ಭಾನುವಾರ, ಜೂನ್ 13, 2021
25 °C

ನಲ್ಲಿ ಅಂಟಿಸಿಕೊಂಡ ಮಡಕೆ

ಸಿದ್ದರಾಜು ಎಂ.ಕಪ್ಪಸೋಗೆ Updated:

ಅಕ್ಷರ ಗಾತ್ರ : | |

ನಗರದಲ್ಲಿ ಬಿಸಿಲಿನ ಝಳ ಈಗಷ್ಟೇ ನಿಧಾನವಾಗಿ ಏರುತ್ತಿದೆ.  ಜನರು ದಾಹ ನೀಗಿಸಿಕೊಳ್ಳಲು ಎಳನೀರು, ಕಲ್ಲಂಗಡಿ, ಮಜ್ಜಿಗೆ ಹಾಗೂ ತಂಪು ಪಾನೀಯಗಳ ಮೊರೆಹೋಗುತ್ತಿದ್ದಾರೆ. ಬೇಸಿಗೆ ಕಾಲಿಡುತ್ತಿದ್ದಂತೆಯೇ ವಿಭಿನ್ನ ಆಕಾರ, ವಿನ್ಯಾಸದ ಮಡಕೆಗಳ ಸಾಲು ರಸ್ತೆಯ ಇಕ್ಕೆಲಗಳನ್ನು ಅಲಂಕರಿಸಿವೆ.  ವಿಜಯನಗರ, ಬಸವನಗುಡಿ, ಮಾಗಡಿ ರಸ್ತೆ, ಜಯಮಹಲ್ ರಸ್ತೆ, ಹೆಬ್ಬಾಳ ರಿಂಗ್ ರಸ್ತೆಗಳಲ್ಲಿ ಕೆಂಪು ಮತ್ತು ಕಂದು ಬಣ್ಣದ ಆಕರ್ಷಕ ಮಡಕೆಗಳು ಒಂದು ಕ್ಷಣ ದಾರಿಹೋಕರ ಗಮನ ಸೆಳೆಯುತ್ತವೆ.ಹೊಟ್ಟೆಪಾಡಿಗಾಗಿ ಅನ್ಯ ರಾಜ್ಯ ಹಾಗೂ ರಾಜ್ಯದ ಗ್ರಾಮೀಣ ಪ್ರದೇಶಗಳಿಂದ ಬಂದ ಜನರು ಮಡಕೆ ವ್ಯಾಪಾರದಲ್ಲಿ ತೊಡಗಿದ್ದಾರೆ.ಮತ್ತಿತರ ಹಬ್ಬಗಳ ವೇಳೆ ಗಣಪತಿ ಹಾಗೂ ಹಣತೆ ಮಾರಾಟ ಮಾಡಿ ಜೀವನ ಸಾಗಿಸುತ್ತಿರುವ ಕೆಲ ಕುಟುಂಬಗಳು ಬೇಸಿಗೆ ಬಂತೆಂದರೆ ಮಡಕೆ ಮಾರಾಟದಲ್ಲಿ ತೊಡಗುತ್ತವೆ. ‘ನಾವು 23 ವರ್ಷಗಳಿಂದ ಈ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದೇವೆ. ಬೆಳಿಗ್ಗೆ 6 ಗಂಟೆಗೆ ಬಂದರೆ ಸಂಜೆ 6ರವರೆಗೆ ಇಲ್ಲೇ ಇರುತ್ತೇವೆ. ಹಬ್ಬ ಹರಿದಿನಗಳಲ್ಲಿ ವ್ಯಾಪಾರ ಹೆಚ್ಚಾಗಿರುತ್ತದೆ, ಮಾಮೂಲಿ ದಿನಗಳಲ್ಲಿ ಕನಿಷ್ಠ 5-ರಿಂದ 6 ಹಾಗೂ ಗರಿಷ್ಠ 9ರಿಂದ 10 ಮಡಕೆ ಮಾರಾಟವಾಗುತ್ತವೆ’ ಎನ್ನುತ್ತಾರೆ ನೆಲಮಂಗಲದಿಂದ ಬಂದು ವ್ಯಾಪಾರ ಮಾಡುತ್ತಿರುವ ರಾಮಕ್ಕ.‘ನಮ್ಮಲ್ಲಿ ಸಾಧಾರಣ ಗಾತ್ರದ ಮಡಕೆಗಳು ಲಭ್ಯವಿದ್ದ ಕಾರಣ ದೊಡ್ಡಬಳ್ಳಾಪುರದಿಂದ ದೊಡ್ಡ ಗಾತ್ರದ ಮಡಕೆ ತಂದು ಮಾರಾಟ ಮಾಡುತ್ತಿದ್ದೇವೆ. 100 ರೂಪಾಯಿಯಿಂದ ಮಡಕೆ ಬೆಲೆ ಆರಂಭವಾಗುತ್ತದೆ. ಗಾತ್ರಕ್ಕೆ ತಕ್ಕಂತೆ ಬೆಲೆ ನಿಗದಿ ಮಾಡುತ್ತೇವೆ. ಕೆಲವೊಮ್ಮೆ ಎರಡು ಅಥವಾ ಮೂರು ಮಡಕೆಗಳು ಮಾತ್ರ ಮಾರಾಟವಾಗುತ್ತವೆ. ನಮ್ಮ ಕುಟುಂಬದ ಸದಸ್ಯರೆಲ್ಲಾ ಇದೇ ವೃತ್ತಿಯಲ್ಲಿ ತೊಡಗಿಕೊಂಡಿದ್ದೇವೆ’ ಎನ್ನುತ್ತಾರೆ ರಾಮಕ್ಕ.ರಸ್ತೆಬದಿಯ ಖಾಲಿ ಜಾಗದಲ್ಲಿ ಮಡಕೆ ಮಾರಾಟ ಮಾಮೂಲಿ. ಮೊದಲಿಗೆ ಹೆಬ್ಬಾಳ ರಿಂಗ್ ರಸ್ತೆಯಲ್ಲಿ ಮಾರಾಟ ಮಾಡುತ್ತಿದ್ದೆವು. ಈಗ  ಇಲ್ಲಿಗೆ ಬಂದು ಒಂದು ವರ್ಷವಾಯಿತು’ ಎನ್ನುತ್ತಾರೆ, ಜಯಮಹಲ್ ರಸ್ತೆ ‘ಸ್ನೋ ಸಿಟಿ’ ಸಮೀಪ ಮಡಕೆ ವ್ಯಾಪಾರ ಮಾಡುವ ರಾಜಸ್ತಾನದ ಆಕಾಶ್.ಗುಜರಾತ್‌ನಿಂದ ತಂದ ನಮ್ಮ ಕೆಂಪು ಬಣ್ಣದ ಮಡಕೆಗಳಿಗೆ ಬೆಂಗಳೂರಿನಲ್ಲಿ ಭಾರಿ ಬೇಡಿಕೆ. ಜನ ಹೆಚ್ಚಾಗಿ ಗುಜರಾತ್‌ನ ಕೆಂಪು ಬಣ್ಣದ ಮಡಕೆ  ಇಷ್ಟಪಡುತ್ತಾರೆ. ಆದರೆ, ಕಳೆದ ಬಾರಿಗಿಂತ ಈ ಬಾರಿ ಬೇಡಿಕೆ ಕಡಿಮೆಯಾಗಿದ್ದು, ದಿನವೊಂದಕ್ಕೆ ಐದಾರು ಮಡಕೆಗಳು ಮಾತ್ರ ಮಾರಾಟವಾಗುತ್ತವೆ ಎನ್ನುತ್ತಾರೆ ಅವರು.‘ನಮ್ಮಲ್ಲಿ ವಿಭಿನ್ನ ಆಕೃತಿಯ ಮಡಕೆಗಳಿವೆ. ಮಡಕೆಗಳಿಗೆ ನಲ್ಲಿಗಳನ್ನು ಅಳವಡಿಸಿರುವ ಕಾರಣಕ್ಕೆ ನಮ್ಮಲ್ಲಿ ದೊರೆಯುವ ಮಡಕೆ ಒಂದಕ್ಕೆ ₨ 200ರಿಂದ ₨350ರವರೆಗೆ ಬೆಲೆ ಇದೆ. ಸಾಗಿಸುವ ಖರ್ಚು ಹೆಚ್ಚಾಗಿರುವುದರಿಂದ ಮಡಕೆಯ ಬೆಲೆ ಏರಿಸುವುದು ಅನಿವಾರ್ಯ’ ಎನ್ನುತ್ತಾರೆ ಆಕಾಶ್‌.ರಸ್ತೆಬದಿಯ ಗೂಡಂಗಡಿ, ತಳ್ಳುಗಾಡಿಯ ವರ್ತಕರಂತೆ ಮಡಕೆ ವ್ಯಾಪಾರಿಗಳಿಗೂ ಪೊಲೀಸರ ಕಿರುಕುಳ ತಪ್ಪಿದ್ದಲ್ಲ. ‘ವಾಹನದಿಂದ  ಮಡಕೆ ಇಳಿಸುತ್ತಲೇ  ಅವರು ಮಾಮೂಲಿ ಕೇಳಲು ಬರುತ್ತಾರೆ. ಕೊಡದಿದ್ದರೆ ಕಿರುಕುಳ ನೀಡುತ್ತಾರೆ’ ಎಂದರು ಮುನಿರೆಡ್ಡಿ ಪಾಳ್ಯದ ವರ್ತಕ ಸೋಮಶೇಖರ್.ಮಡಕೆ ನೀರು ತಂಪು

ಮಡಕೆಯಲ್ಲಿ ಸಂಗ್ರಹಿಸಿಟ್ಟ ನೀರು ಹೆಚ್ಚು ತಂಪು ಮತ್ತು ರುಚಿಯಾಗಿರುತ್ತದೆ.  ಎಲ್ಲ ಕಾಲದಲ್ಲೂ ಒಂದೇ ರೀತಿಯ ತಂಪು ಕಾಯ್ದುಕೊಂಡಿರುತ್ತದೆ. ಬಡವನ ಈ ಫ್ರಿಡ್ಜ್‌ ನೀರು ಹೊರಗಿನಿಂದ ದಣಿದು ಬಂದ ಜೀವದ ದಣಿವನ್ನು ನೀಗಿಸುತ್ತದೆ.  ಮೊದಲು ಫ್ರಿಡ್ಜ್‌. ನಂತರ ಬಾಟಲಿ ನೀರು ಬಂತು. ಹಾಗಾಗಿ ಮಡಕೆಗಳ ಬೇಡಿಕೆ ಇಳಿಮುಖವಾಯಿತು. ಫ್ರಿಡ್ಜ್‌ ನೀರು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದ ನೆಗಡಿ, ಕೆಮ್ಮು ಕಟ್ಟಿಟ್ಟ ಬುತ್ತಿ. ನೀರಿನ ಸ್ವಾದವೂ ಅದರಿಂದ ಕೆಡುತ್ತದೆ. ಹೀಗಾಗಿ ಕೆಲವರು ಬೇಸಿಗೆ ಬಂತೆಂದರೆ ಮಡಕೆ ನೀರನ್ನೇ ಹಂಬಲಿಸುತ್ತಾರೆ.  ಮರುಭೂಮಿಗಳಲ್ಲಿಯೂ ತಂಪಾದ ಬಾಟಲಿ ನೀರು ದೊರೆಯುವ ಈ ಕಾಲದಲ್ಲಿ ಮಡಕೆಗಳನ್ನು ಯಾರು ತಾನೆ ಕೇಳುತ್ತಾರೆ ಸ್ವಾಮಿ ಎನ್ನುವುದು ವರ್ತಕರ ಅಳಲು. *ನೆಲದಲ್ಲಿ ಸ್ವಲ್ಪ ಮರಳನ್ನು ಗುಡ್ಡೆ ಹಾಕಿ ಅದರ ಮೇಲೆ ಮಡಿಕೆ ಇಟ್ಟರೆ ನೀರು ಹೆಚ್ಚು ತಂಪಾಗಿರುತ್ತದೆ.

*ಹೊಸ ಮಡಕೆಯ ನೀರಿನಲ್ಲಿ ಒಂದೆರಡು ದಿನಗಳವರೆಗೆ ಮಣ್ಣಿನ  ಕಮಟು ವಾಸನೆ ಇರುತ್ತದೆ.

*ಮಡಕೆಯನ್ನು ಮೂರ್‍್ನಾಲ್ಕು ದಿನಗಳಿಗೊಮ್ಮೆ ನೀರಿನಲ್ಲಿ ಸ್ವಚ್ಛಗೊಳಿಸಬೇಕು.

*ಸೋಪಿನ ಪುಡಿಯಂತಹ ರಾಸಾಯನಿಕ ಬಳಸಿ  ಸ್ವಚ್ಛಗೊಳಿಸಬಾರದು. ಸೋಪಿನ ಪುಡಿಯನ್ನು ಹಾಕಿ ಸ್ವಚ್ಛಗೊಳಿಸಿದರೆ ಅದರ ವಾಸನೆ ಬಹುದಿನಗಳವರೆಗೆ ಇರುತ್ತದೆ.


 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.