ಬುಧವಾರ, ಡಿಸೆಂಬರ್ 11, 2019
20 °C

ನರ್ಮ್ ಯೋಜನೆ ದುರುಪಯೋಗ: ವಿಶ್ವನಾಥ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನರ್ಮ್ ಯೋಜನೆ ದುರುಪಯೋಗ: ವಿಶ್ವನಾಥ್

ಮೈಸೂರು: ಕೇಂದ್ರ ಸರ್ಕಾರವು ಮೈಸೂರಿಗೆ  ನರ್ಮ್ ಯೋಜನೆಯಡಿಯಲ್ಲಿ ನೀಡಿರುವ ಹಣದ ದುರುಪಯೋಗವಾಗಿದೆ. ಸಂಪೂರ್ಣ ಯೋಜನೆ ವಿಫಲವಾಗಿದ್ದು ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಮಹಾನಗರ ಪಾಲಿಕೆ ಆಯುಕ್ತರೇ ಹೊಣೆ ಎಂದು ಸಂಸದ ಅಡಗೂರು ಎಚ್. ವಿಶ್ವನಾಥ್ ಆರೋಪಿಸಿದರು.ಶುಕ್ರವಾರ ಮೈಸೂರು ಜಿಲ್ಲಾ ಕಾಂಗ್ರೆಸ್ ಮುಖಂಡರ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ನರ್ಮ್ ಯೋಜನೆಯಲ್ಲಿ ಬಿಡುಗಡೆಯಾಗಿದ್ದು 1964 ಕೋಟಿ ರೂಪಾಯಿ. ಆದರೆ ಅದರಲ್ಲಿ 730 ಕೋಟಿ ರೂಪಾಯಿ ಮಾತ್ರ ಇದುವರೆಗೆ ಖರ್ಚಾಗಿದೆ. ಸಂಚಾರ ಮತ್ತು ಸಾರಿಗೆ ನಿರ್ವಹಣೆಗಾಗಿ ಇದ್ದ ಯೋಜನೆಯು ಮೈಸೂರು ಮಹಾನಗರಿಯಲ್ಲಿ ಸಫಲವಾಗಿಲ್ಲ~ ಎಂದು ಆಪಾದಿಸಿದರು.`ಚುನಾಯಿತ ಜನಪ್ರತಿನಿಧಿಗಳನ್ನು ಗಣನೆಗೆ ತೆಗೆದುಕೊಳ್ಳದೆ ಜಿಲ್ಲಾ ಉಸ್ತು ವಾರಿ ಸಚಿವರು ನರ್ಮ್ ಅನುಷ್ಠಾನದ ಅಧಿಕಾರವನ್ನು ಜಿಲ್ಲಾಧಿಕಾರಿ ಮತ್ತು ಪಾಲಿಕೆ ಆಯುಕ್ತರ ಕೈಗೆ ಕೊಟ್ಟಿದ್ದಾರೆ. ಪಾಲಿಕೆ ಆಯುಕ್ತರು ವಾಣಿವಿಲಾಸ್ ನೀರು ಸರಬರಾಜು ಆವರಣದಲ್ಲಿರುವ ವೈಭವೋಪೇತ ಬಂಗ್ಲೆಯಲ್ಲಿದ್ದಾರೆ. ಈ ಜಾಗದಲ್ಲಿ ಯಾವುದೇ ಕಟ್ಟಡ ನಿರ್ಮಾಣಕ್ಕೆ ಅವಕಾಶವಿಲ್ಲ. ಆದರೂ 85 ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟಡವನ್ನು ನವೀಕರಣಗೊಳಿಸಲಾಗಿದೆ.ನಿರ್ಬಂಧಿತ ಪ್ರದೇಶದಲ್ಲಿ ಇದು ಕಾನೂನುಬಾಹಿರ~ ಎಂದು ಹೇಳಿದರು.

`ನರ್ಮ್ ಯೋಜನೆ ಅನುಷ್ಠಾನ ಸಮಿತಿಯ ಒಂದೇ ಒಂದು ಸಭೆಯನ್ನೂ ಇದುವರೆಗೆ ಉಸ್ತುವಾರಿ ಸಚಿವರು ಕರೆದಿಲ್ಲ. ಅನುಷ್ಠಾನ, ಕಾಮಗಾರಿಗಳ ಕುರಿತು ನಮಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಕೇಂದ್ರ ಸರ್ಕಾರದ ಯೋಜನೆ ಯನ್ನು ನಾವೇಕೆ ಮಾಡಬೇಕು ಎನ್ನುವ ಸ್ವಪ್ರತಿಷ್ಠೆಗಾಗಿ ಜನರ ಕಲ್ಯಾಣವನ್ನು ನಿರ್ಲಕ್ಷಿಸಿದ್ದಾರೆ~ ಎಂದು ಹೇಳಿದರು.ಬೃಹತ್ ಮೈಸೂರಿಗೆ ವಿರೋಧ: `ನಗರದಲ್ಲಿ ಇದುವರೆಗೆ ಇರುವ ಅಕ್ರಮ ಬಡಾವಣೆಗಳ ಸಕ್ರಮೀಕರಣವಾಗಿಲ್ಲ. ಜನರಿಗೆ ಅಗತ್ಯವಾದ ಮೂಲ ಸೌಲಭ್ಯಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸದೆ ಬೃಹತ್ ಮೈಸೂರು ಆಗಲು ಬಿಡುವುದಿಲ್ಲ. ಇದಕ್ಕೆ ನಮ್ಮ ಸಂಪೂರ್ಣ ವಿರೋಧವಿದೆ~ ಎಂದು ವಿಶ್ವನಾಥ್ ಹೇಳಿದರು.`ಬೃಹತ್ ಮೈಸೂರಿಗೆ 146 ಗ್ರಾಮಗಳು ಸೇರಲಿವೆ. ಇದೀಗ ಮುಡಾದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಬಾಕಿ ಉಳಿದಿಲ್ಲ. ಅದರಲ್ಲಿ ಹಣವೂ ಇಲ್ಲ. ಅಂದ ಮೇಲೆ ಬೃಹತ್ ಮೈಸೂರಿನ ಕಾಮಗಾರಿಗಳು ಮುಡಾಗೆ ಸೇರುವುದು ಸಂಶಯ. ಯಾವುದೋ ಖಾಸಗಿ ಸಂಸ್ಥೆಗೆ ಅವಕಾಶ ಮಾಡಿಕೊಡುವ ಹುನ್ನಾರ ಈ ಯೋಜನೆಯ ಹಿಂದಿದೆ~ ಎಂದು ಹೇಳಿದರು. ಚುನಾವಣೆಗೆ ಸಿದ್ಧತೆ: `ಯಾವುದೇ ಸಂದರ್ಭದಲ್ಲಿ ಚುನಾವಣೆ ನಡೆದರೂ ಎದುರಿಸಲು ಕಾಂಗ್ರೆಸ್‌ನಲ್ಲಿ ಸಿದ್ಧತೆ ಆರಂಭವಾಗಿದೆ. ಈ ಕುರಿತು ಇವತ್ತಿನ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಲಾಗುತ್ತಿದೆ. ಮತದಾರರ ಪಟ್ಟಿ ಮತ್ತು ಮತದಾರರ ಕಾರ್ಡುಗಳಲ್ಲಿ ಏರುಪೇರು ಮಾಡಿ ಮತ ಹೊಡೆಯುವ ಬಿಜೆಪಿಯ ಕೆಲಸ ನಮಗೆ ಗೊತ್ತಿದ್ದು, ಇದರ ಬಗ್ಗೆ ಜಾಗೃತರಾಗಿರುವಂತೆ ನಮ್ಮ ಕಾರ್ಯಕರ್ತರಿಗೆ ತಿಳಿಸಲಾಗಿದೆ~ ಎಂದರು.`ಮತದಾರರ ಪಟ್ಟಿ ದುರ್ಬಳಕೆ ತಡೆಯಬೇಕು ಎನ್ನುವುದು ನಮ್ಮ ಮೂಲ ಉದ್ದೇಶ. ರಾಜ್ಯ ಕಾಂಗ್ರೆಸ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. ಎಲ್ಲವೂ ಸರಿಯಾಗಿದೆ~ ಎಂದು ಸ್ಪಷ್ಟಪಡಿಸಿದರು.ಈ ಸಂದರ್ಭದಲ್ಲಿ ಮೇಯರ್ ಪುಷ್ಪಲತಾ ಚಿಕ್ಕಣ್ಣ ಮತ್ತಿತರ ಮುಖಂಡರು ಹಾಜರಿದ್ದರು.

ಪ್ರತಿಕ್ರಿಯಿಸಿ (+)