ನವೆಂಬರ್‌ನಲ್ಲಿ ಕಾಮಗಾರಿ ಆರಂಭ

7

ನವೆಂಬರ್‌ನಲ್ಲಿ ಕಾಮಗಾರಿ ಆರಂಭ

Published:
Updated:

ಬೆಂಗಳೂರು: `ನಗರದ ಹಲಸೂರು ಕೆರೆ ಅಭಿವೃದ್ಧಿಗೆ ಎರಡು ಕೋಟಿ ರೂಪಾಯಿ ಹಣವನ್ನು ಬಜೆಟ್‌ನಲ್ಲಿ ಕಾಯ್ದಿರಿಸಲಾಗಿದ್ದು, ನವೆಂಬರ್‌ನಲ್ಲಿ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಲಿವೆ~ ಎಂದು ಪಾಲಿಕೆ ಆಯುಕ್ತ ಸಿದ್ದಯ್ಯ ಹೇಳಿದರು.ಹಲಸೂರು ಕೆರೆ ಪ್ರದೇಶಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು.

`ಕೆರೆಯ ಸುತ್ತ ಪಾದಚಾರಿ ಮಾರ್ಗ, ಕೊಳಚೆ ನೀರು ಕೆರೆಗೆ ಸೇರದಂತೆ ತಡೆಗೋಡೆ ನಿರ್ಮಾಣ, ಸೇತುವೆ ನಿರ್ಮಾಣ, ಸುತ್ತಲೂ ಅಳವಡಿಸಲಾದ ಕಬ್ಬಿಣದ ಗ್ರಿಲ್‌ಗಳಿಗೆ ಬಣ್ಣ ಬಳಿಯುವುದು ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಮುಂದಿನ ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದೆ~ ಎಂದರು.`ಕೆರೆಯ ಸುತ್ತ ಬೆಳೆದ ಗಿಡಗಂಟಿ, ಪಾರ್ಥೇನಿಯಂ ಸಸಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಸ್ಥಳೀಯ ಶಾಸಕರ ನೆರವಿನೊಂದಿಗೆ ಸದ್ಯದಲ್ಲೇ ಕೆರೆಯ ಸುತ್ತ 300 ಸಸಿಗಳನ್ನು ನೆಡಲಾಗುವುದು~ ಎಂದು ಹೇಳಿದರು.ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಾಸಕ ಆರ್. ರೋಷನ್ ಬೇಗ್, `ಬೆಳಿಗ್ಗೆ ಮತ್ತು ಸಾಯಂಕಾಲ ಹಿರಿಯ ನಾಗರಿಕರು ವಿಹಾರಕ್ಕೆ ಬರುತ್ತಾರೆ. ಹಾಗಾಗಿ ಭದ್ರತೆ ದೃಷ್ಟಿಯಿಂದ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಬೇಕು. ಹಾಗೆಯೇ ಪಾದಚಾರಿ ಮಾರ್ಗವನ್ನು ಇನ್ನಷ್ಟು ಅಭಿವೃದ್ಧಿಪಡಿಸಬೇಕು~ ಎಂದು ಆಯುಕ್ತರಲ್ಲಿ ಮನವಿ ಮಾಡಿದರು.ನಂತರ ತಿರುವಳ್ಳುವರ್ ಪ್ರತಿಮೆ ಸ್ಥಳವನ್ನು ಪರಿಶೀಲಿಸಿದ ಸಿದ್ದಯ್ಯ, `ಇಲ್ಲಿನ ಉದ್ಯಾನ ನಿರ್ವಹಣೆ, ಬೆಳಕಿನ ವ್ಯವಸ್ಥೆ ಉತ್ತಮವಾಗಿರಬೇಕು. ಭದ್ರತಾ ವ್ಯವಸ್ಥೆಯೂ ಸಮರ್ಪಕವಾಗಿರಬೇಕು. ಸಾರ್ವಜನಿಕರು ದೂರು ನೀಡುವವರೆಗೆ ಅಧಿಕಾರಿಗಳು ನಿರ್ಲಕ್ಷ್ಯ ತೋರಬಾರದು. ಆಗಾಗ್ಗೆ ಸ್ಥಳ ಪರಿಶೀಲನೆ ಮಾಡಿ, ಮೇಲ್ವಿಚಾರಣೆ ನಡೆಸಬೇಕು~ ಎಂದು ಜಂಟಿ ಆಯುಕ್ತರಿಗೆ ಸೂಚನೆ ನೀಡಿದರು.ನಂತರ ಮಹದೇವಪುರ ವಲಯದ ಕೈಕೊಂಡನಹಳ್ಳಿ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸ್ಥಳೀಯರು, ರಸ್ತೆ ವಿಸ್ತರಣೆ, ಗಣೇಶ ವಿಸರ್ಜನೆಗೆ ಕಲ್ಯಾಣಿ ನಿರ್ಮಿಸುವಂತೆ ಮನವಿ ಮಾಡಿದರು.ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, `ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರೂ ಸಹಕರಿಸಬೇಕು. ಕೆಲ ಗಂಭೀರ ವಿಷಯಗಳ ಕುರಿತು ನಿವಾಸಿಗಳು, ಸ್ಥಳೀಯ ಶಾಸಕರು ಮತ್ತು ಪಾಲಿಕೆ ಸದಸ್ಯರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದು ಒಳಿತು. ಜನತೆಗೆ ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸಲು ಪಾಲಿಕೆ ಬದ್ಧವಾಗಿದೆ~ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಸಕ ಅರವಿಂದ ಲಿಂಬಾವಳಿ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry