ಶುಕ್ರವಾರ, ಮಾರ್ಚ್ 5, 2021
16 °C

ನವೋದ್ಯಮಗಳಿಗಿದು ಕಾಲವಯ್ಯಾ...

ಪೃಥ್ವಿರಾಜ್ ಎಂ.ಎಚ್. Updated:

ಅಕ್ಷರ ಗಾತ್ರ : | |

ನವೋದ್ಯಮಗಳಿಗಿದು ಕಾಲವಯ್ಯಾ...

ಅಮಿತ್‌ ಜೈನ್‌

ಸೆಕೆಂಡ್‌ಹ್ಯಾಂಡ್‌ ಕಾರುಗಳ ಮಾರಾಟದಲ್ಲಿ ದೊಡ್ಡ ಹೆಸರು ಮಾಡಿರುವ ‘ಕಾರ್‌ದೇಖೊ’ ಕಂಪೆನಿ ಕಟ್ಟಿರುವ ಯುವ ಸಹೋದರರ ಸಾಧನೆಯ ಕಥೆ ಇದು.

ದೆಹಲಿ ಮೂಲದ ಅಮಿತ್‌ ಜೈನ್‌ ಮತ್ತು ಅನುರಾಗ್‌ ಜೈನ್‌ ಕಾರ್‌ದೇಖೊ ಕಂಪೆನಿ ಕಟ್ಟಿದ ಸಹೋದರರು.   ದೆಹಲಿ ಐಐಟಿಯಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದಿರುವ ಈ ಸಹೋದರರು ಆರ್ಥಿಕ ಹಿಂಜರಿತದ ಸಮಯದಲ್ಲೇ ಕಂಪೆನಿ ತೆರೆದದ್ದು ವಿಶೇಷ. ಟಿ.ವಿ ವಾಹಿನಿಗಳಿಗೆ ಜಾಹೀರಾತು ನೀಡದೇ ಮೂರು ವರ್ಷ ಕಂಪೆನಿ ನಡೆಸಿದರು. ಪ್ರಸ್ತುತ ದೆಹಲಿ, ಹೈದರಾಬಾದ್‌ ಮತ್ತು ಬೆಂಗಳೂರಿನಲ್ಲಿ ಈ ಕಂಪೆನಿ ಉತ್ತಮ ವಹಿವಾಟು ನಡೆಸುತ್ತಿದೆ.‘ಕಾರ್‌ದೇಖೊ ಆರಂಭಿಸುವ ಮೊದಲು ನಾವು ವಾಹನಗಳ ಮಾರುಕಟ್ಟೆ ಬಗ್ಗೆ ಅಧ್ಯಯನ ಮಾಡಿದೆವು. ದೇಶದಲ್ಲಿ ವಾರ್ಷಿಕವಾಗಿ 30 ಲಕ್ಷ ಸೆಕೆಂಡ್‌ ಹ್ಯಾಂಡ್‌ ವಾಹನಗಳು ಮಾರಾಟವಾಗುತ್ತಿರುವುದು ಗಮನಕ್ಕೆ ಬಂತು. ಈ ನವೋದ್ಯಮದಲ್ಲಿ ತೊಡಗಿದರೆ ನಷ್ಟ ಅನುಭವಿಸುವ ಸಾಧ್ಯತೆಗಳು ಕಡಿಮೆ ಎಂಬ ವಿಶ್ವಾಸ ಮೂಡಿದ್ದರಿಂದ  ದೆಹಲಿಯಲ್ಲಿ 2008ರಲ್ಲಿ ಅತಿ ಕಡಿಮೆ ಬಂಡವಾಳದಲ್ಲಿ ಸಣ್ಣದಾಗಿ ಕಂಪೆನಿ ಪ್ರಾರಂಭಿಸಿದೆವು’ ಎನ್ನುತ್ತಾರೆ ಅಮಿತ್‌.ವಾಹನಗಳ ಮಾರಾಟದ ಜೊತೆಗೆ ಕಂಪೆನಿಗೆ ಬಂಡವಾಳ ಕ್ರೋಡೀಕರಿಸುವಲ್ಲೂ ಗಮನಹರಿಸಿದೆವು. 2013ರವರೆಗೂ ಸಾಕಷ್ಟು ಬಂಡವಾಳ ಸಂಗ್ರಹಿಸಿ ಉದ್ಯಮಕ್ಕೆ ಚೇತರಿಕೆ ನೀಡಿದೆವು. ಕಾರ್‌ದೇಖೊ ಹುಟ್ಟಿದಾಗ ಸೆಕೆಂಡ್‌ಹ್ಯಾಂಡ್‌ ವಾಹನಗಳನ್ನು ಮಾರಾಟ ಮಾಡುವ ಸಾಕಷ್ಟು ಕಂಪೆನಿಗಳ ಸ್ಪರ್ಧೆ ಇತ್ತು. ಪತ್ರಿಕೆಗಳಲ್ಲಿನ ಕ್ಲಾಸಿಫೈಡ್‌, ಆನ್‌ಲೈನ್‌ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ನೀಡಿದೆವು. ಇದರ ಜತೆಗೆ  ಆ್ಯಪ್‌ ಅಭಿವೃದ್ಧಿಪಡಿಸುವ ಮೂಲಕ ನಮ್ಮ ಕಂಪೆನಿಯನ್ನು ಗ್ರಾಹಕ ಸ್ನೇಹಿ ಕಂಪೆನಿಯಾಗಿ ರೂಪಿಸಿದೆವು. ಇದು ಆದಾಯ ಏರಿಕೆಗೆ ಕಾರಣವಾಯಿತು ಎನ್ನುತ್ತಾರೆ ಅಮಿತ್‌.ಇಂದು ಯಾರು ಬೇಕಾದರೂ ನವೋದ್ಯಮಗಳನ್ನು ಆರಂಭಿಸಬಹುದು. ಇದಕ್ಕಾಗಿ ಸರ್ಕಾರ ಕಾನೂನನ್ನು ಸರಳೀಕರಿಸಿರುವುದರ ಜತೆಗೆ ಹಣಕಾಸು ನೆರವು ನೀಡುತ್ತದೆ. ಹೀಗೆ ಸೌಲಭ್ಯಗಳನ್ನು ಪಡೆದುಕೊಂಡ ಯುವಕರು ಎಚ್ಚರಿಕೆಯಿಂದ ಕಂಪೆನಿಗಳನ್ನು ನಡೆಸಿಕೊಂಡು ಹೋಗಬೇಕು ಎಂದು ಅಮಿತ್‌ ಯುವಕರಿಗೆ ಕಿವಿ ಮಾತು ಹೇಳುತ್ತಾರೆ.

www.cardekho.comರಾಮಕೃಷ್ಣನ್‌

ಭಾರತದಲ್ಲಿ ಶೇಕಡಾ 30ರಷ್ಟು ಪ್ರತಿಭಾವಂತ ವಿದ್ಯಾರ್ಥಿಗಳು ಹಣಕಾಸಿನ  ಸಮಸ್ಯೆಯಿಂದಾಗಿ ಉನ್ನತ ವ್ಯಾಸಂಗದಿಂದ ವಂಚಿತರಾಗುತ್ತಿದ್ದಾರೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಇತ್ತೀಚೆಗೆ ವರದಿ ಪ್ರಕಟಿಸಿತ್ತು. ಪ್ರತಿಭಾವಂತ ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆಯೋ ಗೊತ್ತಿಲ್ಲ. ಆದರೆ ತಮಿಳುನಾಡಿನ ಯುವಕರಿಬ್ಬರು  ಬಡ ವಿದ್ಯಾರ್ಥಿಗಳ ಉನ್ನತ ಅಧ್ಯಯನಕ್ಕಾಗಿ ಸಾಲ ನೀಡುವ ಹಣಕಾಸು ಸಂಸ್ಥೆ ಆರಂಭಿಸಿದ್ದಾರೆ.

ರಾಮಕೃಷ್ಣನ್‌ ಮತ್ತು ಜೆ.ಅಬ್ರಾಹಂ ಕೂಡಿ ‘ಶಿಕ್ಷಾಫೈನಾನ್ಸ್‌’ ಆರಂಭಿಸಿರುವ ಗೆಳೆಯರು, ಇದರ ಮೂಲಕ ಭಾರತದಲ್ಲಿನ ಬಡ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕೆ ಸಾಲ ಸೌಲಭ್ಯ, ವಿದೇಶಗಳಲ್ಲಿ ವ್ಯಾಸಂಗ ಮಾಡಬಯಸುವ ಪ್ರತಿಭಾವಂತರಿಗೆ ಹಣಕಾಸು ನೆರವು ನೀಡುತ್ತಿದ್ದಾರೆ. ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡುವುದು ವಿಶೇಷ. ಹತ್ತು ಸಾವಿರ ರೂಪಾಯಿಗಳಿಂದ ಹಿಡಿದು ಒಂದು ಕೋಟಿ ರೂಪಾಯಿವರೆಗೂ ಸಾಲ ಕೊಡಲಾಗುತ್ತದೆ. ಸಾಲ ಪಡೆದವರು ಸುಲಭ ಕಂತುಗಳ ಮೂಲಕ 20 ರಿಂದ 60 ತಿಂಗಳಲ್ಲಿ ಸಾಲವನ್ನು ಹಿಂತಿರುಗಿಸಬಹುದು.ರಾಮಕೃಷ್ಣನ್‌ ಕಳೆದೊಂದು ದಶಕದಿಂದ  ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ಮಾಡುವಾಗ ಕೆಲ ವಿದ್ಯಾರ್ಥಿಗಳಿಗೆ ಭದ್ರತಾ ಕಾರಣಗಳಿಂದ ಸಾಲ ನೀಡಲು ಸಾಧ್ಯವಾಗುತ್ತಿರಲಿಲ್ಲ.  ಸಾಲ ಸೌಲಭ್ಯ ಸಿಗದ ವಿದ್ಯಾರ್ಥಿಗಳು ಶಿಕ್ಷಣವನ್ನು ಮೊಟಕುಗೊಳಿಸಿ ಸಣ್ಣ ಪುಟ್ಟ ಕೆಲಸಗಳಿಗೆ ಸೇರಿಕೊಳ್ಳುತ್ತಿರುವುದನ್ನು ಗಮನಿಸಿದ್ದರು. ಮುಂದೆ, ಹಣಕಾಸಿನ ಅಡಚಣೆಯಿಂದಾಗಿ ಶಿಕ್ಷಣದಿಂದ ದೂರ ಉಳಿಯುವ ಯುವ ಜನರ ಅನುಕೂಲಕ್ಕಾಗಿ ಹಣಕಾಸು ಸಂಸ್ಥೆ ಸ್ಥಾಪಿಸುವ ಮನಸ್ಸು ಮಾಡಿದರು. ಈ ಯೋಜನೆಗೆ  ಗೆಳೆಯ ಅಬ್ರಾಹಂ ಸಾಥ್‌ ನೀಡಿದ್ದರಿಂದ ಶಿಕ್ಷಾಫೈನಾನ್ಸ್‌ ನಿರಾತಂಕವಾಗಿ ಆರಂಭವಾಯಿತು ಎನ್ನುತ್ತಾರೆ ರಾಮಕೃಷ್ಣನ್‌.ನಮ್ಮ ಸಂಸ್ಥೆಯಿಂದ ಸಾಲ ಪಡೆದ ಸಾವಿರಾರು ವಿದ್ಯಾರ್ಥಿಗಳು ಇಂದು ವಿದೇಶಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಬಡ ವಿದ್ಯಾರ್ಥಿಗಳು ಮಾತ್ರವಲ್ಲದೆ ಆರ್ಥಿಕ ನಷ್ಟದಲ್ಲಿರುವ ಶಿಕ್ಷಣ ಸಂಸ್ಥೆಗಳಿಗೂ ಸಾಲ  ನೀಡಲಾಗುವುದು ಎಂದು ರಾಮಕೃಷ್ಣನ್‌ ಹೇಳುತ್ತಾರೆ. ಬಡ ವಿದ್ಯಾರ್ಥಿಗಳ ನೆರವಿಗೆ ನಿಂತಿರುವ ರಾಮಕೃಷ್ಣನ್‌ ಮತ್ತು ಅಬ್ರಾಹಂ ಅವರ ಸೇವೆ ಶ್ಲಾಘನೀಯ.

shikshafinance.com/ಸುದಿ ಶೇಷಾಚಲ

ಸುದಿ ಶೇಷಾಚಲ ಮತ್ತು ಬಾಬು ಜಯರಾಂ ಸ್ಥಾಪಿಸಿದ ಯಶಸ್ವಿ ನವೋದ್ಯಮದ ಕಥೆ ಇದು.  ಬಾಲ್ಯದ ಗೆಳೆಯರಾಗಿದ್ದ ಶೇಷಾಚಲ ಮತ್ತು ಬಾಬು  ವಿದ್ಯಾಭ್ಯಾಸ ಮುಗಿದ ಬಳಿಕ ಉದ್ಯಮ ಕ್ಷೇತ್ರದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು.

   ಕೆಲ ವರ್ಷಗಳ ಬಳಿಕ ಈ ಗೆಳೆಯರು ಕ್ಲೌಡ್‌ ಮ್ಯಾನೇಜ್‌ಮೆಂಟ್‌ ಕ್ಷೇತ್ರದಲ್ಲಿ ಉತ್ತಮ ವಹಿವಾಟು ನಡೆಸುತ್ತಿದ್ದ  ‘ಕ್ಸೇವಿಯರ್‌ ಕಂಪೆನಿ’ ಸೇರಿಕೊಂಡರು. ಇಲ್ಲಿ ಐದು ವರ್ಷ ಕೆಲಸ ಮಾಡಿದ್ದರಿಂದ ಅಪಾರ ಅನುಭವ ಪಡೆದರು.  ಮಾರುಕಟ್ಟೆ ಮತ್ತು ಉತ್ಪಾದನಾ ವಲಯದಲ್ಲಿ ತೊಡಗಿಕೊಂಡಿರುವವರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿಕೊಡುವ ಸಲುವಾಗಿ ಸ್ಟಾರ್ಟ್‌ಅಪ್‌  ಆರಂಭಿಸುವ ಬಗ್ಗೆ ಯೋಚನೆ ಮಾಡಿದರು. ಇದರಲ್ಲಿ ಯಶಸ್ವಿಯಾಗಬಹುದು ಎಂಬ ವಿಶ್ವಾಸ ಮೂಡಿದ ಬಳಿಕವೇ ‘ಬಿ2ಬಿಸ್ಪೇರ್‌’ ಕಂಪೆನಿ  ಆರಂಭಿಸಿದ್ದಾಗಿ ಶೇಷಾಚಲ ಹೇಳುತ್ತಾರೆ. ಬಿ2ಬಿಸ್ಪೇರ್‌ ಒಂದು ಆನ್‌ಲೈನ್‌ ಪೋರ್ಟಲ್‌.ಉತ್ಪನ್ನಗಳನ್ನು ಮಾರುವವರಿಗೆ ಮತ್ತು ಕೊಳ್ಳುವವರಿಗೆ ವೇದಿಕೆ ಕಲ್ಪಿಸುವುದೇ ಈ ಕಂಪೆನಿ ಮುಖ್ಯ ಉದ್ದೇಶ. ಹೊಸದಾಗಿ ಉದ್ಯಮಗಳನ್ನು ಸ್ಥಾಪಿಸುವವರಿಗೆ  ಯೋಜನೆ  ಮತ್ತು ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುವುದು. ವಿದೇಶಗಳಿಗೆ ಸರಕುಗಳನ್ನು ರಫ್ತು ಮಾಡುವ ಬಗ್ಗೆಯೂ ಉದ್ಯಮಶೀಲರಿಗೆ ಇಲ್ಲಿ ಮಾಹಿತಿ ನೀಡಲಾಗುತ್ತಿರುವುದು ವಿಶೇಷ.ಈ ಪೋರ್ಟಲ್‌ನಲ್ಲಿ ಈಗಾಗಲೇ ಐದು ಸಾವಿರಕ್ಕೂ ಹೆಚ್ಚು ಕಂಪೆನಿಗಳು ನೋಂದಣಿ ಮಾಡಿಕೊಂಡಿವೆ. ಇದರಲ್ಲಿ ಕೊಳ್ಳುವವರು ಮತ್ತು ಮಾರುವವರು ಸೇರಿದ್ದಾರೆ. ಪಾದರಕ್ಷೆಗಳು, ಕೃಷಿ ಉತ್ಪನ್ನಗಳು, ಎಲ್ಲಾ ಮಾದರಿಯ ಉಡುಪುಗಳು, ಕೈಗಾರಿಕಾ ಉತ್ಪನ್ನಗಳು, ಆಹಾರ ಪದಾರ್ಥಗಳು, ಪ್ಲಾಸ್ಟಿಕ್‌ ಮತ್ತು ಲೋಹದ ಸರಕುಗಳು ಮುಖ್ಯವಾಗಿ ಸೇರಿವೆ.ಯುವ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವ ಮುಖ್ಯ ಉದ್ದೇಶದಿಂದ ಈ ಕಂಪೆನಿ ತೆರೆಯಲಾಗಿದೆ. ಕೆಲ ಉದ್ಯಮಿಗಳಿಗೆ ಸರಕುಗಳನ್ನು ಉತ್ಪಾದಿಸುವ ಸಾಮರ್ಥ್ಯ ಮಾತ್ರ ಇರುತ್ತದೆ. ಆದರೆ ಮಾರುಕಟ್ಟೆ ಜ್ಞಾನವಿರುವುದಿಲ್ಲ. ಇಂತಹವರ  ಅನುಕೂಲಕ್ಕಾಗಿಯೇ ಬಿ2ಬಿಸ್ಪೇರ್‌ ಕೆಲಸ ಮಾಡುತ್ತಿದೆ ಎಂದು ಬಾಬು ಜಯರಾಂ ಹೇಳುತ್ತಾರೆ.

b2bsphere.com/pricing

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.