ನಾಗಣ್ಣ ಸಾವು: ಜಿಲ್ಲಾಸ್ಪತ್ರೆ ವಿರುದ್ಧ ಕ್ರಮಕ್ಕೆ ಆಗ್ರಹ

5

ನಾಗಣ್ಣ ಸಾವು: ಜಿಲ್ಲಾಸ್ಪತ್ರೆ ವಿರುದ್ಧ ಕ್ರಮಕ್ಕೆ ಆಗ್ರಹ

Published:
Updated:

ಗುಲ್ಬರ್ಗ: ಗುಲ್ಬರ್ಗ ಜಿಲ್ಲಾ ಸರ್ಕಾರಿ ಆಸ್ಪತ್ರೆ ಆಡಳಿತ, ವೈದ್ಯರು, ಸಿಬ್ಬಂದಿ ಮತ್ತು ಶುಶ್ರೂಷಕಿಯರ ನಿರ್ಲಕ್ಷ್ಯದಿಂದಾಗಿ ಸೇಡಂ ತಾಲ್ಲೂಕಿನ ನಾಗಣ್ಣ ಶಿವಪ್ಪ ಎಂಬವರು ಮೃತಪಟ್ಟಿದ್ದಾರೆ ಎಂದು `ಬದಲಾವಣೆಗೆ ನಾವು ಬದ್ಧ~ (ವಿ ಸ್ಟ್ಯಾಂಡ್ ಫೋರ್ ಚೇಂಜ್) ತಂಡವು ಬ್ರಹ್ಮಪುರ ಪೊಲೀಸ್ ಠಾಣೆಗೆ ದೂರು ನೀಡಿದೆ.

ಕಾಮಲೆ ರೋಗದಿಂದ ಬಳಲುತ್ತಿದ್ದ ಸೇಡಂ ತಾಲ್ಲೂಕಿನ ನಾಗಣ್ಣ ಶಿವಪ್ಪ ಎಂಬವರನ್ನು ಏಪ್ರಿಲ್ 23ರಂದು ಗುಲ್ಬರ್ಗ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. `ಬದಲಾವಣೆಗೆ ನಾವು ಬದ್ಧ~ ತಂಡವು ಮೇ 6ರಂದು  ಆಸ್ಪತ್ರೆ ಸ್ವಚ್ಛಗೊಳಿಸುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಆ ವೇಳೆಯಲ್ಲಿ ಮೂರನೇ ಮಹಡಿಯ ನೆಲದ ಮೇಲೆ, ಮಂಚದ ಕೆಳಗೆ ಅನಾಥವಾಗಿ ಮಲಗಿರುವ ಸ್ಥಿತಿಯಲ್ಲಿ ನಾಗಣ್ಣ ಪತ್ತೆಯಾಗಿದ್ದರು. ಅವರ ಮಲ- ಮೂತ್ರ ವಿಸರ್ಜನೆಗೆ ಸಮರ್ಪಕ ವ್ಯವಸ್ಥೆ ಇರಲಿಲ್ಲ. ತೀವ್ರ ಬಾಯಾರಿಕೆಯಿಂದ ಬಳಲಿದ್ದರು. ರೋಗಿಯ ದುಸ್ಥಿತಿಗೆ ಸ್ಪಂದಿಸಿದ ತಂಡವು ಅವರನ್ನು ಹಾಸಿಗೆಯಲ್ಲಿ ಮಲಗಿಸಿ, ಸೂಕ್ತ ಚಿಕಿತ್ಸೆ ಹಾಗೂ ಶುಶ್ರೂಷೆ ನೀಡುವಂತೆ ವೈದ್ಯರು ಹಾಗೂ ಆಡಳಿತಕ್ಕೆ ಮನವಿ ಮಾಡಿತ್ತು. ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್ ಅವರನ್ನು ವಿನಂತಿಸಿತ್ತು. ಜಿಲ್ಲಾಧಿಕಾರಿ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.

ಎಲ್ಲ ಪ್ರಯತ್ನದ ಬಳಿಕವೂ ಮೇ 12ರಂದು ನಾಗಣ್ಣ ನಿಧನರಾಗಿದ್ದಾರೆ. ಇದಕ್ಕೆ ಆಸ್ಪತ್ರೆಯ ಸಂಪೂರ್ಣ ವೈಫಲ್ಯ ಮತ್ತು ನಿರ್ಲಕ್ಷ್ಯವೇ ಕಾರಣ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇನ್ನು ಮುಂದೆ ಯಾವುದೇ ಬಡ ರೋಗಿಗಳಿಗೆ ಈ ಸ್ಥಿತಿ ಬರದಂತೆ ತಡೆಯಬೇಕು ಎಂದು ದೂರಿನಲ್ಲಿ ಹೇಳಿರುವುದಾಗಿ ತಂಡದ ಸಂಚಾಲಕ ಶರಣ ದೇಸಾಯಿ ತಿಳಿಸಿದ್ದಾರೆ. 

ಇದೇ ದೂರನ್ನು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ರಾಜ್ಯಪಾಲ ಹಂಸರಾಜ್ ಭಾರದ್ವಾಜ್, ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಲೋಕಸಭಾ ಸದಸ್ಯ ಧರ್ಮಸಿಂಗ್, ಮಾನವ ಹಕ್ಕುಗಳ ಆಯೋಗ, ಗೃಹ ಸಚಿವ ಆರ್. ಅಶೋಕ್, ಕಾನೂನು ಸಚಿವ ಸುರೇಶ್ ಕುಮಾರ್, ವೈದ್ಯಕೀಯ ಶಿಕ್ಷಣ ಸಚಿವ ರಾಮದಾಸ್, ಜಿಲ್ಲಾಧಿಕಾರಿ  ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸಲ್ಲಿಸಿರುವುದಾಗಿ ದೇಸಾಯಿ ತಿಳಿಸಿದ್ದಾರೆ.   

ಈ ಬಗ್ಗೆ ದೂರು ಬಂದಿದ್ದು, ಬ್ರಹ್ಮಪುರ ಇನ್ಸ್‌ಪೆಕ್ಟರ್ ಶರಣಬಸವ ನೇತೃತ್ವದಲ್ಲಿ ಪರಿಶೀಲನೆ ನಡೆಸುತ್ತಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry