ಮಂಗಳವಾರ, ನವೆಂಬರ್ 19, 2019
27 °C

ನವಣೆ, ಸಾವೆಯ ಕೋಡುಬಳೆ; ಸಜ್ಜೆ ಉಂಡಿ...

Published:
Updated:

ಹುಬ್ಬಳ್ಳಿ: ಇಲ್ಲಿಯ ಜೆ.ಸಿ. ನಗರದ ಎಸ್‌ಜೆಎಂವಿಎಸ್ ಬಿಬಿಎ ಮಹಿಳಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ಅಪರೂಪದ ಕಾರ್ಯಕ್ರಮ ನಡೆಯಿತು.ಅಲ್ಲಿಯ ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗಲಿಲ್ಲ, ಅವರ ತರಗತಿಯ ಕೋಣೆ ಅಡುಗೆ ಮನೆಯಾಗಿ ಪರಿವರ್ತನೆಗೊಂಡು, ಕಿರುಧಾನ್ಯಗಳಿಂದ ವಿವಿಧ ಪದಾರ್ಥಗಳನ್ನು ಹೇಗೆ ಮಾಡಬಹುದು ಎಂಬುದನ್ನು ಶ್ರೀದೇವಿ ವೇಣುಗೋಪಾಲ ಪ್ರಾತ್ಯಕ್ಷಿಕೆ ನೀಡಿದರು.ನವಣೆ ಹಾಗೂ ಸಾವಿಯಿಂದ ಕೋಡುಬಳೆ, ಸಜ್ಜೆಯಿಂದ ಉಂಡಿ, ರಾಗಿಯ ಜ್ಯೂಸ್, ಸಜ್ಜೆಯ ಕೋಸಂಬರಿ ನಂತರ ನವಣೆಯ ಬಿಸಿ ಬಿಸಿಯಾದ ಬಿಸಿ ಬೇಳೆಬಾತ್ ಮಾಡಿ ಉಣಬಡಿಸಿದರು. ಬಿಬಿಎ ವಿದ್ಯಾರ್ಥಿನಿಯರ ಜೊತೆಗೆ ಗೃಹಿಣಿಯರು ಭಾಗವಹಿಸಿದ್ದರು.`ಮನೆಯಲ್ಲಿ ಸುಲಭವಾಗಿ, ಕಡಿಮೆ ಅವಧಿಯಲ್ಲಿ ಕಿರುಧಾನ್ಯಗಳಿಂದ ಅಡುಗೆ ಮಾಡಬಹುದು. ಮುಖ್ಯವಾಗಿ ಕಿರುಧಾನ್ಯಗಳನ್ನು ನಿರಂತರವಾಗಿ ಬಳಸಿದರೆ ಆರೋಗ್ಯ ಹೆಚ್ಚುತ್ತದೆ. ಇವುಗಳ ಸೇವನೆಯಿಂದ ದಪ್ಪಗಾಗುವುದಿಲ್ಲ' ಎಂದು ಸ್ಪಷ್ಟಪಡಿಸುತ್ತಾರೆ ಶಿಬಿರವನ್ನು ಏರ್ಪಡಿಸಿದ ರ‌್ಯಾಪಿಡ್ ಸಂಸ್ಥೆ ಮುಖ್ಯಸ್ಥೆ ವಾಣಿ ಪುರೋಹಿತ.`ಕಿರುಧಾನ್ಯಗಳಿಂದ ಮಕ್ಕಳಿಗೆ ಅಗತ್ಯವಾದ ಪೌಷ್ಟಿಕಾಂಶ ಸಿಗುತ್ತದೆ. ಮಲಬದ್ಧತೆ, ಮೂಲವ್ಯಾಧಿ ಆಗುವುದಿಲ್ಲ. ಈ ಭಾಗದಲ್ಲಿ ಬೆಳೆಯುವ ಕಿರುಧಾನ್ಯಗಳನ್ನು ಬಳಸಿದರೆ ರೈತರೂ ಹೆಚ್ಚು ಬೆಳೆಯುತ್ತಾರೆ. ಆಗ ಬೆಲೆಯೂ ಕಡಿಮೆ ಆಗುತ್ತದೆ. ಕಿರುಧಾನ್ಯಗಳಿಂದ ಅಡುಗೆ ಮಾಡುವವರಿಗೆ ತರಬೇತಿ ನೀಡುತ್ತೇವೆ. ಅವಳಿನಗರದ ಆಸಕ್ತರು ಸಂಪರ್ಕಿಸಬಹುದು' ಎಂದು ವಾಣಿ  (99801 25685) ಕೋರುತ್ತಾರೆ.`ಕಿರುಧಾನ್ಯಗಳನ್ನು ಇನ್ನು ಮುಂದೆ ಮನೆಯಲ್ಲಿ ಕಡ್ಡಾಯವಾಗಿ ಬಳಸುತ್ತೇವೆ' ಎಂದು ಶಿಬಿರಾರ್ಥಿ ದೀಪಾ ಸೋನಪ್ಪನವರು ವಿಶ್ವಾಸ ವ್ಯಕ್ತಪಡಿಸಿದರು. `ಕಿರುಧಾನ್ಯಗಳ ರುಚಿ ಗೊತ್ತಿರಲಿಲ್ಲ. ಇನ್ನು ಮುಂದೆ ಬಿಡದೆ ಮನೆಯಲ್ಲಿ ಮಾಡಿ ಉಣ್ಣುತ್ತೇವೆ' ಎಂದು ಭರವಸೆಯ ಮಾತನ್ನು ಸುಜಾತಾ ಕಲ್ಲೇಶ ಹೇಳಿದರು. `ಚೆಂದದ ಚಕ್ಕುಲಿ ಮಾಡುವುದನ್ನು ಹೇಳಿಕೊಟ್ಟರು. ಇನ್ನು ಮುಂದೆ ಅಂಗಡಿಗಳ ಚಕ್ಕುಲಿ ಕೊಳ್ಳಲ್ಲ' ಎಂದರು ಬಿಬಿಎ ವಿದ್ಯಾರ್ಥಿನಿ ಸಹನಾ ಕಲ್ಕೇರಿ.`ಮಾರುಕಟ್ಟೆಯಲ್ಲಿ ಕಿರುಧಾನ್ಯಗಳ ಉತ್ಪನ್ನಗಳನ್ನು ಕೊಳ್ಳುತ್ತಿರಲಿಲ್ಲ. ತರಬೇತಿ ಪಡೆದುದಕ್ಕೆ ಮನೆಯಲ್ಲಿಯೇ ಮಾಡುವ ಉಮೇದು ಬಂದಿದೆ' ಎಂದು ಪ್ರಿಯಾ ಕುಮಾರ ತಿಳಿಸಿದರು. `ಇನ್ನು ಮುಂದೆ ಮನೆಗಳಿಗೆ ಬರುವ ಅತಿಥಿಗಳಿಗೆ ಸಜ್ಜೆಯ ಕೋಸಂಬರಿ ಕೊಡುವೆ' ಎಂದರು ಮಧುಮತಿ ಹಾವಳಿ.`ಶಿಬಿರಾರ್ಥಿಗಳಿಗೆ ಕಿರುಧಾನ್ಯಗಳಿಂದ ಅಡುಗೆ ಮಾಡುವ ವಿಧಾನ ಕುರಿತ ಪುಸ್ತಕ ಹಾಗೂ ಪ್ರಮಾಣಪತ್ರವನ್ನು ನೀಡಿದೆವು' ಎಂದು ಕಾಲೇಜಿನ ಪ್ರಾಚಾರ್ಯೆ ಮಂಜುಳಾ ಮ್ಯಾಥ್ಯೂ ಹೇಳಿದರು. ಶಿಬಿರದ ಸಂಯೋಜಕಿ ರಾಜೇಶ್ವರ ಲದ್ದಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)