ನವೋದಯ ವಿದ್ಯಾರ್ಥಿ ಸಾವು: ತನಿಖೆಗೆ ಒತ್ತಾಯ

ಸೋಮವಾರ, ಜೂಲೈ 22, 2019
27 °C

ನವೋದಯ ವಿದ್ಯಾರ್ಥಿ ಸಾವು: ತನಿಖೆಗೆ ಒತ್ತಾಯ

Published:
Updated:

ಹಾಸನ: ಹೊಳೆನರಸೀಪುರ ತಾಲ್ಲೂಕು ಮಾವಿನಕೆರೆಯ ನವೋದಯ ವಿದ್ಯಾಲಯದಿಂದ ಮಧ್ಯಪ್ರದೇಶದ ಶಾಲೆಗೆ ವರ್ಗಾವಣೆಯಾಗಿ ಹೋದ ಬಾಲಕನೊಬ್ಬ ಅಲ್ಲಿ ಕೆರೆಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಈಚೆಗೆ ನಡೆದಿದೆ.ಶಾಲೆಯ ಒಂಬತ್ತನೇ ತರಗತಿಯ ಎ.ಎನ್. ನಿಶ್ಚಲ್ ಎಂಬಾತನೇ ದಾರುಣವಾಗಿ ಸತ್ತಿರುವ ವಿದ್ಯಾರ್ಥಿ. ಘಟನೆಗ ಬಗ್ಗೆ ಬಾಲಕನ ಮನೆಯವರು ಸಂದೇಹ ವ್ಯಕ್ತಪಡಿಸಿದ್ದು, ಈ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.ಮೂಲತಃ ಕೆ.ಆರ್. ನಗರದ ಎ.ಆರ್. ನಾಗರಾಜು ಎಂಬುವವರ ಪುತ್ರನಾದ ನಿಶ್ಚಲ್, ಕೌಟುಂಬಿಕ ಸಮಸ್ಯೆಗಳಿಂದಾಗಿ ತನ್ನ ದೊಡ್ಡಪ್ಪ ಧನಂಜಯ ಅವರ ಪಾಲನೆಯಲ್ಲಿಯೇ ಬೆಳೆದಿದ್ದ. ಧನಂಜಯ ಅವರು ಚನ್ನರಾಯಪಟ್ಟಣದ ಹೇಮಾವತಿ ಸಕ್ಕರೆ ಕಾರ್ಖಾನೆಯ ಸಿಬ್ಬಂದಿಯಾಗಿದ್ದು ಅಲ್ಲಿನ ಶ್ರೀನಿವಾಸಪುರದಲ್ಲಿ ನೆಲೆಸಿದ್ದಾರೆ. ನಿಶ್ಚಲ್ ಆರನೇ ತರಗತಿಯಿಂದ ಮಾವಿನ ಕೆರೆಯ ನವೋದಯ ಶಾಲೆಯಲ್ಲಿ ಕಲಿಯುತ್ತಿದ್ದ.ಒಂಬತ್ತನೇ ತರಗತಿಗೆ ಬಂದಾಗ ಒಂದು ವರ್ಷದ ಮಟ್ಟಿಗೆ ಕೆಲವು ವಿದ್ಯಾರ್ಥಿಗಳನ್ನು ಉತ್ತರ ಭಾರತದ ಯಾವುದಾದರೂ ಶಾಲೆಗೆ ಕಳುಹಿಸಿ ಅಲ್ಲಿನ ವಿದ್ಯಾರ್ಥಿಗಳನ್ನು ಇಲ್ಲಿನ ಶಾಲೆಗೆ ತರುವ ಪದ್ಧತಿ ನವೋದಯ ಶಾಲೆಗಳಲ್ಲಿದ್ದು, ಅದರಂತೆ ಮಧ್ಯಪ್ರದೇಶದ ಶಿವಾನಿ ಜಿಲ್ಲೆಯ ಕಾನಿವಾಡ ಎಂಬಲ್ಲಿರುವ ಶಾಲೆಗೆ ನಿಶ್ಚಲ್ ಆಯ್ಕೆಯಾಗಿದ್ದ. ಜುಲೈ 5ರಂದು ಇವರು ಇಲ್ಲಿಂದ ಪ್ರಯಾಣ ಬೆಳೆಸಿದ್ದರು.ಶನಿವಾರ ಸಂಜೆ ಅಲ್ಲಿನ ಶಾಲೆಯಿಂದ ಧನಂಜಯ್ ಅವರಿಗೆ ಕರೆ ಬಂದಿತ್ತು, ಬಾಲಕ ನಿಶ್ಚಲ್ ಶಾಲೆಯಿಂದ ನಾಪತ್ತೆಯಾಗಿದ್ದಾನೆ, ಊರಿಗೆ ಬಂದಿರುವ ಸಾಧ್ಯತೆ ಇದ್ದು, ನಿಮ್ಮಲ್ಲಿಗೆ ಬಂದರೆ ತಿಳಿಸಿ ಎಂದಿದ್ದರು. ಆದರೆ ಭಾನುವಾರ ಸಂಜೆ 4.30ರ ಸುಮಾರಿಗೆ ಮತ್ತೆ ಅಲ್ಲಿಂದ ಕರೆ ಮಾಡಿದ ವ್ಯಕ್ತಿ, ನಿಶ್ಚಲ್ ಅವರ ಶವ ಶಾಲೆಯ ಸಮೀಪದ ಕೆರೆಯಲ್ಲಿ ಲಭ್ಯವಾಗಿದೆ ಎಂಬ ಆಘಾತಕಾರಿ ಸುದ್ದಿ ತಿಳಿಸಿದರು ಎಂದು ಧನಂಜಯ ತಿಳಿಸಿದ್ದಾರೆ.ವಿಷಯ ತಿಳಿದ ಬಳಿಕ ಇಲ್ಲಿನ ಪ್ರಾಂಶುಪಾಲರು ಸಂಪರ್ಕಿಸಿ `ನೀವು ಒಂದಿಬ್ಬರು ಬನ್ನಿ ಜತೆಯಲ್ಲೇ ಹೋಗಿ ಅಲ್ಲಿಯೇ ದಫನ್ ಮಾಡಿ ಬರೋಣ ಎಂದಿದ್ದರು. ನಾವು ನಮಗೆ ಕಳೆಬರ ಬೇಕೇ ಬೇಕು ಎಂದು ಹಟ ಹಿಡಿದದ್ದರಿಂದ ಕಳುಹಿಸಿಕೊಡಲು ಒಪ್ಪಿದ್ದಾರೆ' ಎಂದು ಧನಂಜಯ ಕಣ್ಣೀರಿಟ್ಟರು.ಶಾಲೆಯಲ್ಲಿ ಏನಾಗಿದೆ ಎಂಬುದು ನಮಗೆ ತಿಳಿದಿಲ್ಲ. ಮೊದಲು ನಾಪತ್ತೆಯಾಗಿದ್ದಾನೆ ಎಂದವರು ಮರುದಿನ ಶವ ಸಿಕ್ಕಿದೆ ಎಂದಿದ್ದಾರೆ. ಅವರೇ ಮರಣೋತ್ತರ ಪರೀಕ್ಷೆಯನ್ನೂ ಮಾಡಿಸಿದ್ದಾರೆ. ಇಡೀ ಘಟನೆಯ ಬಗ್ಗೆ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry