ಮಂಗಳವಾರ, ನವೆಂಬರ್ 12, 2019
19 °C

ನಲಿಸುವ ಬುಲೆಟ್ ನಾಟುವ ಬುಲೆಟ್

Published:
Updated:
ನಲಿಸುವ ಬುಲೆಟ್ ನಾಟುವ ಬುಲೆಟ್

`ಮೈಂಡ್ ಯಾವಾಗ್ಲೂ young ಯಂಗೋರೀ'. `ಪರಾರಿ'ಯ ಅಡಿಬರಹ ಇದು. ಚಿತ್ರದ ನಾಯಕ ನಟರಲ್ಲಿ ಒಬ್ಬರಾದ ಬುಲೆಟ್ ಪ್ರಕಾಶ್ ಅವರಿಗೂ ಈ ಮಾತು ಅನ್ವಯ. ಏಕೆಂದರೆ ವಯಸ್ಸು ಮೂವತ್ತೈದರ ಗಡಿ ದಾಟಿದ್ದರೂ ಚಿತ್ರ ಅವರನ್ನು ಯಂಗ್ ಆಗಿಟ್ಟಿದೆ. ಹದಿನೈದು ವರ್ಷ ಚಿಕ್ಕವನನ್ನಾಗಿ ಮಾಡಿದೆ. ಅಂದಹಾಗೆ ಡಿಪ್ಸ್ ಹೊಡೆಯಲು ಬಾರದ, ಆತ್ಮಹತ್ಯೆ ಮಾಡಿಕೊಳ್ಳಲು ಬಾರದ ನಾಯಕ ಅವರು. ಹಾಗಾಗಿ ಚಿತ್ರದಲ್ಲಿ ಸಂಗಾತಿಯ ಹಂಗು ಇಲ್ಲ.ಮೊದಲು ನಿಮ್ಮ ಕಾಲ್‌ಶೀಟ್ ಕೊಡಿ. ಆಮೇಲೆ ಉಳಿದವರದ್ದು ಎಂದು ನಿರ್ದೇಶಕ ಕೆ.ಎಂ. ಚೈತನ್ಯ ಬಂದಾಗ ಇವರದು ಉಪೇಕ್ಷೆಯ ನೋಟ. ಕಾರಣ ಹಾಸ್ಯನಟರ ಕಾಲ್‌ಶೀಟ್ ಮೊದಲು ಪಡೆದುಕೊಳ್ಳುವ ಪರಂಪರೆ ಗಾಂಧಿನಗರದಲ್ಲಿ ಇಲ್ಲ. ಅಲ್ಲದೆ ಚೈತನ್ಯ `ಆ ದಿನಗಳು', `ಸೂರ್ಯಕಾಂತಿ'ಯ ಬ್ರಾಂಡ್ ಹೊತ್ತಿದ್ದರು. ಆ್ಯಕ್ಷನ್ ನಿರ್ದೇಶಕರೊಬ್ಬರಿಗೆ ಹಾಸ್ಯಪ್ರಜ್ಞೆ ಇರುತ್ತದೆಯೇ ಎಂಬುದು ಅತಿಯಾಗಿ ಕಾಡಿದ ಮತ್ತೊಂದು ಪ್ರಶ್ನೆ. ನಂತರ ತಮ್ಮ ತಪ್ಪಿನ ಅರಿವಾಯಿತು. ಕಾರಣ ಕತೆಯ ಉದ್ದಕ್ಕೂ ಇರುವ ಹಾಸ್ಯ ನಿಬ್ಬೆರಗಾಗುವಂತೆ ಮಾಡಿತ್ತು. ಅಲ್ಲದೆ ಕತೆ ಬುಲೆಟ್ ಸುತ್ತಲೇ ಹೆಚ್ಚು ಸುತ್ತುತ್ತಿತ್ತು. ಬರೋಬ್ಬರಿ 124 ಕಿಲೋ ತೂಗುವ ಅವರು ಪ್ರಾಯಶ್ಚಿತ್ತ ಎಂಬಂತೆ ಡ್ರಮ್ಮಂದರಲ್ಲಿ ನುಸುಳಿದ್ದರು. ದಿಬ್ಬದ ಮೇಲಿಂದ ಉರುಳುತ್ತ ತಳ ಸೇರಿದ್ದರು. ಆದರೆ ಅದು ನಡೆದಿದ್ದು ಚಿತ್ರೀಕರಣಕ್ಕಾಗಿ ಎಂಬುದು ನೆನಪಿಡಬೇಕಾದ ಅಂಶ!ಮೊದಲು ಬುಲೆಟ್ ಚಿತ್ರರಂಗಕ್ಕೆ ಅಡಿಯಿಟ್ಟಿದ್ದು ಖಳನಟನಾಗಿ. ಅದೂ ಅದ್ದೂರಿ ಹಿಟ್ ಚಿತ್ರ `ಎ.ಕೆ. 47'ನಲ್ಲಿ. ಖಳನಾಗಿಯೇ ಮುಂದುವರಿಯಬೇಕು ಎಂದುಕೊಂಡವರಿಗೆ ಸಿಕ್ಕಿದ್ದು ಹಾಸ್ಯ ಪಾತ್ರಗಳು. ಅದೊಂದು ಅರ್ಥದಲ್ಲಿ ಬಡ್ತಿಯೇ ಸರಿ. ನಂತರ `ಓ ನನ್ನ ನಲ್ಲೆ', `ಯುವರಾಜ', `ಅಪ್ಪು', `ಡೆಡ್ಲಿ ಸೋಮ', `ನಲ್ಲ', `ಸುಂಟರಗಾಳಿ' ಸೇರಿದಂತೆ ಇತ್ತೀಚಿನ `ಬಚ್ಚನ್'ವರೆಗೆ 275 ಚಿತ್ರಗಳಲ್ಲಿ ಕಾಣಿಸಿಕೊಂಡರು. ಕೋಮಲ್, ನಾಗಶೇಖರ್, ಶರಣ್, ಸಾಧು ಕೋಕಿಲ, ಮಂಡ್ಯ ರಮೇಶ್ ಅವರಂಥ ನಟರೊಂದಿಗೆ ತೆರೆ ಮೇಲಿನ ಗೆಳೆಯನಾಗಿ ಮಿಂಚಿದರು. ನಟ ದರ್ಶನ್‌ರ ಬಹುತೇಕ ಚಿತ್ರಗಳಲ್ಲಿ ನಟಿಸಿದರು. ತಮ್ಮನ್ನು ಮತ್ತೊಬ್ಬ ನಾಯಕನಂತೆ ಅನೇಕ ಚಿತ್ರಗಳಲ್ಲಿ ಬಿಂಬಿಸಿದ್ದು ಅವರ ಸಂತಸವನ್ನು ಇಮ್ಮಡಿಗೊಳಿಸಿದೆ.ಒಂದೊಮ್ಮೆ ಇಡಿಯಾಗಿ ನಾಯಕನಾದರೆ ಎಂಥ ಪಾತ್ರ ಇಷ್ಟಪಡುತ್ತೀರಿ ಎಂಬ ಪ್ರಶ್ನೆಗೆ ಅವರ ಮುಂದೆ ಹಲವು ಆಯ್ಕೆಗಳಿದ್ದವು.ಹಾಸ್ಯದ ಜೊತೆಗೆ ಗಂಭೀರ ಪಾತ್ರಗಳನ್ನು ಮಾಡುವ ಮನಸ್ಸಿತ್ತು. ತಲೆಹಿಡುಕನೋ, ಕುಡುಕನೋ ಆಗಿ ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಬೇಕು ಎಂಬ ವಿಚಿತ್ರ ಬಯಕೆಯೂ ಸೇರಿಕೊಂಡಿತ್ತು.ಚಿತ್ರರಂಗಕ್ಕೆ ಅಡಿಯಿಡುವ ಮೊದಲು ಬುಲೆಟ್ ರಾಜಕಾರಣಿಯಾಗುವ ಕನಸು ಕಂಡಿದ್ದರು. ಅದರ ಪ್ರಾಯೋಗಿಕ ಪರೀಕ್ಷೆಯೂ ನಡೆದು ಹೋಯಿತು. ಮೂರು ಬಾರಿ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ ಚಿತ್ರರಂಗದ ತುಡಿತ ರಾಜಕೀಯ ಆಸಕ್ತಿಯನ್ನು ಕಡಿಮೆ ಮಾಡಿತು. ರಾಜಕಾರಣದಲ್ಲಿ ಕಳೆದುಕೊಂಡ ಹಣವನ್ನು ಸಿನಿಮಾ ಮತ್ತೆ ತಂದುಕೊಟ್ಟಿತು. ಹೀಗಾಗಿ ಸಿನಿಮಾ ಅವರ ಮೊದಲ ಆಯ್ಕೆ.

ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದು ಇಂಥದ್ದೇ ಮತ್ತೊಂದು ದುಸ್ಸಾಹಸ. ಜೆ.ಜಿ.ಕೃಷ್ಣರ ಒತ್ತಾಯದ ಮೇರೆಗೆ `ಐತಲಕ್ಕಡಿ' ಚಿತ್ರಕ್ಕೆ ಹಣ ಹೂಡಿದರು. ಅಲ್ಲಿಯವರೆಗೂ ಹಣದ ವಿಚಾರದಲ್ಲಿ ಇನ್‌ಕಮಿಂಗ್ ಕಂಡಿದ್ದ ಅವರಿಗೆ ಔಟ್ ಗೋಯಿಂಗ್‌ನ ಅಪಾಯ ಅರ್ಥವಾಯಿತು! ರಾಜಕಾರಣ ಹಾಗೂ ಸಿನಿಮಾ ಜೂಜಿಗಿಂತಲೂ ಕೆಟ್ಟದ್ದು ಎಂಬುದು ಅರ್ಥವಾಗಿತ್ತು. ಹಾಗೆಂದು ರಾಜಕಾರಣದ ಆಸೆ ಸಂಪೂರ್ಣ ದೂರವಾಗಿಲ್ಲ. ಎಲ್ಲ ಒಂದು ಹಂತಕ್ಕೆ ಬಂದ ನಂತರ ಅಲ್ಲಿಯೂ ಕೈಯಾಡಿಸುವ ವಿಚಾರ ಸುಳಿದಿದೆ.ಸಿನಿಮಾರಂಗ ಊಹೆಗೂ ಮೀರಿದ ಉಡುಗೊರೆಗಳನ್ನು ನೀಡುತ್ತದೆ ಎಂಬುದಕ್ಕೆ ಅವರ ಬಳಿ ಉತ್ತಮ ಉದಾಹರಣೆಗಳಿವೆ. `ಶಾಂತಿ ಕ್ರಾಂತಿ' ಚಿತ್ರದಲ್ಲಿ ನಟಿಸಿದ್ದ ಮುನ್ನೂರು ಶಾಲಾಬಾಲಕರಲ್ಲಿ ಬುಲೆಟ್ ಕೂಡ ಒಬ್ಬರು. ಎಳವೆಯಲ್ಲಿಯೇ ಅವರಿಗೆ ಚಿತ್ರರಂಗದತ್ತ ಆಸಕ್ತಿ. ಅದನ್ನು ರವಿಚಂದ್ರನ್ ಬಳಿ ಹೇಳಿಕೊಂಡರು. ಆದರೆ ಪುಟ್ಟ ಹುಡುಗನನ್ನು ದಿಕ್ಕುತಪ್ಪಿಸಲು ರವಿಚಂದ್ರನ್‌ಗೆ ಇಷ್ಟವಿರಲಿಲ್ಲ. `ಹೋಗಿ ಚೆನ್ನಾಗಿ ಓದಿಕೊ' ಎಂದು ಕಿವಿಮಾತು ಹೇಳಿದರು. ಅದಕ್ಕೂ ಬುಲೆಟ್ ಬಗ್ಗದಿದ್ದಾಗ `ಅವನನ್ನು ಕಳಿಸಿರೋ' ಎಂದು ಕಡ್ಡಿ ಮುರಿದಂತೆ ನಿಷ್ಠುರವಾದರು. ಅದೇ ಬುಲೆಟ್ ರವಿಚಂದ್ರನ್‌ರ ಒಂಬತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು.ಒಂದೊಮ್ಮೆ ನೂರು ರೂಪಾಯಿಗೂ ಪ್ರೊಡಕ್ಷನ್ ಮ್ಯಾನೇಜರ್ ಬಳಿ ಕೈಚಾಚುತ್ತಿದ್ದ ಬುಲೆಟ್ ತಮ್ಮ ನಟನೆಗೆ ಲಕ್ಷಾಂತರ ರೂಪಾಯಿ ಸಂಭಾವನೆಯನ್ನೂ ಪಡೆದರು. ನೂರು ರೂಪಾಯಿ ಕೊಡಲೂ ಹಿಂದೆಮುಂದೆ ನೋಡುತ್ತಿದ್ದವರು ದೊಡ್ಡ ಮೊತ್ತದ ಹಣವನ್ನು ಮನೆ ಬಾಗಿಲಿಗೇ ತಂದು ತಲುಪಿಸುವಂತಾದರು.ಅದೆಲ್ಲಾ ಸರಿ. ಮೆದು ಸ್ವಭಾವದ ಅವರೊಟ್ಟಿಗೆ ಬುಲೆಟ್ ಎಂಬ ಉಗ್ರ ಶಬ್ದ ಸೇರಿಕೊಂಡದ್ದಾದರೂ ಹೇಗೆ? ಅದಕ್ಕೂ ರವಿಚಂದ್ರನ್ ಅವರೇ ಕಾರಣ. ಬುಲೆಟ್ ಬೈಕಿನಲ್ಲಿ ಓಡಾಡುತ್ತಿದ್ದ ಪ್ರಕಾಶ್ `ಬುಲೆಟ್ ಪ್ರಕಾಶ್' ಆದರು.ಹಾಸ್ಯ ಅಪಹಾಸ್ಯವಾಗಬಾರದು ಎಂಬ ಕಾಳಜಿ ಬುಲೆಟ್ ಅವರಲ್ಲಿದೆ. ಈಗಾಗಲೇ ಹಾಸ್ಯ ಹಾದಿ ತಪ್ಪಿದ ಬಗ್ಗೆ ವಿಷಾದವೂ ಬರೆತಿದೆ. ಕೀಳುಮಟ್ಟದ ಅಭಿರುಚಿಗೆ ಹಾಸ್ಯ ಬಾಗದಂತೆ ಚಿತ್ರರಂಗದವರು ಮೊದಲೇ ಎಚ್ಚರವಹಿಸಬೇಕಿತ್ತು. ಈಗ ಜನರ ಅಭಿರುಚಿ ಕೆಡಿಸಿರುವುದರಿಂದ ಹಾಸ್ಯನಟರು ಅನಿವಾರ್ಯವಾಗಿ ದ್ವಂದ್ವಾರ್ಥದ ಮಾತುಗಳನ್ನು ಬಳಸಬೇಕಿದೆ ಎಂದು ನೋವಿನಿಂದ ಹೇಳಿಕೊಳ್ಳುತ್ತಾರೆ.ಇತ್ತೀಚಿನ ದಿನಗಳಲ್ಲಿ ಬೇರೆ ಭಾಷೆಗಳ ನಟರನ್ನು ಅನುಸರಿಸುವ ಪರಿಪಾಠ ಹಾಸ್ಯನಟರಲ್ಲಿ ಹೆಚ್ಚು ಎಂಬ ಆಕ್ಷೇಪಗಳು ಎದ್ದಿವೆ. ಆದರೆ ಇದನ್ನು ಬುಲೆಟ್ ಒಪ್ಪುವುದಿಲ್ಲ. ಅನೇಕ ಹಾಸ್ಯನಟರು ಅವರಿಗೆ ಚಾರ್ಲಿಚಾಪ್ಲಿನ್‌ರ ಅಂಗಾಂಗಗಳಂತೆ ತೋರಿದ್ದಾರೆ. ಅನುಕರಣೆ ಇರಲಿ, ಆದರೆ ಅಂಧಾನುಕರಣೆ ಬೇಡ ಎಂಬ ನೀತಿಪಾಠ ಅವರದು.ಸದ್ಯಕ್ಕೆ `ಭಜರಂಗಿ', `ರಾಟೆ', `ಸವಾಲ್' ಮತ್ತಿತರ ಚಿತ್ರಗಳಲ್ಲಿ ಸಕ್ರಿಯವಾಗಿರುವ ಬುಲೆಟ್ ತೆಲುಗಿನಿಂದಲೂ ಅವಕಾಶ ಪಡೆದಿದ್ದಾರೆ. ಅರ್ಜುನ್ ಸರ್ಜಾ ಅಭಿನಯದ `ಕಾಂಟ್ರಾಕ್ಟ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದರ ಬೆನ್ನಿಗೇ ಮತ್ತೊಂದು ತೆಲುಗು ಚಿತ್ರ ಅರಸಿ ಬಂದಿದ್ದು ಇನ್ನೂ ಮಾತುಕತೆಯ ಹಂತದಲ್ಲಿದೆ.`ಸೈಜೂ ಆನೆಯಂತೆ, ಬದುಕುವುದೂ ಆನೆಯಂತೆ' ಎನ್ನುವ ಬುಲೆಟ್ ತಮ್ಮ ಸುತ್ತ ಹರಡಿದ ಹರಡುತ್ತಿರುವ ಗಾಳಿಸುದ್ದಿಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡವರಲ್ಲ. ಗಾಸಿಪ್‌ಗಳು ಕೆಟ್ಟದ್ದು. ಆದರೆ ಕೆಟ್ಟದ್ದು ಬಹುಕಾಲ ಬಾಳುವುದಿಲ್ಲ ಎಂಬ ಸಮಾಧಾನ ಅವರಿಗೆ ರಕ್ಷೆಯಾಗಿದೆ.

                             

ಪ್ರತಿಕ್ರಿಯಿಸಿ (+)