ನವಜಾತ ಶಿಶು ಮಾರಾಟ ಜಾಲ ಪತ್ತೆ

7

ನವಜಾತ ಶಿಶು ಮಾರಾಟ ಜಾಲ ಪತ್ತೆ

Published:
Updated:
ನವಜಾತ ಶಿಶು ಮಾರಾಟ ಜಾಲ ಪತ್ತೆ

ಬೆಂಗಳೂರು: ನವಜಾತ ಶಿಶುಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಅಶೋಕನಗರ ಪೊಲೀಸರು ವೈದ್ಯೆ ಸೇರಿದಂತೆ ಇಬ್ಬರನ್ನು ಗುರುವಾರ ಬಂಧಿಸಿದ್ದಾರೆ.`ನೀಲಸಂದ್ರ ಬಳಿಯ ರೋಸ್‌ಗಾರ್ಡನ್‌ನ ಬಜಾರ್ ಸ್ಟ್ರೀಟ್‌ನಲ್ಲಿ ಗೆಟ್‌ವೆಲ್ ಕ್ಲಿನಿಕ್ ಹೆಸರಿನ ಆಸ್ಪತ್ರೆ ನಡೆಸುತ್ತಿದ್ದ ಸ್ತ್ರೀರೋಗ ತಜ್ಞೆ ಡಾ.ಪರ್ವಿನ್ ಪ್ರಕಾಶ್  ಮತ್ತು ಅವರ ಮಗ ಹರ್ಷ  ಬಂಧಿತರು. ಆರೋಪಿಗಳು ಆಸ್ಪತ್ರೆಯಲ್ಲಿ ಹುಟ್ಟಿದ ನವಜಾತ ಶಿಶುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ಮಕ್ಕಳ ಕಲ್ಯಾಣ ಸಮಿತಿಯಿಂದ ದೂರು ಬಂದಿತ್ತು. ಈ ದೂರು ಆಧರಿಸಿ ಮಗುವನ್ನು ಖರೀದಿಸುವ ನೆಪದಲ್ಲೇ ಮಫ್ತಿಯಲ್ಲಿ ಆಸ್ಪತ್ರೆಗೆ ತೆರಳಿ ಅವರನ್ನು ಬಂಧಿಸಲಾಯಿತು' ಎಂದು ಹಿರಿಯ ಅಧಿಕಾರಿಗಳು `ಪ್ರಜಾವಾಣಿ'ಗೆ ತಿಳಿಸಿದರು.`ಪರ್ವಿನ್, ಸುಮಾರು 22 ದಿನಗಳ ಹಿಂದೆ ಜನಿಸಿದ್ದ ಗಂಡು ಶಿಶುವನ್ನು 85 ಸಾವಿರ ರೂಪಾಯಿಗೆ ಮಾರಾಟ ಮಾಡಲು ಪ್ರಯತ್ನ ನಡೆಸಿದ್ದರು. ಈ ಮಾಹಿತಿ ಆಧರಿಸಿ ಉಪ್ಪಾರಪೇಟೆ ಠಾಣೆ ಮಹಿಳಾ ಸಬ್‌ಇನ್‌ಸ್ಪೆಕ್ಟರ್ ರೂಪಾ ಹಡಗಲಿ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರನ್ನು ಒಳಗೊಂಡ ವಿಶೇಷ ತಂಡ ರಚಿಸಲಾಯಿತು. ಆಸ್ಪತ್ರೆಗೆ ಹೋದ ಆ ತಂಡದ ಸದಸ್ಯರು, ಆರೋಪಿಗಳಿಗೆ 20 ಸಾವಿರ ಮುಂಗಡ ಹಣ ಕೊಟ್ಟು ಮಗುವನ್ನು ಪಡೆದುಕೊಂಡರು. ನಂತರ ಹೆಚ್ಚಿನ ಸಿಬ್ಬಂದಿಯೊಂದಿಗೆ ಆಸ್ಪತ್ರೆ ಮೇಲೆ ದಾಳಿ ನಡೆಸಿ ಅವರಿಬ್ಬರನ್ನೂ ಬಂಧಿಸಲಾಯಿತು' ಎಂದು ಅಧಿಕಾರಿಗಳು ಹೇಳಿದ್ದಾರೆ.`ಮಗುವನ್ನು ಕದ್ದಿಲ್ಲ. ತಿಂಗಳ ಹಿಂದೆ ಆಸ್ಪತ್ರೆಗೆ ಬಂದಿದ್ದ ಗರ್ಭಿಣಿಯೊಬ್ಬರಿಗೆ ಗಂಡು ಮಗು ಜನಿಸಿತ್ತು. ಹೆರಿಗೆ ನಂತರ ಆ ಮಹಿಳೆ ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋಗಿದ್ದರು. ಆದರೆ, ಆ ಮಹಿಳೆಯ ಬಗ್ಗೆ ಯಾವುದೇ ವಿವರಗಳನ್ನು ಸಂಗ್ರಹಿಸಿಲ್ಲ. ಅನಾಥವಾಗಿದ್ದ ಆ ಮಗುವನ್ನು ತಾನೇ ಪೋಷಿಸುತ್ತಿದ್ದೆ ಎಂದು ಪರ್ವಿನ್ ಹೇಳಿಕೆ ಕೊಟ್ಟಿದ್ದಾರೆ. ಮತ್ತೊಬ್ಬ ಆರೋಪಿ ಹರ್ಷ, ಪ್ರಕರಣದಲ್ಲಿ ಮಧ್ಯವರ್ತಿಯಾಗಿದ್ದಾನೆ. ಆರೋಪಿಗಳು ಇದೇ ರೀತಿ ಏಳೆಂಟು ನವಜಾತ ಶಿಶುಗಳನ್ನು ಮಾರಾಟ ಮಾಡಿದ್ದಾರೆ ಎಂದು ತನಿಖೆಯಿಂದ ಗೊತ್ತಾಗಿದೆ' ಎಂದು ಅಶೋಕನಗರ ಪೊಲೀಸರು ಮಾಹಿತಿ ನೀಡಿದ್ದಾರೆ.ಆರೋಪಿಗಳಿಂದ ರಕ್ಷಿಸಲಾದ ಮಗುವನ್ನು ಇಂದಿರಾಗಾಂಧಿ ಮಕ್ಕಳ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಮಗು ಆರೋಗ್ಯವಾಗಿದೆ. ಆದರೆ, ಮಗುವಿನ ಪೋಷಕರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.ನಿವೃತ್ತ ಸೈನಿಕ ಪ್ರಕಾಶ್ ಎಂಬುವರ ಪತ್ನಿಯಾದ ಪರ್ವಿನ್, 2003ರಲ್ಲಿ ಈ ಆಸ್ಪತ್ರೆ ಆರಂಭಿಸಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದು, ಮಗಳು ವೈಟ್‌ಫೀಲ್ಡ್‌ನ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ. ಹರ್ಷ ಬಿ.ಇ ಓದಿದ್ದಾನೆ. ಬಂಧಿತರ ವಿರುದ್ಧ ಮಾನವ ಕಳ್ಳ ಸಾಗಣೆ ಹಾಗೂ ಅಪಹರಣ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.`ಪರ್ವಿನ್ ಅವರ ಆಸ್ಪತ್ರೆ ಗರ್ಭಪಾತ ಕೇಂದ್ರವಾಗಿದೆ. ಆ ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ನವಜಾತ ಶಿಶುಗಳನ್ನು ಮಾರಾಟ ಮಾಡಲಾಗುತ್ತಿತ್ತು' ಎಂದು ಸ್ಥಳೀಯರು ಆರೋಪಿಸಿದ್ದಾರೆ.ಮೀನಾ ಜೈನ್ ಒತ್ತಾಯ: `ಮಕ್ಕಳನ್ನು ಮಾರಾಟ ಮಾಡುವ ಜಾಲ ದೇಶ ವ್ಯಾಪಿ ಕಾರ್ಯನಿರ್ವಹಿಸುತ್ತಿದೆ. ನಗರದಲ್ಲಿ ಇಂತಹ ಪ್ರಕರಣಗಳನ್ನು ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಕಮಿಷನರ್ ಅವರಿಗೆ ಗುರುವಾರ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಕೂಲಂಕಶ ತನಿಖೆ ನಡೆಯಬೇಕು. ಈ ಜಾಲದ ಹಿಂದೆ ಇನ್ನೂ ಯಾರಿದ್ದಾರೆ ಎಂಬುದರ ತನಿಖೆ ನಡೆಯಬೇಕು' ಎಂದು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಮೀನಾ ಜೈನ್ ಒತ್ತಾಯಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry