ನವರಾತ್ರಿ ಭೋಜನ ಜೊತೆಗೊಂದು ಬಾಗಿನ

7

ನವರಾತ್ರಿ ಭೋಜನ ಜೊತೆಗೊಂದು ಬಾಗಿನ

Published:
Updated:
ನವರಾತ್ರಿ ಭೋಜನ ಜೊತೆಗೊಂದು ಬಾಗಿನ

ಹೋಟೆಲ್‌ನ ನಾಲ್ಕನೇ ಮಹಡಿ. ಆರು ಮೆಟ್ಟಿಲುಗಳಲ್ಲಿ ಗೊಂಬೆಗಳನ್ನು ಕೂರಿಸುವ ಗಡಿಬಿಡಿಯಲ್ಲಿದ್ದರು ಸಿಬ್ಬಂದಿ. ಒಂದಷ್ಟು ಮೇಜುಗಳು ಅದಾಗಲೇ ಭರ್ತಿಯಾಗಿದ್ದವು. ಬಫೆ ಸರತಿಯಲ್ಲಿ ಮತ್ತೊಂದಷ್ಟು ಮಂದಿ...`ಇದು ನಮ್ಮೂರಿನ ಮಾವಿನಕಾಯಿ ಪುಳಿಮುಂಚಿ ಮಾರಾಯ್ರೆ~ ಎಂದು ಆ ಜೋಡಿ ಮಾವಿನ ಕಾಯಿ ಮೆಣಸ್ಕಾಯಿಯನ್ನು ನಾಲ್ಕು ಬಾರಿ ಕಪ್ ತುಂಬಾ ತುಂಬಿಸಿಕೊಂಡು ಚಪ್ಪರಿಸಿತು. ಸ್ಟಾರ್ಟರ್‌ನಿಂದ ಆರಂಭವಾಗಬೇಕಿದ್ದ ಅವರ ಊಟ ಶುರುವಾದದ್ದು ಮೆಣಸ್ಕಾಯಿಯಿಂದ!ಇನ್‌ಫೆಂಟ್ರಿ ರಸ್ತೆಯಲ್ಲಿರುವ ಶೆವ್ರಾನ್ ಹೋಟೆಲ್‌ನ ನಾಲ್ಕನೇ ಮಹಡಿಯಲ್ಲಿರುವ `ಸೌತ್‌ಇಂಡೀಸ್~ನಲ್ಲಿ ನಡೆದಿರುವ `ನವರಾತ್ರಿ ಭೋಜನೋತ್ಸವ~ದ (ಫ್ಲೇವರಾತ್ರಿ ಎಂಬುದು ಅದಕ್ಕಿಟ್ಟ ಹೆಸರು) ಮೊದಲ ದಿನವಾದ ಮಂಗಳವಾರ ಕಂಡುಬಂದ ದೃಶ್ಯಗಳಿವು.ಹಬ್ಬದ ಆಚರಣೆಯೆಂದರೆ ಅರ್ಥವಾಗದ ಮೆನು ಅಲ್ಲ, ಸಂಸ್ಕೃತಿ ಮತ್ತು ಪ್ರಾದೇಶಿಕತೆಯೊಂದಿಗೆ ಬೆಸೆದ ಸೊಗಡಿನ ಭೋಜನ ಎಂಬ ಮಂತ್ರದೊಂದಿಗೆ `ಸೌತ್‌ಇಂಡೀಸ್~ ನವರಾತ್ರಿಯ ಮೆನು ಸಿದ್ಧಪಡಿಸಿದೆ. ಇಂದು ಸವಿದ ರಸಂ ಆಗಲಿ ಸಾಂಬಾರ್ ಆಗಲಿ, ಸಿಹಿ ತಿನಿಸೇ ಆಗಲಿ ಒಂಬತ್ತು ದಿನಗಳ ಭೋಜನೋತ್ಸವದಲ್ಲಿ ಮರುಕಳಿಸದಿರುವಂತೆ ಕಾಳಜಿ ವಹಿಸಿರುವುದು ಇಲ್ಲಿನ ವಿಶೇಷ.ಮಂಗಳವಾರದ ಮೆನುವಿನಲ್ಲಿ ಮಲ್ಲಿ ರಸಂ, ಪರೋಟ, ಆಪಂ, ಚಟ್ನಿಪುಡಿ ದೋಸೆ, ತರಕಾರಿ ಪದಾರ್ಥ, ಮಾವಿನಕಾಯಿ ಮೆಣಸ್ಕಾಯಿ, ಟೊಮೆಟೊ ಪಪ್ಪು, ಪರಿಚ ಕರಿ, ಧನಿಯಾ ರೈಸ್ ಮುಖ್ಯವಾಗಿದ್ದವು. ಸ್ಟಾರ್ಟರ್ ಆಗಿ ನೀಡಿದ ಹಳದಿ ಮೆಣಸು (ಬಜ್ಜಿ ಮೆಣಸು) ಪಕೋಡ ಮತ್ತು ಕ್ಯಾಬೇಜ್ ಪಕೋಡಗಳ ರುಚಿ ಹೆಚ್ಚಿದ್ದು ಸೋರೆಕಾಯಿ ಚಟ್ನಿ ಮತ್ತು ಕಾಯಿಯ ಬಿಳಿ ಚಟ್ನಿಯೊಂದಿಗೆ ಸವಿದಾಗಲೇ. ಅದರ ಬೆನ್ನಲ್ಲೇ ಬಂದ ಸ್ವಲ್ಪ ಖಾರದ ಮಜ್ಜಿಗೆ ಹೊಸ ರುಚಿ ಸವಿಯಲು ನಮ್ಮನ್ನು ಸಜ್ಜುಗೊಳಿಸುವಂತಿತ್ತು. ತುಪ್ಪ, ಹಪ್ಪಳ, ಚಟ್ನಿ ಪುಡಿ, ಉಪ್ಪಿನಕಾಯಿ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದ ವೈವಿಧ್ಯತೆಯನ್ನು ಪರಿಚಯಿಸುವಂತಿವೆ.“ಇಂತಹ ಭಾರೀ ಭೋಜನ `ಸುಖಾಂತ್ಯ~ ಕಾಣಬೇಕಾದರೆ ಸಿಹಿ, ಡೆಸರ್ಟ್ ಇರಲೇಬೇಕಲ್ವೆ” ಅಂತಂದ ವ್ಯವಸ್ಥಾಪಕ ಶ್ರೀನಿವಾಸ್ ಸಿಹಿ, ಡೆಸರ್ಟ್ ಇಟ್ಟಿರುವ ಟೇಬಲ್ ತೋರಿಸಿದರು. ಒಣಹಣ್ಣುಗಳಿಂದ ಸಮೃದ್ಧವಾದ ಕೇಸರಿಭಾತ್ ಮತ್ತು ಸಕ್ಕರೆ ಬದಲು ಬೆಲ್ಲ ಹಾಕಿ ಮಾಡಿದ ಶಾವಿಗೆ ಪಾಯಸ ಮಂಗಳವಾರದ ವಿಶೇಷವಾಗಿತ್ತು. `ಇಲ್ಲಿ ಐಸ್‌ಕ್ರೀಂ ಕೂಡ ಇಟ್ಟಿದ್ದೇವೆ. ಅದು ದಕ್ಷಿಣದ ರಾಜ್ಯದ ವೈಶಿಷ್ಟ್ಯ ಅಲ್ಲವಾದರೂ ಅದು ಫ್ಯಾಷನ್ ಅಲ್ವಾ. ಬೇಕಾದವರು ತಗೋತಾರೆ~ ಅಂತ ಸಮಜಾಯಿಷಿ ಕೊಟ್ಟರು ಬಾಣಸಿಗ ಮನು ನಾಯರ್.ಖಾಲಿಯಾಗುತ್ತಲೇ ಗಾಜಿನ ಲೋಟಕ್ಕೆ ನೀರು ತುಂಬುವ ಹುಡುಗನಿಂದ ಹಿಡಿದು ಆ ಹೋಟೆಲ್‌ನ ನಾಲ್ಕೂ ಮೂಲೆಗಳಲ್ಲಿ ಗ್ರಾಹಕರನ್ನು ವಿಚಾರಿಸಿಕೊಂಡು ಓಡಾಡುತ್ತಲೇ ಇರುವ ವ್ಯವಸ್ಥಾಪಕರವರೆಗೆ ಎಲ್ಲರ ನಗುಮೊಗದ ಸೇವೆ ದಂಗಾಗಿಸುತ್ತದೆ. ಊಟ ಮುಗಿಯಿತು ಎನ್ನುವಷ್ಟರಲ್ಲಿ ಮನು ಮತ್ತೆ ಬಂದು ವಿಚಾರಿಸುತ್ತಾರೆ: `ಯಾವ ಐಟಂ ಇಷ್ಟವಾಯಿತು? ಹೇಗಿದೆ ನಮ್ಮ ಹೋಟೆಲ್ ಊಟ? ನಿಜಕ್ಕೂ ಊಟವನ್ನು ಆನಂದಿಸಿದಿರಾ?~... ಮತ್ತದೇ ನಗು...ಸರಿ ಹಾಗಿದ್ದರೆ ನಾವು ಹೊರಡುತ್ತೇವೆ ಎಂದು ಎದ್ದರೆ ಸೋಪಾನಗಳನ್ನು ಅಲಂಕರಿಸಿರುವ ಗೊಂಬೆಗಳು ಮತ್ತೊಮ್ಮೆ ಹಾಯ್ ಅನ್ನುತ್ತವೆ. ಪಕ್ಕದಲ್ಲೇ ಐದು ತಟ್ಟೆಗಳಲ್ಲಿ ಬಣ್ಣಬಣ್ಣದ ಗಾಜಿನ ಬಳೆ, ಮಲ್ಲಿಗೆ ಹೂವು, ವೀಳ್ಯದೆಲೆ, ಅಡಿಕೆ ಹಾಗೂ ಅರಿಸಿನ ಕುಂಕುಮದ ಪೊಟ್ಟಣಗಳು, `ಬನ್ನಿ, ಇದೇ ನಮ್ಮ ಬಾಗಿನ~ ಎಂದು ಕರೆಯುತ್ತವೆ. ಅವನ್ನು ತೆಗೆದುಕೊಂಡರೇ ನವರಾತ್ರಿ ಭೋಜನ ಸಂಪನ್ನವಾಗೋದು ಅಂತಾರೆ ಶ್ರೀನಿವಾಸನ್.ಬರೋಬ್ಬರಿ ಹತ್ತು ದಿನಗಳ ಹಬ್ಬದ ಸರಮಾಲೆಯನ್ನೇ ಪೋಣಿಸಿಕೊಂಡು, ತುಂತುರು ಮಳೆಯೊಂದಿಗೆ ಬರುವ ನವರಾತ್ರಿ ಹಬ್ಬವನ್ನು ಹೋಟೆಲ್ ಊಟದೊಂದಿಗೆ ಆನಂದಿಸುವ ಲೆಕ್ಕಾಚಾರ ನಿಮ್ಮದಾದರೆ ಸೌತ್‌ಇಂಡೀಸ್ ಅತ್ಯುತ್ತಮ ಆಯ್ಕೆಯಾಗುವುದರಲ್ಲಿ ಸಂದೇಹವೇ ಇಲ್ಲ. ಬಫೆ ದರವೂ ಜೇಬಿಗೆ ಭಾರ ಅನಿಸದು. ಎಲ್ಲಾ ತೆರಿಗೆಗಳೂ ಸೇರಿ ರೂ.295.

ಹಾಗಿದ್ದರೆ ಸೌತ್ ಇಂಡೀಸ್‌ನ ಭೋಜನವನ್ನು ಆಸ್ವಾದಿಸಿ ಬನ್ನಿ. ವಿಳಾಸ: ಹೋಟೆಲ್ ಚೆವ್ರಾನ್, ಪೊಲೀಸ್ ಆಯುಕ್ತರ ಕಚೇರಿ ಮುಂಭಾಗ, ಇನ್‌ಫೆಂಟ್ರಿ ರಸ್ತೆ; ಸಂಪರ್ಕಕ್ಕೆ: 4163 6362.ಇಂದಿರಾನಗರದ 100 ಅಡಿ ರಸ್ತೆಯಲ್ಲಿರುವ ಶಾಖೆಗೆ ಹೋಗುವುದಾದರೆ 4163 6363ಗೆ ಕರೆ ಮಾಡಿ ಆಸನ ಕಾದಿರಿಸಬಹುದು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry