ಗುರುವಾರ , ಮೇ 19, 2022
21 °C

`ನಾಗರಿಕ ಹಕ್ಕು ಉಲ್ಲಂಘನೆಗೆ ಅವಕಾಶ ನೀಡಬೇಡಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: `ನಾಗರಿಕರ ಹಕ್ಕುಗಳ ಉಲ್ಲಂಘನೆ ಆಗದಂತೆ ಸರ್ಕಾರದ ಎಲ್ಲ ಇಲಾಖೆಗಳ ಅಧಿಕಾರಿಗಳು ಎಚ್ಚರ ವಹಿಸಬೇಕು.ಸಾರ್ವಜನಿಕರ ಸಮಸ್ಯೆಗಳನ್ನು ಮಾನವೀಯ ದೃಷ್ಟಿಯಿಂದ ಪರಿಹರಿಸುವು ಮೂಲಕ ಶಾಂತಿ ಹಾಗೂ ನೆಮ್ಮದಿಯಿಂದ ಬದುಕುವಂತೆ ನೋಡಿಕೊಳ್ಳಬೇಕು' ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಸಿ.ಜಿ. ಹುನಗುಂದ ಸೂಚಿಸಿದರು.ಮಾನವ ಹಕ್ಕುಗಳ ಉಲ್ಲಂಘನೆ ಕುರಿತ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಸಿದ ಅವರು, `ಅಧಿಕಾರಿಗಳು ಹೆಚ್ಚು ಜವಾಬ್ದಾರಿಯಿಂದ ಹಾಗೂ ತ್ವರಿತವಾಗಿ ಸ್ಪಂದಿಸಿದರೆ ಸಾರ್ವಜನಿಕರ ಸಮಸ್ಯೆ ತಕ್ಷಣವೇ ಬಗೆ ಹರಿದು ಅವರು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ' ಎಂದು ತಿಳಿಸಿದರು.ಬೆಂಗಳೂರು ಹಾಗೂ ಮೈಸೂರು ವಿಭಾಗದ ಜಿಲ್ಲೆಗಳಿಗೆ ಹೋಲಿಸಿದಾಗ ಬೆಳಗಾವಿ ಜಿಲ್ಲೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಕಡಿಮೆ ಇವೆ. ಸಣ್ಣ ಪುಟ್ಟ ಸಮಸ್ಯೆಗಳಿಗೆ ಜಿಲ್ಲೆಯ ಜನ ಅಷ್ಟೊಂದು ತಲೆ ಕೆಡಿಸಿಕೊಳ್ಳುವುದಿಲ್ಲ. ಇದು ಈ ಜನರ ದೊಡ್ಡ ಗುಣ. ಆದರೆ ಇದನ್ನೇ ದುರುಪಯೋಗ ಪಡಿಸಿಕೊಳ್ಳದೇ ಅಧಿಕಾರಿಗಳು ಜನತೆಯ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಎಂದು ಸೂಚಿಸಿದರು.ಮಾನವ ಹಕ್ಕುಗಳ ಸಂರಕ್ಷಣೆ ನಮ್ಮ-ನಿಮ್ಮೆಲ್ಲರ ಸಂವಿಧಾನಬದ್ಧ ಕರ್ತವ್ಯವಾಗಿದೆ. ನಗರೀಕರಣ, ಜಾಗತೀಕರಣ ಜೊತೆಗೆ ಇಂದು ಮಾನವೀಕರಣ ಆಗಬೇಕಾಗಿದೆ. ಪ್ರತಿಯೊಂದು ಸಮಸ್ಯೆಗಳನ್ನು ನಾವು ಮಾನವೀಯ ದೃಷ್ಟಿಯಿಂದ ನೋಡಿದಾಗ ಹಲವಾರು ಸಮಸ್ಯೆ ಹಾಗೂ ದೂರುಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.ದೇವದಾಸಿ ಪದ್ಧತಿ, ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ, ಪ್ರಸವಪೂರ್ವ ಭ್ರೂಣಲಿಂಗ ಪತ್ತೆಗಳಂತಹ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕಾಗಿದೆ. ಜೀತಪದ್ಧತಿಯನ್ನು ನಾವು ತೊಡೆದು ಹಾಕಬೇಕಾಗಿದೆ.ಪರಿಸರ ಮಾಲಿನ್ಯ ಹಾಗೂ ಮರಳು ಗಣಿಗಾರಿಕೆ ತಡೆಯುವತ್ತ ಗಮನಹರಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿರುವ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಕೆಲಸ ಆಗಬೇಕು. ನಗರ ಪ್ರದೇಶದಲ್ಲಿ ನಗರ ಸ್ಥಳೀಯ ಸಂಸ್ಥೆ, ಹೆಸ್ಕಾಂ ಹಾಗೂ ನೀರು ಪೂರೈಕೆ ಮಂಡಳಿ ಸಮನ್ವಯದಿಂದ ಕೆಲಸ ಮಾಡಿದಾಗ ನಾಗರಿಕ ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.2007ರಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಆಸ್ತಿತ್ವಕ್ಕೆ ಬಂದಿದ್ದು, ಅಂದಿನಿಂದ ಇಂದಿನವರೆಗೆ ಬೆಳಗಾವಿ ಜಿಲ್ಲೆಯಿಂದ ಒಟ್ಟು 1399 ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಆಯೋಗ 969 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು, ಇನ್ನೂ 430 ಪ್ರಕರಣಗಳು ಇತ್ಯರ್ಥಗೊಳಿಸಬೇಕಾಗಿವೆ ಎಂದು ಹೇಳಿದರು.ಸಭೆಯಲ್ಲಿ ಜಿಲ್ಲಾಧಿಕಾರಿ ಎನ್. ಜಯರಾಮ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೀಪಾ ಚೋಳನ್, ಎಸ್‌ಪಿ ಸಂದೀಪ ಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಪ್ರವೀಣ ಕುಮಾರ ಪಾಲ್ಗೊಂಡಿದ್ದರು.ಜೀತ ಮುಕ್ತಕ್ಕೆ ಯತ್ನ: `ಅಥಣಿ ತಾಲ್ಲೂಕಿನ ಮೋಳೆ ಗ್ರಾಮದಲ್ಲಿ 97 ಜನರನ್ನು ಜೀತಕ್ಕೆ ಇಟ್ಟುಕೊಂಡಿದ್ದ ಬಗ್ಗೆ ಆಯೋಗವು ಸ್ವಇಚ್ಛೆಯಿಂದ ದೂರನ್ನು ಈಗಾಗಲೇ ದಾಖಲಿಸಿಕೊಂಡಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವಂತೆಯೂ ಸೂಚಿಸಲಾಗಿದೆ. ಇವರಿಗೆ ಅಗತ್ಯ ಪುನರ್ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು' ಎಂದು ಸಿ.ಜಿ. ಹುನಗುಂದ ಅವರು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಜಿಲ್ಲಾ ಆಸ್ಪತ್ರೆಗೆ ಭೇಟಿ: ಮಾನವ ಹಕ್ಕುಗಳ ಆಯೋಗದ ಸದಸ್ಯ ಸಿ.ಜಿ. ಹುನಗುಂದ ಅವರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.ಬಳಿಕ ಆಸ್ಪತ್ರೆಯ ಮಹಿಳಾ ವಾರ್ಡ್, ಪುರುಷರ ವಾರ್ಡ್‌ಗಳಿಗೆ ಭೇಟಿ ನೀಡಿ, ಸರಿಯಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಬಗ್ಗೆ ರೋಗಿಗಳನ್ನು ವಿಚಾರಿಸಿದರು. ಡಯಾಲಿಸಿಸ್ ಘಟಕ್ಕೆ ಭೇಟಿ ನೀಡಿ ವಿವರಗಳನ್ನು ಪಡೆದುಕೊಂಡರು.ಸಂಬಂಧಿಕರು ಯಾರೂ ಬಾರದೇ ಇರುವುದರಿಂದ ಮಹಿಳಾ ವಾರ್ಡ್‌ನಲ್ಲೇ ಕಳೆದ ಒಂದು ವರ್ಷದಿಂದ ನಿರಾಶ್ರಿತ ವೃದ್ಧೆ ರತ್ನಾಬಾಯಿ ಮಂಗಾಜ್ ಎಂಬುವವರು ನೆಲೆಸಿರುವ ಬಗ್ಗೆ ವೈದ್ಯರು ಮಾನವ ಹಕ್ಕು ಆಯೋಗದ ಸದಸ್ಯರ ಗಮನಕ್ಕೆ ತಂದರು. ಮಕ್ಕಳು ತನ್ನನ್ನು ನೋಡಿಕೊಳ್ಳುತ್ತಿಲ್ಲ. ಹೀಗಾಗಿ ಪುನರ್ವಸತಿ ಕಲ್ಪಿಸಿಕೊಡಬೇಕು ಎಂದು ರತ್ನಾಬಾಯಿ ಮನವಿ ಮಾಡಿದರು.`ಮಕ್ಕಳು ಎಲ್ಲಿದ್ದಾರೆ ಎಂದು ಹುಡುಕುವಂತೆ ಪೊಲೀಸರಿಗೆ ಸೂಚಿಸುತ್ತೇನೆ. ಶೀಘ್ರವೇ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸುವಂತೆ ಸಂಬಂಧಪಟ್ಟ ಅಧಿಕಾರಿಗೆ ನಿರ್ದೇಶನ ನೀಡುತ್ತೇನೆ' ಎಂದು ಹುನಗುಂದ ಅವರು ರತ್ನಾಬಾಯಿಗೆ ಭರವಸೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.