರಿಕಥೆ, ಯಕ್ಷಗಾನಗಳನ್ನೊಳಗೊಂಡ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.ಸದಾ ರಾಮಸ್ಮರಣೆ ಮಾಡುತ್ತಿದ್ದ ಎಸ್. ಎನ್. ಮೂರ್ತಿಗಳು ಸಂಸ್ಥೆಯ ವಿವಿಧ ಹುದ್ದೆಗಳಲ್ಲಿದ್ದು ಸೇವೆ ಸಲ್ಲಿಸಿದ್ದಾರೆ. ಈಗ ಕೆ.ಎನ್. ವೆಂಕಟನಾರಾಯಣ ಅಧ್ಯಕ್ಷರಾಗಿ, ಎಚ್.ಎಸ್. ಶಂಕರನಾರಾಯಣ ನಿರ್ವಹಣಾ ಟ್ರಸ್ಟಿಗಳಾಗಿದ್ದು, 2013ರಲ್ಲಿ ಅಮೃತ ಮಹೋತ್ಸವವನ್ನು ಆಚರಿಸಲು ಮುನ್ನುಗ್ಗುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.