ನಾಗರತ್ನ ಅಧ್ಯಕ್ಷೆ, ಶಂಕರೇಗೌಡ ಉಪಾಧ್ಯಕ್ಷ

7

ನಾಗರತ್ನ ಅಧ್ಯಕ್ಷೆ, ಶಂಕರೇಗೌಡ ಉಪಾಧ್ಯಕ್ಷ

Published:
Updated:

ಮಂಡ್ಯ: ಜಿಲ್ಲಾ ಪಂಚಾಯಿತಿಯ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಜೆಡಿಎಸ್ ಪಕ್ಷದ ನಾಗರತ್ನ ಬಸವರಾಜು ಮತ್ತು ಡಾ. ಎಸ್.ಸಿ.ಶಂಕರೇಗೌಡ ಕ್ರಮವಾಗಿ ಆಯ್ಕೆಯಾಗಿದ್ದಾರೆ.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಈ ಇಬ್ಬರೂ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತೆ ಎಂ.ವಿ. ಜಯಂತಿ ಘೋಷಿಸಿದರು.

ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ನಾಗರತ್ನ ಬಸವರಾಜು ಶ್ರೀರಂಗಪಟ್ಟಣ ಕ್ಷೇತ್ರದ ಹಾಗೂ ಶಂಕರೇಗೌಡ ದುದ್ದ ಕ್ಷೇತ್ರದ ಸದಸ್ಯರಾಗಿದ್ದಾರೆ.ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನಿಂದ ನಾಗರತ್ನ ಮತ್ತು ಕಾಂಗ್ರೆಸ್‌ನಿಂದ ಚಿಕ್ಕಾಡೆ ಕ್ಷೇತ್ರದ ವಿ.ವಸಂತಾ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನಿಂದ ಡಾ. ಎಸ್.ಸಿ.ಶಂಕರೇಗೌಡ ಮತ್ತು ಕಾಂಗ್ರೆಸ್‌ನಿಂದ ದೊಡ್ಡಭೂವಳ್ಳಿ ಕ್ಷೇತ್ರದ ಆರ್.ಎನ್.ವಿಶ್ವಾಸ್ ನಾಮಪತ್ರ ಸಲ್ಲಿಸಿದ್ದರು.ಜೆಡಿಎಸ್ ಅಭ್ಯರ್ಥಿಗಳು ತಲಾ 24 ಮತ ಗಳಿಸಿದರೆ, ಕಾಂಗ್ರೆಸ್ ಅಭ್ಯರ್ಥಿಗಳು ತಲಾ 16 ಮತಗಳಿಸಿದರು.

ಜಿಲ್ಲಾ ಪಂಚಾಯಿತಿಯ ಒಟ್ಟು 40 ಸದಸ್ಯರಲ್ಲಿ ಜೆಡಿಎಸ್‌ನ 24, ಕಾಂಗ್ರೆಸ್ 14 ಹಾಗೂ ಇಬ್ಬರು ಪಕ್ಷೇತರ ಸದಸ್ಯರಿದ್ದಾರೆ.ವಿಜಯೋತ್ಸವ: ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹೆಸರನ್ನು ಘೋಷಣೆ ಮಾಡುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಜೆಡಿಎಸ್ ಜಿಲ್ಲಾ ಘಟಕ ಅಧ್ಯಕ್ಷ ಡಿ.ರಮೇಶ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry