ನರೆಗಾ ಕುರಿತ ಅಪಸ್ವರ ತಾತ್ಕಾಲಿಕ- ಡಿವಿಎಸ್

7

ನರೆಗಾ ಕುರಿತ ಅಪಸ್ವರ ತಾತ್ಕಾಲಿಕ- ಡಿವಿಎಸ್

Published:
Updated:

ಬೆಂಗಳೂರು: ಕಳೆದ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ನರೆಗಾ) ಉತ್ತಮ ಅನುಷ್ಠಾನಕ್ಕೆ ರಾಷ್ಟ್ರೀಯ ಪುರಸ್ಕಾರ ಪಡೆದ ಧಾರವಾಡ ತಾಲ್ಲೂಕಿನ ಯಾದವಾಡ ಗ್ರಾಮ ಪಂಚಾಯಿತಿ ಮತ್ತು ರೋಜ್‌ಗಾರ್ ಜಾಗರೂಕತಾ ಪ್ರಶಸ್ತಿ ಪಡೆದ ಬೈಫ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯನ್ನು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಸನ್ಮಾನ ನೆರವೇರಿಸಿದರು.ಯಾದವಾಡ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮಡಿವಾಳಪ್ಪ ದಿಂಡಲಕೊಪ್ಪ ಮತ್ತು ಬೈಫ್ ಸಂಸ್ಥೆಯ ಧಾರವಾಡ ಜಿಲ್ಲೆಯ ಮುಖ್ಯಸ್ಥ ಕೆ. ಮಲ್ಲಿಕಾರ್ಜುನ್ ಅವರಿಗೆ ಮಂಗಳವಾರ ಸನ್ಮಾನ ಪತ್ರ ನೀಡಿದ ನಂತರ ಮಾತನಾಡಿದ ಮುಖ್ಯಮಂತ್ರಿಗಳು, `ನರೆಗಾ ಯೋಜನೆ ಕುರಿತ ಅಪಸ್ವರ ತಾತ್ಕಾಲಿಕ. ಈ ಯೋಜನೆಯ ಫಲಾನುಭವಿಗಳ ಪೈಕಿ ಶೇಕಡ 46ರಷ್ಟು ಮಂದಿ ಮಹಿಳೆಯರು~ ಎಂದು ಹೇಳಿದರು.ಯೋಜನೆಯ ಉತ್ತಮ ಅನುಷ್ಠಾನಕ್ಕಾಗಿ ರಾಷ್ಟ್ರಮಟ್ಟದಲ್ಲಿ ಒಟ್ಟು ಒಂಬತ್ತು ಗ್ರಾಮ ಪಂಚಾಯಿತಿಗಳಿಗೆ ಪುರಸ್ಕಾರ ದೊರೆತಿದೆ. ಅವುಗಳಲ್ಲಿ ಯಾದವಾಡ ಗ್ರಾಮ ಪಂಚಾಯಿತಿಯೂ ಒಂದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವ ಜಗದೀಶ ಶೆಟ್ಟರ್ ತಿಳಿಸಿದರು.ಪುರಸ್ಕಾರ ಏಕೆ?

ಐದೂವರೆ ಸಾವಿರ ಜನಸಂಖ್ಯೆ ಹೊಂದಿರುವ ಯಾದವಾಡ ಗ್ರಾಮ ಕೃಷಿಯನ್ನೇ ನೆಚ್ಚಿಕೊಂಡಿದೆ. ಇಲ್ಲಿನ ಶೇಕಡ 65ರಷ್ಟು ಮಂದಿ ಸಣ್ಣ ಮತ್ತು ಅತಿಸಣ್ಣ ರೈತರು. `ನರೆಗಾ~ ಯೋಜನೆಯ ಅನುಷ್ಠಾನಕ್ಕೆ ಇಲ್ಲಿನ ಗ್ರಾಮ ಪಂಚಾಯಿತಿ ಕೈಗೊಂಡ ಕ್ರಮಗಳ ಕಾರಣ 2008-09ನೇ ಸಾಲಿನಲ್ಲಿ 66 ಕುಟುಂಬಗಳು ಕೆಲಸ ಪಡೆದುಕೊಂಡವು. ಈ ಸಂಖ್ಯೆ ಕಳೆದ ಸಾಲಿನಲ್ಲಿ 655 ಕುಟುಂಬಗಳಿಗೆ ಏರಿತು.ಜನರು ಕೆಲಸಕ್ಕಾಗಿ ಕೇವಲ ಮೌಖಿಕ ಮನವಿ ಸಲ್ಲಿಸಿದ್ದರೂ, ಪಂಚಾಯಿತಿಯ ನೌಕರರು ಅರ್ಜಿ ನಮೂನೆ 6ನ್ನು ತುಂಬಲು ಸಾರ್ವಜನಿಕರಿಗೆ ಸಹಾಯ ಮಾಡಿದ್ದರು. ನರೆಗಾ ಕೂಲಿ ಕಾರ್ಮಿಕರಿಗೆ ಧಾರವಾಡ ಜಿಲ್ಲೆಯ ಖಾಸಗಿ ಬ್ಯಾಂಕ್ ಒಂದರ ಮೂಲಕ ಬಯೋಮೆಟ್ರಿಕ್ ಗುರುತಿನ ಚೀಟಿಯನ್ನು ನೀಡಲಾಯಿತು. ಕಾರ್ಮಿಕರಿಗೆ ಅವರ ಊರಿನಲ್ಲಿಯೇ ಕೂಲಿ ಹಣವನ್ನು ನೀಡಲಾಗುತ್ತಿದೆ.ಕಾಮಗಾರಿಗಳ ಪ್ರಗತಿಯನ್ನು ಜಿಪಿಎಸ್ ಸಹಾಯದಿಂದ ಗೂಗಲ್ ಅರ್ಥ್ ನಕಾಶೆಯಲ್ಲಿ ಅಳವಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry