ಗುರುವಾರ , ಮೇ 6, 2021
23 °C

ನವೀಕರಣಕ್ಕೆ ಕಾದಿರುವ ಕಲಾಮಂದಿರ

ಪ್ರಜಾವಾಣಿ ವಾರ್ತೆ/ ಗಣೇಶ ಅಮೀನಗಡ Updated:

ಅಕ್ಷರ ಗಾತ್ರ : | |

ನವೀಕರಣಕ್ಕೆ ಕಾದಿರುವ ಕಲಾಮಂದಿರ

ಮೈಸೂರು: ನಗರದ ಕರ್ನಾಟಕ ಕಲಾಮಂದಿರ ಸುಸಜ್ಜಿತಗೊಳ್ಳುವುದು ಯಾವಾಗ?

ಇದು ಸಾಂಸ್ಕೃತಿಕ ಹಾಗೂ ಸಾಹಿತ್ಯ ಕಾರ್ಯಕ್ರಮ ಆಯೋಜಿಸುವವರ ಏಕೈಕ ಪ್ರಶ್ನೆ. ಕಳೆದ 2 ವರ್ಷಗಳಿಂದ ಕಲಾಮಂದಿರ ಸುಸಜ್ಜಿತಗೊಳ್ಳಲು ಬೇಕಾದ ಕಾಮಗಾರಿಗಳು ನಡೆಯುತ್ತಿಲ್ಲ. ಕಾಮಗಾರಿ ಕೈಗೊಳ್ಳಲು ಬೇಕಾದ ಅನುದಾನ ರೂ 1.32 ಕೋಟಿ ಇದೆ. ಹೀಗಿದ್ದರೂ ಅಲ್ಲಿ ಮೈಕ್ ಹಾಗೂ ಲೈಟುಗಳಿಲ್ಲ. ಇದರೊಂದಿಗೆ ಸೈಡ್‌ವಿಂಗ್ಸ್, ಹವಾನಿಯಂತ್ರಣ ಹಾಗೂ ಎಕೊಸ್ಟಿಕ್ ವ್ಯವಸ್ಥೆ ಆಗಬೇಕು. ಜೊತೆಗೆ 1,400 ಆಸನಗಳೂ ದುರಸ್ತಿಗೊಳ್ಳಬೇಕಿವೆ. ಮುಖ್ಯವಾಗಿ ಕುಡಿಯುವ ನೀರು ಲಭ್ಯವಾಗಬೇಕು.ಕಳೆದ ತಿಂಗಳು ಅಮರಕಲಾ ಸಂಘವು ತನ್ನ ಸುವರ್ಣ ಮಹೋತ್ಸವ ಅಂಗವಾಗಿ 5 ದಿನಗಳ ನಾಟಕೋತ್ಸವವನ್ನು ಏರ್ಪಡಿಸಿತ್ತು. `ಲೈಟು, ಮೈಕು ಸೇರಿ 25 ಸಾವಿರ ವೆಚ್ಚವಾಯಿತು. 3 ದಿನಗಳವರೆಗೆ ಅರ್ಧ ದಿನವೆಂದು ಬಾಡಿಗೆ ಪಡೆದೆವು. ಅರ್ಧ ದಿನಕ್ಕೆ ರೂ 500 ಎಂದರೆ ರೂ 1,500 ಪಾವತಿಸಿದೆವು. ಮತ್ತೆ 2 ದಿನ ಪೂರ್ತಿಯಾಗಿ ಬಾಡಿಗೆ ಪಡೆದುದದಕ್ಕೆ ರೂ 2 ಸಾವಿರ ಬಾಡಿಗೆ ಕಟ್ಟಿದೆವು. ಆದರೆ ಕಲಾಮಂದಿರದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ.ಗ್ರೀನ್‌ರೂಂನಲ್ಲಿ ನೀರಿನ ಕೊರತೆ ಇದೆ. ವೇದಿಕೆ ಮೇಲೆ ಕುರ್ಚಿಗಳನ್ನು ಕೇಳಿದರೆ ಪ್ಲಾಸ್ಟಿಕ್ ಕುರ್ಚಿ ಕೊಡುತ್ತಾರೆ. ಉತ್ತಮ ಕುರ್ಚಿಗಳು ಬೇಕಾದರೆ ಪ್ರತ್ಯೇಕ ಬಾಡಿಗೆ ಕೊಡಬೇಕು. ಜನರೇಟರ್ ಬಳಸಿದರೆ ಒಂದು ಗಂಟೆಗೆ ರೂ 1,200 ದರ ಪಾವತಿಸಬೇಕು' ಎಂದು ಅಮರ ಕಲಾ ಸಂಘದ ಪದಾಧಿಕಾರಿಗಳು ಬೇಸರ ವ್ಯಕ್ತಪಡಿಸುತ್ತಾರೆ.`ಕಲಾಮಂದಿರ ದುರಸ್ತಿಗಾಗಿ ರಂಗಕರ್ಮಿಗಳು ಪ್ರತಿಭಟನೆ ಮಾಡಿದ್ದೇವೆ. ಕೇವಲ ತೇಪೆ ಕಾರ್ಯ ಮಾತ್ರ ನಡೆಯುತ್ತದೆ. ನವೀಕರಣ ನಡೆಯುತ್ತಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಮೊದಲಾಗಬೇಕು. ಕಾಯಿನ್ ಬಾಕ್ಸ್ ಅಳವಡಿಸಬೇಕು. ನಾಟಕ, ಸಂಗೀತ, ವಿಚಾರ ಸಂಕಿರಣ ಹೀಗೆ ಯಾವುದೇ ಬಗೆಯ ಕಾರ್ಯಕ್ರಮಕ್ಕೂ ಕಲಾಮಂದಿರ ಸಜ್ಜಾಗಬೇಕಿದೆ. ಹೊಸ ಸರ್ಕಾರ ಬಂದಿದೆ. ಇನ್ನು ಮುಂದೆಯಾದರೂ ನವೀಕರಣ ನಡೆಯಲಿ' ಎಂದು ಆಶಿಸುತ್ತಾರೆ ಹಿರಿಯ ರಂಗಕರ್ಮಿ ಶ್ರೀಕಂಠ ಗುಂಡಪ್ಪ.

ನಗರದಲ್ಲಿ (1985) ನಡೆದ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಕಲಾಮಂದಿರ ಉದ್ಘಾಟನೆಗೊಂಡಿತು. 28 ವರ್ಷಗಳ ಅವಧಿಯಲ್ಲಿ ಮೈಸೂರಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಜೀವನಾಡಿಯಾಗಿದೆ. ಆದರೆ, 2 ವರ್ಷಗಳ ಹಿಂದೆ ಹರ್ಷ ಗುಪ್ತ ಅವರು ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಿತು. ಆದರೆ, ಟೆಂಡರ್ ವೆಚ್ಚ ಹೆಚ್ಚಾಯಿತೆಂದು ಹರ್ಷ ಗುಪ್ತ ತಡೆಹಿಡಿದರು.ನಂತರ ರೂ 1.50 ಕೋಟಿ ಅನುದಾನದಲ್ಲಿ ಮುಡಾ ಕಾಮಗಾರಿ ಕೈಗೆತ್ತಿಕೊಂಡು ಕಲಾಮಂದಿರದ ದುರಸ್ತಿ ಕೈಗೊಂಡಿತು. ಆಮೇಲೆ ಬೇರೆ ಟೆಂಡರ್ ಕೊಡಲಾಗುತ್ತದೆ ಎಂದು ಕಲಾಮಂದಿರದ ನಿರ್ವಹಣಾ ಸಮಿತಿಯು ಅನುದಾನವನ್ನು ವಾಪಸು ಪಡೆಯಿತು. ಮತ್ತೆ ಕಾಮಗಾರಿಗಳು ನಡೆದ ಉದಾಹರಣೆ ಇಲ್ಲ. ಆದರೆ ವಾಣಿಜ್ಯ ಕಾರ್ಯಕ್ರಮವಾದರೆ ರೂ 5 ಸಾವಿರ, ಶಾಲೆ ಹಾಗೂ ಕಾಲೇಜುಗಳ ಕಾರ್ಯಕ್ರಮಗಳಿಗೆ ರೂ 3 ಸಾವಿರ ಬಾಡಿಗೆ ನಿಗದಿಗೊಳಿಸಲಾಗಿದ್ದು, ನಿರಂತರವಾಗಿ ಚಟುವಟಿಕೆಗಳು ನಡೆಯುತ್ತಿವೆ.ನಿಯೋಜಿತ ಅಧಿಕಾರಿಗಳು: ಕಲಾಮಂದಿರ ನಿರ್ವಹಣೆ ಇರುವುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರದು. ಆದರೆ ಈಚಿನ ವರ್ಷಗಳಲ್ಲಿ ಅಲ್ಲಿಗೆ ಬಂದವರು ನಿಯೋಜಿತ ಅಧಿಕಾರಿಗಳೇ ಹೆಚ್ಚು. ಪೂರ್ಣಾವಧಿ ಅಧಿಕಾರಿಯಾದರೆ ಕಲಾಮಂದಿರ ನವೀಕರಣ ನಿರೀಕ್ಷಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.