ನವವಿವಾಹಿತೆ ಸೇರಿ ಮೂವರ ಆತ್ಮಹತ್ಯೆ

7

ನವವಿವಾಹಿತೆ ಸೇರಿ ಮೂವರ ಆತ್ಮಹತ್ಯೆ

Published:
Updated:

ಬೆಂಗಳೂರು: ಸಂಪಂಗಿರಾಮನಗರ ಸಮೀಪದ ಕರಗಪ್ಪ ಗಾರ್ಡನ್‌ನಲ್ಲಿ ಮಂಗಳವಾರ ರಾತ್ರಿ ನವವಿವಾಹಿತೆ ನೇಣು ಹಾಕಿಕೊಂಡಿದ್ದು, ಲಗ್ಗೆರೆ ಹಾಗೂ ರಾಜಾಜಿನಗರದಲ್ಲಿ ಬುಧವಾರ ಕಾಲ್‌ಸೆಂಟರ್ ಉದ್ಯೋಗಿ ಸೇರಿದಂತೆ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ರಾಜಾಜಿನಗರ ಆರನೇ ಹಂತದ ಹತ್ತನೇ `ಜಿ' ಅಡ್ಡರಸ್ತೆ ನಿವಾಸಿ ಮಂಜುಳಾ ಎಂಬುವರ ಪುತ್ರ ನಂದಕುಮಾರ್ (24) ಬುಧವಾರ ನಸುಕಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಬಿ.ಕಾಂ ಪದವೀಧರರಾಗಿದ್ದ ನಂದಕುಮಾರ್, ದೊಮ್ಮಲೂರಿನ ಕಾಲ್‌ಸೆಂಟರ್ ಒಂದರಲ್ಲಿ ಉದ್ಯೋಗಿಯಾಗಿದ್ದರು. ಕುಟುಂಬ ಸದಸ್ಯರೊಂದಿಗೆ ರಾತ್ರಿ ಊಟ ಮಾಡಿದ ನಂತರ ಪ್ರತ್ಯೇಕ ಕೊಠಡಿಯಲ್ಲಿ ಮಲಗಿದ್ದ ಅವರು, ಆ ಕೊಠಡಿಯಲ್ಲೇ ಬೆಳಗಿನ ಜಾವ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು    ತಿಳಿಸಿದ್ದಾರೆ.`ಮಗ, ಷೇರು ವ್ಯವಹಾರದಲ್ಲಿ ಹಣ ಹೂಡಿದ್ದ. ವ್ಯವಹಾರದಲ್ಲಿ ನಷ್ಟ ಅನುಭವಿಸಿದ ಕಾರಣಕ್ಕೆ ಮನನೊಂದು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮಂಜುಳಾ ಹೇಳಿಕೆ ಕೊಟ್ಟಿದ್ದಾರೆ' ಎಂದು ಪೊಲೀಸರು ಹೇಳಿದ್ದಾರೆ. ಮಾಗಡಿ ರಸ್ತೆ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.ಮತ್ತೊಂದು ಪ್ರಕರಣ: ಕರಗಪ್ಪ ಗಾರ್ಡನ್ 20ನೇ ಅಡ್ಡರಸ್ತೆ ನಿವಾಸಿ ಮೋಹನ್‌ಕುಮಾರ್ ಎಂಬುವರ ಪತ್ನಿ ಶೋಭಾ (19) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಮೋಹನ್‌ಕುಮಾರ್, ಗಾರೆ ಕೆಲಸ ಮಾಡುತ್ತಾರೆ. 25 ದಿನಗಳ ಹಿಂದೆಯಷ್ಟೇ ವಿವಾಹವಾಗಿದ್ದ ಶೋಭಾ ಅವರು ಪತಿ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲೇ ನೇಣು ಹಾಕಿಕೊಂಡಿದ್ದಾರೆ.

ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.ಅಳಿಯ ಮತ್ತು ಮಗಳು ಅನ್ಯೋನ್ಯವಾಗಿದ್ದರು. ಮಗಳು ಏಕೆ ಆತ್ಮಹತ್ಯೆ ಮಾಡಿಕೊಂಡಳು ಎಂಬುದು ಗೊತ್ತಿಲ್ಲ ಎಂದು ಮೃತರ ತಂದೆ ಜೀವನಪ್ಪ ಹೇಳಿಕೆ ಕೊಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಂಪಂಗಿರಾಮನಗರ ಠಾಣೆಯಲ್ಲಿ ದೂರು ದಾಖಲಾಗಿದೆ.ರಾಜಗೋಪಾಲನಗರ: ಲಗ್ಗೆರೆ ಮೂರನೇ ಅಡ್ಡರಸ್ತೆ ನಿವಾಸಿ ಮಂಜುನಾಥ್ (22) ಎಂಬುವರು ಮಂಗಳವಾರ ಬೆಳಿಗ್ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಗಾರೆ ಕೆಲಸ ಮಾಡುತ್ತಿದ್ದ ಮಂಜುನಾಥ್, ಒಂದೂವರೆ ವರ್ಷದ ಹಿಂದೆ ಪುಷ್ಪಾ ಎಂಬುವರನ್ನು ಮದುವೆಯಾಗಿದ್ದರು. ದಂಪತಿಗೆ ಒಂದೂವರೆ ತಿಂಗಳ ಮಗುವಿದೆ. ಪತ್ನಿ ತವರಿಗೆ ಹೋಗಿದ್ದು, ಮಂಜುನಾಥ್ ಮತ್ತು ಅವರ ತಾಯಿ ಮರಿಯಮ್ಮ ಮನೆಯಲ್ಲಿದ್ದರು.ಕೂಲಿ ಕೆಲಸ ಮಾಡುವ ಮರಿಯಮ್ಮ, ಬೆಳಿಗ್ಗೆ ಏಳು ಗಂಟೆ ಸುಮಾರಿಗೆ ಕೆಲಸಕ್ಕೆ ತೆರಳಿದರು. ಬಳಿಕ ಮಂಜುನಾಥ್ ನೇಣಿಗೆ ಶರಣಾಗಿದ್ದಾರೆ. ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಅವರು ಪತ್ರ ಬರೆದಿಟ್ಟಿದ್ದು, ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry