ಬುಧವಾರ, ಡಿಸೆಂಬರ್ 11, 2019
20 °C

ನವರಸಪುರ ಉತ್ಸವ: ಮಾತು ಮರೆತ ಜಿಲ್ಲಾ ಆಡಳಿತ

ಗಣೇಶ ಚಂದನಶಿವ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವರಸಪುರ ಉತ್ಸವ: ಮಾತು ಮರೆತ ಜಿಲ್ಲಾ ಆಡಳಿತ

ವಿಜಾಪುರ: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಂದಿನಿಂದ (ಜ.2ರಿಂದ) ಮೂರು ದಿನಗಳ ಕಾಲ ನವರಸಪುರ ರಾಷ್ಟ್ರೀಯ ಉತ್ಸವ ನಡೆಯಬೇಕಿತ್ತು. ಆದರೆ, ಜಿಲ್ಲಾ ಆಡಳಿತ ಮಾತು ಮರೆತಿದ್ದರಿಂದ ಉತ್ಸವ ನಡೆಯುತ್ತಿಲ್ಲ.ಐದು ವರ್ಷಗಳ ನಂತರ 2011ರ ಮೇ ತಿಂಗಳಲ್ಲಿ ನವರಸಪುರ ಉತ್ಸವವನ್ನು ಆಚರಿಸಲಾಯಿತು. ವಿಜಾಪುರ ಜಿಲ್ಲೆಯವರೇ ಆಗಿರುವ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಗೋವಿಂದ ಕಾರಜೋಳ ವಿಶೇಷ ಆಸಕ್ತಿ ವಹಿಸಿ ಈ ಉತ್ಸವಕ್ಕೆ ಇದೇ ಮೊದಲ ಬಾರಿಗೆ 50 ಲಕ್ಷ ರೂಪಾಯಿ ಅನುದಾನ ನೀಡಿದ್ದರು. ಸ್ಥಳೀಯರಿಂದ ದೇಣಿಗೆ ಸಂಗ್ರಹಿಸಿ ಜಿಲ್ಲಾ ಆಡಳಿತ ಉತ್ಸವ ಆಚರಿಸಿತ್ತು.ಈ ಉತ್ಸವಕ್ಕೆ ಸಂಗ್ರಹವಾಗಿದ್ದ ಹಣದಲ್ಲಿ ಸುಮಾರು 50 ಲಕ್ಷ ರೂಪಾಯಿಯಷ್ಟು ಹಣ ಉಳಿಸಿ 2012ರ ಸಾಲಿನ ಉತ್ಸವಕ್ಕಾಗಿ ಮೀಸಲಿಡಲಾಗಿದೆ. ಈ ಉಳಿಕೆಯ ಹಣದಲ್ಲಿಯೇ ಜಿಲ್ಲಾ ಆಡಳಿತ ಈ ಬಾರಿಯ ಉತ್ಸವ ಮಾಡಬಹುದಿತ್ತು ಎನ್ನುತ್ತಾರೆ ಸಂಗೀತ ಪ್ರಿಯರು.ಸಚಿವ ಕಾರಜೋಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದಿದ್ದ ನವರಸಪುರ ಉತ್ಸವ ಸಮಿತಿಯ ಸದಸ್ಯರು, ಜಿಲ್ಲೆಯ ಜನಪ್ರತಿನಿಧಿಗಳ ಸಭೆಯಲ್ಲಿ `ಪ್ರತಿ ವರ್ಷ ನಿಗದಿತ ದಿನಾಂಕದಂದು ಉತ್ಸವ  ಆಚರಿಸಬೇಕು. ಅದಕ್ಕೆ ದಿನಾಂಕ ನಿಗದಿ ಮಾಡಬೇಕು~ ಎಂದು ಎಲ್ಲರೂ ಒತ್ತಾಯಿಸಿದ್ದರು. ಕೆಲವೊಬ್ಬರು `ಡಿಸೆಂಬರ್ 31ರಿಂದಲೇ ಈ ಉತ್ಸವ ಆಚರಿಸಬೇಕು.

 

ಹೊಸ ವರ್ಷವನ್ನು ಎಲ್ಲರೂ ಉತ್ಸವದಲ್ಲಿಯೇ ಸ್ವಾಗತಿಸೋಣ~ ಎಂದು, ಇನ್ನು ಹಲವರು `ಜನವರಿ 1ರಿಂದಲೇ ಉತ್ಸವ ಮಾಡಿ~ ಎಂದು ಸಲಹೆ ನೀಡಿದ್ದರು. ಒಟ್ಟಾಭಿಪ್ರಾಯದ ಮೇರೆಗೆ ಪ್ರತಿ ವರ್ಷ ಜನವರಿ 2ರಿಂದ 4ರವರೆಗೆ ಮೂರು ದಿನಗಳ ಕಾಲ ಉತ್ಸವ ನಡೆಸಲು ಆ ಸಭೆ ನಿರ್ಧಾರ ಕೈಗೊಂಡಿತ್ತು.`ನವರಸಪುರ ಉತ್ಸವಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಉತ್ಸವ ಆಚರಿಸಬೇಕು ಎಂದು ಯಾರೂ ಕೇಳಲೇ ಇಲ್ಲ. ಉತ್ಸವ ಸಮಿತಿಯವರೂ ಆ ಬಗ್ಗೆ ಚಕಾರ ಎತ್ತಿಲ್ಲ. ಸುಮಾರು ರೂ. 50 ಲಕ್ಷ ಹಣ ಉಳಿಸಿಕೊಂಡಿರುವ ಉತ್ಸವ ಸಮಿತಿಯಾಗಲಿ, ಜನಪ್ರತಿನಿಧಿಗಳಾಗಲಿ ಈ ವರ್ಷ ಉತ್ಸವ ಆಚರಿಸುವ ಬಗ್ಗೆ ಉತ್ಸುಕತೆ ಹೊಂದಿಲ್ಲ~ ಎಂದು ಸಮಿತಿಯ ಸದಸ್ಯರೊಬ್ಬರು ದೂರುತ್ತಾರೆ.`ನಿಗದಿತ ದಿನಾಂಕದಂದೇ ಉತ್ಸವ ಆಚರಿಸಬೇಕು. ಇದರಿಂದ ಉತ್ಸವ ನೋಡಲು ಬರುವ ದೇಶ- ವಿದೇಶದ ಪ್ರವಾಸಿಗರಿಗೆ ಅನುಕೂಲವಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ಖ್ಯಾತನಾಮ ಕಲಾವಿದರನ್ನು ಆಹ್ವಾನಿಸಲು ಅನುಕೂಲವಾಗುತ್ತದೆ. ತರಾತುರಿಯಲ್ಲಿ ಹಾಗೂ ಅನುಕೂಲಕ್ಕೆ ತಕ್ಕಂತೆ ದಿನಾಂಕ ನಿಗದಿ ಮಾಡಿ ಉತ್ಸವ ಆಚರಿಸಿದರೆ ನಮಗೆ ಬೇಕಾದ ಕಲಾವಿದರು ದೊರೆಯುವುದಿಲ್ಲ. ಹೀಗಾಗಿ ಅದು ಕಾಟಾಚಾರದ ಉತ್ಸವ ಆಗುತ್ತದೆ ಅಷ್ಟೇ~ ಎಂಬುದು ಉತ್ಸವದ ಕಲಾವಿದರ ಆಯ್ಕೆ ಸಮಿತಿ ಸದಸ್ಯರೊಬ್ಬರ ಅಸಮಾಧಾನ.`ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನವರಸಪುರ ಉತ್ಸವವನ್ನು ಕಳೆದ ವರ್ಷ ಆಚರಿಸಲಾಯಿತು. ಇನ್ನು ಪ್ರತಿ ವರ್ಷವೂ ಉತ್ಸವ ಆಚರಿಸಿ, ಎಷ್ಟು ಸಾಧ್ಯವೋ ಅಷ್ಟು ಹೆಚ್ಚಿನ ಅನುದಾನ ಪೂರೈಸಲು ಸರ್ಕಾರ ಬದ್ಧ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವರು ಭರವಸೆ ನೀಡಿದ್ದರು. ಆದರೆ, ಉತ್ಸವ ಸಮಿತಿ ಉತ್ಸವ ಆಚರಿಸುವ ಬಗ್ಗೆ ಚಿಂತನೆಯನ್ನೇ ಮಾಡಿಲ್ಲ~ ಎಂಬುದು ಅವರ ದೂರು.`ಕಳೆದ ಉತ್ಸವದಲ್ಲಿ ಕಲಾವಿದರೊಬ್ಬರು ನಾಲ್ಕು ಹಾಡು ಹೇಳಿ ಐದು ಲಕ್ಷ ರೂಪಾಯಿ ಸಂಭಾವನೆ ಪಡೆದುಕೊಂಡರು. ಪೂರ್ವ ನಿರ್ಧರಿತ ದಿನಾಂಕದಂತೆ ಉತ್ಸವ ಆಚರಿಸದೇ ತರಾತುರಿಯಲ್ಲಿ ಕಾರ್ಯಕ್ರಮ ನಿಗದಿ ಮಾಡಿದರೆ ಇಂಥ ಅವಘಡ ತಪ್ಪಿಸಲು ಆಗುವುದಿಲ್ಲ~ ಎಂಬುದು ಉತ್ಸವ ಸಮಿತಿಯಲ್ಲಿರುವ ಅಧಿಕಾರಿಯೊಬ್ಬರ ಬೇಸರ.ಈ ವರ್ಷ ಉತ್ಸವ ಇಲ್ಲ: `ಬರದ ಹಿನ್ನೆಲೆಯಲ್ಲಿ ಹಂಪಿ ಉತ್ಸವವೂ ಸೇರಿದಂತೆ ಈ ಬಾರಿ ಜಿಲ್ಲಾ ಉತ್ಸವ ಆಚರಿಸದಿರಲು ಸರ್ಕಾರ ನಿರ್ಧರಿಸಿದೆ. ಎಲ್ಲ ಜಿಲ್ಲಾ ಉತ್ಸವಗಳಿಗೂ ಏಕರೂಪ ಅನುಾನ ನೀಡಲು ಸರ್ಕಾರ ಮುಂದಾಗಿದೆ~ ಎಂಬುದು ಮೂಲಗಳ ಹೇಳಿಕೆ.`ಸಾಂಸ್ಕೃತಿಕ ಬರವನ್ನೂ ಸೃಷ್ಟಿಸುವುದು ಬೇಡ. ಸ್ಥಳೀಯ ಕಲಾವಿದರನ್ನು ಬಳಸಿಕೊಂಡು ಲಭ್ಯ ಇರುವ ಉಳಿಕೆಯ ಹಣದ್ಲ್ಲಲೇ ಈ ಬಾರಿ ಉತ್ಸವ ಆಚರಿಸಬಹುದು. ಇದಕ್ಕೆ ಬೇಕಿರುವುದು ಜಿಲ್ಲಾಡಳಿತದ ಇಚ್ಛಾಶಕ್ತಿ~ ಎನ್ನುತ್ತಾರೆ ಸಮಿತಿಯ ಕೆಲ ಸದಸ್ಯರು.

ಪ್ರತಿಕ್ರಿಯಿಸಿ (+)