ನರ್ಸಿಂಗ್ ವಸತಿ ನಿಲಯಕ್ಕೆ ಸಚಿವರ ಭೇಟಿ

7

ನರ್ಸಿಂಗ್ ವಸತಿ ನಿಲಯಕ್ಕೆ ಸಚಿವರ ಭೇಟಿ

Published:
Updated:

ಗುಲ್ಬರ್ಗ: ‘ನಾನಾಗಿದ್ರೆ ಇಲ್ಲಿ ಒಂದು ಕ್ಷಣವೂ ಸಹಿಸುತ್ತಿರಲಿಲ್ಲ. ನೀರಿಗೆ ಸಮನಾದ ಸಾರು, ಉಣ್ಣಲಾಗದ ಅನ್ನ, ಯಾವ ಕ್ಷಣದಲ್ಲಾದರೂ ಕುಸಿಯಬಹುದಾದ ಕಟ್ಟಡ, ಕೆಟ್ಟ ಸ್ನಾನಗೃಹ, ಶೌಚಗೃಹ... ಇಂಥ ಅವ್ಯವಸ್ಥೆಯ ನಡುವೆ ನಾನು ಒಂದರೆ ಕ್ಷಣವೂ ಸಹಿಸುತ್ತಿರಲಿಲ್ಲ. ಅದ್ಹೇಗೆ ನೀವೆಲ್ಲ ಸುಮ್ಮನಿದ್ದೀರಿ?’ ಎಂದು ವಿದ್ಯಾರ್ಥಿಗಳ ನಿರ್ಲಿಪ್ತ ಧೋರಣೆಯ ಬಗ್ಗೆ ಸಚಿವ ಎಸ್.ಎ. ರಾಮದಾಸ ಆಕ್ಷೇಪಣೆ ವ್ಯಕ್ತ ಪಡಿಸಿದರು. ಗುಲ್ಬರ್ಗದ ಸರ್ಕಾರಿ ನರ್ಸಿಂಗ್ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಭೇಟಿ ನೀಡಿದ ಅವರು ಅಲ್ಲಿಯ ಅವ್ಯವಸ್ಥೆಯ ಬಗ್ಗೆ ಕಿಡಿ ಕಾರಿದರು. ನೂತನ ಕಟ್ಟಡ ಹಾಗೂ ಕಟ್ಟಡ ದುರಸ್ತಿಗೆ ಹಣ ಬಿಡುಗಡೆಯ ಕುರಿತು ಕೂಡಲೇ ನಿರ್ಧಾರ ಕೈಗೊಳ್ಳುವುದಾಗಿ ಪ್ರಕಟಿಸಿದರು. ಬೀಗ ಒಡೆದು ಪ್ರವೇಶ:

ಅಡುಗೆ ಮನೆಗೆ ಬೀಗ ಜಡಿದು ಹೋಗಿದ್ದ ಗುತ್ತಿಗೆದಾರರ ಕ್ರಮವನ್ನು ಪ್ರಶ್ನಿಸಿದ ಸಚಿವರು, ಬೀಗ ಮುರಿಯಲು ಸೂಚಿಸಿ, ಅಡುಗೆ ಮನೆಯನ್ನು ಪರಿಶೀಲಿಸಿದರು. ಜೇಡದ ಬಲೆಗಳ ನಡುವೆಯೇ ಬಂದ ಅವರು ನೈರ್ಮಲ್ಯದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದರು. ತಟ್ಟೆಗೆ ಅನ್ನ-ಸಾರು ಬಡಿಸಿಕೊಂಡ ಸಚಿವರು ರುಚಿ ಸವಿದ ನಂತರ ಗುತ್ತಿಗೆಯನ್ನು ವಜಾಗೊಳಿಸಲು ಸೂಚಿಸಿದರು.

ಫೆ.28ಕ್ಕೆ ಈ ಗುತ್ತಿಗೆಯನ್ನು ಕೊನೆಗೊಳಿಸಿ. ಮಾರ್ಚ್ 1ರಿಂದ ಬೇರೆಯವರನ್ನು ನೇಮಿಸಿ. ತಿಂಡಿ, ಊಟದ ವಿವರವನ್ನು ಮೊದಲೇ ನಿರ್ಧರಿಸಬೇಕು. ವಾರಕ್ಕೊಂದು ಸಿಹಿಯೂಟ, ಹಬ್ಬಗಳಂದು ಹಬ್ಬದೂಟ ನೀಡುವ ನಿಯಮ ಪಾಲಿಸಲು ಸೂಚಿಸಿದರು. ವಿದ್ಯಾರ್ಥಿಗಳ ವಿನಿಯೋಗದೊಂದಿಗೆ ಹೆಚ್ಚುವರಿ ಹಣದ ಬಗ್ಗೆ ತಾವು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಸಿಬ್ಬಂದಿ ನೇಮಕಕ್ಕೆ ಕ್ರಮ:

ಸರ್ಕಾರಿ ನರ್ಸಿಂಗ್ ಕಾಲೇಜು ಸ್ಥಾಪಿಸಿ ನಾಲ್ಕು ವರ್ಷಗಳೇ ಕಳೆದಿದ್ದರೂ ಯಾವುದೇ ಸಿಬ್ಬಂದಿಯ ನೇಮಕಾತಿ ಇರದ ಬಗ್ಗೆ ಸೋಜಿಗ ವ್ಯಕ್ತ ಪಡಿಸಿದರು. ಏಪ್ರಿಲ್ ಒಳಗೆ ನೇರ ಸಂದರ್ಶನ ಕರೆದು ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಯತ್ನಿಸುವ ಭರವಸೆ ನೀಡಿದರು.ಶಿಷ್ಯ ವೇತನವನ್ನೂ ಏಪ್ರಿಲ್ ತಿಂಗಳಿನಿಂದ ತಪ್ಪದೇ ಪ್ರತಿ ತಿಂಗಳೂ ವಿತರಣೆಯಾಗುವಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ಪ್ರತಿಭಟಿಸಿ, ಪತ್ರ ಬರೆಯಿರಿ:

ಇಂಥ ಅನ್ಯಾಯಗಳಿದ್ದಾಗ ಅವುಗಳನ್ನು ಸಹಿಸದೇ ಪ್ರತಿಭಟಿಸಿ. ನಿಮ್ಮ ಆಂತರಿಕ ಅಂಕಗಳ ಬಗ್ಗೆ ಚಿಂತೆ ಬಿಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಇಲ್ಲದಿದ್ದರೆ ಅವ್ಯವಸ್ಥೆಯ ಬಗ್ಗೆ ದೂರುಗಳಿದ್ದರೆ ತಮಗೆ ಪತ್ರ ಬರೆಯಲು ಸಲಹೆ ನೀಡಿದರು. ಪತ್ರದ ಮೇಲೆ ‘ಗೋಪ್ಯ’ ಎಂದೂ ಬರೆಯಲು ಸೂಚಿಸಿದರು. ದೂರು ನೀಡಿದ ವಿದ್ಯಾರ್ಥಿಗಳ ಹೆಸರನ್ನು ಗೋಪ್ಯವಾಗಿಡಲಾಗುವುದು. ಯಾವುದೇ ಕಾರಣಕ್ಕೂ ಅವರ ಭವಿಷ್ಯಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆಯನ್ನು ನೀಡಿದರು.ವಸತಿ ನಿಲಯಕ್ಕೆ ನೀರು ಶುದ್ಧೀಕರಣ ಘಟಕ’  

ಕುಡಿಯುವ ನೀರು ಸ್ವಚ್ಛವಾಗಿಲ್ಲ, ಕುಡಿಯುವ ನೀರಿನಲ್ಲಿ ಹುಳ ಬರುತ್ತವೆ ಎಂದು ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ಸಚಿವ ಎಸ್.ಎ. ರಾಮದಾಸ್ ಅವರ ಗಮನ ಸೆಳೆದಾಗ ಶಾಸಕ ಶಶೀಲ್ ಜಿ. ನಮೋಶಿ ತಮ್ಮ ವತಿಯಿಂದ ವಸತಿಗೃಹಕ್ಕೆ ನೀರು ಶುದ್ಧೀಕರಣ ಘಟಕ ನೀಡುವ ಭರವಸೆ ನೀಡಿದರು.ವಿದ್ಯಾರ್ಥಿನಿಯರು ಒಂದು ಸಮಿತಿಯನ್ನು ರಚಿಸಿಕೊಳ್ಳಿ. ಆ ಸಮಿತಿಯು ವಾರ್ಡನ್ ಜೊತೆಗಿದ್ದು, ವಸತಿನಿಲಯದ ನಿರ್ವಹಣೆಯ ಹೊಣೆಯನ್ನು ಹಂಚಿಕೊಳ್ಳಬೇಕು. ಅವ್ಯವಸ್ಥೆಯನ್ನು ಪ್ರಶ್ನಿಸಬೇಕು ಎಂದು ಸಚಿವರು ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry