ಮಂಗಳವಾರ, ನವೆಂಬರ್ 12, 2019
19 °C

`ನಾಗಪ್ಪ ಸಮಾಜವಾದಿ ಶರಣರು'

Published:
Updated:

ರಾಯಚೂರು: ಪರರ ಏಳ್ಗೆಗೆ ಜೀವನ ಮುಡಿಪು ಇಟ್ಟ ಸಮಾಜವಾದಿ ತತ್ವದ ಶರಣರು ಡಾ.ಎಂ ನಾಗಪ್ಪ ವಕೀಲರು. ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಲಾಲ್ ಬಹದ್ದೂರ ಶಾಸ್ತ್ರೀ ಅಲಹಾಬಾದ್‌ನಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿದ ದಿನವೇ ಕಾಕತಾಳೀಯ ಎಂಬಂತೆ ರಾಯಚೂರಿನಲ್ಲಿ ಅದೇ ದಿನ ಜೋಡು ಎದೆಗುಂಡಿಗೆಯ ಸ್ವಾತಂತ್ರ್ಯ ಹೋರಾಟಗಾರ ಡಾ.ನಾಗಪ್ಪ ಅವರು ರಾಷ್ಟ್ರಧ್ವಜಾರೋಹಣ ಮಾಡಿದ ರಾಯಚೂರಿನ `ಶಾಸ್ತ್ರೀಜಿ' ಆದವರು ಎಂದು ಜಾಲಹಳ್ಳಿಯ ಜಯ ಶಾಂತಲಿಂಗೇಶ್ವರ ಸಂಸ್ಥಾನಮಠದ  ಶ್ರೀ ವಿದ್ಯಾಮಾನ್ಯ ಜಯಶಾಂತಲಿಂಗೇಶ್ವರ ಮಹಾಸ್ವಾಮಿ ನುಡಿದರು.ಶುಕ್ರವಾರ ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಡಾ.ಎಂ ನಾಗಪ್ಪ ಪ್ರತಿಷ್ಠಾನದವತಿಯಿಂದ ಏರ್ಪಡಿಸಿದ್ಧ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ರಾಯಚೂರಿನ ಎ.ಎಂ.ಇ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಉಟ್ಕೂರು ರಾಜಣ್ಣ ಅವರಿಗೆ ಪ್ರದಾನ ಸಮಾರಂಭದಲ್ಲಿ ಸಾನಿಧ್ಯವಹಿಸಿ ಮಾತನಾಡಿದರು.ಪರಿವರ್ತನಶೀಲ ಸಮಾಜದಲ್ಲಿ ಜನನ ಮತ್ತು ಮರಣ ನಿರಂತರ. ಮನುಷ್ಯನಾಗಿ ಜನಿಸಿರುವುದು ಪರೋಪಕ್ಕಾರಕ್ಕಾಗಿ ಎಂಬುದನ್ನು ಅರಿತ ನಾಗಪ್ಪ ಅವರು ಅಪ್ಪಟ ಕರ್ಮಯೋಗಿಯಾಗಿ ದೇಶ, ಸಮಾಜದ ಉನ್ನತಿ ಜೀವನದುದ್ದಕ್ಕೂ ಶ್ರಮಿಸಿದವರು. ಕಾರ್ಮಿಕ, ಹಮಾಲರು, ಶಿಕ್ಷಣ ಸಂಸ್ಥೆ ಹೀಗೆ ಅನೇಕ ಸಂಸ್ಥೆಗಳಿಗೆ ಅಧ್ಯಕ್ಷರಾಗಿ ಕೆಲಸ ಮಾಡಿದವರು. ಹಣಕ್ಕಾಗಿ ಆಸೆ ಪಡದೇ, ತಾರತಮ್ಯ ಮಾಡದೇ ಸಮಾಜದ ಉನ್ನತಿ, ಸರ್ವಜನ ಹಿತಕ್ಕೆ ಶ್ರಮಿಸಿದವರು ಎಂದು ತಿಳಿಸಿದರು.ಅಂಥವರ ಹೆಸರಿನ ಪ್ರತಿಷ್ಠಾನವು ಶಿಕ್ಷಣ ಪ್ರೇಮಿ ಉಟ್ಕೂರು ರಾಜಣ್ಣ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಪ್ರಶಂಸನೀಯ ಸಂಗತಿ ಎಂದು ನುಡಿದರು.ಮುಖ್ಯ ಅತಿಥಿ ಎ.ಎಂ.ಇ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್.ಬಿ ಪಾಟೀಲ್ ವಕೀಲ ಮಾತನಾಡಿ, ಡಾ.ಎಂ ನಾಗಪ್ಪ ಅವರ ಶಿಕ್ಷಣ ಪ್ರೇಮ ಗಮನಾರ್ಹ. ಅವರು ಕೈಗೊಂಡ ಸಮಾಜಮುಖಿ ಕಾರ್ಯ ಇಂದಿಗೂ ಅವರನ್ನು ಜೀವಂತವಾಗಿರಿಸಿವೆ. ಅವರ ಆಶಯಗಳನ್ನು ಶಿಷ್ಯ ಬಳಗ ಪ್ರತಿಷ್ಠಾನ ಮೂಲಕ ಮಾಡುತ್ತಿದೆ ಎಂದು ಹೇಳಿದರು.ಡಾ.ಎಂ ನಾಗಪ್ಪ ಪ್ರತಿಷ್ಠಾನದಿಂದ ವರ್ಷದ ವ್ಯಕ್ತಿ ಪ್ರಶಸ್ತಿ ಪಡೆದಿರುವ ಎ.ಎಂ.ಇ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಉಟ್ಕೂರು ರಾಜಣ್ಣ ಅವರು, ವ್ಯಾಪಾರಿ ಉದ್ದೇಶದಿಂದ ಶಿಕ್ಷಣ ಸಂಸ್ಥೆ ಆರಂಭಿಸಿಲ್ಲ.  ಈ ಭಾಗದಲ್ಲಿ ಶಿಕ್ಷಣ ಏಳ್ಗೆ, ಸಾಮಾಜಿಕ ನ್ಯಾಯದ ಪರ ಕೆಲಸ ಮಾಡಲು ಕೈಗೊಂಡ ಕಾರ್ಯವಾಗಿದೆ ಎಂದು ಹೇಳಿದರ.ಪ್ರಶಸ್ತಿ ಸ್ವೀಕರಿಸಿದ ಉಟ್ಕೂರು ರಾಜಣ್ಣ ಅವರು ಮಾತನಾಡಿ, ಡಾ.ಎಂ ನಾಗಪ್ಪ ಅವರು  ಕೈಗೊಂಡ ಸ್ವಾತಂತ್ರ್ಯ ಹೋರಾಟ, ತಾರಾನಾಥ ಶಿಕ್ಷಣ ಸಂಸ್ಥೆ ಏಳ್ಗೆಗೆ ಶ್ರಮಿಸಿದ ರೀತಿ, ಸಮಾಜದ ಉನ್ನತಿಗೆ ಕೈಗೊಂಡ ಕಾರ್ಯಗಳನ್ನು ಸ್ಮರಿಸಿದರು.ಡಾ.ಎಂ ನಾಗಪ್ಪ ವಕೀಲರು ಪ್ರತಿಷ್ಠಾನದ ಅಧ್ಯಕ್ಷ ಎಂ ಬಸಪ್ಪ ತಿಪ್ಪಾರೆಡ್ಡಿ ಅಧ್ಯಕ್ಷತೆವಹಿಸಿದ್ದರು.  ಪ್ರತಿಷ್ಠಾನ ಉಪಾಧ್ಯಕ್ಷ ಬಿ.ಬಸವರಾಜ ವಕೀಲ ಸ್ವಾಗತಿಸಿದರು. ವಿಚಾರ ವೇದಿಕೆ ಸಂಚಾಲಕ ಎಂ. ನಾಗರಾಜ ವಕೀಲರು ಪ್ರಾಸ್ತಾವಿಕ ಮಾತನಾಡಿದರು. ಲಿಂಗಣ್ಣ ಗಾಣದಾಳ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಕ್ರಿಯಿಸಿ (+)