ಭಾನುವಾರ, ಏಪ್ರಿಲ್ 11, 2021
26 °C

ನವೆಂಬರ್‌ನಲ್ಲಿ ಆಸ್ಪತ್ರೆ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  `ಸರ್.ಸಿ.ವಿ. ರಾಮನ್‌ನಗರದ ಇಂದಿರಾನಗರ ಭಾಗದಲ್ಲಿನ ಹೊಸ ಸರ್ಕಾರಿ ಆಸ್ಪತ್ರೆಯ ಕಾಮಗಾರಿಯು ಬಹುತೇಕ ಮುಗಿದಿದ್ದು, ನವೆಂಬರ್ 7 ರಂದು ಉದ್ಘಾಟಿಸಿ ಸಾರ್ವಜನಿಕರ ಚಿಕಿತ್ಸೆಗೆ ಅನುಕೂಲ ಮಾಡಿಕೊಡಲಾಗುವುದು~ ಎಂದು ಆರೋಗ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದರು.ಸರ್.ಸಿ.ವಿ. ರಾಮನ್‌ನಗರದ ಇಂದಿರಾನಗರದಲ್ಲಿನ ನೂತನ ಸರ್ಕಾರಿ ಆಸ್ಪತ್ರೆಯ ಕಟ್ಟಡದ ಪರಿಶೀಲನೆ ನಡೆಸಿದ ನಂತರ ಅವರು ಮಾತನಾಡಿದರು.`ಆಸ್ಪತ್ರೆಗೆ ಸರ್.ಸಿ.ವಿ. ರಾಮನ್ ಅವರ ಹೆಸರನ್ನು ಇಡುವ ಬಗ್ಗೆ ಚರ್ಚಿಸಲಾಗುವುದು~ ಎಂದು ಹೇಳಿದರು.

`ಕಟ್ಟಡದ ನಿರ್ಮಾಣ ಕಾಮಗಾರಿಗೆ 40 ಕೋಟಿ ರೂಪಾಯಿ ಹಣವನ್ನು ಕಾಯ್ದಿರಿಸಲಾಗಿದೆ. ಅದರಲ್ಲಿ ಸೆಪ್ಟೆಂಬರ್ ಕೊನೆಗೆ ಕಾಮಗಾರಿ ಪೂರ್ಣಗೊಳಿಸಿ, ನವೆಂಬರ್‌ನಲ್ಲಿ ಸಾರ್ವಜನಿಕರ ಉಪಯುಕ್ತತೆಗೆ ಮುಕ್ತಗೊಳಿಸಲಾಗುವುದು~ ಎಂದರು.`ನಗರದ ಪೂರ್ವ ದಿಕ್ಕಿನ ಜನರು ಇನ್ನು ಮುಂದೆ ಯಾವುದೇ ಚಿಕಿತ್ಸೆಗೆ ದೂರದ ಆಸ್ಪತ್ರೆಗೆ ಹೋಗುವ ಅವಶ್ಯಕತೆಯಿಲ್ಲ. ಒಂದು ಜಿಲ್ಲಾ ಆಸ್ಪತ್ರೆಗೆ ಇರುವ ಎಲ್ಲ ಸುವ್ಯವಸ್ಥೆಯನ್ನು ಈ ಆಸ್ಪತ್ರೆಯಲ್ಲಿ ಅಳವಡಿಸಲಾಗುವುದು. ಸರ್ಕಾರಿ ಆಸ್ಪತ್ರೆಯೆಂದರೆ ಚೆನ್ನಾಗಿರುವುದಿಲ್ಲ ಎಂಬ ಸಾರ್ವಜನಿಕರ ಅಭಿಪ್ರಾಯವನ್ನು ಬದಲಿಸುವಂತೆ ಕ್ರಮಗಳನ್ನು ಕೈಗೊಳ್ಳಲಾಗುವುದು~ ಎಂದು ಹೇಳಿದರು.`ಡೆಂಗೆ ದೊಡ್ಡ ಕಾಯಿಲೆಯಲ್ಲ~

`ಡೆಂಗೆ ಅಂತಹ ದೊಡ್ಡ ಕಾಯಿಲೆಯಲ್ಲ. ಮಾಧ್ಯಮದವರ ವೈಭವೀಕರಣದಿಂದ ಎಲ್ಲೆಡೆ ತಪ್ಪು ಮಾಹಿತಿ ರವಾನೆಯಾಗುತ್ತಿದೆ. ಹೀಗಾಗಿ ಅಂಕಿ-ಸಂಖ್ಯೆಗಳಲ್ಲಿ ವ್ಯತ್ಯಾಸವಾಗುತ್ತಿದೆ. ರಾಜ್ಯದಲ್ಲಿ ಒಟ್ಟು 14 ಡೆಂಗೆ ಸಾವುಗಳಾಗಿವೆ~ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದರು.`ಡೆಂಗೆಗೆ ಮುನ್ನೆಚ್ಚರಿಕೆಯೇ ಔಷಧಿಯಾಗಿದೆ. ಯಾವುದೇ ಡೆಂಗೆ ಸಾವುಗಳಾದರೂ ಅದನ್ನು ಮುಚ್ಚಿಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ. ಸಾರ್ವಜನಿಕರು ಸಹ ತಮಗೆ ಯಾವುದೇ ಜ್ವರ ಬಂದರೂ ಅದನ್ನು ನಿರ್ಲಕ್ಷ್ಯ ಮಾಡದೆ ಆಸ್ಪತ್ರೆಗಳಿಗೆ ತೋರಿಸಿಕೊಳ್ಳುವುದು ಒಳಿತು~ ಎಂದು ಪ್ರತಿಕ್ರಿಯಿಸಿದರು.ಈ ವೇಳೆ ಸುದ್ದಿಗಾರರ ಪ್ರಶ್ನೆಗಳಿಗೆ  `ಎಲ್ಲ ಮಾಹಿತಿಯನ್ನು ನಾನೇನು ಜೇಬಿನಲ್ಲಿ ಇಟ್ಟುಕೊಂಡು ತಿರುಗಾಡುವುದಿಲ್ಲ. ಚಾರ್ಟ್ ಬರಲಿ ಇರಿ ಹೇಳುತ್ತೇನೆ. ಮಾಧ್ಯಮದವರು ಚಿಕ್ಕ ವಿಷಯವನ್ನೂ ಸಹ ವೈಭವೀಕರಣ ಮಾಡುತ್ತಾರೆ. ನಾಳೆ, ಸಚಿವರು ಸರಿಯಾಗಿ ಪ್ರತಿಕ್ರಿಯಿಸಲಿಲ್ಲ ಎಂದು ಸುದ್ದಿ ನೀಡಿ~ ಎಂದು ಹರಿಹಾಯ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.