ನವೆಂಬರ್ 14ರಿಂದ `ಕಲಿಕೋತ್ಸವ'

7

ನವೆಂಬರ್ 14ರಿಂದ `ಕಲಿಕೋತ್ಸವ'

Published:
Updated:

ಉಡುಪಿ: ಮಕ್ಕಳ ಶೈಕ್ಷಣಿಕ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲು `ಕಲಿಕೋತ್ಸವ' ಎಂಬ ವಿನೂತನ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ಎಲ್ಲ ಶಾಲೆಗಳಲ್ಲಿ ನವೆಂಬರ್ 14 ರಿಂದ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.ಸರ್ಕಾರಿ ಶಾಲೆಗಳೂ ಗುಣಾತ್ಮಕ ಶಿಕ್ಷಣ ನೀಡುತ್ತಿವೆ ಎಂಬುದನ್ನು `ಕಲಿಕೋತ್ಸವ'ದ ಮೂಲಕ ಪ್ರಚಾರ ಮಾಡಿ ಪೋಷಕರನ್ನು ಸೆಳೆಯುವುದು ಇಲಾಖೆಯ ಉದ್ದೇಶವಾಗಿದೆ.ಕಲಿಕೋತ್ಸವದಲ್ಲಿ ಶೈಕ್ಷಣಿಕ ಸಾಮರ್ಥ್ಯ ಪ್ರದರ್ಶಿಸಲು ವೇದಿಕೆ ಕಲ್ಪಿಸಲಾಗುತ್ತದೆ. ಇಲ್ಲಿ ಏರ್ಪಡಿಸುವ ಎಲ್ಲ ಸ್ಪರ್ಧೆಗಳೂ ಪಠ್ಯಕ್ಕೆ ಸಂಬಂಧಿಸಿದ್ದೇ ಆಗಿರುತ್ತವೆ. ಪಠ್ಯವನ್ನು ಗಟ್ಟಿಯಾಗಿ ಓದುವ `ಸ್ವರಭಾರಯುಕ್ತ ಓದು', ಕಂಠಪಾಠ, ಉಕ್ತಲೇಖನ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಪದಗಳನ್ನು ಓದುವ, ಗಣಿತ ರೇಖಾಕೃತಿಗಳ ಬಗ್ಗೆ ಭಾಷಣ ಮಾಡುವ ಮತ್ತು ಪದ್ಯ ಗಾಯನದಂತಹ ಸ್ಪರ್ಧೆಗಳೂ ಇರಲಿವೆ.ಪಠ್ಯೇತರ ಚಟುವಟಿಕೆಯ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳನ್ನು ಪ್ರೇರೇಪಿಸುತ್ತಾರೆ. ಅದೇ ರೀತಿ ಪಠ್ಯ ಸಂಬಂಧಿ ಪ್ರತಿಭೆಯನ್ನು ಪ್ರದರ್ಶಿಸಿ ಸಹಪಾಠಿಗಳನ್ನು ಹುರಿದುಂಬಿಸಲು ಅವಕಾಶವಾಗಲಿ ಎಂಬ ಉದ್ದೇಶದಿಂದಲೇ ಸರ್ವ ಶಿಕ್ಷಣ ಅಭಿಯಾನ ಯೋಜನೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಸರ್ಕಾರಿ ಶಾಲೆಯ ಮಕ್ಕಳ ಕಲಿಕಾ ಗುಣಮಟ್ಟವನ್ನು ಆ ಪರಿಸರದ ಜನರಿಗೆ ಗೊತ್ತಾಗುವಂತೆ ಮಾಡಿ, ಆ ಮೂಲಕ ಸರ್ಕಾರಿ ಶಾಲೆಗಳತ್ತ ಪೋಷಕರ ಗಮನ ಸೆಳೆಯುವ ತಂತ್ರವೂ ಇದಾಗಿದೆ.ರಾಜ್ಯದ ಎಲ್ಲ 203 ಬ್ಲಾಕ್‌ಗಳ ಸರ್ಕಾರಿ ಶಾಲೆಗಳಲ್ಲಿ ನವೆಂಬರ್ 14ರಂದು `ಕಲಿಕೋತ್ಸವ' ಆರಂಭಿಸಲಾಗುತ್ತದೆ. ಶಾಲಾ ಹಂತ, ಕ್ಲಸ್ಟರ್ ಮತ್ತು ಬ್ಲಾಕ್ ಹಂತಗಳಲ್ಲಿ ವಿವಿಧ ಸ್ಪರ್ಧೆ ನಡೆಯಲಿದೆ. ಶಾಲಾ ಹಂತದಲ್ಲಿ ಪ್ರಥಮ ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಮಾತ್ರ ಕ್ಲಸ್ಟರ್ ಹಂತಕ್ಕೆ, ಕ್ಲಸ್ಟರ್ ಹಂತದಲ್ಲಿ ಮೊದಲ ಸ್ಥಾನ ಪಡೆದವರನ್ನು ಬ್ಲಾಕ್ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ.1ರಿಂದ 5ನೇ ತರಗತಿ ವರೆಗಿನ ಮತ್ತು 6ರಿಂದ 8ನೇ ತರಗತಿ ವರೆಗಿನ ಮಕ್ಕಳಿಗೆ ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆ ಏರ್ಪಡಿಸಲಾಗುತ್ತದೆ. ವೈಯಕ್ತಿಕ ಮತ್ತು ಸಾಮೂಹಿಕ ವಿಭಾಗಗಳಲ್ಲಿಯೂ ಸ್ಪರ್ಧೆ ನಡೆಯಲಿವೆ. ಶಿಕ್ಷಕರೇ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ.ಭಾಗವಹಿಸುವ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರವನ್ನು ನೀಡಲಾಗುತ್ತದೆ. ಸ್ಥಳೀಯ ದಾನಿಗಳ ಸಹಾಯದಿಂದ ಬಹುಮಾನ ನೀಡಲು ವ್ಯವಸ್ಥೆ ಮಾಡಿಕೊಳ್ಳಬಹುದು. ಒಂದು ವಿಷಯದಲ್ಲಿ ಕನಿಷ್ಠ ಮೂವರು ಸ್ಪರ್ಧಿಗಳಿರಲೇಬೇಕು ಎಂಬ ನಿಬಂಧನೆ ಹಾಕಲಾಗಿದೆ. ಸಾಮೂಹಿಕ ಸ್ಪರ್ಧೆಗಳಲ್ಲಿ ಭಾಗವಹಿಸುವ ತಂಡದಲ್ಲಿ ಕನಿಷ್ಠ ಒಬ್ಬ ವಿದ್ಯಾರ್ಥಿನಿಯಾದರೂ ಇರಬೇಕು ಎಂಬ ಸೂಚನೆ ನೀಡಲಾಗಿದೆ.ಕಲಿಕೋತ್ಸವ ಕಾರ್ಯಕ್ರಮವು ಆ ಪರಿಸರದ ಎಲ್ಲ ಜನರಿಗೆ ತಲುಪುವಂತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕಲಿಕೋತ್ಸವ ನಡೆಯುವ ದಿನ, ಸಮಯದ ಬಗ್ಗೆ ವ್ಯಾಪಕ ಪ್ರಚಾರ, ಪ್ರಮುಖ ಪ್ರದೇಶಗಳಲ್ಲಿ ಬ್ಯಾನರ್ ಹಾಕಲಾಗುತ್ತದೆ, ಕರಪತ್ರ ಹಂಚಲಾಗುತ್ತದೆ. ವಿದ್ಯಾರ್ಥಿಗಳ ಮೂಲಕ ಜನರಿಗೆ ಆಹ್ವಾನವನ್ನೂ ನೀಡಲಾಗುತ್ತದೆ. ಕಾರ್ಯಕ್ರಮ ಹೆಚ್ಚು ಜನರಿಗೆ ತಲುಪಿ ಉದ್ದೇಶ ಈಡೇರಬೇಕು ಎಂಬ ಆಶಯದ ಹಿನ್ನೆಲೆಯಲ್ಲಿ ಪ್ರಚಾರಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡಲಾಗಿದೆ.ಶಾಲಾ ಹಂತದಲ್ಲಿ ಪ್ರಥಮ ಸ್ಥಾನ ಗಳಿಸಿದವರನ್ನು ಕ್ಲಸ್ಟರ್ ಹಂತದ ಸ್ಪರ್ಧೆಗೆ ಶಿಕ್ಷಕರೇ ಸ್ವತಃ ಕರೆದುಕೊಂಡು ಹೋಗಲಿದ್ದಾರೆ. 25 ವಿದ್ಯಾರ್ಥಿಗಳಿಗಿಂತ ಕಡಿಮೆ ಇದ್ದರೆ ಒಬ್ಬ ಶಿಕ್ಷಕ, ಅದಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿದ್ದರೆ ಇಬ್ಬರು ಶಿಕ್ಷಕರು ಕ್ಲಸ್ಟರ್ ಹಂತದ ಸ್ಪರ್ಧೆಗೆ ಸ್ಪರ್ಧಿಗಳನ್ನು ಕರೆದೊಯ್ಯಲು ವ್ಯವಸ್ಥೆ ಮಾಡಲಾಗಿದೆ.`ಸರ್ಕಾರಿ ಶಾಲೆಯ ಮಕ್ಕಳ ಶೈಕ್ಷಣಿಕ ಸಾಮರ್ಥ್ಯವನ್ನು ಜನಸಮುದಾಯಕ್ಕೆ ತಿಳಿಸಲು ಇದೊಂದು ಅತ್ಯುತ್ತಮ ಅವಕಾಶವಾಗಿದೆ. ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನದ ಮೂಲಕ ಶಾಲೆಗಳ ಬೋಧನಾ ಗುಣಮಟ್ಟದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬಹುದು. ಸರ್ಕಾರಿ ಶಾಲೆಗಳತ್ತ ಪೋಷಕರನ್ನು ಸೆಳೆಯಬಹುದು' ಎನ್ನುತ್ತಾರೆ ಶಿಕ್ಷಕರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry