ಶುಕ್ರವಾರ, ಮಾರ್ಚ್ 5, 2021
18 °C

ನಲುಗಿದ ನಗರಗಳು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಲುಗಿದ ನಗರಗಳು...

ಗುರುಗ್ರಾಮ

ಒಡ್ಡುಗಳನ್ನು ನಿರ್ಮಿಸುವ ಮೂಲಕ ಬ್ರಿಟಿಷರು ಕಾಯ್ದುಕೊಂಡಿದ್ದ ಮಳೆನೀರು ನಿರ್ವಹಣಾ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಪಡಿಸುವ ಬದಲು ಹಾಳುಗೆಡವಿದ್ದರ ಪರಿಣಾಮಗಳನ್ನು ಗುರುಗ್ರಾಮ ಇತ್ತೀಚೆಗೆ ಸ್ಪಷ್ಟವಾಗಿ ಕಂಡಿದೆ.ಕಾಲುವೆಗಳು, ತೋಡುಗಳು ಕಾಲಕ್ರಮೇಣ ನಾಶವಾಗಿ ಅವುಗಳ ಜಾಗದಲ್ಲಿ ಭವ್ಯವಾದ ಮಹಲುಗಳು, ವಾಣಿಜ್ಯ ಸಂಕೀರ್ಣಗಳು ಇಲ್ಲಿ ಬಂದು ನಿಂತಿವೆ. ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಇಲ್ಲದಿದ್ದರೂ ಬಹುರಾಷ್ಟ್ರೀಯ ಕಂಪೆನಿಗಳ ಕಚೇರಿಗಳು, ಐಶಾರಾಮಿ ಹೋಟೆಲುಗಳು, ಮಾಲುಗಳಿಗೇನೂ ಈ ‘ಮಿಲೆನಿಯಂ ನಗರ’ದಲ್ಲಿ ಕಡಿಮೆ ಇಲ್ಲ.

ರಾಷ್ಟ್ರ ರಾಜಧಾನಿ ದೆಹಲಿಗೆ ಸಮೀಪದಲ್ಲಿರುವ ಗುರುಗ್ರಾಮದಲ್ಲಿ ಪ್ರಮುಖ ಕಾಲುವೆಗಳು ಮತ್ತು ಮಳೆ ನೀರು ಕಾಲುವೆಗಳ ವಿಸ್ತೀರ್ಣದಲ್ಲಿನ ವ್ಯತ್ಯಾಸವೂ ಮಳೆಗಾಲದ ದುರವಸ್ಥೆಗೆ ಕಾರಣವಾಗುತ್ತಿದೆ.ನಗರದ ಬೆಳವಣಿಗೆಗೆ ತಕ್ಕಂತೆ ಪರ್ಯಾಯ ರಸ್ತೆಗಳನ್ನು ರೂಪಿಸುವಲ್ಲಿ ಸ್ಥಳೀಯ ಆಡಳಿತ ಎಡವಿದೆ. ಹೀಗಾಗಿ ಗುರುಗ್ರಾಮ– ದೆಹಲಿ ಎಕ್ಸ್‌ಪ್ರೆಸ್‌ವೇಯಲ್ಲಿ ಕಳೆದ ವಾರ ಮಂಡಿಗುಂಟ ನಿಂತ ಮಳೆ ನೀರಿನಲ್ಲಿ ಸಿಕ್ಕಿಹಾಕಿಕೊಂಡ ವಾಹನ ಸವಾರರು ಆಡಳಿತಕ್ಕೆ ಹಿಡಿಹಿಡಿ ಶಾಪ ಹಾಕಿದರು. ತಮ್ಮ ಅತೀವ ಪರದಾಟಕ್ಕೆ ಕಾರಣವಾದ ಚರಂಡಿ ಅವ್ಯವಸ್ಥೆ, ಕಾಲುವೆಗಳ ಅಸಮರ್ಪಕ ನಿರ್ವಹಣೆ ಬಗ್ಗೆಯೂ ಸಾಮಾಜಿಕ ಮಾಧ್ಯಮಗಳಲ್ಲಿ  ಆಕ್ರೋಶ ಹೊರಹಾಕಿದರು.***

ಮುಂಬೈ


ನಗರಾಭಿವೃದ್ಧಿ ಹಳಿ ತಪ್ಪಿದರೆ ಏನೆಲ್ಲ ಅನಾಹುತಗಳಾಗಬಹುದು ಎಂಬುದಕ್ಕೆ ಈ ಮಹಾನಗರವೇ ಸಾಕ್ಷಿ. ಅರಬ್ಬಿ ಸಮುದ್ರದ ಕರಾವಳಿ ಪ್ರದೇಶವಾದ ಮುಂಬೈನಲ್ಲಿ ಭಾರಿ ಮಳೆ ಸಾಮಾನ್ಯ. ಆದರೆ ಅದಕ್ಕೆ ತಕ್ಕಂತೆ ನಗರವನ್ನು ಯೋಜನಾಬದ್ಧಗೊಳಿಸದೇ ಇರುವುದು ನಗರವಾಸಿಗಳಿಗೆ ನರಕದರ್ಶನ ಮಾಡಿಸುತ್ತಲೇ ಇರುತ್ತದೆ. ಅದರಲ್ಲೂ 2005ರಲ್ಲಿ ಬಿದ್ದ ಮಹಾಮಳೆಯಂತೂ  ಜಗತ್ತಿನೊಂದಿಗೆ ನಗರದ ಸಂಪರ್ಕವನ್ನೇ ಕಡಿದು ಹಾಕಿತ್ತು.

ಶಾಲಾ ಮಕ್ಕಳು, ಕಚೇರಿ ಸಿಬ್ಬಂದಿ ಸಹಿತ ಇದ್ದವರು ಇದ್ದ ಜಾಗದಲ್ಲೇ ಒಂದಿಡೀ ದಿನ ಕಳೆದರು. ರನ್‌ವೇಯಲ್ಲಿ ನಿಂತ ಭಾರಿ ನೀರಿನಿಂದಾಗಿ ವಿಮಾನ ನಿಲ್ದಾಣಗಳನ್ನು 30 ಗಂಟೆಗಳಿಗೂ ಹೆಚ್ಚು ಕಾಲ ಸ್ಥಗಿತಗೊಳಿಸಲಾಗಿತ್ತು. ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟು, ಹತ್ತಾರು ಸಾವಿರ ವಾಹನಗಳು ಜಖಂಗೊಂಡವು. ಚರಂಡಿ ನೀರು ಕುಡಿಯುವ ನೀರಿನ ಮೂಲಗಳನ್ನು ಸೇರಿತು. ನಗರ ಕತ್ತಲಲ್ಲಿ ಮುಳುಗಿದ್ದರಿಂದ, ಬಹುತೇಕ ಆನ್‌ಲೈನ್‌ನಲ್ಲೇ ನಡೆಯುವ ಷೇರುಪೇಟೆ ಚಟುವಟಿಕೆ ಸ್ತಬ್ಧಗೊಂಡು ದೇಶದಾದ್ಯಂತ ಷೇರು ವ್ಯವಹಾರವನ್ನು ತಲ್ಲಣಗೊಳಿಸಿತು.20ನೇ ಶತಮಾನದ ಆರಂಭದಲ್ಲಿ ನಿರ್ಮಿಸಿರುವ ನಗರದ ಕಾಲುವೆ ನೀರಿನ ವ್ಯವಸ್ಥೆಗೆ ಗಂಟೆಗೆ 25 ಮಿ.ಮೀ. ನೀರನ್ನಷ್ಟೇ ಸಾಗಿಸುವ ಸಾಮರ್ಥ್ಯ ಇದೆ. ಆದರೆ ಅಂದು ಸುರಿದ ದಾಖಲೆ 993 ಮಿ.ಮೀ. ಮಳೆಯ ಅಬ್ಬರವನ್ನು ತಡೆಯಲು ಆ ಕಾಲುವೆಗಳಿಗೆ ಸಾಧ್ಯವಾಗಲಿಲ್ಲ. 1990ರಲ್ಲಿ ಬೃಹತ್‌ ಮುಂಬೈ ಮಹಾನಗರಪಾಲಿಕೆ ನಿಯೋಜಿಸಿಕೊಂಡಿದ್ದ ಬ್ರಿಟನ್‌ ಮೂಲದ ಸಂಸ್ಥೆಯೊಂದು, ₹ 600 ಕೋಟಿ ಮೊತ್ತದ ಯೋಜನೆಯೊಂದನ್ನು ರೂಪಿಸಿತ್ತು.ಮಳೆ ನೀರು ರಸ್ತೆಗಳಲ್ಲಿ ನಿಲ್ಲದಂತೆ ಮಾಡುವ  ಭರವಸೆಯನ್ನು ಅದರ ರೂವಾರಿಗಳು ನೀಡಿದ್ದರು. 2002ರ ಹೊತ್ತಿಗೆ ಪೂರ್ಣಗೊಳ್ಳಲಿದ್ದ ಈ ಯೋಜನೆಯು ಪೈಪುಗಳ ಅಳವಡಿಕೆ, ಒತ್ತುವರಿ ತೆರವಿನಂತಹ ಕ್ರಮಗಳ ಮೂಲಕ ಕಾಲುವೆ ವ್ಯವಸ್ಥೆ ಸುಗಮಗೊಳಿಸುವ ಮಹದುದ್ದೇಶವನ್ನು ಒಳಗೊಂಡಿತ್ತು. ಅತ್ಯಂತ ವೆಚ್ಚದಾಯಕವೆಂಬ ಕಾರಣಕ್ಕಾಗಿ ಪಾಲಿಕೆ ಯೋಜನೆಯನ್ನು ತಳ್ಳಿಹಾಕಿತು. ವಿಪರ್ಯಾಸವೆಂದರೆ, 2005ರ ಮಹಾಮಳೆಯಿಂದಾದ ಪ್ರತ್ಯಕ್ಷ ಹಾನಿಯೇ ₹ 550 ಕೋಟಿ!ನಗರದ ಕೆಲ ಭಾಗಗಳಲ್ಲಂತೂ ಅಭಿವೃದ್ಧಿ ನಿಯಂತ್ರಣಕ್ಕೇ ಬಾರದಷ್ಟು ಹಳಿ ತಪ್ಪಿದೆ. ಉತ್ತರ ಮುಂಬೈನಲ್ಲಿ ಲಕ್ಷಾಂತರ ಬೃಹತ್‌ ಕಟ್ಟಡಗಳು ತಲೆ ಎತ್ತಿವೆ. ಈ ಭಾಗದಲ್ಲಿ ಭೂಮಿ ಮತ್ತು ಕಡಲ ನಡುವೆ ಪ್ರತಿರೋಧಕಗಳಂತೆ ಕಾರ್ಯ ನಿರ್ವಹಿಸುತ್ತಿದ್ದ  ಅಮೂಲ್ಯ ಮ್ಯಾಂಗ್ರೋವ್‌ ಕಾಡುಗಳನ್ನು ಆಪೋಶನ ತೆಗೆದುಕೊಂಡು ಅವುಗಳ ಸಮಾಧಿಯ ಮೇಲೆ ಈ  ಕಟ್ಟಡಗಳನ್ನು ಕಟ್ಟಲಾಗಿದೆ.ಇಂತಹ ಕ್ರಮಗಳು ವಿಪತ್ತಿಗೆ ದಾರಿ ಮಾಡಿದಂತೆ ಎಂದು ಕೇಂದ್ರ ಪರಿಸರ ಸಚಿವಾಲಯ ಎಚ್ಚರಿಸಿದೆ. ಆದರೆ ಈ ಎಚ್ಚರಿಕೆ ನಗರದ ಗದ್ದಲದಲ್ಲಿ ಅಡಗಿಹೋಗಿದೆ. 1995ರಿಂದ 2005ರ ನಡುವೆ ಶೇ 40ರಷ್ಟು ಮ್ಯಾಂಗ್ರೋವ್‌ ಕಾಡುಗಳನ್ನು ನಗರ ಕಳೆದುಕೊಂಡಿದೆ. ಮಾಡಿದ್ದುಣ್ಣೋ ಮಹರಾಯ ಎಂಬಂತೆ ಇದೆಲ್ಲದರ ಫಲವನ್ನು ಪ್ರತಿ ಮಳೆಗಾಲದಲ್ಲೂ ಮುಂಬೈ ಉಣ್ಣುತ್ತಲೇ ಇದೆ.***

ಹರಿದ್ವಾರ


2004ರ ಸುನಾಮಿ ನಂತರ ದೇಶ ಕಂಡ ಭೀಕರ ಜಲಪ್ರಳಯದಲ್ಲಿ 2013ರಲ್ಲಿ ಉತ್ತರಾಖಂಡದಲ್ಲಾದ ನೈಸರ್ಗಿಕ ಪ್ರಕೋಪವೂ ಒಂದು. ಇದರಿಂದ ತೀವ್ರ ಹಾನಿಗೊಳಗಾದ ರಾಜ್ಯದ ನಗರಗಳಲ್ಲಿ ಹರಿದ್ವಾರ ಪ್ರಮುಖವಾದುದು.

ರಾಜ್ಯದ ಪವಿತ್ರ ಸ್ಥಳಗಳ ದರ್ಶನಕ್ಕಾಗಿ ದೇಶದ ಮೂಲೆಮೂಲೆಗಳಿಂದ ಬರುವ ಲಕ್ಷಾಂತರ ಭಕ್ತರೇ ಈ ನಗರದ ಜೀವಾಳ. ಆದರೆ ಮಹಾಮಳೆಯಲ್ಲಿ ಸಿಲುಕಿಕೊಂಡ ಭಕ್ತರು ದಿನಗಟ್ಟಲೆ ಕುಡಿಯುವ ನೀರು, ಆಹಾರವಿಲ್ಲದೆ ನರಳಾಡಿದರು. ಇಲ್ಲಿಗೆ 25 ಕಿ.ಮೀ. ದೂರದಲ್ಲಿರುವ ಹೃಷಿಕೇಶದಲ್ಲಿನ ಪ್ರಸಿದ್ಧ ಶಿವನ ಮೂರ್ತಿಯೂ ಹಾನಿಗೊಳಗಾಯಿತು.ಪ್ರವಾಸೋದ್ಯಮದ ಕಾರಣಕ್ಕಾಗಿ ನದಿ ತಟದಲ್ಲಿ ಇತ್ತೀಚಿನ ದಶಕಗಳಲ್ಲಿ ಕೈಗೊಂಡಿರುವ ಅವೈಜ್ಞಾನಿಕ ಅಭಿವೃದ್ಧಿ ಚಟುವಟಿಕೆಗಳ ವಿರುದ್ಧ ಸೇಡು ತೀರಿಸಿಕೊಳ್ಳುವಂತೆ ಪ್ರವಾಹ ಅಬ್ಬರಿಸಿತು. ನದಿ ಪಾತ್ರದಲ್ಲಿ ಯರ್ರಾಬಿರ್ರಿ ಕಟ್ಟಿದ್ದ ಕಟ್ಟಡಗಳು, ಅಡ್ಡಾದಿಡ್ಡಿ ರಸ್ತೆಗಳು, ಹೊಸ ರೆಸಾರ್ಟುಗಳು ಕುಸಿದುಬಿದ್ದು, ಅವುಗಳ ಅವಶೇಷ ನೀರಿನ  ಹರಿವಿಗೆ ತಡೆಯೊಡ್ಡಿ ಭೀಕರ ಪ್ರವಾಹಕ್ಕೆ ನಾಂದಿಯಾಯಿತು.‘ರಾಜ್ಯದಲ್ಲಿ ನಿರ್ಮಿಸಿರುವ 70ಕ್ಕೂ ಹೆಚ್ಚು ಜಲವಿದ್ಯುತ್‌ ಯೋಜನೆಗಳು ಅಸಮತೋಲನ ಸೃಷ್ಟಿಸಿ ವಿಪತ್ತಿಗಾಗಿ ಕಾದು  ಕುಳಿತಿವೆ’ ಎಂದು ಪರಿಸರ ತಜ್ಞರು ಎಚ್ಚರಿಸಿದ್ದರು. ಆದರೆ ಈ ಕರೆಗಂಟೆಯನ್ನು ಉತ್ತರಾಖಂಡದ ನಗರಾಡಳಿತಗಳು ಒಂದು ಕಿವಿಯಲ್ಲಿ ಕೇಳಿ ಮತ್ತೊಂದು ಕಿವಿಯಲ್ಲಿ ಹೊರಹಾಕಿದ್ದವು.***

ಚೆನ್ನೈ


1943ರಿಂದ 2005ರವರೆಗೆ ಚೆನ್ನೈ ಐದು ಪ್ರಮುಖ ಪ್ರವಾಹಗಳನ್ನು ಕಂಡಿದೆ. ಆದರೆ ಕಳೆದ ವರ್ಷದ ಮಹಾಪ್ರವಾಹ ಮಾತ್ರ ಸಮರ್ಪಕ ನಗರ ಯೋಜನೆಗಳನ್ನು ರೂಪಿಸಬೇಕಾದ ಅನಿವಾರ್ಯದ ಪಾಠವನ್ನು ಬರೀ ಈ ನಗರಕ್ಕಷ್ಟೇ ಅಲ್ಲ, ದೇಶದ ಇತರ ಮಹಾನಗರಗಳಿಗೂ ಕಲಿಸಿತು.

ಇಲ್ಲಿ ವರುಣನ ಆರ್ಭಟ 500 ಜನರನ್ನು ಬಲಿ ತೆಗೆದುಕೊಂಡಿದ್ದಲ್ಲದೆ ಲಕ್ಷಾಂತರ ಜನರನ್ನು ನಿರಾಶ್ರಿತರನ್ನಾಗಿಸಿತು. ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಯನ್ನು ಜಲಸಮಾಧಿ ಮಾಡಿಹಾಕಿತು. ಕಾಲುವೆಗಳ ಒತ್ತುವರಿ ತೆರವುಗೊಳಿಸಿ ಪ್ರವಾಹದ ನೀರು ಸರಾಗವಾಗಿ ಸಮುದ್ರ ಸೇರುವಂತೆ ಮಾಡಲು ಯೋಜನೆ ರೂಪಿಸದ ಮಹಾನಗರಪಾಲಿಕೆ ತೀವ್ರ ಟೀಕೆಗೆ ಗುರಿಯಾಯಿತು.ಈ ನಗರದಲ್ಲಿ ಕಟ್ಟಡಗಳನ್ನಷ್ಟೇ ಮನಬಂದಂತೆ ಕಟ್ಟಿಲ್ಲ. ಚರಂಡಿಗಳು, ಕಾಲುವೆಗಳನ್ನೂ ಮನಸೋಇಚ್ಛೆ ವಿನ್ಯಾಸಗೊಳಿಸಲಾಗಿದೆ. ಕೆರೆಗಳ ನೈಸರ್ಗಿಕ ಪ್ರವಾಹ ತಡೆಗೋಡೆಗಳನ್ನು ಒತ್ತುವರಿ ಭೂತ ನುಂಗಿ ನೊಣೆದಿದೆ.1980ರಲ್ಲಿ 600ಕ್ಕೂ ಹೆಚ್ಚು ಕೆರೆಗಳು ನಗರದಲ್ಲಿದ್ದವು. ಆದರೆ 2008ರ ಹೊತ್ತಿಗೆ ಬೆರಳೆಣಿಕೆಯ ಕೆರೆಗಳಷ್ಟೇ ಸುಸ್ಥಿತಿಯಲ್ಲಿ ಇದ್ದುದನ್ನು ಸೆಂಟರ್‌ ಫಾರ್‌ ಸೈನ್ಸ್‌ ಅಂಡ್‌ ಎನ್‌ವಿರಾನ್‌ಮೆಂಟ್‌ ವರದಿ ಹೊರಗೆಡವಿದೆ. ಕೆರೆಕಟ್ಟೆಗಳಿಂದ ಹೆಚ್ಚುವರಿ ನೀರನ್ನು ಇತರ ಜಲಮೂಲಗಳಿಗೆ ಸಾಗಿಸುತ್ತಿದ್ದ ಕಾಲುವೆಗಳೂ ಒತ್ತುವರಿಯಿಂದ ನಾಶವಾಗಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.