ಗುರುವಾರ , ಮೇ 6, 2021
27 °C

ನವೆಂಬರ್‌ನಲ್ಲಿ ದಲಿತ ಸಾಹಿತ್ಯ ಸಮ್ಮೇಳನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂದಗಿ: ವಿಜಾಪುರ ಜಿಲ್ಲಾ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ಸಿಂದಗಿ ಪಟ್ಟಣದಲ್ಲಿ ನವೆಂಬರ್ ಎರಡನೇ ವಾರದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಂ. ಸಾಣಕರ ಹೇಳಿದರು.ಪಟ್ಟಣದ ಪ್ರೆಸ್ ಕ್ಲಬ್‌ನಲ್ಲಿ ಸೋಮವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಸಮ್ಮೇಳನ ಜಾತ್ರೆಯಂತೆ ನಡೆಯದೇ ಇದನ್ನು ಅರ್ಥಪೂರ್ಣವಾಗಿ ಡಾ.ಅಂಬೇಡ್ಕರ್‌ರ ವೈಚಾರಿಕೆ ನೆಲೆಗಟ್ಟಿನ ಆಧಾರದ ಮೇಲೆ ನಡೆಯುವ ಸಮ್ಮೇಳನವಾಗಲಿದೆ ಎಂದರು.ಈಗಾಗಲೇ ರಾಜ್ಯ ಮಟ್ಟದಲ್ಲಿ ವಿಜಾಪುರ, ಬೀದರ ಮತ್ತು ಕೊಪ್ಪಳ ನಗರಗಳಲ್ಲಿ ಮೂರು ಅಖಿಲ ಭಾರತೀಯ ದಲಿತ ಸಾಹಿತ್ಯ ಸಮ್ಮೇಳನಗಳು ಜರುಗಿವೆ.ವಿಜಾಪುರ ಜಿಲ್ಲಾ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದ ರೂಪುರೇಷೆಗಾಗಿ ಎರಡು ಪೂರ್ವಭಾವಿ ಸಭೆಗಳು ನಡೆದು ಸಿಂದಗಿಯಲ್ಲಿಯೇ ಸಮ್ಮೇಳನ ನಡೆಸುವುದು ಅತ್ಯಂತ ಸೂಕ್ತ ಎಂಬುದಾಗಿ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ವಿರೂಪಾಕ್ಷಿ ಗುಬ್ಬೇವಾಡಿಯನ್ನೊಳಗೊಂಡ ಪ್ರಮುಖರು ಒಕ್ಕೋರಲಿನ ಅಭಿಪ್ರಾಯ ಮೂಡಿ ಬಂದ ಕಾರಣಕ್ಕಾಗಿ ಸಿಂದಗಿಯನ್ನೇ ಆಯ್ಕೆ ಮಾಡಿಕೊಳ್ಳಲಾಯಿತು ಎಂದರು.ಎರಡು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಅಂದಾಜು ಹತ್ತು ಗೋಷ್ಠಿಗಳು ನಡೆಯಲಿದ್ದು, ಇದರಲ್ಲಿ ಛಿದ್ರಗೊಂಡಿರುವ ದಲಿತ ಸಂಘಟನೆಗಳನ್ನು ಒಂದುಗೂಡಿಸುವ ದಿಸೆಯಲ್ಲಿ ಎಲ್ಲ ದಲಿತ ಸಂಘಟನೆಗಳ ಪ್ರಮುಖರ ಸಮ್ಮುಖದಲ್ಲಿ ಚಿಂತನೆ ನಡೆದು ಮಹತ್ವದ ತೀರ್ಮಾನಕ್ಕೆ ಬರಲಾಗುವುದು ಎಂದರು.ಒಡೆದು ಹೋದ ಮನಸ್ಸುಗಳು ಮತ್ತು ಛಿದ್ರಗೊಂಡ ದಲಿತ ಸಂಘಟನೆಗಳನ್ನು ಒಂದುಗೂಡಿಸುವುದೇ ಈ ದಲಿತ ಸಾಹಿತ್ಯ ಸಮ್ಮೇಳನದ ಪ್ರಮುಖ ಉದ್ದೇಶವಾಗಿದೆ. ಈಗಾಗಲೇ ಜರುಗಿದ ಎರಡೂ ಸಭೆಗಳಲ್ಲಿ ಎಲ್ಲ ದಲಿತ ಸಂಘಟನೆಗಳು ಒಂದುಗೂಡುವ ಒಪ್ಪಿಗೆ ಸೂಚಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಸಾಣಕರ ಆಶಯ ವ್ಯಕ್ತಪಡಿಸಿದರು.ಈ ಸಮ್ಮೇಳನ ಅರ್ಥಪೂರ್ಣವಾಗಿ ಪಕ್ಷಾತೀತ, ಜಾತ್ಯತೀತ ಸಮ್ಮೇಳನ ಎನಿಸಿಕೊಳ್ಳಬೇಕಾದರೆ ಸರ್ವ ಸಮುದಾಯದ ಸಹಕಾರ ಅತ್ಯಗತ್ಯ. ಹೀಗಾಗಿ ಮುಂಬ ರುವ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಎಲ್ಲ ಪ್ರಗತಿಪರ ವಿಚಾರವಾದಿಗಳನ್ನು ಸಮಾವೇಶಗೊಳಿಸಲಾಗುವುದು ಎಂದು ತಿಳಿಸಿದರು.ಸಮ್ಮೇಳನ ಯಶಸ್ಸಿಗಾಗಿ ಸ್ವಾಗತ ಸಮಿತಿಯನ್ನು ಕೂಡ ರಚನೆ ಮಾಡಲಾಗಿದ್ದು, ಶಾಸಕ ರಮೇಶ ಭೂಸನೂರ ಅಧ್ಯಕ್ಷರಾಗಿದ್ದಾರೆ. ಅಲ್ಲದೇ ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮತ್ತು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಸ್ವಾಗತ ಸಮಿತಿ ಗೌರವಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.ಮಾಜಿ ಸಚಿವ ಎಂ.ಸಿ.ಮನಗೂಳಿ, ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ಅಶೋಕ ಶಾಬಾದಿ ಹಾಗೂ ಜಿಪಂ ಮಾಜಿ ಸದಸ್ಯ ಬಿ.ಆರ್. ಯಂಟಮಾನ ಉಪಾಧ್ಯಕ್ಷರು ಮತ್ತು ಪರಿಷತ್ ಜಿಲ್ಲಾಧ್ಯಕ್ಷ ಎ.ಎಂ.ಸಾಣಕರ ಪ್ರಧಾನ ಕಾರ್ಯದರ್ಶಿಗಳಾಗಿದ್ದಾರೆ.ಸಮ್ಮೇಳನದ ಸಂದರ್ಭದಲ್ಲಿ ಸ್ಮರಣ ಸಂಚಿಕೆ ಹೊರ ತರಲು ನಿರ್ಣಯ ಮಾಡಲಾಗಿದ್ದು, ಪ್ರಾಚಾರ್ಯ ಎಂ.ಎಸ್. ಹೈಯ್ಯಾಳಕರ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುವರು.

ಪತ್ರಿಕಾಗೋಷ್ಠಿಯಲ್ಲಿ ಪರಿಷತ್ ತಾಲ್ಲೂಕು ಅಧ್ಯಕ್ಷ ವಿರೂಪಾಕ್ಷಿ ಗುಬ್ಬೇವಾಡ, ಎಂ.ಎನ್.ಕಿರಣರಾಜ್, ಪುರಸಭೆ ಸದಸ್ಯರಾದ ರಾಜಶೇಖರ ಕೂಚಬಾಳ, ಶ್ರೀಮಂತ ಚೌರ, ಜಿಪಂ ಮಾಜಿ ಸದಸ್ಯ ಬಿ.ಆರ್.ಯಂಟಮಾನ, ಅರ್ಜುನ ಗುಡಿಮನಿ, ಮಲ್ಲೇಶಿ ಕೆರೂರ, ಅಶೋಕ ಬಿಜಾಪೂರ, ಮಲ್ಲೇಶಿ ಕೆರೂರ, ಮಹೇಶ ಕಟ್ಟಿಮನಿ, ಪರಿಷತ್ ಜಿಲ್ಲಾ ಸಂಘಟನೆಯ ಆರ್.ಆರ್.ಹಂಚಿನಾಳ, ಬಿ.ಎಸ್.ಬ್ಯಾಳಿ, ಎಸ್.ಆರ್.ಮರಡಿಮನಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.