ನರ್ಸಿಂಗ್ ಕಾಲೇಜು ಪ್ರವೇಶ: ಕನ್ನಡಿಗರಿಗೇ ಹೆಚ್ಚು ಸೀಟು

7

ನರ್ಸಿಂಗ್ ಕಾಲೇಜು ಪ್ರವೇಶ: ಕನ್ನಡಿಗರಿಗೇ ಹೆಚ್ಚು ಸೀಟು

Published:
Updated:

ಬೆಂಗಳೂರು: ರಾಜ್ಯದ ಖಾಸಗಿ ನರ್ಸಿಂಗ್ ಶಿಕ್ಷಣ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಲು ಹೊರಟಿರುವ ರಾಜ್ಯ ಸರ್ಕಾರ ಮುಂದಿನ ಶೈಕ್ಷಣಿಕ ವರ್ಷದಿಂದ ಕನ್ನಡಿಗರಿಗೇ ಅತಿ ಹೆಚ್ಚು ಸೀಟು ಮೀಸಲಿಡಬೇಕೆನ್ನುವ ನಿಯಮ ಜಾರಿ ಮಾಡಲಿದೆ.ಈ ವಿಷಯವನ್ನು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ರಾಜ್ಯದಲ್ಲಿ 342 ನರ್ಸಿಂಗ್ ಕಾಲೇಜು ಮತ್ತು 610 ನರ್ಸಿಂಗ್ ಶಾಲೆಗಳಿದ್ದು, ಇವುಗಳಲ್ಲಿ ಸುಮಾರು 20 ಸಾವಿರ ಮಂದಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವವರು ಬಹುತೇಕ ಇತರ ರಾಜ್ಯಗಳ ವಿದ್ಯಾರ್ಥಿಗಳು. ಪ್ರಸ್ತುತ ಶೇ 10ರಷ್ಟು ಸೀಟು ಮಾತ್ರ ಕನ್ನಡಿಗರಿಗೆ ಲಭಿಸುತ್ತಿದ್ದು, ಇದರ ಪ್ರಮಾಣ ಹೆಚ್ಚು ಮಾಡುವ ಉದ್ದೇಶದಿಂದ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.ಬಹುತೇಕ ನರ್ಸಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ಮೂಲಸೌಲಭ್ಯದ ಕೊರತೆ ಇದೆ. ಇದರ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಿದ್ದು, ಮೂಲಸೌಲಭ್ಯ ಇಲ್ಲದ ಕಾಲೇಜುಗಳ ಮಾನ್ಯತೆಯನ್ನು ಮುಲಾಜಿಲ್ಲದೆ ರದ್ದುಪಡಿಸಲಾಗುವುದು ಎಂದು ತಿಳಿಸಿದರು.ಹೊಸ ನರ್ಸಿಂಗ್ ಕಾಲೇಜುಗಳ ಸ್ಥಾಪನೆಗೆ ಅನುಮತಿ ನೀಡುವುದಿಲ್ಲ ಎಂದು ಹೇಳಿದ ಅವರು ಶಿಕ್ಷಣದ ಗುಣಮಟ್ಟ ಕಾಪಾಡಲು ಎಲ್ಲ ರೀತಿಯ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದರು.ವಿವರ: ಕಳೆದ ಮೂರು ವರ್ಷಗಳಿಂದ ಯಾವ ರಾಜ್ಯಗಳ ಎಷ್ಟು ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದಾರೆನ್ನುವುದರ ಬಗ್ಗೆ ನರ್ಸಿಂಗ್ ಶಿಕ್ಷಣ ಸಂಸ್ಥೆಗಳಿಂದ ಮಾಹಿತಿ ಪಡೆಯಲಾಗುತ್ತದೆ. ಇದರಿಂದಲೂ ಯಾವ ರಾಜ್ಯದವರಿಗಾಗಿ ಈ ಶಿಕ್ಷಣ ಸಂಸ್ಥೆಗಳು ಇವೆ ಎನ್ನುವುದು ಗೊತ್ತಾಗಲಿದೆ ಎಂದು ಹೇಳಿದರು.ನರ್ಸಿಂಗ್ ಪರೀಕ್ಷೆಗಳಲ್ಲಿನ ಅಕ್ರಮ ತಡೆಯಲು ವ್ಯಾಪಕ ಕ್ರಮಗಳನ್ನು ತೆಗೆದುಕೊಂಡಿದ್ದು, ಇನ್ನು ಮುಂದೆ ಆನ್‌ಲೈನ್‌ನಲ್ಲಿ ಪ್ರಶ್ನೆ ಪತ್ರಿಕೆ ನೀಡಲಾಗುವುದು. ಪರೀಕ್ಷಾ ಕೇಂದ್ರಗಳಿಗೆ ಆನ್‌ಲೈನ್‌ನಲ್ಲಿ ಪ್ರಶ್ನೆ ಪತ್ರಿಕೆ ಕಳುಹಿಸಲಿದ್ದು, ಅದನ್ನು ಜೆರಾಕ್ಸ್ ಮಾಡಿ ವಿದ್ಯಾರ್ಥಿಗಳಿಗೆ ನೀಡಲಾಗುವುದು.ಪರೀಕ್ಷೆ ಪೂರ್ಣಗೊಂಡ ದಿನವೇ ಉತ್ತರ ಪತ್ರಿಕೆಗಳನ್ನು ವಿಶ್ವವಿದ್ಯಾಲಯಕ್ಕೆ ತಲುಪಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ನರ್ಸಿಂಗ್ ಕಾಲೇಜಿನ ಸಿಬ್ಬಂದಿ ಇರದಂತೆ ನೋಡಿಕೊಳ್ಳಬೇಕು. ಒಟ್ಟಾರೆ, ನರ್ಸಿಂಗ್ ಪರೀಕ್ಷೆಗಳು ಕೂಡ ಜಿಲ್ಲಾಧಿಕಾರಿಗಳ ನೇತೃತ್ವದಲ್ಲೇ ನಡೆಯುವ ಹಾಗೆ ಮಾಡಲಾಗಿದೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry