ಶುಕ್ರವಾರ, ಮೇ 14, 2021
27 °C

ನಾಗರಬಾವಿ ಬಡಾವಣೆ ಜಮೀನು ಸ್ವಾಧೀನ: ಅಧಿಸೂಚನೆ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಾಗರಬಾವಿ 2ನೇ ಹಂತದ ಬಡಾವಣೆ ನಿರ್ಮಾಣಕ್ಕೆ ಸುಮಾರು ನಾಲ್ಕು ಎಕರೆ ಜಮೀನು ಸ್ವಾಧೀನಪಡಿಸಿಕೊಂಡು ಬಿಡಿಎ 2009ರ ಮಾರ್ಚ್ 23ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ.ಯಶವಂತಪುರ ಹೋಬಳಿಯ ಮಳಗಲು ಗ್ರಾಮದಲ್ಲಿ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟ ಜಮೀನನ್ನು ಪುನಃ ಸ್ವಾಧೀನಪಡಿಸಿಕೊಂಡಿರುವುದನ್ನು ಪ್ರಶ್ನಿಸಿ ಸಂಪಂಗಿರಾಮಯ್ಯ.ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ನಡೆಸಿದರು.1982ರಲ್ಲಿ ಮೊದಲ ಬಾರಿಗೆ ಈ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು.

 

ಅರ್ಜಿದಾರರು ಅದಕ್ಕೆ ಆಕ್ಷೇಪಣೆ ಸಲ್ಲಿಸಿದ್ದರೂ ಅದನ್ನು ಪರಿಗಣಿಸದೆಯೇ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಇಲ್ಲಿ ತಾವು ಮಾವು ಸೇರಿದಂತೆ ಹಲವು ಜಾತಿಯ ಮರಗಿಡಗಳನ್ನು ಬೆಳೆಸಿರುವ ಹಿನ್ನೆಲೆಯಲ್ಲಿ ಸ್ವಾಧೀನ ಪ್ರಕ್ರಿಯೆಯಿಂದ ಅದನ್ನು ಕೈಬಿಡುವಂತೆ ಅರ್ಜಿದಾರರು ಕೋರಿಕೊಂಡ ಹಿನ್ನೆಲೆಯಲ್ಲಿ 2002ರಲ್ಲಿ ಬಿಡಿಎ ಅದನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿತ್ತು.

 

ಆದರೆ 2009ರಲ್ಲಿ ಆ ಆದೇಶ ರ್ದ್ದದು ಮಾಡಿ ಪುನಃ ಸ್ವಾಧೀನ ಪಡಿಸಿಕೊಂಡು ಅಧಿಸೂಚನೆ ಹೊರಡಿಸಿತ್ತು. ಅದನ್ನು ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಬಿಡಿಎ ಈ ರೀತಿ ಮಾಡಿರುವುದು ಸರಿಯಲ್ಲ ಎಂದ ಕೋರ್ಟ್  ಅಧಿಸೂಚನೆ ರದ್ದು ಮಾಡಿದೆ.

ಜಮೀನು ಹಿಂದಕ್ಕೆ ಮಾಹಿತಿ:ಬಿಡಿಎಗೆ ಪರಭಾರೆ ಮಾಡಿರುವ ಭಿಕ್ಷುಕರ ಕಾಲೋನಿಯ 55 ಎಕರೆ ಜಮೀನನ್ನು ಹಿಂದಕ್ಕೆ ಪಡೆದುಕೊಳ್ಳಲಾಗಿದೆ ಎಂದು ಸರ್ಕಾರ ಹೈಕೋರ್ಟ್‌ಗೆ ಸೋಮವಾರ ತಿಳಿಸಿದೆ.ಈಗಾಗಲೇ 123 ಎಕರೆ ಜಮೀನನ್ನು ಪಡೆದುಕೊಳ್ಳಲಾಗಿತ್ತು. ಈಗ 55 ಎಕರೆ ಜಮೀನು ಪಡೆದುಕೊಳ್ಳಲಾಗಿದೆ ಎಂದು ಸರ್ಕಾರದ ಪರ ವಕೀಲರು ತಿಳಿಸಿದರು. ಈ ಜಾಗವನ್ನು ಆಸ್ಪತ್ರೆ, ಸಮ್ಮೇಳನ ಸಭಾಂಗಣ ಸೇರಿದಂತೆ ಇತರ ಬಳಕೆಗೆ ಬಿಡಿಎಗೆ ನೀಡಿದ್ದನ್ನು ಪ್ರಶ್ನಿಸಿ ಕೆಲವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಈ ಮಾಹಿತಿ ನೀಡಲಾಗಿದೆ. 55 ಎಕರೆ ಜಮೀನಿನ ಪೈಕಿ ಕೆಲವು ಜಮೀನನ್ನು ವರ್ತುಲ ರಸ್ತೆ ನಿರ್ಮಾಣಕ್ಕೆ ಬಳಕೆ ಮಾಡಲಾಗಿದೆ. ಉಳಿದ ಜಮೀನನ್ನು ಹಿಂದಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.


 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.