ನಲಿವು ಹಂಚಿದ ಕಲಾವಿದ ಕರಿಬಸವಯ್ಯ

7

ನಲಿವು ಹಂಚಿದ ಕಲಾವಿದ ಕರಿಬಸವಯ್ಯ

Published:
Updated:

ಬೆಂಗಳೂರು: `ನೋವನ್ನು ಮರೆತು ನಲಿವನ್ನು ಹಂಚಿದ ಅಪ್ಪಟ ಕಲಾವಿದ ಕರಿಬಸವಯ್ಯ~ ಎಂದು ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಹೇಳಿದರು.ರಾಜ್ಯ ನಾಟಕ ಅಕಾಡೆಮಿ, ರೂಪಾಂತರ ಮತ್ತು ಜನಪದರು ಸಂಸ್ಥೆಗಳು ನಗರದಲ್ಲಿ ಸೋಮವಾರ ಏರ್ಪಡಿಸಿದ್ದ `ಕರಿಯ ವಿ ಲವ್ ಯು~ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕರಿಬಸವಯ್ಯ ಪ್ರೀತಿ ವಿಶ್ವಾಸದಿಂದ ಬದುಕಿದ. ಎಲ್ಲರೂ ಅದೇ ರೀತಿ ಬಾಳಬೇಕು ಎಂದು ಆತ ಆಶಿಸುತ್ತಿದ್ದ. ತನ್ನೊಳಗೆ ಎಷ್ಟೇ ದುಃಖ ಇದ್ದರೂ ಸದಾ ಲವಲವಿಕೆಯಿಂದ ಇರುತ್ತಿದ್ದ ಆತ ಎಲ್ಲರನ್ನೂ ನಗಿಸುತ್ತಿದ್ದ. ನನ್ನ ಹಳ್ಳಿಗೆ ಆತನನ್ನು ಕರೆದುಕೊಂಡು ಹೋಗಿದ ಸಂದರ್ಭದಲ್ಲಿ ಇಡೀ ಊರಿನ ಜನ, ಮಕ್ಕಳ ಜತೆ ಬೆರೆತಿದ್ದ ಆತ ನಕ್ಕು ನಲಿದಿದ್ದ. ಹರಿಕಥೆ ಪರಂಪರೆಯನ್ನು ಬೆಳೆಸಿದ್ದ ಆತ ಸದಾ ನಮ್ಮ ಜತೆಗೆ ಇರುತ್ತಾನೆ ಎಂದು ಹೇಳಿದರು.`ಅಂತಃಕರಣವಿದ್ದ ಕಲಾವಿದ ಕರಿಬಸವಯ್ಯ. ಶೂಟಿಂಗ್ ಸ್ಥಳಕ್ಕೆ ಹೊಸ ಕಲಾವಿದರನ್ನು ಕರೆದುಕೊಂಡು ಬರುತ್ತಿದ್ದ ಆತ ಇವರಿಗೂ ಅವಕಾಶ ಕೊಡಿ ಎನ್ನುತ್ತಿದ್ದ. ಹೆಸರು ಮಾಡಿದ ನಟನೊಬ್ಬ ಇನ್ನೊಬ್ಬನನ್ನು ಕರೆದುಕೊಂಡು ಬಂದು ಅವಕಾಶ ಕೊಡಿ ಎಂದು ಹೇಳುವುದು ಆತನ ಅಂತಃಕರಣ ತೋರಿಸುತ್ತದೆ. ಮೊದಲ ಬಾರಿ ಕರಿಬಸವಯ್ಯನನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ನೋಡಿದ್ದೆ. ಆತ ನೂರು ಚಿತ್ರಗಳಲ್ಲಿ ಅಭಿನಯಿಸಿದ ನಂತರ ಇಲ್ಲಿಯೇ ಕಾರ್ಯಕ್ರಮ ನಡೆದಿತ್ತು. ಆತನ ಶ್ರದ್ಧಾಂಜಲಿಯೂ ಇಲ್ಲಿಯೇ ನಡೆಯುತ್ತಿದೆ~ ಎಂದು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.ತನ್ನನ್ನೇ ಹಾಸ್ಯ ಮಾಡಿಕೊಂಡು ನಗಿಸುತ್ತಿದ್ದ ಕರಿಬಸವಯ್ಯ ಅಪರೂಪದ ವ್ಯಕ್ತಿ ಎಂದು ರಂಗಕರ್ಮಿ ಡಾ. ಡಿ.ಕೆ. ಚೌಟ ಹೇಳಿದರು.ಪ್ರಶಸ್ತಿ: `ರಂಗಭೂಮಿಯಲ್ಲಿ ಸಾಧನೆ ಮಾಡಿದ ವ್ಯಕ್ತಿಯೊಬ್ಬರಿಗೆ ಕರಿಬಸವಯ್ಯ ಹೆಸರಿನಲ್ಲಿ  ಪ್ರಶಸ್ತಿ ನೀಡಿ ಪುರಸ್ಕರಿಸಲಾಗುತ್ತದೆ. ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುವ ಯೋಚನೆ ಇದೆ~ ಎಂದು ರೂಪಾಂತರದ ಕಾರ್ಯದರ್ಶಿ ಚಂದ್ರು ಹೇಳಿದರು. ಡಾ. ಬಾನಂದೂರು ಕೆಂಪಯ್ಯ, ಸುರೇಶ್ ಹಡಪದ್  ಇತರರು  ಗೀತನಮನ ಸಲ್ಲಿಸಿದರು. ಪ್ರೊ. ಕೆ.ಇ. ರಾಧಾಕೃಷ್ಣ, ಕಾ.ತ. ಚಿಕ್ಕಣ್ಣ, ಮಾಲತಿ ಸುಧೀರ್, ಡಾ. ವಿಜಯಾ, ಶ್ರೀನಿವಾಸ ಜಿ. ಕಪ್ಪಣ್ಣ, ರಾಮಕೃಷ್ಣ ಬಾಬು, ಎನ್.ಎಂ. ಸುರೇಶ್, ನಾರಾಯಣ ರಾಯಚೂರು, ಪಾಪಣ್ಣ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry