ನವೆಂಬರ್ ವೇಳೆಗೆ ನಿರಂತರ ಜ್ಯೋತಿ

7

ನವೆಂಬರ್ ವೇಳೆಗೆ ನಿರಂತರ ಜ್ಯೋತಿ

Published:
Updated:

ಚಿಂತಾಮಣಿ: ಮುಂದಿನ ಜೂನ್ ವೇಳೆಗೆ ತಾಲ್ಲೂಕಿಗೆ ಹಾಗೂ ನವೆಂಬರ್ ಕೊನೆಯ ವೇಳೆಗೆ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೂ ನಿರಂತರ ಜ್ಯೋತಿ ಒದಗಿಸುವುದಾಗಿ ಇಂಧನ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಭರವಸೆ ನೀಡಿದರು.ನಗರದಲ್ಲಿ ಸೋಮವಾರ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಕಾರ್ಯ ಮತ್ತು ಪಾಲನಾ ವಿಭಾಗೀಯ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.ರೈತರ ವಿದ್ಯುತ್ ಪಂಪ್‌ಸೆಟ್‌ಗಳ ಅಕ್ರಮ ಸಕ್ರಮ ಕಾರ್ಯಕ್ರಮ ಯೋಜನೆಯನ್ನು ಶೀಘ್ರವಾಗಿ ಜಾರಿಗೆ ತರಲಾಗುವುದು. ರೈತರು ಅಕ್ರಮಗಳನ್ನು ಸಕ್ರಮಗೊಳಿಸಿಕೊಳ್ಳಬೇಕು, ಆ ಸಮಯದಲ್ಲಿ ಸಕ್ರಮಗೊಳಿಸಿಕೊಳ್ಳದಿದ್ದರೆ ಕಠಿಣ ಕ್ರಮಕೈಗೊಳ್ಳಲಾಗುವುದು. ರಾಜ್ಯದ ಗೃಹ ಬಳಕೆಗೆ, ರೈತರ ನೀರಾವರಿಗೆ, ಕೈಗಾರಿಕೆಗಳಿಗೆ ಅಗತ್ಯವಾದ ವಿದ್ಯುತ್ ಬಗ್ಗೆ ಇದುವರೆಗೂ ಸರಿಯಾದ ಮಾಹಿತಿಯೇ ಇರಲಿಲ್ಲ ಎಂದರು.ಮುಂದಿನ 2 ವರ್ಷಗಳಲ್ಲಿ ವಿದ್ಯುತ್ ಸ್ವಾವಲಂಬನೆಯಾಗಬೇಕು ಎಂಬ ಮುಖ್ಯ ಮಂತ್ರಿಗಳ ಸೂಚನೆಯಂತೆ ಯೋಜನೆಗಳನ್ನು ರೂಪಿಸಿಕೊಳ್ಳುತ್ತಿದ್ದೇವೆ. ಖರೀದಿ ಮಾಡಿ ಪುಕ್ಕಟೆ ವಿದ್ಯುತ್ ನೀಡುತ್ತಿದ್ದರೆ ಯಾವ ಕಂಪನಿಯು ಉಳಿಯುವುದಿಲ್ಲ. ಈಗಾಗಲೇ ಬೆಸ್ಕಾಂ ಕಂಪನಿಗಳಿಗೆ 5 ಸಾವಿರ ಕೋಟಿ ರೂಗಳ ಬಾಕಿಯನ್ನು ಸರ್ಕಾರ ನೀಡಬೇಕಾಗಿದೆ ಎಂದರು.ರೈತರಿಗೆ ಹಗಲಿನಲ್ಲಿ ನಿರಂತರವಾಗಿ 6 ಗಂಟೆಗಳ ಕಾಲ ವಿದ್ಯುತ್ ನೀಡುತ್ತಿದ್ದೇವೆ. ನೀರು ಮತ್ತು ವಿದ್ಯುತ್‌ಅನ್ನು ವ್ಯರ್ಥ ಮಾಡದೆ ಅಗತ್ಯವಿದ್ದಷ್ಟನ್ನು ಮಾತ್ರ ಉಪಯೋಗಿಸಿಕೊಳ್ಳಬೇಕು. ಹನಿ ಹನಿ ನೀರನ್ನು ಹಿಡಿದಿಟ್ಟುಕೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆಗೂ ಸ್ಪಂದಿಸಲು ಸರ್ಕಾರ ಸಿದ್ದವಿದೆ ಎಂದರು.ದೀಪದ ಕೆಳಗೆ ಕತ್ತಲು ಎನ್ನುವಂತೆ ಬೆಂಗಳೂರಿಗೆ ಅತಿ ಸಮೀಪದಲ್ಲಿದ್ದರೂ ಜಿಲ್ಲೆಯ ಪ್ರಗತಿ ಕಂಡಿಲ್ಲ, ಜಿಲ್ಲೆಯ ರಸ್ತೆಗಳು ಹದಗೆಟ್ಟಿವೆ ಹಾಗೂ ಇದುವರೆಗೂ ಜಿಲ್ಲೆಗೆ ಅಗತ್ಯವಾದ ಕಚೇರಿಗಳು ನಿರ್ಮಾಣವಾಗಿಲ್ಲ. ಮುಂದೆ ಜಿಲ್ಲಾ ಕೇಂದ್ರದ ಅಭಿವೃದ್ದಿಗೆ ಒತ್ತು ನೀಡಲಾಗುವುದು. ಚಿಕ್ಕಬಳ್ಳಾಪುರದ ಬನಪ್ಪ ಛತ್ರದ ಸ್ಥಳದಲ್ಲಿ ಜಿಲ್ಲಾಆಸ್ಪತ್ರೆಯನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.ಶಾಸಕ ಡಾ.ಎಂ.ಸಿ.ಸುಧಾಕರ್ ಮಾತನಾಡಿ ಇದುವರೆಗೆ ಯಾವುದೇ ಸರ್ಕಾರಗಳು ರೈತರಿಗೆ ಅಗತ್ಯವಾದ ವಿದ್ಯುತ್ ನೀಡುವುದರಲ್ಲಿಮ ಯಶಸ್ವಿಯಾಗಿಲ್ಲ. ಕನಿಷ್ಠ 6 ಗಂಟೆಯನ್ನಾದರೂ ನಿರಂತರವಾಗಿ ಹಾಗೂ ಉತ್ತಮ ಗುಣಮಟ್ಟದ ವಿದ್ಯುತ್ ನೀಡಬೇಕು. ಪ್ರಥಮ ಹಂತದಲ್ಲೇ ತಾಲ್ಲೂಕಿಗೆ ನಿರಂತರ ಜ್ಯೋತಿ ಕಾರ್ಯ ಯೋಜನೆಯನ್ನು ಅಳವಡಿಸಬೇಕು ಎಂದು ಒತ್ತಾಯಿಸಿದರು.ಗೃಹಬಳಕೆಗೆ, ನೀರಾವರಿಗೆ ಹಾಗೂ ಕೈಗಾರಿಕೆಗಳಿಗೆ ಪ್ರತ್ಯೇಕ ವಿತರಣಾ ವ್ಯವಸ್ಥೆಯನ್ನು ರೂಪಿಸಬೇಕು. ಟ್ರಾನ್ಸ್‌ಪಾರ್ಮರ್‌ಗಳ ಕೊರತೆಯನ್ನು ನೀಗಿಸಬೇಕು. ಹೈಟೆನ್ಷ್ ಸಂಪರ್ಕದ ಲೈನ್‌ಗಳನ್ನು ಬದಲಾವಣೆ ಮಾಡುವ ಕೆಲಸವನ್ನು ಶೀಘ್ರವಾಗಿ ಮಾಡಬೇಕು. ರೈತರ ಪಂಪ್ ಸೆಟ್‌ಗಳ ಅಕ್ರಮ ಸಕ್ರಮ ಯೋಜನೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.ಜಿಲ್ಲಾಧಿಕಾರಿ ಡಾ.ಎನ್.ಮಂಜುಳಾ, ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಣಿವಣ್ಣನ್, ತಾಂತ್ರಿಕ ನಿರ್ದೇಶಕ ನಾಗೇಶ್ ಇನ್ನಿತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry