`ನರೇಗಾ' ಸಮರ್ಪಕ ಅನುಷ್ಠಾನವಾಗಲಿ

7

`ನರೇಗಾ' ಸಮರ್ಪಕ ಅನುಷ್ಠಾನವಾಗಲಿ

Published:
Updated:

ಬೆಂಗಳೂರು:  `ನರೇಗಾ ಯೋಜನೆಯು ನಿರೀಕ್ಷಿತ ಮಟ್ಟದಲ್ಲಿ ಅನುಷ್ಠಾನಗೊಳ್ಳುತ್ತಿಲ್ಲ. ಈ ಬಗ್ಗೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ' ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಅಭಿಪ್ರಾಯಪಟ್ಟರು.ಸಿವಿಕ್ ಬೆಂಗಳೂರು ಸಂಸ್ಥೆಯು ನಗರದ ಸೆನೆಟ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ  `ಉತ್ತಮ ಆಡಳಿತಕ್ಕೆ ಸಾರ್ವಜನಿಕರ ಸಹಭಾಗಿತ್ವ' ಕುರಿತ ರಾಜ್ಯ ಮಟ್ಟದ ಸಲಹಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ಗ್ರಾಮಗಳ ಅಭಿವೃದ್ಧಿಯ ಮಾನದಂಡ ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿರುತ್ತದೆ. ಇದನ್ನು ಆಧರಿಸಿಯೇ ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಲಿದೆ' ಎಂದು ತಿಳಿಸಿದರು.

`ಪ್ರಮುಖ ಯೋಜನೆ `ಸಕಾಲ'ದಲ್ಲೂ ಹಲವು ಮಾರ್ಪಾಡು ಮಾಡುವ ಅಗತ್ಯ ಎದ್ದುಕಾಣುತ್ತಿದೆ. ತುಲನಾತ್ಮಕ ಅಧ್ಯಯನ ನಡೆಸಿ, ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವತ್ತ ಹೆಜ್ಜೆ ಇಡಲಿದ್ದೇವೆ. ಕಾನೂನು ತಿರುಚುವ ಕೆಲಸವೂ ಅವ್ಯಾಹತವಾಗಿ ನಡೆಯುತ್ತಿರುವುದನ್ನು ತಡೆಗಟ್ಟಲು ಕೆಲವು ಸುಧಾರಣೆ ನಡೆಯಬೇಕಿದೆ' ಎಂದು ಹೇಳಿದರು.`ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬುದನ್ನು ಪುಸ್ತಕದಲ್ಲಿ ಮಾತ್ರ ಕಾಣದೇ ನಿಜಜೀವನದಲ್ಲೂ ಕಾಣುವಂತಾಗಬೇಕು. ಪಾರದರ್ಶಕತೆಗೆ ಹೆಚ್ಚಿನ ಒತ್ತು  ನೀಡಬೇಕು. ಬ್ರಿಟಿಷ್ ಕಾಲದಲ್ಲಿ ರೂಪುಗೊಂಡ ಕಾನೂನುಗಳಿಗೆ ಇಂದಿನ ಪ್ರಸ್ತುತತೆಯ ಲೇಪ ಹಚ್ಚುವ ಕಾರ್ಯ ಮಾಡಬೇಕಿದೆ' ಎಂದರು.ರಾಜಸ್ತಾನದ ಸಮಾಜಸೇವಕ ನಿಖಿಲ್ ಡೇ, `ಈಗಾಗಲೇ ಜಾರಿಯಾಗಿರುವ ದೂರು ನಿರ್ವಹಣಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅಗತ್ಯವಿದೆ. ಜನರ ಸಮಸ್ಯೆಗಳಿಗೆ ವೇದಿಕೆ ದೊರೆತಾಗ ಮಾತ್ರ ಸರ್ಕಾರದ ಯೋಜನೆಗಳು ಯಶಸ್ಸು ಪಡೆಯುತ್ತದೆ' ಎಂದರು.`ಸಕಾಲ ಯೋಜನೆಯ ಜತೆಯಲ್ಲಿ ರಾಜಸ್ತಾನದಲ್ಲಿ ಈಗಾಗಲೇ ಅನುಷ್ಠಾನಗೊಂಡಿರುವ `ನಮ್ಮ ದುಡ್ಡು, ನಮ್ಮ ಲೆಕ್ಕ' ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಬೇಕು. ಜನರ ದೂರುಗಳಿಗೆ ಸ್ಪಂದಿಸುವ, ಅವರ ಅಭಿಪ್ರಾಯಗಳಿಗೆ ಮನ್ನಣೆ ನೀಡುವುದನ್ನು ಸರ್ಕಾರ ಕರ್ತವ್ಯವಾಗಿಸಿಕೊಳ್ಳಬೇಕು' ಎಂದು ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry