ನವರಾತ್ರಿ ಉತ್ಸವಕ್ಕೆ ದೌಡ್, ದಾಂಡಿಯಾ ಮೆರುಗು

7

ನವರಾತ್ರಿ ಉತ್ಸವಕ್ಕೆ ದೌಡ್, ದಾಂಡಿಯಾ ಮೆರುಗು

Published:
Updated:

ಬೆಳಗಾವಿ: ನಗರದಲ್ಲೆಗ ನವರಾತ್ರಿ ಉತ್ಸವದ ಸಂಭ್ರಮ. ನಗರದ ರಸ್ತೆಗಳಲ್ಲಿ ಮುಂಜಾನೆ `ದುರ್ಗಾಮಾತಾ ದೌಡ್~ ವಿಜೃಂಭಿಸಿದರೆ, ಸಂಜೆಯಾಗುತ್ತಿದ್ದಂತೆ `ದಾಂಡಿಯಾ~ ನೃತ್ಯ ಮೆರುಗು ನೀಡುತ್ತಿದೆ.ನವರಾತ್ರಿ ಉತ್ಸವ ಆರಂಭವಾದ ದಿನದಿಂದ ನಗರದಲ್ಲಿ ಸಾಂಸ್ಕೃತಿಕ ಸಂಚಲನ ಮೂಡಿದೆ. ಒಂದೆಡೆ ಶಿವ ಪ್ರತಿಷ್ಠಾನ ಸಂಘಟನೆಯು ಒಂಬತ್ತು ದಿನಗಳ ಕಾಲ ನಗರದಲ್ಲಿ ಹಮ್ಮಿಕೊಂಡಿರುವ `ದುರ್ಗಾಮಾತಾ ದೌಡ್~ಗೆ ಜನಸಾಗರ ಹರಿದು ಬರುತ್ತಿದ್ದರೆ, ಇನ್ನೊಂದೆಡೆ ವಿವಿಧ ಬಡಾವಣೆಗಳಲ್ಲಿ ಏರ್ಪಡಿಸಿರುವ `ದಾಂಡಿಯಾ~ ನೃತ್ಯದಲ್ಲಿ ಕುಟುಂಬ ಸಮೇತ ಪಾಲ್ಗೊಳ್ಳುತ್ತಿರುವ ಜನ. ಜೊತೆಯಲ್ಲೇ ವಿಜಯ ದಶಮಿ (ಇದೇ 24) ದಿನದಂದು ದುರ್ಗಾದೇವಿ ರಥಯಾತ್ರೆ ನಡೆಸಲು ಭರದ ಸಿದ್ಧತೆ ನಡೆಯುತ್ತಿದೆ.ನವರಾತ್ರಿ ಅಂಗವಾಗಿ ಹಮ್ಮಿಕೊಂಡಿದ್ದ ದುರ್ಗಾಮಾತಾ ದೌಡ್‌ನಲ್ಲಿ ಪಾಲ್ಗೊಳ್ಳಲು ನಗರದ ವಿವಿಧ ಗಲ್ಲಿಯ ಜನರು ನಸುಕಿನಲ್ಲೇ ಎದ್ದು ಬರುತ್ತಿದ್ದಾರೆ. ಶುಭ್ರ ಬಟ್ಟೆ ಧರಿಸಿ, ಬಿಳಿ ಟೊಪ್ಪಿ ಹಾಕಿಕೊಂಡು, ಸೊಂಟಕ್ಕೆ ಕೇಸರಿ ಶಾಲ್ ಸುತ್ತಿಕೊಂಡು ಓಟದಲ್ಲಿ ಪಾಲ್ಗೊಳ್ಳುತ್ತಿದ್ದರು. `ದೌಡ್~ ಸಂಚರಿಸಲಿರುವ ರಸ್ತೆಗಳಲ್ಲಿ ಮಹಿಳೆಯರು ನಸುಕಿನಲ್ಲಿಯೇ ತಮ್ಮ ಮನೆಗಳ ಮುಂದೆ ರಸ್ತೆ ತೊಳೆದು ರಂಗೋಲಿ ಹಾಕಿ ಸಿಂಗರಿಸುತ್ತಿದ್ದಾರೆ. ಕೆಲವೆಡೆ ಪುಷ್ಪಗಳಿಂದ ಅಲಂಕಾರ ಮಾಡಿ ಭಕ್ತಿ ಮೆರೆಯಲಾಗುತ್ತಿದೆ.ಯುವಕ- ಯುವತಿಯರು ಕೇಸರಿ ಧ್ವಜ ಹಿಡಿದು ಓಡುತ್ತಿದ್ದರೆ, ಮಹಿಳೆಯರು, ವೃದ್ಧರೂ ಹೆಜ್ಜೆ ಹಾಕುತ್ತಿದ್ದಾರೆ. ಭಕ್ತಿ ಗೀತೆ ಹಾಗೂ ದೇಶ ಭಕ್ತಿ ಗೀತೆಗಳನ್ನು ಭಕ್ತರು ಮುಂಜಾನೆ ಹಾಡುತ್ತ ರಸ್ತೆಯುದ್ದಕ್ಕೂ ಹೋಗುವುದನ್ನು ನೋಡಿದರೆ, ಮನಸ್ಸಿನಲ್ಲಿ ಹುಮ್ಮಸ್ಸು ಮೂಡುತ್ತದೆ. ಯುವಕರಲ್ಲಿ ರಾಷ್ಟ್ರ ಪ್ರೇಮ ಭಾವನೆ ಬೆಳೆಸುವುದು ಹಾಗೂ ಹಿಂದೂ ಸಂಸ್ಕೃತಿ ರಕ್ಷಣೆಗಾಗಿ ಹಮ್ಮಿಕೊಂಡಿರುವ ದುರ್ಗಾಮಾತಾ ಓಟವು ನವರಾತ್ರಿ ಉತ್ಸವದ ಸಂಭ್ರಮವನ್ನು ಹೆಚ್ಚಿಸಿದೆ.ದಾಂಡಿಯಾ ವೈಭವ: ನವರಾತ್ರಿ ಉತ್ಸವಕ್ಕೆ ವಿಶೇಷ ಮೆರುಗು ನೀಡುತ್ತಿರುವುದು `ದಾಂಡಿಯಾ~ ನೃತ್ಯ. ಹಬ್ಬದ ಮೊದಲ ದಿನದಿಂದಲೂ ನಗರದ ಹಲವು ಬಡಾವಣೆಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ `ದಾಂಡಿಯಾ~ ನೃತ್ಯ ಗಮನ ಸೆಳೆಯುತ್ತಿದೆ.ಸ್ಥಳೀಯ ನಿವಾಸಿಗಳು ಸೇರಿಕೊಂಡು ಹಮ್ಮಿಕೊಂಡಿರುವ ದಾಂಡಿಯಾ ನೃತ್ಯದಲ್ಲಿ ಮಕ್ಕಳು, ಮಹಿಳೆಯರು ಎಂಬ ಭೇದ- ಭಾವ ಇಲ್ಲದೇ ಎಲ್ಲರೂ ಸಂಭ್ರಮದಿಂದ ಪಾಲ್ಗೊಳ್ಳುತ್ತಿದ್ದಾರೆ. ಸಂಜೆಯಾಗುತ್ತಿದ್ದಂತೆ ದಾಂಡಿಯಾ ನೃತ್ಯದ ನಶೆ ಏರತೊಡಗುತ್ತದೆ. ಕೆಲವೆಡೆ ರಾತ್ರಿ 12 ಗಂಟೆಯವರೆಗೂ ದಾಂಡಿಯಾ ಮುಂದುವರಿದಿರುತ್ತದೆ.ಲಯನ್ಸ್ ಕ್ಲಬ್ ಆಫ್ ಶಹಾಪುರ ನಗರದ ಮಿಲೇನಿಯಂ ಗಾರ್ಡನ್‌ನಲ್ಲಿ ಹಮ್ಮಿಕೊಂಡಿರುವ `ದಾಂಡಿಯಾ ನೃತ್ಯ~ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಸಂಜೆಯಾಗುತ್ತಿದ್ದಂತೆ ಮಿಲೇನಿಯಂ ಗಾರ್ಡನ್ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತದೆ. ಧ್ವನಿ ವರ್ಧಕಗಳಿಂದ ತೇಲಿ ಬರುವ ಹಾಡಿಗೆ ಮಹಿಳೆಯರು, ಮಕ್ಕಳು ಮೈಮರೆತು ಹೆಜ್ಜೆ ಹಾಕುತ್ತಾರೆ. ತಡರಾತ್ರಿಯವರೆಗೂ ದಾಂಡಿಯಾ ನೃತ್ಯ ವೈಭವ ಕಾಣಬಹುದು. ಗುಜರಾತ ಭವನ, ಮಹಾದ್ವಾರ ರಸ್ತೆ ಸೇರಿದಂತೆ ಹಲವೆಡೆ ನಿತ್ಯ ಸಂಜೆ ದಾಂಡಿಯಾ ನೃತ್ಯ ನಡೆಯುತ್ತಿವೆ.ವೈಭವದ ರಥೋತ್ಸವ: ನಗರದ ಕ್ಯಾಂಪ್ ಪ್ರದೇಶದಲ್ಲಿರುವ ಮಾರಿ ಅಮ್ಮನ್ ದೇವಿ ಮಂದಿರದಲ್ಲಿ ಕೆ.ಟಿ. ಪೂಜಾರಿ ಕುಟುಂಬದವರು 1901ರಲ್ಲಿ ಬೆಳಗಾವಿಯಲ್ಲೇ ಮೊದಲ ಬಾರಿಗೆ ವಿಜಯ ದಶಮಿ ರಥೋತ್ಸವವನ್ನು ಆರಂಭಿಸಿದರು. ವಿಜಯ ದಶಮಿ ದಿನ ವೈಭವದ ಮೆರವಣಿಗೆಯನ್ನೂ ಹಮ್ಮಿಕೊಳ್ಳುವ ಸಾಂಪ್ರದಾಯಕ್ಕೆ ನಾಂದಿ ಹಾಡಿದ್ದರು.ಕ್ಯಾಂಪ್‌ನ ಮಾರಿ ಅಮ್ಮನ್ ದೇವಿ ಮಂದಿರದಲ್ಲಿ 111ನೇ ದುರ್ಗಾದೇವಿ ದಸರಾ ಮಹೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯುತ್ತಿದೆ.  24ರಂದು ರಥೋತ್ಸವ ಇದೆ. ದುರ್ಗಾದೇವಿ ರಥದ ಮೆರವಣಿಗೆಯಲ್ಲಿ ಸುಮಾರು 15 ಕಲಾವಿದರು ವಿವಿಧ ಮುಖವಾಡಗಳನ್ನು ಧರಿಸಿ `ಮಹಿಷಾಸುರ ಮರ್ದನ~ ಕಥಾನಕದ ನೃತ್ಯವನ್ನು ಪ್ರದರ್ಶಿಸಲಿದ್ದಾರೆ. ಇದರ ಜೊತೆಯಲ್ಲಿಯೇ ಮೀನು ಮಾರುಕಟ್ಟೆ, ಬಿ. ಮದರಾ ಸ್ಟ್ರೀಟ್, ತೆಲುಗು ಕಾಲೊನಿ ಹಾಗೂ ಆರ್.ಎಲ್. ಲೈನ್‌ನ ರಥಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಐದು ರಥಗಳು ಒಂದರ ಹಿಂದೆ ಒಂದು ಸಂಚರಿಸಲಿದೆ. ಅಂದು ಸಂಜೆ ಜ್ಯೋತಿ ಕಾಲೇಜು ಮೈದಾನದಲ್ಲಿ ನಡೆಯುವ ಸೀಮೋಲ್ಲಂಘನಾ ಪೂಜೆಯ ಬಳಿಕ ಸಾವಿರಾರು ಭಕ್ತರು ಪರಸ್ಪರ `ಬನ್ನಿ~ ನೀಡಿ ಹಬ್ಬದ ಶುಭಾಷಯವನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry