ನವೀಕೃತ ವೈಟ್‌ಫೀಲ್ಡ್ ರೈಲು ನಿಲ್ದಾಣ ಉದ್ಘಾಟನೆ

7

ನವೀಕೃತ ವೈಟ್‌ಫೀಲ್ಡ್ ರೈಲು ನಿಲ್ದಾಣ ಉದ್ಘಾಟನೆ

Published:
Updated:

ಮಹದೇವಪುರ:‘ಆಂಧ್ರಪ್ರದೇಶದ ಕಡಪದಿಂದ ಮುಳಬಾಗಿಲು, ಕೋಲಾರ ಮಾರ್ಗವಾಗಿ ವೈಟ್‌ಫೀಲ್ಡ್‌ವರೆಗೆ ನೂತನ ರೈಲು ಮಾರ್ಗ ನಿರ್ಮಿಸುವ 1,500 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಚಾಲನೆ ನೀಡಲಾಗಿದ್ದು, ಕಡಪದಲ್ಲಿ ಕಾಮಗಾರಿ ಆರಂಭವಾಗಿದೆ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.ಕಾಡುಗೋಡಿ ಸಮೀಪದ ವೈಟ್‌ಫೀಲ್ಡ್‌ನಲ್ಲಿ ನವೀಕೃತ ರೈಲು ನಿಲ್ದಾಣವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಬೆಂಗಳೂರಿನ ಹೊರ ಭಾಗದಲ್ಲಿರುವ ವರ್ತುಲ ರಸ್ತೆಗಳ ಮಾದರಿಯಲ್ಲೇ ನಗರದ ಹೊರ ಭಾಗದಲ್ಲಿ ವರ್ತುಲ ರೈಲು ಸಂಚಾರ ಆರಂಭಿಸುವ ಪ್ರಸ್ತಾವ ಇಲಾಖೆಯ ಮುಂದಿದೆ. ಈ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು, ಯೋಜನೆಗೆ ಅಗತ್ಯವಾದ ಭೂಮಿ ಹಾಗೂ ಇತರೆ ಮೂಲ ಸೌಲಭ್ಯಗಳನ್ನು ರಾಜ್ಯ ಸರ್ಕಾರವೇ ಕಲ್ಪಿಸಬೇಕಿದೆ’ ಎಂದರು.‘ಬೆಂಗಳೂರು ವಿಭಾಗೀಯ ವಲಯದಲ್ಲಿನ ಎಲ್ಲ ರೈಲು ನಿಲ್ದಾಣಗಳನ್ನು ಮಾದರಿ ನಿಲ್ದಾಣಗಳನ್ನಾಗಿ ಪರಿವರ್ತಿಸುವ ಕಾರ್ಯ ಪ್ರಗತಿಯಲ್ಲಿದೆ’ ಎಂದು ಹೇಳಿದರು.‘ಉನ್ನತ ದರ್ಜೆ ವಿಶ್ರಾಂತಿ ಕೊಠಡಿ, ದ್ವಿತೀಯ ದರ್ಜೆ ವಿಶ್ರಾಂತಿ ಕೊಠಡಿ, ಟಿಕೆಟ್ ಬುಕ್ಕಿಂಗ್ ಕಚೇರಿ ಸೇರಿದಂತೆ ಎಲ್ಲ ಅಗತ್ಯ ಸೌಲಭ್ಯಗಳು ಈ ಮಾದರಿ ನಿಲ್ದಾಣದಲ್ಲಿವೆ’ ಎಂದು ಮುನಿಯಪ್ಪ ಮಾಹಿತಿ ನೀಡಿದರು. ಸಂಸದ ಪಿ.ಸಿ.ಮೋಹನ್, ಮಾಜಿ ಸಚಿವ ಎ.ಕೃಷ್ಣಪ್ಪ, ಬಿಬಿಎಂಪಿ ವಿರೋಧ ಪಕ್ಷದ ನಾಯಕ ಎಂ.ನಾಗರಾಜ, ರೈಲ್ವೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry