ನವಿಲು ಕಥೆ ಹೇಳುತಿದೆ...

7

ನವಿಲು ಕಥೆ ಹೇಳುತಿದೆ...

Published:
Updated:

`ಬೆಳಕಿನ ಮಾತನಾಡುತ್ತ ಕತ್ತಲಲ್ಲಿ ಕಳೆದುಹೋದವಳು ಹ್ಯಾಲೋಜನ್ ದೀಪದ ಸುತ್ತ ಸತ್ತ ಪತಂಗವಾಗಿದ್ದಾಳೆ~. ಇದು ವೆಂಕಟ್ರಮಣ ಭಟ್ ಅವರ ಒಂದು ಬಿಡಿ ಸಾಲು. ವರ್ತಮಾನದ ಅಸ್ತವ್ಯಸ್ತ ಬದುಕಿನ ತಲ್ಲಣ ಕಟ್ಟಿಕೊಡುವಷ್ಟು ಪರಿಣಾಮಕಾರಿಯಾದ ಇಂಥ ಬಿಡಿ ಸಾಲುಗಳನ್ನು ಭಟ್ಟರು ಹಾಗೇ ಸುಮ್ಮನೆ ಎನ್ನುವಷ್ಟು ಸರಳವಾಗಿ ಪೋಣಿಸುತ್ತಾರೆ.ಅವರ ಬ್ಲಾಗ್- `ರೂಪಾಂತರ~ (roopantara.blogspot.in). ಮನದ ಮೂಲೆಯೊಳಗೆ ಬಚ್ಚಿಟ್ಟ ಹಂಬಲಗಳ ಬೆನ್ನುಹತ್ತಿ ಎನ್ನುವುದು ಅದರ ಅಡಿಬರಹ.

`ರೂಪಾಂತರ~ ತಲೆಬರಹದೊಂದಿಗೇ ಹಾರಲು ಮರೆತಂತೆ ಕಾಣುವ ನವಿಲೊಂದರ ಚಿತ್ರವಿದೆ.ಮುಖಕ್ಕೆ ವಿಷಾದದ ತುಣುಕೊಂದನ್ನು ಲೇಪಿಸಿಕೊಂಡಂತೆ ಕಾಣುವ ಈ ನವಿಲು ಯಾವುದೇ ಕ್ಷಣದಲ್ಲಿ ತನ್ನ ಹಾರುವ ಸಹಜತೆಯನ್ನು ಮರಳಿಪಡೆಯಬಹುದಾಗಿದೆ. ಹಾಗೆ ಹಾರುವ ಮುನ್ನದ ವಿರಾಮದಲ್ಲಿ, ನವಿಲೇ ಒಂದಷ್ಟು ಕಥೆಗಳನ್ನು ಹೇಳಿದಂತೆ, ಆ ಬರಹಗಳೇ `ರೂಪಾಂತರ~ದಲ್ಲಿ ದಾಖಲಾದಂತೆ ಯಾರಿಗಾದರೂ ಅನ್ನಿಸಿದರೆ ಅದಕ್ಕೆ ಬ್ಲಾಗ್‌ನ ಮೋಹಕತೆಯೇ ಕಾರಣ.ವೆಂಕಟ್ರಮಣರ ಬ್ಲಾಗಿನಲ್ಲಿನ ಬರಹಗಳದ್ದು ಒಂದು ತೂಕವಾದರೆ, ಚಿತ್ರಗಳದ್ದು ಎರಡು ತೂಕ. ಆ ಚಿತ್ರಗಳೇ ಬ್ಲಾಗಿಗೆ ಜೀವಕಳೆ ತಂದುಕೊಟ್ಟಿವೆ. ಜಲವರ್ಣದ ಚಿತ್ತಾರಗಳು, ರೇಖೆಗಳಲ್ಲಿ ಮೂಡಿದ ಮುಖಗಳು ಸೇರಿಕೊಂಡ `ರೂಪಾಂತರ~ದ ಸಾಧ್ಯತೆಗಳನ್ನು ಹಿಗ್ಗಲಿಸಿವೆ.ಭಟ್ಟರ ಬ್ಲಾಗ್‌ನ ಮೆನು ಸಮೃದ್ಧವಾಗಿದೆ. ಚಿತ್ರ, ಕವಿತೆ, ಪದಸಾಲು, ಹಬ್ಬಲಿಗೆ, ಆಡುಮಳೆ, ಅತಿಥಿ ಬರಹ, ಹೈಕು- ಹೀಗೆ. ಎಲ್ಲಿ ಇಣುಕಿದರೂ ಅಲ್ಲಿ ಭಾವನೆಗಳ ನೆರವಿ ಕಂಡು ಮನಸ್ಸು ಒದ್ದೆಯಾಗದಿರದು.ಒಂದೆರಡು ಪದಸಾಲು ಹೆಕ್ಕಿಕೊಳ್ಳಿ- `ಗೋಡೆಯ ಮೇಲಿನ ಚಿತ್ರಕೆಲ್ಲ ಚೌಕಟ್ಟು, ನಾಕಂಡ ಕನಸುಗಳು ಅದರೊಳಗೆ ಬಂಧಿಯಾಗಿವೆ~. `ಎಲ್ಲರೆದುರೂ ಸಂಭಾವಿತನಾಗುವ ಹೊತ್ತಿಗೆ ಕನ್ನಡಿಯಲ್ಲಿ ಕಾಣುವ ಮುಖ ಬೇರೆಯದೇ ಆಗಿತ್ತು~. `ಭಟ್ಟರ ಜೋರುಮಂತ್ರ ಅರ್ಥವಾಗದೇ ಮದುಮಗಳ ಜರಿಸೀರೆಯ ಗೊಂಬೆಗಳು ತುಸು ಬೆದರಿವೆ~.

 

`ಕವಡೆಹಕ್ಕಿ ಕಚ್ಚಿಕೊಂಡ ಒಂದು ಕಂಬಳಿಹುಳದ ಮೈಗೆ ನಸುಗೆಂಪು ಮ್ಯಾಂಗನೀಸು ಧೂಳಿದೆ~. `ಭತ್ತ ತಿಂದು ಹೋಗಲು ಬಂದ ಹಕ್ಕಿಗಳಿಗೆ ಬೀಜದ ಪೇಟೆಂಟಿನ ಬಗ್ಗೆ ಗೊತ್ತಿದ್ದಂತಿಲ್ಲ~. `ಊರೂರು ಸುತ್ತುವ ಲಾರಿಗೆ ಯಾವ ಊರಿನ ಹೆಸರೂ ಸರಿ ನೆನಪಿಲ್ಲ, ಸುತ್ತಿದೂರಿನ ನೆನಪಿಗೆ ಸವೆದ ಟೈರುಗಳಿವೆ~- ಈ ಒಂದೊಂದು ಸಾಲು ಬೇರೆಯದೇ ಕಥೆಯನ್ನು ಹೇಳುವಂತೆ ಇಲ್ಲವೇ?ಬ್ಲಾಗುಗಳಲ್ಲಿ ಸಾಮಾನ್ಯವಾದ ನೆನಪುಗಳ ಮೆರವಣಿಗೆ, ಆತ್ಮಕಥಾನಕದ ಗುಣ `ರೂಪಾಂತರ~ದಲ್ಲೂ ಇದೆ. ಒಂದು ತುಣುಕು ಇಲ್ಲಿದೆ: “ನಮ್ಮ ಊರೇ ಹಾಗೆ ಮೈಲುದೂರದಲ್ಲಿ ದ್ವೀಪಗಳ ಹಾಗೆ ಒಂಟಿಮನೆಗಳು, ನಮ್ಮ ಊರಷ್ಟೇ ಅಲ್ಲ ಮಲೆನಾಡೆಂಬ ಮಲೆನಾಡಿನ ಸೊಬಗೇ ಅದು.ಕೆಲವೊಂದು ಮನೆಗಳನ್ನು ತಲುಪಲು ಒಂದಿಡೀ ಹೊತ್ತು ನಡೆಯಬೇಕು, ಬೈಕು ಸೈಕಲ್ಲುಗಳು ಎಲ್ಲೆಡೆ ಹೋದಾವೆಂಬ ಹಾಗಿಲ್ಲ, ಮಳೆಗಾಲವಾದರೆ ಎಂದಿನ ದಾರಿಯೆಲ್ಲ ಹಳ್ಳಕೊಳ್ಳದ ಪಾಲಾಗಿ ತಂದ ಸೈಕಲ್ಲುಗಳನ್ನು ಆಚೆಯೇ ಸುರಿವ ಮಳೆಯಲ್ಲಿ ಒಬ್ಬಂಟಿಯಾಗಿ ಬಿಟ್ಟು ಹೊಸದಾರಿಯಲ್ಲೆ ನಡೆಯಬೇಕು. ಅಂತ ಊರಲ್ಲಿ ಹೊರ ಊರಿನೊಂದಿಗೆ ಬೆಸುಗೆಯ ಪರಮ ಸಂಪರ್ಕದ ಕೊಂಡಿಯೆಂದರೆ ಅಂಚೆ ಕಚೇರಿ, ಇಂದಿನ ಟೆಲಿಫೋನ್ ಯುಗದಲ್ಲೂ ಬಹಳಕಡೆ ಈ ಸ್ಥಿತಿ ಭಿನ್ನವಾಗೇನೂ ಇಲ್ಲ.

 

ಅಂಥ ಅಂಚೆ ಕಚೇರಿಯಲ್ಲಿ ನನ್ನಪ್ಪ ಪೋಸ್ಟ್ ಮಾಸ್ತರು, ಅವನಿಗೂ- ಊರ ಜನಕ್ಕೂ ಅದು ಕೇವಲ ನೌಕರಿಯಾಗಿಯಷ್ಟೇ ಉಳಿದಿಲ್ಲ, ಅವರ ಬದುಕೆಂಬ ಬದುಕೇ ಬೆಸೆದುಕೊಂಡಿದೆ. ಎಷ್ಟರ ಮಟ್ಟಿಗೆಂದರೆ ಪೋಸ್ಟಾಫೀಸೆಂದರೆ ಭಟ್ಟರೆಂಬ ಹಾಗೆ ಅದು ಅವರ ಬದುಕಲ್ಲಿ ಹಾಸುಹೊಕ್ಕಾಗಿದೆ. ಅವನ ಯಾವ ಹೊಸ ಅಂಗಿಗೂ ಪೋಸ್ಟಿನ ಸಿಖ್ಖದ ವಿಶಿಷ್ಟ ಕರಿಮಸಿ ಹತ್ತಿಲ್ಲವೆಂಬುದಿಲ್ಲ.ಹಿಂದೆಲ್ಲ ಊರ ಶಾಲೆಗೆ ಬರುವ ಮಾಸ್ತರರನ್ನೇ ಪೋಸ್ಟ್‌ಮಾಸ್ತರರನ್ನಾಗಿ ನೇಮಿಸಿಬಿಡುತ್ತಲಿದ್ದರು, ಅಂತಿಪ್ಪ ಮಾಸ್ತರರ ಶಿಷ್ಯನಾದ ಅಪ್ಪನಿಗೆ ಹುಡುಗ ಹುಶಾರಿಯಿದ್ದಾನೆ ಎಂದು ಆ ಕಾಲದಲ್ಲಿ ಒಂದುಮಟ್ಟಿಗೆ ದೊಡ್ಡದೆಂಬಂಥ ಈ ಪೋಸ್ಟಾಫೀಸಿನ ನೌಕರಿ ಸಿಕ್ಕಿದ್ದಿತ್ತು.ಪೋಸ್ಟಾಫೀಸಿಗೆ ಬೇರೆ ಆಫೀಸಾಗಲೀ ಬಿಲ್ಡಿಂಗಾಗಲೀ ಇಲ್ಲ, ಮನೆಯ ಹೊರಗಿನ ಒಂದು ಸಣ್ಣ ಖೋಲಿಯೇ ಸಣ್ಣ ಸಣ್ಣ ಕಪಾಟು, ಟ್ರಂಕು, ಕ್ಯಾಲೆಂಡರು, ಖಾಕಿ ಚೀಲ, ತಕ್ಕಡಿ-ತೂಕದ ಕಲ್ಲು, ಠಸ್ಸೆಯ ಬಾಕ್ಸು- ಹೀಗೆ ಸಕಲ ಅಲಂಕಾರಿಕ ಸಲಕರಣೆಯನ್ನು ತನ್ನಲ್ಲಿ ಹರಡಿಕೊಂಡು ಒಂದು ಚಿಕ್ಕ ಕೆಂಬಣ್ಣದ ಬೋರ್ಡನ್ನು ಹೊರಗೋಡೆಗೆ ತಗುಲಿಹಾಕಿಕೊಂಡು ಪೋಸ್ಟಾಫೀಸಾಗಿ ರೂಪುಗೊಂಡುಬಿಟ್ಟಿತ್ತು. ಹಾಗಾಗಿ ಪೋಸ್ಟಾಫೀಸು ಮನೆಯ ಅವಿಭಾಜ್ಯ ಅಂಗವೂ ಆಗಿತ್ತು”. `ರೂಪಾಂತರ~ದ ಒಡನಾಟ ಉಲ್ಲಾಸಕರ ಅನುಭವ ನೀಡಬಲ್ಲದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry