ಸೋಮವಾರ, ಡಿಸೆಂಬರ್ 16, 2019
17 °C
ಹಿರಿಯ ಸಾಹಿತಿ ಪ್ರೊ.ಎಲ್.ಎಸ್. ಶೇಷಗಿರಿರಾವ್ ಅಭಿಮತ

ನವೋದಯ ಸಾಹಿತ್ಯ ಅತ್ಯಂತ ಶ್ರೇಷ್ಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಕನ್ನಡದ ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಶ್ರೀಮಂತ ಇತಿಹಾಸವಿದ್ದು, ಅವುಗಳಲ್ಲಿ ನವೋದಯ ಸಾಹಿತ್ಯ ಅತ್ಯಂತ ಶ್ರೇಷ್ಠವಾದುದು' ಎಂದು ಹಿರಿಯ ಸಾಹಿತಿ ಪ್ರೊ.ಎಲ್.ಎಸ್.ಶೇಷಗಿರಿರಾವ್ ಅಭಿಪ್ರಾಯಪಟ್ಟರು.



ರವೀಂದ್ರ ಕಲಾಕ್ಷೇತ್ರದಲ್ಲಿ ಬುಧವಾರ ಸುಂದರ ಪ್ರಕಾಶನ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಕುರಿತ `ಗರುಡಗಂಭದ ಗೊರೂರು' ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.



`ನವೋದಯ ಕಾಲದ ಪ್ರಮುಖ ಸಾಹಿತಿಗಳಲ್ಲಿ ಗೊರೂರು ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತಾರೆ. ಅವರ ಸಾಹಿತ್ಯದಲ್ಲಿ  ಬ್ರಹ್ಮಾಂಡ ಲೋಕವೇ ಸೃಷ್ಟಿಯಾಗುತ್ತದೆ. ಅವರು ಹಳ್ಳಿ ಜೀವನವನ್ನು ಅನುಭವಿಸಿ, ವಾಸ್ತವ ಸ್ಥಿತಿಗಳನ್ನು ಹಾಸ್ಯ ಮಿಶ್ರಿತವಾಗಿ ಬರೆದಿದ್ದಾರೆ. ಹಳ್ಳಿಯಲ್ಲಿದ್ದ ಮೂಢನಂಬಿಕೆ, ಕ್ರೌರ್ಯ ಮತ್ತು ದ್ವೇಷದ ಬಗ್ಗೆ ಸಾಹಿತ್ಯದಲ್ಲಿ ಬೆಳಕನ್ನು ಚೆಲ್ಲಿದ್ದಾರೆ' ಎಂದು ಹೇಳಿದರು.



`ಗೊರೂರು ಜತೆ 45 ವರ್ಷಗಳ ಕಾಲ ಒಡನಾಟ ಹೊಂದಿದ್ದ ನನಗೆ ಅವರ ಅದ್ಭುತ ವ್ಯಕ್ತಿತ್ವವೇ ದಾರಿದೀಪವಾಗಿದೆ. ಹಳ್ಳಿಯಲ್ಲಿ ಕಷ್ಟಪಟ್ಟು ಬೆಳೆದ ಅವರು, ಜನಸಾಮಾನ್ಯರ ಜತೆ ಬೆರೆತು ಸಾಹಿತ್ಯ ಬರೆಯುತ್ತಿದ್ದರು. ಅವರ ಸಾಹಿತ್ಯದಲ್ಲಿ ವೈವಿಧ್ಯತೆ, ಶ್ರೀಮಂತಿಕೆ ಮತ್ತು ಸಂಕೀರ್ಣತೆ ಅಡಗಿದೆ' ಎಂದರು.

ಕುವೆಂಪು ಭಾಷಾ ಭಾರತಿ ಅಧ್ಯಕ್ಷ ಡಾ. ಪ್ರಧಾನ ಗುರುದತ್ತ ಮಾತನಾಡಿ, `ಗೊರೂರು ಕನ್ನಡಿಗರು ಎಂದೂ ಮರೆಯಲಾಗದ ಹಾಗೂ ಮರೆಯಬಾರದ ಸಾಹಿತಿ. ಕನ್ನಡ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ ಅವಿಸ್ಮರಣೀಯ. ಕನ್ನಡ ಸಾಹಿತ್ಯದಲ್ಲಿ ನಗುವುದನ್ನು ಕಲಿಸಿ ಕೊಟ್ಟಿದ್ದೇ ಗೊರೂರು' ಎಂದು ಬಣ್ಣಿಸಿದರು.



ವಿಮರ್ಶಕ ಡಾ.ಜಿ.ಬಿ.ಹರೀಶ್, `ನಿರ್ಮಲ ವ್ಯಕ್ತಿತ್ವ ಹೊಂದಿದ್ದ ಗೊರೂರು ಅವರು ಸಾಹಿತ್ಯದಲ್ಲಿ ನಿರ್ಮಲತೆಯನ್ನು ಕಾಪಾಡಿಕೊಂಡಿದ್ದಾರೆ. ನೋಡಲು ಸಪ್ಪೆ ಮನುಷ್ಯನಂತೆ ಕಂಡರೂ ಸಾಹಿತ್ಯದಲ್ಲಿ ಪೋಲಿತನವಿದೆ. ಅವರು ಸಾಹಿತ್ಯದಲ್ಲಿ ವರ್ಣಿಸಿರುವ ಹಳ್ಳಿಯ ಜೀವನ ಇಂದಿಗೂ ಜೀವಂತವಾಗಿದೆ' ಎಂದು ಹೇಳಿದರು.



ಸುಂದರ ಪ್ರಕಾಶನದ ಅಧ್ಯಕ್ಷ ಗೌರಿ ಸುಂದರ, ಇಂದಿರಾ ಸುಂದರ ಉಪಸ್ಥಿತರಿದ್ದರು. ಗಾಯಕಿ ಬಿ.ಕೆ. ಸುಮಿತ್ರ ಅವರನ್ನು ಸನ್ಮಾನಿಸಲಾಯಿತು. ಬಳಿಕ ಆರ್.ಕೆ. ಪದ್ಮನಾಭ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಪ್ರತಿಕ್ರಿಯಿಸಿ (+)