ಶುಕ್ರವಾರ, ನವೆಂಬರ್ 22, 2019
20 °C
ಭಕ್ತರಿಗೆ ಹೊಂಡ-ಗುಂಡಿ, ದೂಳಿನಿಂದ ಕೂಡಿದ ರಸ್ತೆಯ ಸ್ವಾಗತ...

ನಾಗತಿಬೆಳಗಲು: ಇಂದಿನಿಂದ ನಂಜುಂಡೇಶ್ವರ ಜಾತ್ರೆ

Published:
Updated:

ಹೊಳೆಹೊನ್ನೂರು: ಪ್ರಕೃತಿ ದತ್ತವಾದ ನೈಸರ್ಗಿಕ ಸಂಪತ್ತನ್ನು ಮೈಗೊಡಿಕೊಂಡು ಒಂದು ಸುಂದರ ತಾಣದಂತಿರುವ ಹೊಳೆಹೊನ್ನೂರು -ಭದ್ರಾವತಿ ಪಟ್ಟಣದ ಮಧ್ಯ  8 ಕಿ.ಮೀ. ದೂರದಲ್ಲಿರುವ ನಾಗತಿಬೆಳಗಲು ಗ್ರಾಮ ಭದ್ರಾ ನದಿಯ ದಡದ ಮೇಲೆ ನೆಲೆಸಿರುವ ಪುರಾಣ ಪ್ರಸಿದ್ಧ ನಂಜುಂಡೇಶ್ವರ ದೇವರ ಜಾತ್ರೆ ಏ. 22ರಿಂದ 26ರವರೆಗೆ ಜರುಗಲಿದೆ. ರಥೋತ್ಸವ ಏ. 24ರಂದು ನಡೆಯಲಿದೆ.ಕ್ಷೇತ್ರದ ಹಿನ್ನೆಲೆ: ನಂಜುಂಡೇಶ್ಚರ ಸ್ವಾಮಿ ಮಧ್ಯ ಕರ್ನಾಟಕದ ಭಕ್ತರಿಗೆ ಧಾರ್ಮಿಕ ಕೇಂದ್ರ. ಸಹ್ಯಾದ್ರಿ ಪರ್ವತ ಶ್ರೇಣೆಯ ಶೃಂಗೇರಿ- ಕುದುರೆಮುಖದ ನಡುವೆ ಇರುವ ಗಂಗಾ ಮೂಲದಿಂದ ಪಶ್ಚಿಮಾಭಿಮುಖವಾಗಿ ಸುಮಾರು 56 ಪುಣ್ಯಕ್ಷೇತ್ರಗಳನ್ನು ದಾಟಿ ನಾಗತಿಬೆಳಗಲು ಮೂಲಕ ಕೂಡ್ಲಿ ಸಂಗಮದಲ್ಲಿ ತುಂಗ ನದಿಯನ್ನು ಸೇರುವಂತಹ ಭದ್ರಾ ನದಿಯನ್ನು `ಹರ'ನೆಂದು ಪುರಾತನ ಕಾಲದಿಂದಲೂ ಕರೆಯುತ್ತಾರೆ.ಇಂತಹ ಪುಣ್ಯ ನದಿಯ ದಡದ ಮೇಲೆ ನಂಜುಂಡೇಶ್ವರ ಸ್ವಾಮಿ ಉದ್ಭವ ಮೂರ್ತಿ ಇದೆ.  ಹಿಂದೆ ಒಂದು ಹುತ್ತದ ಮೇಲೆ ಹಸು ಬಂದು ಪ್ರತಿ ದಿನ ಹಾಲು ಕರೆಯುವುದನ್ನು ಗಮನಿಸಿದ ದನಗಾಯಿ ಗ್ರಾಮದ ಹಿರಿಯರಿಗೆ ತಿಳಿಸುತ್ತಾನೆ.ಆಗ ಗ್ರಾಮಸ್ಥರು ಆ ಸ್ಥಳ ಪರಿಶೀಲಿಸಿದಾಗ ಉದ್ಧವ ಮೂರ್ತಿ ಇರುವುದನ್ನು ಕಂಡು ವಿವಿಧ ರೀತಿಯ ಸಂಶೋಧಕರು ನೋಡಿದಾಗ ಇದು ಶಿವ ಭಕ್ತರು ಪೂಜಿಸುವ ದೇವರು ನಂಜುಂಡೇಶ್ವರನ ಹೋಲಿಕೆ ಇದೆ ಎಂದು ತಿಳಿಸಿದಾಗ, ಅಲ್ಲಿಂದ ನಂಜುಂಡೇಶ್ವರ ದೇವರ ಪೂಜಾ ಕಾರ್ಯಕ್ರಮಗಳು ವಿಧಿವತ್ತಾಗಿ ನಡೆಯುತ್ತವೆ. ರಾಜ್ಯದ ನಾನಾ ಕಡೆಗಳಿಂದ ಭಕ್ತರು ಬಂದು ಸೇರುತ್ತಾರೆ. ಪ್ರತಿ ವರ್ಷ ಚೈತ್ರ ಮಾಸದ ಶುಕ್ಲಪಕ್ಷ ತ್ರಯೋದಶಿ ತಿಥೌ ಹಸ್ತ ನಕ್ಷತ್ರದಲ್ಲಿ ರಥೋತ್ಸವ ಜರಗುತ್ತದೆ.24ರಂದು ಬೆಳಿಗ್ಗೆ ಸ್ವಾಮಿಯ ರುದ್ರಾಭಿಷೇಕ ಮಹಾ ಮಂಗಳಾರತಿ ನಂತರ 10ಕ್ಕೆ ಕೆಂಡಾರ್ಚನೆ ಸಂಜೆ ರಥಾರೋಹಣ, ಬೆಳಗಿನ ಜಾವ ರಥೋತ್ಸವ ಇದು ಪುರಾತನ ಕಾಲದಿಂದಲೂ ನೆರವೇರುತ್ತಾ ಬಂದ ಸಂಪ್ರದಾಯ.ಈ ದೇವಸ್ಥಾನದಲ್ಲಿ ದಸರಾ ಉತ್ಸವ, ಶಿವರಾತ್ರಿ ಆಚರಣೆ, ಕಾರ್ತೀಕ ಪೂಜೆ, ಶ್ರಾವಣಮಾಸ, ಧನುರ್‌ಮಾಸ, ಪ್ರತಿ ಸೋಮವಾರ, ಹುಣ್ಣಿಮೆ, ಆಮಾವಾಸ್ಯೆ ಸೇರಿದಂತೆ ವಿಶೇಷ ದಿನಗಳಲ್ಲಿ ರುದ್ರಾಭಿಷೇಕ ನಡೆಯುತ್ತದೆ.ದೇವಸ್ಥಾನದ ವಿಶೇಷ: ಸಮಸ್ಯೆ (ತೊಂದರೆ, ಕಷ್ಟ) ಇದ್ದವರು ದೇವಸ್ಥಾನಕ್ಕೆ ಹರಕೆ ಮಾಡಿಕೊಂಡರೆ ಸಮಸ್ಯೆಗಳು ಪರಿಹಾರವಾಗುತ್ತವೆ  ಎನ್ನುವ ನಂಬಿಕೆ ಇದೆ. ದೇವರ ಗುಗ್ಗುಳ ಹೊತ್ತರೆ ಬಿಳಿ ತೊನ್ನು, ಚರ್ಮದ ಕಾಯಿಲೆಗಳು, ಕಿವಿ ಸೋರುವಿಕೆ, ಲಗ್ನ ಸುಯೋಗ, ಮಕ್ಕಳ ಫಲ, ಮಕ್ಕಳ ಜ್ಞಾಪಕ ಶಕ್ತಿ. ದೊರೆಯುವುದರ ಜತೆಯಲ್ಲಿ ದೇವಸ್ಥಾನದಲ್ಲಿಯೇ ಇದ್ದು, ಕಟ್ಟಳೆ ಮಾಡಿದರೆ ಮಾಟ-ಮಂತ್ರದಿಂದ ದೂರಾಗುವ ನಂಬಿಕೆ ಭಕ್ತರಲ್ಲಿದೆ. ಆದ್ದರಿಂದ, ರಾಜ್ಯದಾದ್ಯಂತ ಭಕ್ತರು ಬಂದು ಪೂಜೆಯ ಜತೆ ವಿವಿಧ ಸೇವೆ ಸಲ್ಲಿಸುತ್ತಾರೆ.ಹೆಚ್ಚಿನ ಜನ ಬಂದು ಸೇರುವ ಈ ಜಾತ್ರೆಗೆ ಹೊಳೆಹೊನ್ನೂರು- ನಾಗತಿಬೆಳಗಲು ರಸ್ತೆ ಗುಂಡಿ ಮಣ್ಣಿನ ದೂಳಿನಿಂದ ಕೂಡಿದೆ. ಗೊಂದಿ ನಾಲೆಯ ಕಳಪೆ ಕಾಮಗಾರಿಯಿಂದ ದೇವಸ್ಥಾನದ ಬಳಸೊಕೆರೆಯಲ್ಲಿ ನೀರಿಲ್ಲದೇ ಬರಿದಾಗಿದೆ. ಭದ್ರಾ ನದಿಯಿಂದ ದೇವಸ್ಥಾನಕ್ಕೆ ಬರುವ ರಸ್ತೆ ಗುಂಡಿಗಳು ಮತ್ತು ದೂಳಿನಿಂದ ಕೂಡಿದ್ದು, ಇದ್ದವರ ಒತ್ತುವರಿಯಿಂದ ರಸ್ತೆಯಲ್ಲಿ ಭಕ್ತರು ಸಂಚರಿಸದಂತಾಗಿದೆ. ಅಭಿವೃದ್ಧಿ ಬಗ್ಗೆ ಜನಪ್ರತಿನಿಧಿಗಳು ನೀಡಿದ ಭರವಸೆಗಳು ಈಡೇರಿಲ್ಲ. ಈ ಬಗ್ಗೆ  ಭಕ್ತರಿಗೆ ಅಸಮಾಧಾನವಿದೆ.

-ಟಿ.ಎಂ. ಸಂಗಪ್ಪ

ಪ್ರತಿಕ್ರಿಯಿಸಿ (+)