ನಾಗತಿಹಳ್ಳಿ ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆಗೆ ಈಗ 26

7

ನಾಗತಿಹಳ್ಳಿ ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆಗೆ ಈಗ 26

Published:
Updated:
ನಾಗತಿಹಳ್ಳಿ ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆಗೆ ಈಗ 26

ಬೆಂಗಳೂರು: `ಅಭಿವ್ಯಕ್ತಿ~, ಇದು ಹಿರಿಯ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ತಮ್ಮ ಭಾವನೆಗಳನ್ನು, ಚಿಂತನೆಗಳನ್ನು ಮೂರ್ತೀಕರಿಸುವ ವೇದಿಕೆಗೆ ಇಟ್ಟ ಹೆಸರು. ಈ ವೇದಿಕೆಗೆ ಆಗಸ್ಟ್ 15ಕ್ಕೆ 26 ಸಾರ್ಥಕ ವಸಂತಗಳು ತುಂಬುತ್ತವೆ. ಈ ಮೂಲಕ ಅವರು ಹತ್ತು-ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ.ಕಾರ್ಯಕ್ರಮಗಳ ಬಗ್ಗೆ ಚರ್ಚಿಸುವ ಮುನ್ನ ಈ ವೇದಿಕೆಯ ಸ್ಥಾಪನೆಗೆ ಕಾರಣವಾದ ಅಂಶಗಳನ್ನೂ ತಿಳಿದುಕೊಳ್ಳುವುದು ಅಗತ್ಯ. ಅಂದು 1985ರ ಆಗಸ್ಟ್ 15. (ಇದು ನಾಗತಿಹಳ್ಳಿ ಅವರ ಜನ್ಮದಿನವೂ ಹೌದು). ಅದಾಗಲೇ ಕಥೆಗಾರರಾಗಿ ಹೆಸರು ಮಾಡಿದ್ದ ಚಂದ್ರಶೇಖರ್, ತಮ್ಮೂರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ನಾಗತಿಹಳ್ಳಿಗೆ ಏನಾದರೂ ಸಹಾಯ ಮಾಡಬೇಕು. ಊರಿನ ಋಣ ತೀರಿಸಬೇಕು ಎಂದು ಬಯಸಿದರು.

 

ಆಗ ತೋಚಿದ್ದು ಹಳ್ಳಿಯ ಮಕ್ಕಳು, ಮಹಿಳೆಯರ ಅಭಿವ್ಯಕ್ತಿಗೆ ಒಂದು ವೇದಿಕೆಯೊಂದನ್ನು ಸ್ಥಾಪಿಸಬೇಕು ಎಂಬುದು. ಅಲ್ಲಿಯವರೆಗೆ ತಲೆಯೊಳಗೆ ಕೊರೆಯುತ್ತಿದ್ದ `ಅಭಿವ್ಯಕ್ತಿ~ ಎಂಬ ಹೆಸರನ್ನೇ ಇಡುವ ಮೂಲಕ ನಾಗತಿಹಳ್ಳಿಯಲ್ಲಿ `ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ~ಯನ್ನು ಆರಂಭಿಸಿದರು. ಸರ್ಕಾರದ, ಸಂಘ ಸಂಸ್ಥೆಗಳ ಧನಸಹಾಯ ಇದಕ್ಕಿಲ್ಲ. ಅವರು ಕೇಳಿದ್ದರೆ ಆರ್ಥಿಕ ಸಹಾಯ ಸಿಗಬಹುದಿತ್ತು. ಆದರೆ ಈ ಕಾರ್ಯವನ್ನು ತಮ್ಮ ಆದಾಯದ ಒಂದು ಪಾಲಿನಲ್ಲಿ ನಡೆಸಬೇಕು ಎಂದು ಬಯಸಿದ್ದರಿಂದ ಇಂದಿಗೂ ಅವರ ಹಣಕಾಸು ನೆರವಿನಿಂದಲೇ ನಡೆಯುತ್ತಿದೆ.

 

ವೇದಿಕೆಯ ಮೂಲಕ ಗ್ರಾಮದಲ್ಲಿ ಸುಸಜ್ಜಿಯ ಗ್ರಂಥಾಲಯ, ರಂಗಮಂದಿರ, ಕಂಪ್ಯೂಟರ್ ಕೇಂದ್ರಗಳನ್ನು ತೆರೆಯುವ ಮೂಲಕ ಗ್ರಾಮೀಣರ ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಿಗೊಳಿಸುವ ಕೆಲಸವನ್ನೂ ಆರಂಭಿಸಿದರು.ಪ್ರತಿ ತಿಂಗಳು ಗ್ರಂಥಾಲಯದಲ್ಲಿ ಓರಗೆಯ ಗೆಳೆಯರು ಸೇರಿಕೊಂಡು ಯಾವುದಾದರೊಂದು ಪ್ರಸ್ತುತ ವಿಷಯದ ಕುರಿತು ಚರ್ಚಿಸುವ, ವಿಚಾರ ಸಂಕಿರಣಗಳನ್ನು ನಡೆಸುವ, ಗ್ರಾಮದಲ್ಲಿ ಸಸಿ ನೆಡುವ, ಪರಿಸರ ಸಂರಕ್ಷಿಸುವ ಕೆಲಸವೂ ಕ್ರಮೇಣ ಕಾವು ಪಡೆಯಿತು. ಆದ್ದರಿಂದ ತಿಂಗಳಿಗೊಮ್ಮೆ ಚರ್ಚೆ, ವಿಚಾರ ಸಂಕಿರಣಗಳನ್ನು ಸಣ್ಣ ಪ್ರಮಾಣದಲ್ಲಿ ಮತ್ತು ಪ್ರತಿ ಯುಗಾದಿಯ ಸಂದರ್ಭದಲ್ಲಿ `ನಾಗತಿಹಳ್ಳಿ ಸಾಂಸ್ಕೃತಿಕ ಹಬ್ಬ~ಕ್ಕೆ ಚಾಲನೆ ನೀಡಲಾಯಿತು.ಇದು ವರ್ಷದಿಂದ ವರ್ಷಕ್ಕೆ ಬೆಳೆಯುತ್ತ ದಶ ವಸಂತಗಳನ್ನು ಪೂರೈಸಿತು. ದಶಮಾನೋತ್ಸವದ ಉದ್ಘಾಟನೆಗೆ ಕಡಲ ತೀರದ ಭಾರ್ಗವ ಎಂದೇ ಖ್ಯಾತರಾಗಿದ್ದ ಲೇಖಕ ಡಾ.ಶಿವರಾಮ ಕಾರಂತರು ಆಗಮಿಸಿ ಚಂದ್ರಶೇಖರ್ ಮತ್ತು ಅವರ ಗೆಳೆಯರ ಪ್ರಯತ್ನವನ್ನು ಹರಸಿದರು. 25ರ ಸಂಭ್ರಮಕ್ಕೆ  ಲೋಕಾಯುಕ್ತ  ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರು ಆಗಮಿಸಿದ್ದರು.ಆರ್ಥಿಕ ಸಬಲತೆಗೆ ಹಾಲು ಒಕ್ಕೂಟ: ಬರೀ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದರೆ ಸಾಕೇ ಎಂಬ ಪ್ರಶ್ನೆಯೂ ವೇದಿಕೆಗೆ ಎದುರಾದಾಗ ಹೊಳೆದದ್ದು, ಹಾಲು ಒಕ್ಕೂಟದ ಸ್ಥಾಪನೆ. ಹಳ್ಳಿಯ ಹೆಂಗಳೆಯರೇ ಇರುವ ಈ ಒಕ್ಕೂಟಕ್ಕೆ ಚುನಾವಣೆಯೂ ನಡೆಯುತ್ತದೆ. ಇದೀಗ ಹಾಲು ಮಾರಾಟದಿಂದ ಅವರು ಆರ್ಥಿಕ ಸಬಲತೆಯತ್ತ ಸಾಗುತ್ತಿದ್ದಾರೆ.ಅನಕ್ಷರಸ್ಥರ ನಾಟಕ ತಂಡ: ಅಕ್ಷರ ಕಲಿಯದ 40 ಮಂದಿ ಮಹಿಳೆಯರ ತಂಡವು `ಅಭಿವ್ಯಕ್ತಿ ಮಹಿಳಾ ಸಂಘ~ ರಚಿಸಿಕೊಂಡು ಇಡೀ ರಾಜ್ಯದಾದ್ಯಂತ `ಕರಿಭಂಟ~ ಎಂಬ ನಾಟಕವನ್ನು ಪ್ರದರ್ಶಿಸಿದ್ದಾರೆ. ಇಲ್ಲಿಯ ಮಕ್ಕಳು ಸಾಂಸ್ಕೃತಿಕ ತಂಡವನ್ನು ಕಟ್ಟಿಕೊಂಡಿದ್ದಾರೆ.ತಮ್ಮ ವೇದಿಕೆಯ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ನಾಗತಿಹಳ್ಳಿ ಚಂದ್ರಶೇಖರ್, `ನನ್ನ ಬೆಳೆಸಿದ ಹಳ್ಳಿಗೆ ಏನಾದರೂ ಋಣ ಸಂದಾಯ ಮಾಡಬೇಕು ಎಂಬ ಉದ್ದೇಶದಿಂದಲೇ `ಅಭಿವ್ಯಕ್ತಿ~ ಅಸ್ತಿತ್ವಕ್ಕೆ ಬಂತು. ಅದಾಗಲೇ ಕಥೆಗಾರನೂ ಆಗಿದ್ದರಿಂದ ವೇದಿಕೆಯ ಮೂಲಕ ಕಥೆಗಳನ್ನು ಪ್ರಕಟಿಸಬಹುದಲ್ಲ ಎಂದು ಯೋಚಿಸಿದೆ. ಬರೀ ನನ್ನ ಕೃತಿಗಳಷ್ಟೇ ಏಕೆ? ವೇದಿಕೆ ಇಲ್ಲದವರಿಗೆ ವೇದಿಕೆಯನ್ನು ಕಲ್ಪಿಸಬೇಕೆಂದುಕೊಂಡು ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರ ಕೃತಿಗಳನ್ನು ಪ್ರಕಟಿಸಿದೆವು. ಅದರಲ್ಲಿ ಹಲವಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಬಂದಿದೆ~ ಎಂದು ಸಂಭ್ರಮಿಸಿದರು.ಅಂತರ್ಜಾತಿ ವಿವಾಹ: ಈ ವೇದಿಕೆಯು ಅಂತರ್‌ಜಾತಿ, ಅಂತರ್ ಧರ್ಮೀಯ ಮದುವೆಗಳನ್ನು ಮಾಡಿಸಿದ್ದು, ಈವರೆಗೆ ಸುಮಾರು 30 ಮದುವೆಗಳು ನಡೆದಿವೆ. ಅದರಲ್ಲೂ ಮಾಘು ಮತ್ತು ನಸೀಮಾ ಅವರ ಮದುವೆಯಲ್ಲಿ ಇಬ್ಬರ ತಂದೆ-ತಾಯಿಯೂ ಭಾಗವಹಿಸಿದ್ದರು ಎಂದರು ನಾಗತಿಹಳ್ಳಿ.ಎರಡು ಕೃತಿಗಳ ಬಿಡುಗಡೆ: ಪ್ರತಿವರ್ಷದಂತೆ ಈ ಬಾರಿಯೂ ಆ.15ರಂದು ಬೆಂಗಳೂರಿನ ಬನಶಂಕರಿ ಎರಡನೇ ಹಂತದ ಅವರದೇ `ಲಿರಿಕ್ಸ್~ ಹೆಸರಿನ ಅಧ್ಯಯನ ಕೇಂದ್ರದಲ್ಲಿ `ಹೊಳೆದಂಡೆ~ ಅಂಕಣ ಮಾಲೆ (ನೋಟ 3) ಹಾಗೂ ಬಾನಲ್ಲೆ ಮಧುಚಂದ್ರಕೆ (12ನೇ ಮುದ್ರಣ) ಎಂಬ ಎರಡು ಕೃತಿಗಳ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.  ಇದೇ ನೆಪದಲ್ಲಿ ಹಿರಿಯರಿಗೆ ಸನ್ಮಾನ, ಕಾವ್ಯ ಹಾಗೂ ಸಂಗೀತ ಸಂಭ್ರಮವೂ ನಡೆಯಲಿದೆ.ಇತರ ಹಳ್ಳಿಗಳಿಗೂ ಸ್ಫೂರ್ತಿ

`ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ ಎಂಬ ಹೆಸರಿನೊಂದಿಗೆ ನಾಗತಿಹಳ್ಳಿಯಲ್ಲಿ ಆರಂಭವಾದ ಈ ವೇದಿಕೆಯು ಗ್ರಾಮೀಣರ ಆರ್ಥಿಕ ಸಮಸ್ಯೆಗಳಿಗೂ ಸ್ಪಂದಿಸುತ್ತಿರುವ ಸಂಗತಿ ನಾಗಮಂಗಲ ತಾಲ್ಲೂಕಿನ ಬಿದರಕೆರೆ, ಯರಗನಹಳ್ಳಿ, ಸಬ್ಬನಕುಪ್ಪೆ ಗ್ರಾಮಸ್ಥರಿಗೂ ಸ್ಫೂರ್ತಿ ನೀಡಿದೆ. ಈ ವೇದಿಕೆಯ ಆಶಯಗಳನ್ನೇ ಆ ಗ್ರಾಮಸ್ಥರು ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ~ ಎನ್ನುತ್ತಾರೆ ನಾಗತಿಹಳ್ಳಿ ಚಂದ್ರಶೇಖರ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry