ಬುಧವಾರ, ನವೆಂಬರ್ 20, 2019
20 °C

ನಾಗರಾಜ್:ನೂರಾರು ಕೋಟಿಯ ಸಿರಿವಂತ

Published:
Updated:

ಹೊಸಕೋಟೆ: ಹೊಸಕೋಟೆ ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಿರುವ ಕಾಂಗ್ರೆಸ್ ಅಭ್ಯರ್ಥಿ ಎನ್.ನಾಗರಾಜ್ ಕೋಟ್ಯಂತರ ರೂಪಾಯಿ ಆಸ್ತಿಯ ಸರದಾರರಾಗಿದ್ದಾರೆ.ಶುಕ್ರವಾರ ನಾಮಪತ್ರ ಸಲ್ಲಿಸಿದ ಸಂದರ್ಭ ತಮ್ಮ ಆಸ್ತಿಯ ವಿವರ ಘೋಷಿಸಿದ್ದಾರೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ (2008) ರೂ16 ಲಕ್ಷ ನಗದು ಹೊಂದಿರುವ ಲೆಕ್ಕ ಕೊಟ್ಟಿದ್ದರು. ಈಗ ಅವರ ಬಳಿ ರೂ1.36 ಕೋಟಿ ನಗದು ಇದೆ. ಬ್ಯಾಂಕ್‌ನ ಉಳಿತಾಯ ಖಾತೆಯಲ್ಲಿ ರೂ14.21 ಕೋಟಿ, ಕಾಯಂ ಠೇವಣಿಯಾಗಿ ರೂ93.38 ಕೋಟಿ, ಪತ್ನಿಯ ಹೆಸರಿನಲ್ಲಿ ರೂ5.83 ಕೋಟಿ, ಬಾಂಡ್‌ಗಳ ಹೂಡಿಕೆಯಲ್ಲಿ ರೂ14.31 ಕೋಟಿ, ಪತ್ನಿ ಹೆಸರಿನಲ್ಲಿ ರೂ15 ಕೋಟಿ, ಮುಂಗಡ ರೂಪದಲ್ಲಿ ಇತರರಿಗೆ ರೂ64.74 ಕೋಟಿ ಕೊಟ್ಟಿರುವುದಾಗಿ ಘೋಷಿಸಿದ್ದಾರೆ.ಕಳೆದ ಚುನಾವಣೆಯ ಸಂದರ್ಭ ಅವರ ಬಳಿ ಚಿನ್ನ ಇರಲಿಲ್ಲ. ಈಗ ಅವರಲ್ಲಿ ರೂ21 ಲಕ್ಷ ಬೆಲೆಬಾಳುವ 819 ಗ್ರಾಂ ಚಿನ್ನ, 18 ಲಕ್ಷ ಬೆಲೆಬಾಳುವ 35.50 ಕೆ.ಜಿ ಬೆಳ್ಳಿ, ರೂ23 ಲಕ್ಷ ಬೆಲೆಬಾಳುವ ವಜ್ರ, ವಜ್ರದ ಹರಳು ಇರುವ ಲೆಕ್ಕ ಕೊಟ್ಟಿದ್ದಾರೆ. ಪತ್ನಿಯ ಹೆಸರಿನಲ್ಲಿ ರೂ69.75 ಲಕ್ಷ ಬೆಲೆಬಾಳುವ 2,714 ಗ್ರಾಂ ಚಿನ್ನ, ರೂ12.70 ಲಕ್ಷ ಬೆಲೆಬಾಳುವ 25 ಕೆಜಿ ಬೆಳ್ಳಿ, ರೂ15 ಲಕ್ಷ ಬೆಲೆಬಾಳುವ ವಜ್ರ, ವಜ್ರದ ಹರಳು ಹೊಂದಿರುವುದಾಗಿ ಘೋಷಿಸಿದ್ದಾರೆ. ಹೊಸಕೋಟೆ ತಾಲ್ಲೂಕು ಹಾಗೂ ಬೆಂಗಳೂರು ಸುತ್ತಮುತ್ತ ಎನ್.ನಾಗರಾಜ್ 67.24 ಎಕರೆ ವ್ಯವಸಾಯ ಜಮೀನು, ಪತ್ನಿಯ ಹೆಸರಿನಲ್ಲಿ 4 ಎಕರೆ ವ್ಯವಸಾಯ ಜಮೀನು ಹೊಂದಿದ್ದು ಅದರ ಈಗಿನ ಮೌಲ್ಯ ರೂ28.19 ಕೋಟಿ ಎಂದು ತಿಳಿಸಿದ್ದಾರೆ. ನಾಗರಾಜ್ ಹಾಗೂ ಪತ್ನಿಯ ಹೆಸರಿನಲ್ಲಿ 65 ಲಕ್ಷ ಚದರ ಅಡಿ ಕೃಷಿಯೇತರ ಜಮೀನು ಇದ್ದು ಅದರ ಈಗಿನ ಒಟ್ಟು ಮೌಲ್ಯ ರೂ206 ಕೋಟಿ ಆಗಲಿದೆ. ನಾಗರಾಜ್ ಹಾಗೂ ಅವರ ಪತ್ನಿಯ ಹೆಸರಿನಲ್ಲಿ 5.11 ಲಕ್ಷ ಚದರ ಅಡಿ ವಾಣಿಜ್ಯ ಮಳಿಗೆ  ಕಟ್ಟಡ ಹೊಂದಿದ್ದು ಅದರ ಈಗಿನ ಒಟ್ಟು ಮೌಲ್ಯ ರೂ32.35 ಕೋಟಿ ಆಗಲಿದೆ. ನಾಗರಾಜ್ ಹೆಸರಿನಲ್ಲಿ ಬೆಂಗಳೂರು ಸುತ್ತಮುತ್ತ 41.901 ಚದರ ಅಡಿ ವಾಸದ ಮನೆ, ಪತ್ನಿಯ ಹೆಸರಿನಲ್ಲಿ 2300 ಚದರ ಅಡಿ ಮನೆ ಇದ್ದು ಅದರ ಈಗಿನ ಒಟ್ಟು ಮೌಲ್ಯ ರೂ17.43 ಕೋಟಿ ಆಗಲಿದೆ.ನಾಗರಾಜ್ ಅವರ ಬಳಿ ಬೆಲೆಬಾಳುವ ವಿದೇಶಿ ಕಾರೊಂದು ಸೇರಿದಂತೆ 7 ಕಾರುಗಳು ಇವೆ. ಪತ್ನಿಯ ಹೆಸರಿನಲ್ಲಿರುವ ವಿದೇಶಿ ಕಾರಿನ ಬೆಲೆ ರೂ1.73 ಕೋಟಿ. ರೂ65 ಲಕ್ಷ ಬೆಲೆ ಬಾಳುವ ಟೊಯೊಟೊ ಪ್ರಾಡೊ ಸೇರಿದಂತೆ ಹೊಂಡಾ ಸಿವಿಕ್, ಮಾಂಟೆರೊ, ಫಾರ್ಚುನರ್ ಕಾರುಗಳನ್ನು ಹೊಂದಿದ್ದು ಅವುಗಳ ಒಟ್ಟು ಬೆಲೆ ರೂ3.30 ಕೋಟಿ ಆಗಲಿದೆ. ಇಷ್ಟೊಂದು ಆಸ್ತಿ ಹೊಂದಿದ್ದರೂ ನಾಗರಾಜ್ ಬ್ಯಾಂಕ್ ಹಾಗೂ ಇತರ ಹಣಕಾಸು ಸಂಸ್ಥೆಯಿಂದ ರೂ48 ಕೋಟಿ ಸಾಲ ತೋರಿಸಿದ್ದಾರೆ. ಬೆಂಗಳೂರು ಹೊರವಲಯದ ಮಹದೇವಪುರ ವಿಧಾನಸಭಾ ಕ್ಷೇತ್ರದ ಗರುಡಾಚಾರ್‌ಪಾಳ್ಯದಲ್ಲಿ ವಾಸವಾಗಿರುವುದಾಗಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)